ಗ್ರಾಮ ಮುಖ್ಯಸ್ಥರ ಮನೆಯಲ್ಲೇ ಟಿವಿ ಪತ್ರಕರ್ತನ ಗುಂಡಿಕ್ಕಿ ಹತ್ಯೆ

Prasthutha|

ಲಖನೌ : ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಕ್ರಿಮಿನಲ್ ಗಳು ಅಟ್ಟಹಾಸ ಮೆರೆದಿದ್ದಾರೆ. ಬಲ್ಲಿಯಾ ಜಿಲ್ಲೆಯ ಫೆಫ್ನಾ ಪ್ರದೇಶದ ಖೇತ್ನಾ ಗ್ರಾಮದಲ್ಲಿ ಹಿಂದಿ ಸುದ್ದಿ ವಾಹಿನಿಯೊಂದರ ಪತ್ರಕರ್ತರೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗ್ರಾಮದ ಮುಖ್ಯಸ್ಥರ ಮನೆಯಲ್ಲಿ ಪತ್ರಕರ್ತ ರತನ್ ಸಿಂಗ್ ಅವರನ್ನು ಥಳಿಸಿದ ದುಷ್ಕರ್ಮಿಗಳು, ಬಳಿಕ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ದೇಶಕ್ಕೆ ಬಿಜೆಪಿಯಿಂದ ಅಚ್ಚೇ ದಿನ್ ಬರಲಿದೆ ಎಂಬ ಅಭಿಯಾನ ನಡೆಸಿದ್ದ ಪತ್ರಕರ್ತರಿಗೇ ಈಗ, ಅದೇ ಪಕ್ಷ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲೇ ಭದ್ರತೆ ಇಲ್ಲದಂತಾಗಿದೆ.

- Advertisement -

ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. “ಗ್ರಾಮದ ಮುಖ್ಯಸ್ಥರ ಮನೆಗೆ ಪತ್ರಕರ್ತ ಸಿಂಗ್ ಯಾಕೆ ಹೋದರು ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಗುಂಡಿಕ್ಕುವ ಮೊದಲು ಮೃತನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಶಂಕೆಯಿದೆ. ಗ್ರಾಮದ ಪ್ರಧಾನ್ ಸೀಮಾ ಸಿಂಗ್ ರ ಪತಿ ಜಭರ್ ಸಿಂಗ್ ತಲೆ ಮರೆಸಿಕೊಂಡಿದ್ದಾರೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಲೆಗೆ ಕಾರಣ ಏನೆಂದು ಸ್ಪಷ್ಟವಾಗಿಲ್ಲ, ಆದರೆ ಆಸ್ತಿ ವಿವಾದಕ್ಕೆ ಸಂಬಂಧಿಸಿ ಈ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕ್ರಿಮಿನಲ್ ಗಳಿಗೆ ಕಾನೂನಿನ ಭಯವಿಲ್ಲದಂತಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇಂತಹ ಸಾಕಷ್ಟು ಘಟನೆಗಳು ರಾಜ್ಯದಿಂದ ಪದೇಪದೇ ವರದಿಯಾಗುತ್ತಿದೆ.

- Advertisement -