ಜಾತಿ ವ್ಯಾಮೋಹ | ದಲಿತ ಯುವಕನ ಪ್ರೀತಿಸಿದ ಮಗಳನ್ನೇ ಹತ್ಯೆಗೈದ ಅಪ್ಪ

Prasthutha: October 17, 2020

►► ಹತ್ರಾಸ್ ಅತ್ಯಾಚಾರ ವಿರೋಧಿ ಪ್ರತಿಭಟನಕಾರರ ಗುರಿಯಾಗಿಸಿದ್ದ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ !

ರಾಮನಗರ : ಉತ್ತರ ಪ್ರದೇಶದ ಹತ್ರಾಸ್ ದಲಿತ ಯುವತಿಯ ಸಾಮಾಹಿಕ ಅತ್ಯಾಚಾರ ಪ್ರಕರಣಕ್ಕೆ ಪ್ರತಿಭಟಿಸುವವರು, ರಾಜ್ಯದ ರಾಮನಗರದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದ ಪ್ರಕರಣದಲ್ಲಿ, ಇದೀಗ ಮಹತ್ವದ ತಿರುವು ಕಂಡು ಬಂದಿದೆ. ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದ ಯುವತಿಯ ಹತ್ಯೆ ಸ್ವತಃ ತಂದೆ ಹಾಗೂ ಸಂಬಂಧಿಕರು ನಡೆಸಿರುವ ಬಗ್ಗೆ ವರದಿಯಾಗಿದೆ. ಘಟನೆಗೆ ಬಂಧಿಸಿ ರಾಮನಗರ ಯುವತಿಯ ತಂದೆ, ಅಣ್ಣನನ್ನು ಪೊಲೀಸರು ಬಂಧಿಸಿದ್ದಾರೆ. ದಲಿತ ಹುಡುಗನನ್ನು ಪ್ರೀತಿಸಿದ ಕಾರಣಕ್ಕಾಗಿ ಮಗಳನ್ನೇ ಹತ್ಯೆ ಮಾಡಲು ತಂದೆ ಮತ್ತು ಸಂಬಂಧಿಕರು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಕೋವಿಡ್ 19 ಸೋಂಕಿಗೆ ಗುರಿಯಾಗಿದ್ದುದರಿಂದ ಪ್ರಕರಣದ ವಿಚಾರಣೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನೆನ್ನವರ್ ಗೆ ವಹಿಸಿ ಕೊಡಲಾಗಿತ್ತು. ಆರೋಪಿಗಳನ್ನು ಮಾಗಡಿಯಲ್ಲಿ ಬಂಧಿಸಲಾಗಿದೆ.

ಮೃತ ಯುವತಿಯನ್ನು ರಾಮನಗರದ ಮಾಗಡಿ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ನಿವಾಸಿ ಹೇಮಲತಾ (19) ಎಂದು ಗುರುತಿಸಲಾಗಿದೆ. ಮೃತಳ ತಂದೆ ಅ.9ರಂದು ಪೊಲೀಸ್ ದೂರು ನೀಡಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದರು. ಮರುದಿನ ಮತ್ತೆ ದೂರು ನೀಡಿ, ಮಗಳ ಸಾಮೂಹಿಕ ಅತ್ಯಾಚಾರ ಮಾಡಿ, ಹತ್ಯೆ ಮಾಡಲಾಗಿದೆ ಎಂದು ಮತ್ತೆ ದೂರು ನೀಡಿದ್ದರು. ಇದು ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿತ್ತು. ಇದನ್ನು ಬಿಜೆಪಿ ಬೆಂಬಲಿತರು, ಉತ್ತರ ಪ್ರದೇಶದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರನ್ನು ಗುರಿಯಾಗಿಸಿ ಟೀಕಿಸಲು ಅಸ್ತ್ರವಾಗಿ ಬಳಸಿಕೊಂಡಿದ್ದರು.

ಒಕ್ಕಲಿಗ ಸಮುದಾಯದ ಹೇಮಲತಾ ಬಿಕಾಂ ವಿದ್ಯಾರ್ಥಿನಿಯಾಗಿದ್ದಳು. ಅದೇ ಗ್ರಾಮದ ದಲಿತ ಯುವಕನನ್ನು ಆಕೆ ಪ್ರೀತಿಸುತ್ತಿದ್ದಳು. ಇದರಿಂದ ಆಕ್ರೋಶಗೊಂಡ ಆಕೆಯ ಸಂಬಂಧಿಕರು ಆ ಯುವಕನೊಂದಿಗೆ ಸಂಬಂಧವಿಡದಂತೆ ಒತ್ತಡ ತಂದಿದ್ದರು. ವಿಷಯಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ಹಿಂದೆಯೂ ರಾಜೀ ಸಂಧಾನ ನಡೆದಿತ್ತು.
ಆದರೆ ತಮ್ಮ ಮಾತುಕೇಳದ ಮಗಳ ಪ್ರೇಮದ ವಿಷಯದಿಂದ ಆಕ್ರೋಶಿತನಾದ ಕೃಷ್ಣಪ್ಪ ಆಕೆಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಅ.8ರಂದು ಆಕೆಯನ್ನು ಹತ್ಯೆ ಮಾಡಿ ಸಮೀಪದ ಜಮೀನಿನಲ್ಲಿ ಹೂತಿಡಲಾಗಿತ್ತು ಎಂದು ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರಿದಿದೆ. ಹತ್ಯೆಗೆ ಯುವತಿಯ ಅಪ್ರಾಪ್ತ ವಯಸ್ಕ ಸಹೋದರ ಕೂಡ ಸಹಕರಿಸಿದ್ದ ಎನ್ನಲಾಗಿದೆ.

“ಹೇಮಲತಾರನ್ನು ಅತ್ಯಾಚಾರ ಮಾಡಿ, ಬರ್ಬರವಾಗಿ ಹತ್ಯೆ ಮಾಡಲಾಗಿದೆ” ಎಂದು ಅಪಪ್ರಚಾರ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