ಚುನಾವಣೆಯ ನಂತರವೂ ರಾಜಕೀಯವಿದೆ

0
303

 

ದೇಶದ ಜಾತ್ಯತೀತ ಹೆಸರಿನಿಂದ ಇದುವರೆಗೆ ಗುರುತಿಸಿಕೊಂಡು ಬರುತ್ತಿದ್ದ ರಾಜಕೀಯ ಪಕ್ಷಗಳೆಲ್ಲ ಬಿಜೆಪಿ ಮತ್ತು ಫ್ಯಾಶಿಸಮನ್ನು ಸೋಲಿಸುವ ಜರೂರತ್ತಿನ ಬಗ್ಗೆ ರಂಗಕ್ಕಿಳಿದು ಭಾಷಣ ಬಿಗಿಯುತ್ತಿರುವಾಗಲೆಲ್ಲಾ, ಈ ಚುನಾವಣೆಯು ಹಾಗೆಯೇ ನಾಲ್ಕೂವರೆ ವರ್ಷಗಳ ಕಾಲ ಪ್ರತಿನಿತ್ಯವೂ ನಡೆಯುತ್ತಿರಲಿ ಎಂದು ಅನಿಸದಿರದು. ಚುನಾವಣೆಯ ನಂತರವೂ ರಾಜಕೀಯವಿದೆ, ಜನಸಾಮಾನ್ಯರ ಬವಣೆ ಇದೆ, ಸಂತ್ರಸ್ತರ ಕೂಗು ಇದೆ ಎಂಬುದನ್ನು ಹೋರಾಟ ರಾಜಕೀಯ ನಡೆಸಿ ಅಭ್ಯಾಸವಿಲ್ಲದ ರಾಜಕೀಯ ಪಕ್ಷಗಳು ಅರಿತುಕೊಳ್ಳುವುದು ಒಳಿತು. ಈ ದೇಶವನ್ನು ಮತ್ತು ಸಂವಿಧಾನವನ್ನು ರಕ್ಷಿಸಬೇಕು ಎಂಬುದು ಕೇವಲ ಚುನಾವಣೆಯ ಸಂದರ್ಭದ ಘೋಷಣೆಯಾಗಿರದೆ ತಮ್ಮ ಪಕ್ಷದ ಅಜೆಂಡ ಎಂಬುದನ್ನು ಸಾಬೀತುಪಡಿಸುವಲ್ಲಿ ಕಳೆದ ನಾಲ್ಕೂವರೆ ವರ್ಷದ ಮೋದಿಯ ಆಡಳಿತಾವಧಿಯಲ್ಲಿ ಪ್ರತಿಪಕ್ಷಗಳು ವಿಫಲವಾಗಿವೆ ಎಂಬುದು ಸತ್ಯಸಂಗತಿ. ಸದ್ಯಕ್ಕೆ ಸಂಘಪರಿವಾರ ಪ್ರೇರಿತ ಫ್ಯಾಶಿಸಮ್ ಸರಕಾರದಿಂದ ಬೇಸತ್ತು ಕಂಗಾಲಾಗಿ ಅದನ್ನು ಅಧಿಕಾರದಿಂದ ದೂರವಿಡಬೇಕು ಎಂದು ಜನಸಾಮಾನ್ಯರು ನಿರ್ಧರಿಸಿದರೂ ಅಂತಹ ಮನೋಸ್ಥಿತಿಯ ವರ್ಗವನ್ನು ಸಂಘಟಿಸಿ ರಾಜಕೀಯ ಹೋರಾಟದ ಭಾಗವನ್ನಾಗಿಸುವಲ್ಲಿ ವಿಪಕ್ಷಗಳು ವಿಫಲವಾಗಿವೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಹೀಗಾಗಿ ಪದೇ ಪದೇ ಪರ್ಯಾಯ ರಾಜಕಾರಣದ ಅವಕಾಶಗಳು ಈ ದೇಶದಲ್ಲಿ ತೆರೆದುಕೊಳ್ಳುತ್ತಲೇ ಇವೆ.

