ಜನತಂತ್ರದ ಸೋಲು ಜನತೆಯ ಸೋಲು

0
17

♦ಎನ್.ನಾಗೇಶ್

ಮೈತ್ರಿ ಸರ್ಕಾರ ಮಕಾಡೆ ಮಲಗಿದೆ! ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ರಚನೆಯಾದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ 14 ತಿಂಗಳಲ್ಲೇ ಪತನ ಕಂಡಿದೆ.

ಆರಂಭದಿಂದಲೂ ಒಳ ಜಗಳ, ಮುನಿಸು, ಅಧಿಕಾರ, ಅನುದಾನಕ್ಕಾಗಿ ತಿಕ್ಕಾಟ, ರೇವಣ್ಣನವರ ಹಸ್ತಕ್ಷೇಪ, ಸಿದ್ದರಾಮಯ್ಯನವರ ರಾಜಕೀಯ ಆಟ..ಹೀಗೆ ಅನೇಕ ಸಂಗತಿಗಳು ಮೈತ್ರಿ ಬಲವನ್ನು ಗೆದ್ದಲಿನಂತೆ ತಿಂದು ಹಾಕಿದ್ದೇ ಅಲ್ಲದೇ; ಬಿಜೆಪಿಗೆ ‘ಆಪರೇಷನ್ ಕಮಲ‘ಕ್ಕೆ ಕೈ ಹಾಕಲು ಪ್ರೇರೇಪಿಸಿದ್ದು ಅಕ್ಷರಶಃ ಸತ್ಯ.

ಸಿದ್ಧಾಂತಕ್ಕಿಂತ ಅಧಿಕಾರ, ಸ್ವಾರ್ಥ ಪರತೆಯೇ ಹೆಚ್ಚಾದಾಗ ಇಂತಹ ರಾಜಕೀಯ ಪಲ್ಲಟಗಳು ಘಟಿಸುತ್ತವೆ. ಇಲ್ಲಿ ಆಗಿದ್ದೂ ಅದೇ.. ಹಲವರ ಸ್ವಾರ್ಥ, ವೈಯಕ್ತಿಕ ಹಿತಾಸಕ್ತಿಗೆ ಜಾತ್ಯತೀತ ನೆಲಗಟ್ಟಿನ ಮೈತ್ರಿ ಸರ್ಕಾರ ಬಲಿಯಾಗಿದೆ. ಮತ್ತೊಮ್ಮೆ ಕೋಮುವಾದಿ ಬಿಜೆಪಿಯ ಅಧಿಪತ್ಯ ಸ್ಥಾಪನೆಯಾಗಿದೆ.

ಇಡೀ ದೇಶದಲ್ಲೇ ಬಿಜೆಪಿ ತನ್ನ ಸಾಮ್ರಾಜ್ಯ ವಿಸ್ತರಿಸುತ್ತ ಹಿಂದುತ್ವದ ಬಾವುಟ ಹಾರಿಸುತ್ತ, ಕೇಸರಿಮಯಗೊಳಿಸುತ್ತಿದೆ. ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ನೆಲೆಯೇ ಇಲ್ಲದ ಕಡೆ ‘ಒಡೆದು ಆಳುವ ನೀತಿ‘ ಅನುಸರಿಸುವ ಮೂಲಕ ಹಾಗೂ ಶಾಸಕರನ್ನು ಸಗಟು ರೂಪದಲ್ಲಿ ಖರೀದಿಸುವ, ಬೆದರಿಸುವ, ಅರಾಜಕತೆ ಸೃಷ್ಟಿಸುವ ಮೂಲಕ ಬಿಜೆಪಿ ತನ್ನ ನೆಲೆಯನ್ನು ಕಾಪಿಡುತ್ತಲೇ ಇರುವ ಈ ವಿಷಮ ಸ್ಥಿತಿಯಲ್ಲಿ; ಜಾತ್ಯತೀತ ಶಕ್ತಿಗಳ ಈ ಒಡಕು, ಅಧಿಕಾರ ಲಾಲಸೆ, ಸಿದ್ಧಾಂತ ಹೀನತೆ.. ನಿಜಕ್ಕೂ ಅಪಾಯಕಾರಿಯೇ ಸರಿ.

