ಜನಪರ ಹೋರಾಟಗಾರ, ಯುವ ವಕೀಲ ಹೂವಪ್ಪ ನಿಧನ

Prasthutha|

ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಹಾಗೂ ಯುವ ವಕೀಲ ಹೂವಪ್ಪ ಇಂದು ನಿಧನರಾಗಿದ್ದಾರೆ.
ಅವರಿಗೆ 50 ವರ್ಷ ವಯಸ್ಸಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಕೂದುವಳ್ಳಿ ಗ್ರಾಮದವರಾದ ಹೂವಪ್ಪ ಅವರು ಕೋಮು ಸೌಹಾರ್ದ ವೇದಿಕೆ, ಜಾತಿ ವಿನಾಶ ವೇದಿಕೆ, ಎನ್ ಸಿಎಚ್ ಆರ್ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು, ಫಾಶಿಸ್ಟ್ ಹಾಗೂ ಕೋಮುವಾದಿ ಶಕ್ತಿಗಳ ವಿರುದ್ಧ ಧ್ವನಿ ಎತ್ತಿದ್ದರು. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅವರು ವಕೀಲರಾಗಿಯೂ ಬಡವರ ಪರ ಧ್ವನಿಯಾಗಿದ್ದರು.


ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅವರನ್ನು ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ನಿಂದ ಚೇತರಿಸಿಕೊಂಡಿದ್ದ ಅವರಲ್ಲಿ ಬಳಿಕ ಇನ್ನಿತರ ಸಮಸ್ಯೆಗಳು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹೂವಪ್ಪ ಅವರ ನಿಧನದಿಂದ ಮಲೆನಾಡು ಮಾತ್ರವಲ್ಲ ಕರ್ನಾಟಕ ರಾಜ್ಯ ದಣಿವರಿಯದ ಹೋರಾಟಗಾರರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಹೂವಪ್ಪ ಅವರ ನಿಧನಕ್ಕೆ ಅನೇಕ ಗಣ್ಯರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಕಂಬನಿ ಮಿಡಿದಿದ್ದಾರೆ.

- Advertisement -