ಗ್ರಾಮವನ್ನು ಧ್ವಂಸಗೊಳಿಸಿದ ಇಸ್ರೇಲ್ | ನಿರ್ವಸಿತರಾದ ಸುಮಾರು 80 ಬೆದುಯಿನ್ ಫೆಲೆಸ್ತೀನಿಯರು

Prasthutha|

ಕಳೆದ 10 ವರ್ಷಗಳಲ್ಲಿ ನಡೆದ ಅತೀ ದೊಡ್ಡ ಅಕ್ರಮ ವಿಧ್ವಂಸ

ಇಸ್ರೇಲಿ ಸೇನೆಯು ತನ್ನ ನಿಯಂತ್ರಣವಿರುವ ವೆಸ್ಟ್ ಬ್ಯಾಂಕ್ ನ ಉತ್ತರ ಜೋರ್ಡನ್ ಕಣಿವೆಯಲ್ಲಿ ಒಂದು ಇಡೀ ಫೆಲೆಸ್ತೀನಿ ಗ್ರಾಮವನ್ನು ಧ್ವಂಸಗೊಳಿಸಿದೆ. ನವೆಂಬರ್ 5ರಂದು ಹಲವು ಮಾಧ್ಯಮಗಳು ಈ ಬಗ್ಗೆ ವರದಿಯನ್ನು ಮಾಡಿವೆ. ಇದು ಕಳೆದ 10 ವರ್ಷಗಳಲ್ಲಿ ನಿಯಂತ್ರಣವಿರುವ ಫೆಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲ್ ನಡೆಸಿದ ಅತೀ ದೊಡ್ಡ ಅಕ್ರಮ ವಿಧ್ವಂಸ ಎಂದು ಹೇಳಲಾಗಿದೆ. ಫೆಲೆಸ್ತೀನಿ ಬೆದುಯಿನ್ ಪಶುಪಾಲಕ-ರೈತ ಸಮುದಾಯದವರು ನೆಲೆಸಿರುವ ಖಿರ್ ಬತ್ ಹಮ್ಸಾ ಗ್ರಾಮದ ವಿಧ್ವಂಸದಿಂದ ಸುಮಾರು 80 ಫೆಲೆಸ್ತೀನಿಯರು ನಿರಾಶ್ರಿತರಾಗಿದ್ದು, ಇದರಲ್ಲಿ 41 ಮಕ್ಕಳೂ ಸೇರಿದ್ದಾರೆ.

- Advertisement -

ಸುದ್ದಿ ಮಾಧ್ಯಮಗಳ ಪ್ರಕಾರ, ಮಂಗಳವಾರ ತಡರಾತ್ರಿ ಬುಲ್ಡೋಝರ್ ಸಹಿತ ಆಗಮಿಸಿದ್ದ ಇಸ್ರೇಲಿ ಸೇನೆಯ ವಾಹನಗಳು ಏಕಾಏಕೀ ಗ್ರಾಮಕ್ಕೆ ನುಗ್ಗಿದ್ದವು. ಯಾವುದೇ ಮುನ್ಸೂಚನೆ ಇಲ್ಲದೆ ನಡೆಸಿದ ಕಾರ್ಯಾಚರಣೆಯಿಂದ ಗ್ರಾಮಸ್ಥರು ದಂಗಾಗಿದ್ದರು. 100ಕ್ಕೂ ಅಧಿಕ ಇಸ್ರೇಲಿ ಸೈನಿಕರು ಈ ವಿಧ್ವಂಸ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ವೇಳೆ 30 ಟನ್ ಗಿಂತಲೂ ಅಧಿಕ ಪಶುವಿನ ಮೇವನ್ನೂ ನಾಶಪಡಿಸಲಾಗಿದೆ ಎಂದು ವರದಿಯಾಗಿದೆ.

ಸುಮಾರು 80 ಜನರಿರುವ 11 ಫೆಲೆಸ್ತೀನಿ ಕುಟುಂಬಗಳ ಚಿಂತಾಜನಕ ಪರಿಸ್ಥಿತಿಗೆ ಸಂಬಂಧಿಸಿ ಈಗಾಗಲೇ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರಿಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ವಿಧ್ವಂಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಮತ್ತು ಇಸ್ರೇಲ್ ನ ಮಾನವ ಹಕ್ಕು ಸಂಘಟನೆ ಬಿಟಿಸೆಲೆಮ್ ತೀವ್ರ ಕಳವಳ ವ್ಯಕ್ತಪಡಿಸಿವೆ. ‘’ಮಾರಕ ಕೊರೋನ ವೈರಸ್ ಪ್ರಕೋಪದ ಹೊರತಾಗಿಯೂ 2020ರಲ್ಲಿ ಇಸ್ರೇಲ್ ನ  ವಿಧ್ವಂಸವು ಉಚ್ಛ್ರಾಯ ಮಟ್ಟದಲ್ಲಿದೆ. 2020ಕ್ಕೂ ಮೊದಲು 10 ತಿಂಗಳುಗಳಲ್ಲಿ ಸುಮಾರು 690 ಫೆಲೆಸ್ತೀನಿ ನೆಲೆಗಳನ್ನು ಇಸ್ರೇಲ್ ಧ್ವಂಸಗೊಳಿಸಿದ್ದು, ಇದರಿಂದ 404 ಮಕ್ಕಳು ಸಹಿತ 900 ಫೆಲೆಸ್ತೀನಿಯನ್ನರು ಬಹುತೇಕ ನಿರಾಶ್ರಿತರಾಗಿದ್ದಾರೆ” ಎಂದು ವಿಶ್ವಸಂಸ್ಥೆ ಹೇಳಿದೆ.

- Advertisement -