 

ಮರೀಚಿಕೆಯಾದ ಮಹಾಘಟ ಬಂಧನ್:

ಮೈತ್ರಿ ಸರ್ಕಾರ ರಚನೆಯಾದ ದಿನದಂದು ವಿವಿಧ ಜಾತ್ಯತೀತ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಕೋಮುವಾದಿ ಶಕ್ತಿಯ ವಿರುದ್ಧ ಸಂಘಟಿತ ಹೋರಾಟದ ಅಭಿಪ್ಸೆ ವ್ಯಕ್ತಪಡಿಸಿದ್ದವು. ಇಂತಹದ್ದೊಂದು ಮಹಾ ಹೋರಾಟಕ್ಕೆ ಕರ್ನಾಟಕವೇ ವೇದಿಕೆಯಾಗಿತ್ತು. ಆದರೆ ಒಂದೇ ವರ್ಷದ ಅವಧಿಯಲ್ಲಿ ಈ ಆಸೆ ಕಮರಿಹೋಗಿದ್ದು ಮಾತ್ರ ದುರಂತ.

ಜಾತ್ಯತೀತ ಪಕ್ಷಗಳಲ್ಲಿ ಸಂಘಟಿತ ಹೋರಾಟದ ಕೊರತೆ; ಪ್ರತಿಷ್ಠೆ; ಅಸ್ತಿತ್ವದ ಪ್ರಶ್ನೆಗಳೇ ಮುಖ್ಯವಾದ ಪರಿಣಾಮ ಬಿಜೆಪಿ ವಿರುದ್ಧ ಹೋರಾಡುವ ಶಕ್ತಿಯೇ ಇಂದು ಮರೀಚಿಕೆಯಾಗಿದೆ.

 

ಜನತಂತ್ರದ ಅಣಕ:

ಒಂದು ಪಕ್ಷದ ಚಿಹ್ನೆಯಡಿ ಗೆದ್ದ ಓರ್ವ ಜನಪ್ರತಿನಿಧಿ ಆ ಪಕ್ಷದ ಸಿದ್ಧಾಂತವನ್ನು ಕಾಪಾಡಬೇಕಾದುದು ಕರ್ತವ್ಯ. ಪಕ್ಷಕ್ಕೆ, ಪಕ್ಷದ ತತ್ವ-ಸಿದ್ಧಾಂತಕ್ಕೆ ಬದ್ಧವಾಗಿ ಜನಹಿತ ಕಾರ್ಯಗಳಲ್ಲಿ ತೊಡಗಬೇಕು ಎಂಬುದು ಜನತಂತ್ರದ ಆಶಯ. ಆದರೆ ಜನಪ್ರತಿನಿಧಿಗಳೆನಿಸಿಕೊಂಡವರು ತಮ್ಮ ಸ್ವಾರ್ಥ ಸಾಧನೆಗೆ ಪ್ರಜಾತಂತ್ರ ನಿಲುವು ತಳೆದು, ಆಸೆ, ಆಮಿಷಕ್ಕೆ ಒಳಗಾಗಿ ಮತ್ತೊಂದು ಪಕ್ಷ ಸೇರುವ ಮೂಲಕ ಪಕ್ಷಾಂತರದ ರಾಜಕಾರಣ ನಡೆಸುವುದು ಯಾವ ನ್ಯಾಯ?

ಈಚಿನ ದಿನಗಳಲ್ಲಿ ಗೋವಾ, ತೆಲಂಗಾಣ, ಪಶ್ಚಿಮ ಬಂಗಾಳ.. ಹೀಗೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಶಾಸಕರು ಸಾರಸಗಟಾಗಿ ಬಿಜೆಪಿಗೆ ಗುಳೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಪಕ್ಷಾಂತರ ನಿಷೇಧ ಕಾಯ್ದೆಯ ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಿಜೆಪಿ ಮೂರನೇ ಒಂದು ಭಾಗದಷ್ಟು ಅನ್ಯ ಪಕ್ಷದ ಶಾಸಕರನ್ನು ಅಧಿಕಾರದ ಲಾಲಸೆಯೊಡ್ಡಿ ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಿರುವುದು ಜನತಂತ್ರದ ಅಣಕವಲ್ಲದೇ ಮತ್ತೇನು?