ಚುನಾವಣೆ ಎಂಬುದು ಸಹಜವಾಗಿ ಐದು ವರ್ಷಗಳಿಗೊಮ್ಮೆ ಬರುವ ರಾಜಕೀಯ. ಉಳಿದ 4 ವರ್ಷ 11 ತಿಂಗಳು ಕೂಡ ಹೋರಾಟ ರಾಜಕೀಯವಿರುತ್ತದೆ. ಚುನಾವಣೆ ಎಂಬುದು ಅಧಿಕಾರಕ್ಕಾಗಿನ ಸ್ಪರ್ಧೆ ಮಾತ್ರ. ಆದರೆ ಹೋರಾಟ ರಾಜಕೀಯ ಎನ್ನುವುದು ಸ್ಪರ್ಧೆ ಅಲ್ಲ; ಅದೊಂದು ಆಂದೋಲನ. ರಾಜಕೀಯ ಹೋರಾಟದ ಹಾದಿಯಲ್ಲಿ ಕೇಸು, ಜೈಲು, ನಷ್ಟ, ದೌರ್ಜನ್ಯ, ಪ್ರಾಣ ಹಾನಿಯನ್ನೂ ಅನುಭವಿಸಬೇಕಾಗುತ್ತದೆ. ಇಂತಹ ಹಾದಿಯಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಿಸಿದಷ್ಟು ಕುಟುಂಬ ರಾಜಕೀಯ, ಜಾತಿ ಆಧಾರಿತ ರಾಜಕೀಯ, ಫ್ಯಾಶಿಷ್ಟ್ ರಾಜಕೀಯ, ಭ್ರಷ್ಟ ರಾಜಕೀಯ ಎಲ್ಲವೂ ಕೊನೆಗೊಳ್ಳುತ್ತದೆ. ಹೀಗಾಗಿ ಹೋರಾಟ ರಾಜಕೀಯವು ಕೊನೆಗೊಳ್ಳಬೇಕಾಗಿರುವ ಎಲ್ಲ ರಾಜಕೀಯ ಆಯಾಮಗಳನ್ನೂ ಹಾದಿಯುದ್ದಕ್ಕೂ ಎದುರಿಸಬೇಕಾಗುತ್ತದೆ. ವಾಸ್ತವದಲ್ಲಿ ಈ ದೇಶದ ಸಂವಿಧಾನ ಮತ್ತು ದೇಶದ ಸಾರ್ವಭೌಮತೆಯನ್ನು ಉಳಿಸಲು ಇರುವ ಮಾರ್ಗ ಹೋರಾಟ ರಾಜಕೀಯವಾಗಿರುತ್ತದೆ.

2019ರ ಲೋಕಸಭಾ ಚುನಾವಣೆಯು ನಮ್ಮ ಕಣ್ಣಮುಂದಿದೆ. ದೇಶದ ಅಳಿವು ಉಳಿವಿನ ಚುನಾವಣೆಯಾಗಿ ಲೋಕಸಭಾ ಚುನಾವಣೆಯು ಬಿಂಬಿಸಲ್ಪಡುತ್ತಿದೆ. ಎಂದಿನಂತೆ ಈ ಬಾರಿಯ ಚುನಾವಣೆಯಲ್ಲೂ ಭಾರತದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ ಮುಸ್ಲಿಮ್ ಮತಗಳು ತಮ್ಮ ಹಕ್ಕುಗಳನ್ನು ಕೇಳುವ ಮತಗಳಾಗಿ ಪರಿವರ್ತನೆಗೊಳ್ಳದೆ ಬಿಜೆಪಿಯನ್ನು ಸೋಲಿಸುವ ಉದ್ದೇಶಕ್ಕೆ ಮಾತ್ರವೇ ಸೀಮಿತಗೊಂಡಂತಿದೆ. ಅಂದರೆ ದೇಶದಲ್ಲಿ ಈವರೆಗೆ ನಡೆದಿರುವ ಗುಂಪುಹತ್ಯೆ, ತ್ರಿವಳಿ ತಲಾಖ್ ಮಸೂದೆ, ಬಾಬರಿ ಮಸ್ಜಿದ್ ನ್ಯಾಯ ನಿರಾಕರಣೆ, ಪೌರತ್ವ ನೋಂದಣಿ ಕಾಯಿದೆ, ಪೌರತ್ವ ಕಾಯಿದೆ, ಯುಎಪಿಎ ಕರಾಳ ಕಾನೂನು ಮುಂತಾದ ನ್ಯಾಯ ನಿರಾಕರಣೆಯ ವಿಚಾರಗಳಲ್ಲಿ ಈ ಬಾರಿಯ ಮುಸ್ಲಿಮ್ ಸಮುದಾಯದ ಮತಗಳು ನ್ಯಾಯ ಕೇಳುವ ಮತಗಳಾಗಬೇಕಿದ್ದವು. ಆದರೆ ದುರದಷ್ಟವಶಾತ್; ಚುನಾವಣೋತ್ತರ ಸಂದರ್ಭದಲ್ಲಿ ವೌನವಾಗಿದ್ದ ಪಕ್ಷಗಳನ್ನೇ ನೆಚ್ಚಿಕೊಂಡು ಸಮುದಾಯದ ಮತದಾರರು ಮುನ್ನಡೆದರೆ ಅದು ಭವಿಷ್ಯದಲ್ಲಿ ಇನ್ನಷ್ಟು ಅಡ್ಡಪರಿಣಾಮ ಬೀರಲಿದೆ ಎಂಬ ಸಾರ್ವಕಾಲಿಕ ಸತ್ಯವನ್ನು ಅರಿತುಕೊಂಡು ಎಚ್ಚೆತ್ತುಕೊಳ್ಳುವುದು ಪ್ರಜ್ಞಾವಂತಿಕೆ ಎನಿಸಿಕೊಳ್ಳುತ್ತದೆ. ಯಾರು ಹೆಚ್ಚು ಅಪಾಯಕಾರಿ ಮತ್ತು ಕಡಿಮೆ ಅಪಾಯಕಾರಿ ಅಥವಾ ಯಾರು ಗೆದ್ದರೆ ಬಿಜೆಪಿ ಸೋಲುತ್ತದೆ ಎಂಬ ಕ್ಷಣಿಕ ಲೆಕ್ಕಾಚಾರವನ್ನು ಬದಿಗಿರಿಸಿಕೊಂಡು ಶೋಷಿತ ಸಮುದಾಯದ ಮತಗಳಿಗೆ ದುಬಾರಿ ವೌಲ್ಯ ಒದಗಿಸುವ ವೌಲ್ಯಾಧಾರಿತ ರಾಜಕೀಯಕ್ಕೆ ಮಣೆ ಹಾಕಲೇಬೇಕಾದ ಸಂದರ್ಭವಿದು.

