ಜನರ ಗಮನ ಬೇರೆಡೆಗೆ ಸೆಳೆಯಲು ಪತ್ರಕರ್ತ, ಕ್ಯಾಂಪಸ್ ವಿದ್ಯಾರ್ಥಿಗಳನ್ನು ಬಲಿಯಾಗಿಸುತ್ತಿರುವ ಯುಪಿ ಸರಕಾರ: ಸಿ.ಎಫ್.ಐ ರಾಷ್ಟ್ರೀಯ ಅಧ್ಯಕ್ಷ

► ಅಮಾಯಕರ ಬಂಧನದ ಕುರಿತು ಜಾತ್ಯತೀತ ಪಕ್ಷಗಳ ಮೌನ ಟೀಕಿಸಿದ ಎಂ.ಎಸ್.ಸಾಜಿದ್

► ‘ಮುಸ್ಲಿಮರ ವಿರುದ್ಧ ಜಾತ್ಯತೀತ ಪಕ್ಷಗಳ ತಾರತಮ್ಯ’

- Advertisement -

ಲಕ್ನೊ: ಅಕ್ಟೋಬರ್ 5 ರಂದು ಹಥ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗುವುದಕ್ಕಾಗಿ ತೆರಳಿದ್ದ  ಕೇರಳದ ಪತ್ರಕರ್ತ ಮತ್ತು ಕ್ಯಾಂಪಸ್ ಫ಼್ರಂಟ್ ಆಫ಼್ ಇಂಡಿಯಾದ ಮೂವರು ಸದಸ್ಯರನ್ನು ಬಂಧಿಸಿ ಯುಪಿ ಪೊಲೀಸರು ಯುಎಪಿಎ ದಾಖಲಿಸಿದ್ದರು.  ಪತ್ರಕರ್ತರು ಮತ್ತು ವಿದ್ಯಾರ್ಥಿ ಹೋರಾಟಗಾರರ ವಿರುದ್ಧ ತಮ್ಮ ದುರುದ್ದೇಶಪೂರಿತ ಕ್ರಮವನ್ನು ಮುಂದುವರಿಸಿರುವ ಪೊಲೀಸರು ಶುಕ್ರವಾರ ದೇಶದ್ರೋಹ ಹಾಗೂ ಇತರ ಗಂಭೀರ ಆರೋಪಗಳನ್ನು ದಾಖಲಿಸಿದ್ದಾರೆ.

ಈ ಕುರಿತು ‘ಪ್ರಸ್ತುತ’ದೊಂದಿಗೆ ಮಾತನಾಡಿದ ಕ್ಯಾಂಪಸ್ ಫ಼್ರಂಟ್ ಆಫ಼್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ  ಎಂ.ಎಸ್.ಸಾಜಿದ್ ನಿಜವಾದ ಘಟನೆಯಿಂದ ಆಕ್ರೋಶಿತ ಜನರ ಮನಸ್ಸನ್ನು ಇತರೆಡೆಗೆ ಸೆಳೆಯುವ ಪ್ರಯತ್ನ ಇದಾಗಿದೆ ಎಂದಿದ್ದಾರೆ.

“ಈ ಘಟನೆಯಿಂದ ದೇಶದಾದ್ಯಂತ ಜನರು ರೊಚ್ಚಿಗೆದ್ದಿದ್ದರು. ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಪತ್ರಕರ್ತ ಮತ್ತು ವಿದ್ಯಾರ್ಥಿ ಹೋರಾಟಗಾರರನ್ನು ಬಲಿಪಶುಮಾಡಲಾಗುತ್ತಿದೆ. ಯುಪಿ ಸರಕಾರ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದೆ” ಎಂದು ಅವರು ಹೇಳಿದರು.