ಕರ್ನಾಟಕದ ಮಟ್ಟಿಗೆ ಪಕ್ಷಾಂತರ ಪರ್ವದ ಕೆಟ್ಟ ಪರಂಪರೆ ಆರಂಭಗೊಂಡದ್ದು 70ರ ದಶಕದ ಆರಂಭದಲ್ಲಿ. 1969ರ ಕಾಂಗ್ರೆಸ್ ವಿಭಜನೆಯ ನಂತರ, ಸಂಸ್ಥಾ ಕಾಂಗ್ರೆಸ್ ನೇತೃತ್ವದ ಸರಕಾರದ ಮುಖ್ಯಮಂತ್ರಿ ಆಗಿದ್ದವರು ವೀರೇಂದ್ರ ಪಾಟೀಲ್. ಈ ಸಂದರ್ಭದಲ್ಲಿ ಕಾಂಗ್ರೆಸ್(ಆಡಳಿತ) ಅರ್ಥಾತ್ ಇಂದಿರಾ ನೇತೃತ್ವದ ಕಾಂಗ್ರೆಸಿನ ಸಂಚಾಲಕರಾಗಿದ್ದವರು ದೇವರಾಜ ಅರಸು. ಯಾರೆಲ್ಲ ನಿಜಲಿಂಗಪ್ಪನವರ ವಿರೋಧಿಗಳಿದ್ದರೋ ಅವರೆಲ್ಲ ಕಾಂಗ್ರೆಸ್(ಆಡಳಿತ) ಪಕ್ಷಕ್ಕೆ ಪಕ್ಷಾಂತರ ಮಾಡಿದ್ದರು. ಪರಿಣಾಮ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಗಾದಿ ತ್ಯಜಿಸಿದ್ದರು.

ತದನಂತರದ ದಿನಗಳಲ್ಲಿ ಅರಸು ಸರ್ಕಾರವೇ ಪಕ್ಷಾಂತರಕ್ಕೆ ಬಲಿಯಾಗಬೇಕಾಯಿತು.

ಬೊಮ್ಮಾಯಿ ಪ್ರಕರಣ, ಕುಮಾರಸ್ವಾಮಿಯವರ ಕ್ಷಿಪ್ರ ಕ್ರಾಂತಿ ಇದೀಗ ಮೈತ್ರಿ ಸರ್ಕಾರ ಪತನ.. ಈ ಎಲ್ಲಕ್ಕೂ ಮೂಲ ಪಕ್ಷಾಂತರ ಪರ್ವವೇ!

 

ಆಪರೇಷನ್ ಕಮಲ ಎಂಬ ಕುತಂತ್ರ:

2008ರ ವಿಧಾನಸಭಾ ಚುನಾವಣೆಯಲ್ಲಿ 110 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಭಾಜಪ ಸಿದ್ದರಾಮಯ್ಯ ಬಳಸಿದ್ದ ತಂತ್ರವನ್ನೇ ಅನುಸರಿಸಿತ್ತು. ತನ್ನ ಶಾಸಕರ ಬೆಂಬಲದ ನೆಲೆ ವಿಸ್ತರಿಸಿಕೊಳ್ಳಲು, ಜೆಡಿಎಸ್-ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಿ ಅವರನ್ನು ಭಾಜಪ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕಿಳಿಸಿತ್ತು. ಇದು ’ಆಪರೇಷನ್ ಕಮಲ’ ಎಂದು ಕುಖ್ಯಾತಿ ಪಡೆಯಿತು.

ಇಂದಿಗೂ ಇದೇ ತಂತ್ರವನ್ನೇ ಅನುಸರಿಸಿ ಬಿಜೆಪಿ ಕಾಂಗ್ರೆಸ್ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಿ, ಅಧಿಪತ್ಯ ಸ್ಥಾಪಿಸಲು ಮುಂದಾಗಿದೆ. ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕೇರಳ.. ಈ ರಾಜ್ಯಗಳಲ್ಲಿನ ರಾಜಕೀಯ ಬೆಳವಣಿಗೆಗಳೇ ಇದಕ್ಕೊಂದು ತಾಜಾ ಉದಾಹರಣೆ.

ಅವರ ಸದಸ್ಯತ್ವ ಅನೂರ್ಜಿತ ಗೊಳಿಸಬೇಕೆಂದು ದೇವೇಗೌಡರು ನೀಡಿದ್ದ ಅರ್ಜಿಯನ್ನು ಅಂದಿನ ಸ್ಪೀಕರ್ ಕೋಳಿವಾಡ ತಣ್ಣಗಿಟ್ಟರು.

