ಚರ್ಚ್ ಬಗ್ಗೆ ಶೋಭಾ ಹೇಳಿಕೆ | ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಆಲ್ವಿನ್ ಡಿ’ಸೋಜ ಸಮರ್ಥನೆ!

Prasthutha|

ಕೆಲವು ಚರ್ಚ್ ಗಳಲ್ಲಿ ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂಬ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆಯನ್ನು ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಡಿ’ಸೋಜ ಸಮರ್ಥಿಸಿದ್ದು, ಉಡುಪಿಯ ಹಲವು ಕ್ಯಾಥೋಲಿಕ್ ಕ್ರೈಸ್ತರು ವ್ಯಾಕ್ಸಿನ್ ವಿಷಯದಲ್ಲಿ ಸಂಸದೆ ಕೊಟ್ಟ ಹೇಳಿಕೆಯನ್ನು ಸರಿಯಾಗಿ ಗ್ರಹಿಸದೆ ಖಂಡಿಸುತ್ತಿದ್ದಾರೆ. ಕ್ಯಾಥೋಲಿಕ್ ಕ್ರೈಸ್ತರು ಅಪಪ್ರಚಾರ ನಡೆಸುವ ಬಗ್ಗೆ ಸಂಸದೆ ಹೇಳಿಕೆ ನೀಡಲಿಲ್ಲ ಎಂದಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆಯವರು ವ್ಯಾಕ್ಸಿನ್ ವಿಷಯದಲ್ಲಿ ಮೂಡಿಗೆರೆ, ಅಲ್ದೂರಿನ ಭಾಗದಲ್ಲಿ ಇರುವ ಕೆಲವು ಇತ್ತೀಚೆಗೆ ಬಂದ ಚರ್ಚ್ ಗಳಲ್ಲಿ ವ್ಯಾಕ್ಸಿನ್ ತಗೋಬೇಡಿ ಅಂತ ಅಪಪ್ರಚಾರ ಮಾಡಲಾಗುತ್ತಿದೆ, ಅದರಲ್ಲೂ ಪ್ರಮುಖವಾಗಿ ಇತ್ತೀಚೆಗೆ ಮತಾಂತರಗೊಂಡವರು ಚರ್ಚಿಗೆ ಹೋದಾಗ ಈ ರೀತಿ ಅಪಪ್ರಚಾರ ಮಾಡಲಾಗುತ್ತಿದ್ದು, ಯಾರು ಏಕೆ ಹೀಗೆ ಹೇಳುತ್ತಿದ್ದಾರೆ ಎಂಬುದನ್ನು ಆದಷ್ಟು ಬೇಗ ಪತ್ತೆ ಮಾಡಬೇಕು ಎಂದು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

- Advertisement -

ಈ ಕುರಿತು ಪ್ರತಿಕ್ರಿಯೆ ನೀಡಿದ ಆಲ್ವಿನ್ ಡಿ’ಸೋಜ, ಚರ್ಚ್ ಗಳಲ್ಲಿ ಹಲವು ರೀತಿಯ ಹೊಸ ಚರ್ಚ್ ಗಳು ಇವೆ. ಇತ್ತೀಚೆಗೆ ಬಂದ ಹಲವು ಪಂಗಡದ ಚರ್ಚ್ ಗಳಿಂದ ಅಪಪ್ರಚಾರ ನಡೆಯುತ್ತಿದ್ದು ಅವರ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮಕ್ಕೆ ಸಂಸದರು ಆಗ್ರಹಿಸಿದ್ದಾರೆ. ಆದರೂ ಉಡುಪಿಯ ಕ್ಯಾಥೋಲಿಕ್ ಸಭಾ ಇಂದು ಖಂಡಿಸಿದೆ. ವಿಷಯವನ್ನು ಸರಿಯಾಗಿ ಗ್ರಹಿಸದೆ ರಾಜಕೀಯ ವಿರೋಧಕ್ಕಾಗಿ ಖಂಡಿಸುವ ಹಲವರ ಅರೆಬೆಂದ ಮನೋಸ್ಥಿತಿ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.

ಕೊರೋನ ಬಿಕ್ಕಟ್ಟಿನ ಈ ಸಮಯದಲ್ಲಿ ಸಾಮಾನ್ಯ ನಾಗರಿಕರಿಗೆ ಯಾವುದೇ ಧರ್ಮವು, ವ್ಯಾಕ್ಸಿನ್ ವಿಷಯದಲ್ಲಿ ಬೆದರಿಸುವುದು ಪ್ರಜಾಪ್ರಭುತ್ವ ವಿರೋಧವಾಗಿದ್ದು, ಆರೋಗ್ಯಕರ ಸಮಾಜಕ್ಕೂ ಉತ್ತಮವಲ್ಲ. ಯಾರೋ ವಿರೋಧಿಗಳು ದಾರಿ ತಪ್ಪಿಸಿದ ಕುರಿಗಳಂತೆ ಆಡದಿರಿ, ಪ್ರಪಂಚದಲ್ಲಿ ಕ್ರೈಸ್ತರ 55000+ ಪಂಗಡಗಳ Denominations ಚರ್ಚ್ ಗಳಿವೆ. ಕರ್ನಾಟಕದಲ್ಲೆ 100ಕ್ಕೂ ಮೀರಿದ ಕ್ರೈಸ್ತ ಪಂಗಡಗಳಿವೆ. ಹಲವು ಚರ್ಚ್ ಗಳಿಗೆ ಕ್ಯಾಥೋಲಿಕ್ ಪಂಗಡದವರನ್ನು ಕಂಡರೆ ಆಗೋಲ್ಲ… ಒಂದು ಪಂಗಡದ ಚರ್ಚಿನವರು ಇನ್ನೊಂದು ಪಂಗಡದ ಚರ್ಚಿಗೆ ಪ್ರಾರ್ಥನೆ, ಬಲಿಪೂಜೆಗೆ ಹೋಗೋದಿಲ್ಲ, ತಮ್ಮ ಮಕ್ಕಳಿಗೆ ಒಂದು ಪಂಗಡದಿಂದ ಇನ್ನೊಂದು ಪಂಗಡದವರಿಗೆ ಮದುವೆ ಮಾಡಿ ಕೊಡುವುದಿಲ್ಲ. ಅಂತದರಲ್ಲಿ ವಿರೋಧಕ್ಕಾಗಿಯೇ ವಿರೋಧ ಮಾಡುವ ಮನೋಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದಿದ್ದಾರೆ.

ಸಾಧ್ಯವಾದರೆ ಮತಾಂತರ, ಲವ್ ಜಿಹಾದ್ ಮತ್ತು ಅನೌಪಚಾರಿಕ ವಿಷಯಗಳನ್ನು ಖಂಡಿಸಿ ದೇಶದ ಒಗ್ಗಟ್ಟಿಗೆ ಕೈಜೋಡಿಸಿ ಎಂದು ಆಲ್ವಿನ್ ಡಿ’ಸೋಜ ಮನವಿ ಮಾಡಿದ್ದಾರೆ.

- Advertisement -