ಘಟನೆಯ ಕುರಿತು ಜಾತ್ಯತೀತ ಪಕ್ಷಗಳ ಮೌನವನ್ನು ಟೀಕಿಸಿದ  ಸಾಜಿದ್, ಅಲ್ಪಸಂಖ್ಯಾತ ಮುಸ್ಲಿಮರ ಕುರಿತು ಅವರ ತಾರತಮ್ಯ ಮನೋಭಾವನೆಗೆ ನಿದರ್ಶನ ಎಂದರು.

“ಹಥ್ರಾಸ್ ಕುಟುಂಬವನ್ನು ಭೇಟಿ ಮಾಡಲು ಹೋದ ಜಾತ್ಯತೀತ ಪಕ್ಷಗಳ‌ ನಾಯಕರ ವಿರುದ್ಧ ಇಂತಹ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಆದರೆ ಯುಪಿಗೆ ಭೇಟಿ ನೀಡಿದ ಮುಸ್ಲಿಮ್ ಪತ್ರಕರ್ತ ಮತ್ತು ವಿದ್ಯಾರ್ಥಿ ನಾಯಕರನ್ನು ಯುಎಪಿಎ ಯಂತಹ ಕರಾಳ ಕಾಯ್ದೆಯಡಿ ಬಂಧಿಸಲಾಯಿತು. ಯುಪಿ ಸರಕಾರದ ಹಿತಾಸಕ್ತಿಗಾಗಿ  ಅವರನ್ನು ಬಲಿತೆಗೆದುಕೊಳ್ಳಲಾಗಿರುವುದು ತಿಳಿದಿದ್ದರೂ ಜಾತ್ಯತೀತವೆಂದು ಹೇಳುವ ಪಕ್ಷಗಳು ಇದರ ಕುರಿತು ಯಾವುದೇ ಖಂಡನೆ ವ್ಯಕ್ತಪಡಿಸದಿರುವುದು ದುರದೃಷ್ಟ ಮತ್ತು ಅವುಗಳ ತಾರತಮ್ಯಕ್ಕೆ ಹಿಡಿದ ಕನ್ನಡಿ” ಎಂದು ಅವರು ಹೇಳಿದರು.

ಜಾತಿ ಆಧಾರಿತವಾಗಿ ಗಲಭೆ ಪ್ರಚೋದಿಸುವ ಮತ್ತು 19ರ ಹರೆಯದ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಯುಪಿ ಸರಕಾರದ ಹೆಸರು ಕೆಡಿಸುವ ಆರೋಪದಲ್ಲಿ ಅ.4 ರಂದು  ಹಥ್ರಾಸ್ ನ ಚಂಡ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಪತ್ರಕರ್ತ ಸಿದ್ದೀಕ್ ಕಪ್ಪನ್ (41), ಸಿ.ಎಫ಼್.ಐ ಸದಸ್ಯರಾದ ಅತೀಕುರ್ರಹ್ಮಾನ್ (25), ಮಸೂದ್ ಅಹ್ಮದ್  ಮತ್ತು  ಆಲಮ್‌ ರನ್ನು   ಪ್ರಕರಣದಲ್ಲಿ ಆರೋಪಿಗಳನ್ನಾಗಿಸಿತ್ತು.

ತನ್ಮಧ್ಯೆ ಅತೀಕುರ್ರಹ್ಮಾನ್ ವಿರುದ್ಧ ಮುಝಫ್ಫರ್ ನಗರ ಪೊಲೀಸರು ಜಿಲ್ಲೆಯ ಕೊಟ್ವಾಲಿ ನಗರದಲ್ಲಿ 2019ರ ಡಿಸೆಂಬರ್ ನಲ್ಲಿ  ಸಿ.ಎ.ಎ ವಿರೋಧಿ ಪ್ರತಿಭಟನೆಯ ವೇಳೆ ನಡೆದ ಹಿಂಸಾ ಪ್ರಕರಣವೊಂದನ್ನು ದಾಖಲಿಸಿದ್ದಾರೆ.