ಭಾರತದ ಜಿಡಿಪಿ ಕುಸಿತ: ಪಿಎಫ್ಐ ನೇರ ಹೊಣೆ!!

Prasthutha News

ಹೊಸದಿಲ್ಲಿ: ದೇಶದ ಆರ್ಥಿಕ ದುಸ್ಥಿತಿಗೆ ಹೀಗೊಂದು ಕಾರಣವನ್ನು ಆಡಳಿತದಲ್ಲಿರುವ ಬಿಜೆಪಿ ಸರಕಾರ ನೀಡಿದರೆ ಅದರಿಂದ ಅಚ್ಚರಿಪಡಬೇಕಾಗಿಲ್ಲ. ಪ್ರಸ್ತುತ ದೇಶದ ವಿದ್ಯಮಾನಗಳನ್ನು ಗಮನಿಸುವಾಗ ಮುಂದೆ ಇಂತಹ ಮೂರ್ಖತನಗಳನ್ನು ನಿರೀಕ್ಷಿಸಬಹುದಾಗಿದೆ.

ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು, ಈ ರಾಜ್ಯವು ದೇಶದಲ್ಲಿ ನಂಬರ್ ವನ್ ಸ್ಥಾನದಲ್ಲಿದೆ. ಹಥ್ರಾಸ್ ಅತ್ಯಾಚಾರ ಪ್ರಕರಣದ ಬಳಿಕ ಯೋಗಿ ಸರಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಆದರೆ ಉತ್ತರ ಪ್ರದೇಶ ಸರಕಾರ ರಚಿಸಿದ ವಿಶೇಷ ಪೊಲೀಸ್ ತಂಡ (ಸಿಟ್) ವು ಇದರ ಹಿಂದೆ ಪಾಪ್ಯುಲರ್ ಫ್ರಂಟ್ ಕೈವಾಡವಿದೆ ಎಂದಿದೆಯಂತೆ. ಹಾಗೆಂದು ರಿಪಬ್ಲಿಕ್ ಟಿವಿ, ನ್ಯೂಸ್ ಎಕ್ಸ್ ನಂತಹ ಮಾಧ್ಯಮಗಳು ಸಿಟ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.

ಇಂದು ಹಥ್ರಾಸ್ ನತ್ತ ವರದಿ ಮಾಡಲು ತೆರಳುತ್ತಿದ್ದ ಓರ್ವ ಪತ್ರಕರ್ತನನ್ನೊಳಗೊಂಡಂತೆ ಮೂವರ ಬಂಧನವನ್ನು ಉಲ್ಲೇಖಿಸಿಯೂ ಹಲವು ಊಹಾಪೋಹಗಳನ್ನು ತೇಲಿಬಿಡುವ ಮೂಲಕ ದೇಶದ ಗಮನವನ್ನು ಹಥ್ರಾಸ್ ನಿಂದ ಬೇರೆಡೆಗೆ ತಿರುಗಿಸುವ ಪ್ರಯತ್ನವನ್ನು ಯುಪಿ ಸರಕಾರ ಮಾಡುತ್ತಿದೆ. ಈ ಹಿಂದೆಯೂ ಸಿ.ಎ.ಎ, ಎನ್.ಆರ್.ಸಿ ವಿರುದ್ಧ ಪ್ರತಿಭಟನೆಯೊಳಗೊಂಡಂತೆ ದೇಶದಲ್ಲಿ ಹಲವು ವಿದ್ಯಮಾನಗಳ ಸಂದರ್ಭಗಳಲ್ಲಿ  ಈ ರೀತಿಯ ಪ್ರಯತ್ನಗಳನ್ನು ಮಾಡಲಾಗಿತ್ತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ಮ್ಯಾನ್ ಒ.ಎಂ.ಎ.ಸಲಾಂ, ಯುಪಿ ಸರಕಾರದ ಆರೋಪಗಳ ಕುರಿತು ಟ್ವೀಟ್ ಮಾಡಿದ್ದು, “ಯೋಗಿ ಸರಕಾರದ ಬಳಿ ಅಕ್ಷರಶ: ಉತ್ತರವಿಲ್ಲ. ಎಲ್ಲದಕ್ಕೂ ಅವರು ಪಿ.ಎಫ್.ಐ, ಮತ್ತು ಎಸ್.ಡಿ.ಪಿ.ಐ ಒಳಗೊಂಡಂತೆ ಕೆಲವು ನಕಲಿ ರಕ್ಕಸರನ್ನು ಆಕ್ಷೇಪಿಸುವಾಗ ನಮಗೆ ಅದು ತಿಳಿಯುತ್ತದೆ. ಬಿ.ಜೆ.ಪಿಯನ್ನು ನೀವು ಇನ್ನಷ್ಟು ಜಗ್ಗಿದರೆ ಜಿ.ಡಿ.ಪಿ ಕುಸಿತಕ್ಕೂ ಅವರು ಪಿ.ಎಫ್.ಐಯನ್ನು ಆಕ್ಷೇಪಿಸುತ್ತಾರೆ. ಅವರು ನಾಚಿಕೆಗೆಟ್ಟ ಸುಳ್ಳುಗಾರರಾಗಿದ್ದಾರೆ” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.


Prasthutha News