 

ಅಡಗುತ್ತಿರುವ ಬಿಜೆಪಿ ವಿರೋಧಿ ದನಿ:

ಇಂದು ದೇಶದೆಲ್ಲೆಡೆ ನಿಧಾನಗತಿಯಲ್ಲಿ ಜಾತ್ಯತೀತರ ದನಿ ಅಡಗುತ್ತಿದೆ. ಕೋಮುವಾದಿ ಬಿಜೆಪಿಗೆ ವಿರುದ್ಧವಾಗಿ ದನಿಯೆತ್ತಬೇಕಿದ್ದ ಕಾಂಗ್ರೆಸ್‌ನ ಬಲ ಕುಂದಿದೆ. ಆಂತರಿಕ ಕಲಹದಿಂದ ಜಾತ್ಯತೀತ ಪಕ್ಷಗಳು ಪ್ರತ್ಯೇಕ ನೆಲೆ ಕಂಡುಕೊಳ್ಳುವಲ್ಲಿಯೂ ಅಕ್ಷರಶಃ ಎಡವುತ್ತಿದೆ.

ಜಾತ್ಯತೀತ ಪಕ್ಷಗಳ ಒಗ್ಗೂಡುವಿಕೆ, ಸಂಘಟಿತ ಹೋರಾಟದ ಹಲವು ಪ್ರಯತ್ನಗಳು ಪದೇ ಪದೇ ವಿಫಲವಾಗುತ್ತಿರುವುದು ಬಿಜೆಪಿಯ ಬಲವನ್ನು ಹಿಗ್ಗಿಸುತ್ತಿದೆ. ಸಂಸತ್‌ನಲ್ಲೂ ಕೂಡ ಬಿಜೆಪಿ ವಿರುದ್ಧ ಗಟ್ಟಿ ದನಿ ಕೇಳಿ ಬರದೆ ಇರುವುದು ನಿಜಕ್ಕೂ ದುರಂತ. ಪರಿಸ್ಥಿತಿ ಹೀಗೆ ಮುಂದುವರೆದರೆ ಸಂವಿಧಾನಬದ್ಧ ಪ್ರಜಾಂತ್ರಕ್ಕೆ ಅಪಾಯ ತಪ್ಪಿದ್ದಲ್ಲ.

ದೇಶವ್ಯಾಪಿ ಕೋಮುವಾದದ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ. ಅಂದು ತುರ್ತುಪರಿಸ್ಥಿತಿ ವಿರುದ್ಧ ಜಯಪ್ರಕಾಶ ನಾರಾಯಣರು ನಡೆಸಿದ ಆಂದೋಲನದ ರೀತಿಯಲ್ಲೇ ಜಾತ್ಯತೀತ ಶಕ್ತಿಗಳು ಶಕ್ತಿಯುತವಾಗಿ ಆಂದೋಲನಕ್ಕೆ ಚಾಲನೆ ನೀಡಬೇಕಿದೆ. ಸ್ವಾರ್ಥ, ಸ್ವಪ್ರತಿಷ್ಠೆ, ಅಧಿಕಾರದ ಲಾಲಸೆ.. ಎಲ್ಲವನ್ನೂ ಬದಿಗೊತ್ತಿ ಸಂವಿಧಾನ ರಕ್ಷಣೆಗೆ, ಜನತಂತ್ರ ಉಳಿಸಿ ಸಂಘಟಿತ ಹೋರಾಟದ ರೂಪು ರೇಷೆ ಸಿದ್ಧಪಡಿಸಬೇಕಿದೆ.

ಪಕ್ಷ ನಿಷ್ಠೆಯಿಲ್ಲದೇ ಸ್ವಾರ್ಥಪರ ರಾಜಕಾರಣಿಗಳಿಗೆ ಮಣೆ ಹಾಕುವುದನ್ನು ಬಿಟ್ಟು; ನೈಜ ಕಾಳಜಿಯ ವ್ಯಕ್ತಿಗಳನ್ನು ಸಂಘಟಿಸಬೇಕಿದೆ. ಕೋಮುಶಕ್ತಿಗಳ ವಿರುದ್ಧ ಪ್ರಬಲ ಹೋರಾಟಕ್ಕೆ ಅಣಿಯಾಗಬೇಕಿದೆ. ಇಲ್ಲವಾದರೆ ಮುಂದೊಂದು ದಿನ ಜನತಂತ್ರಕ್ಕೆ ದೊಡ್ಡಮಟ್ಟದ ಪೆಟ್ಟು ಬೀಳುವುದರಲ್ಲಿ ಸಂದೇಹವೇ ಇಲ್ಲ.

LEAVE A REPLY

Please enter your comment!
Please enter your name here