ಪರ್ಯಾಯ ರಾಜಕೀಯವು ಏಕಾಕಾಲಕ್ಕೆ ಜಯ ಸಾಧಿಸಬೇಕೆಂದಿಲ್ಲ…ಆದರೆ ಜಯದ ಹಾದಿಯನ್ನು ಅದು ತೆರೆಯುತ್ತದೆ ಎಂದು ಖಚಿತ. ಚುನಾವಣೆ ಎಂಬುದು ವಾರದ ಸಂತೆಯಲ್ಲ. ಐದು ವರ್ಷಗಳಿಗೊಮ್ಮೆ ನಡೆಯುವಂಥದ್ದು. ಈ ಬಾರಿ ಬೇಡ, ಮುಂದಿನ ಬಾರಿ ನೋಡೋಣ ಎಂದು ಮುಸ್ಲಿಮ್ ಸಮುದಾಯವು ಕಳೆದ 70 ವರ್ಷಗಳಿಂದ ಕಾದು ಕುಳಿತಿದ್ದೇ ಬಂತು. ಪ್ರತಿಬಾರಿಯೂ ಈ ಬಾರಿ ಸ್ವಯಂ ಸ್ಪರ್ಧೆ ಬೇಡ ಎನ್ನಲು ವಾಜಪೇಯಿ, ಅಡ್ವಾಣಿ, ಮೋದಿ, ಯೋಗಿ… ಒಬ್ಬೊಬ್ಬರಾಗಿಯೇ ಕಣ್ಣ ಮುಂದೆ ಪ್ರತ್ಯಕ್ಷರಾಗುತ್ತಿದ್ದಾರೆ. ಇಂತಹ ಬೆದರಿಕೆಯ ಪ್ರತಿಮೆಗಳು ಮುಂದೆಯೂ ಪ್ರತ್ಯಕ್ಷವಾಗಲಿವೆ. ಹಾಗೆಂದು ನಾವು ಚುನಾವಣಾ ರಾಜಕೀಯದಿಂದ ಹಿಂದೆ ಸರಿದರೆ ಖಂಡಿತವಾಗಿಯೂ ಮುಸ್ಲಿಮ್ ಸಮುದಾಯವು ಸಬಲೀಕರಣದ ಮುಖ್ಯವಾಹಿನಿಗೆ ಬರಲು ಸಾಧ್ಯವೇ ಇಲ್ಲ. ನಮ್ಮ ಪಾದದ ಮೇಲೆ ನಾವು ದಢವಾಗಿ ನಿಲ್ಲಬೇಕೇ ಹೊರತು ಮಂಡಿಯ ಮೇಲಲ್ಲ ಎಂಬುದಕ್ಕೆ ಈ ಬಾರಿಯ ಮಹಾಚುನಾವಣೆಯು ಪಾಠವಾಗಲಿ.

LEAVE A REPLY

Please enter your comment!
Please enter your name here