ವೇತನ ಪಡೆಯುವ ನೌಕರರ 50 ಲಕ್ಷ ಉದ್ಯೋಗ ನಷ್ಟ | ವರದಿ

Prasthutha|

ನವದೆಹಲಿ : ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ, ದೇಶದ ಎಲ್ಲ ಕ್ಷೇತ್ರಗಳು ವೈಫಲ್ಯದ ಹಾದಿಯಲ್ಲಿ ಈಗಾಗಲೇ ಸಾಗುತ್ತಿತ್ತು ಎಂಬ ಆರೋಪಗಳಿದ್ದವು. ಈ ನಡುವೆ, ಇದೇ ಅವಧಿಯಲ್ಲಿ ಜಾಗತಿಕ ಬಿಕ್ಕಟ್ಟು ಸೃಷ್ಟಿಸಿರುವ ಕೊರೋನ ಸಂಕಷ್ಟ ದೇಶದ ಜನತೆಯ ಬದುಕನ್ನು ಇನ್ನಷ್ಟು ಬರ್ಬರಗೊಳಿಸಿದೆ. ಮಧ್ಯಮ ವರ್ಗದ ಜನತೆಯ ಪಾಲಿಗಂತೂ ನರಕ ಸದೃಶ ಬದುಕಿನ ದರ್ಶನವಾಗುತ್ತಿದೆ. ಕೊರೋನ ಲಾಕ್ ಡೌನ್ ಮುಗಿದು, ಮತ್ತೆ ಉದ್ಯೋಗಕ್ಕೆ ತೆರಳಿ ಹದಗೆಟ್ಟ ತಮ್ಮ ಜೀವನ ಮತ್ತೆ ಸುಧಾರಿಸಬಹುದೆಂದು ಕನಸು ಕಾಣುತ್ತಿದ್ದ ಲಕ್ಷಾಂತರ ಜನರಿಗೆ ದೊಡ್ಡ ಶಾಕ್ ಎದುರಾಗಿದೆ. ಹೌದು, ಕಳೆದ ಜುಲೈನಲ್ಲಿ ದೇಶದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರು, ಅದರಲ್ಲೂ ವೇತನ ಪಡೆಯುತ್ತಿದ್ದ ನೌಕರರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ವರದಿಯಲ್ಲಿ ಈ ಅಂಶ ತಿಳಿಸಲಾಗಿದೆ. ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಭಾಗಶಃ ಲಾಕ್ ಡೌನ್ ಮುಂದಿರುವ ಪರಿಣಾಮ ಇಷ್ಟೊಂದು ಉದ್ಯೋಗ ಕಳೆದುಕೊಳ್ಳಲು ಕಾರಣವಾಗಿದೆ.

ಏಪ್ರಿಲ್ ಗೆ ಹೋಲಿಸಿದರೆ, ಜುಲೈನಲ್ಲಿ ಕೊಂಚ ಸುಧಾರಿಸಿದೆ. ಏಪ್ರಿಲ್ ನಲ್ಲಿ 1.77 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಮೇನಲ್ಲಿ ಜುಲೈಗಿಂತ 10 ಲಕ್ಷ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದರು. ಒಟ್ಟಾರೆ ಕಳೆದ ನಾಲ್ಕು ತಿಂಗಳಲ್ಲಿ 1.89 ಕೋಟಿ ಮಂದಿ ವೇತನ ಪಡೆಯುವ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ.

- Advertisement -

ಸಾಮಾನ್ಯವಾಗಿ ವೇತನ ಪಡೆಯುವವರ ನೌಕರಿಯು ಸುಲಭವಾಗಿ ನಷ್ಟವಾಗುವುದಿಲ್ಲ. ಆದರೆ, ಅಂತಹವರು ಒಂದು ಬಾರಿ ಉದ್ಯೋಗ ಕಳೆದುಕೊಂಡರೆ, ಅವರು ಮತ್ತೊಂದು ಹೊಸ ಉದ್ಯೋಗ ಕಂಡುಕೊಳ್ಳುವುದು ಕಷ್ಟ. ಹೀಗಾಗಿ, ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಆದಾಗ್ಯೂ, ದೇಶದ ಒಟ್ಟು ಉದ್ಯೋಗ ಮಾರುಕಟ್ಟೆಯಲ್ಲಿ ಶೇ.21ರಷ್ಟು ವೇತನ ಪಡೆಯುವ ಉದ್ಯೋಗಸ್ಥರ ಪಾಲಿದೆ. ಅದರಲ್ಲಿ ಏಪ್ರಿಲ್ ನಲ್ಲಿ ಶೇ.15ರಷ್ಟು ನಿರುದ್ಯೋಗವಿತ್ತು ಎಂದು ವರದಿ ತಿಳಿಸಿದೆ.

ಲಾಕ್ ಡೌನ್ ನ ಮೊದಲ ತಿಂಗಳು ಏಪ್ರಿಲ್ ನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಒಟ್ಟಾರೆ 12.15 ಕೋಟಿ ಉದ್ಯೋಗ ನಷ್ಟವಾಗಿತ್ತು. ಮೇನಲ್ಲಿ ಅದು 10.03 ಕೋಟಿಗೆ ಇಳಿಕೆಯಾಯಿತು ಮತ್ತು ಜೂನ್ ನಲ್ಲಿ 2.99 ಕೋಟಿಗೆ ಇಳಿಕೆಯಾಯಿತು. ಜುಲೈನಲ್ಲಿ ಮತ್ತೆ 1.1 ಕೋಟಿ ಉದ್ಯೋಗಗಳು ನಷ್ಟವಾದವು. 

ಈ ಅವಧಿಯಲ್ಲಿ ವೇತನ ಪಡೆಯುವ ನೌಕರರ ಕ್ಷೇತ್ರಕ್ಕಿಂತ ಅಸಂಪ್ರದಾಯಿಕ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಮರುಗಳಿಕೆಯಾಗಿದ್ದರೂ, ಬೀದಿ ಬದಿ ವ್ಯಾಪಾರಸ್ಥರು, ದಿನಗೂಲಿ ನೌಕರರ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಹಲವು ರಾಜ್ಯಗಳಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಕಾರ್ಯ ನಿರ್ವಹಿಸಲು ಇನ್ನೂ ಅವಕಾಶ ಕೊಟ್ಟಿಲ್ಲ. ಏಪ್ರಿಲ್ ನಲ್ಲಿ ನಷ್ಟವಾಗಿದ್ದ 12.15 ಕೋಟಿ ಉದ್ಯೋಗದಲ್ಲಿ 9.12 ಕೋಟಿ ಉದ್ಯೋಗ ಬೀದಿಬದಿ ವ್ಯಾಪಾರಸ್ಥರು ಮತ್ತು ದಿನಗೂಲಿ ನೌಕರರಿಗೆ ಸಂಬಂಧಿಸಿದ್ದು. ಈ ವಿಭಾಗವು ಒಟ್ಟು ಉದ್ಯೋಗದ ಶೇ. 32ರಷ್ಟಾಗಿತ್ತು, ಆದರೆ ಇವರಲ್ಲಿ ಶೇ.75ರಷ್ಟು ಮಂದಿ ಏಪ್ರಿಲ್ ನಲ್ಲಿ ಉದ್ಯೋಗ ಕಳೆದುಕೊಂಡಿದ್ದರು. ಏಪ್ರಿಲ್ ನಲ್ಲಿ ಉದ್ಯೋಗ ಕಳೆದುಕೊಂಡಿದ್ದ 9.12 ಕೋಟಿ ಉದ್ಯೋಗಸ್ಥರಲ್ಲಿ 1.44 ಕೋಟಿ ಏಪ್ರಿಲ್, 4.45 ಕೋಟಿ ಜೂನ್ ನಲ್ಲಿ ಮತ್ತು 2.55 ಕೋಟಿ ಜುಲೈನಲ್ಲಿ ವಾಪಾಸಾಗಿದ್ದಾರೆ ಎಂದು ವರದಿ ತಿಳಿಸಿದೆ.

ಕೋಟ್ಯಂತರ ಉದ್ಯಮಿಗಳು ನಷ್ಟದಲ್ಲಿ :

ಅಂದಾಜು ಸುಮಾರು 7.8 ಕೋಟಿ ಉದ್ಯಮಿಗಳು ತಾವು ಏಪ್ರಿಲ್ ನಿಂದ ಜುಲೈ ವರೆಗೆ ನಿರುದ್ಯೋಗಿಗಳಾಗಿದ್ದೇವೆ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ. ಉದ್ಯಮಕ್ಕಾಗಿ ಜನರನ್ನು ಕೆಲಸಕ್ಕೆ ನಿಯೋಜಿಸುವ ಮತ್ತು ನಿರ್ದಿಷ್ಟ ಸ್ವಂತ ಆಸ್ತಿ ಹೊಂದಿರುವ, ವೈದ್ಯರು, ವಕೀಲರು, ಅಕೌಂಟೆಂಟ್ ಗಳು ಮುಂತಾದ ವಿದ್ಯಾವಂತ ಸ್ವಉದ್ಯೋಗಸ್ಥ ವೃತ್ತಿಪರರು ಮತ್ತು ಟ್ಯಾಕ್ಸಿ ಮತ್ತಿತರ ಸ್ವಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವವರು ಈ ರೀತಿ ನಿರುದ್ಯೋಗಿಗಳಾಗಿರುವ ಉದ್ಯಮಿಗಳ ಗುಂಪಿನಲ್ಲಿ ಸೇರಿದ್ದಾರೆ. ಇಂತಹವರು ಒಟ್ಟು ಉದ್ಯೋಗದ ಶೇ.19ರಷ್ಟು ಪಾಲು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.

ಕೃಷಿ ಕ್ಷೇತ್ರದಲ್ಲಿ ಹೆಚ್ಚಿದ ಆಸಕ್ತಿ :

ಕುತೂಹಲ ಎಂದರೆ, ಲಾಕ್ ಡೌನ್ ಬಳಿಕ ಜನರಿಗೆ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಬಂದಂತಿದೆ. 2019-20ರ ಅವಧಿಯಲ್ಲಿ ಸುಮಾರು 1.13 ಕೋಟಿ ಜನ ತಮ್ಮ ಉದ್ಯೋಗ ಕೃಷಿ ಎಂದು ಘೋಷಿಸಿದ್ದರು. ಇದು ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ತಲಾ 11.7 ಕೋಟಿ ಮತ್ತು ಜೂನ್ ನಲ್ಲಿ 11.85 ಕೋಟಿ ಮತ್ತು ಜುಲೈನಲ್ಲಿ 13 ಕೋಟಿಯಷ್ಟು ಏರಿಕೆ ಕಂಡಿದೆ. ಕೃಷಿ ವಲಯದಲ್ಲಿ ಯಾವುದೇ ಉದ್ಯೋಗ ನಷ್ಟವಾಗಿಲ್ಲ ಎಂದು ವರದಿ ತಿಳಿಸಿದೆ. ಕೃಷಿಯೇತರ ಉದ್ಯೋಗ ಕಳೆದುಕೊಂಡ ವಲಸೆ ಕಾರ್ಮಿಕರಲ್ಲಿ ಬಹುತೇಕ ಮಂದಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಈ ಅವಧಿಯಲ್ಲಿ ಕಂಡು ಬಂದಿದೆ.

- Advertisement -