ಗೋವಾ ಡಿಸಿಎಂ ಚಂದ್ರಕಾಂತ್ ಮೊಬೈಲ್ ನಿಂದ ವಾಟ್ಸಪ್ ಗ್ರೂಪ್ ಗೆ ಮಧ್ಯರಾತ್ರಿ ಅಶ್ಲೀಲ ವೀಡಿಯೊ ರವಾನೆ

Prasthutha|

ಪಣಜಿ : ಅತ್ಯಾಚಾರ ಪ್ರಕರಣಗಳು, ಅಶ್ಲೀಲ ಚಿತ್ರದ ಹಗರಣಗಳು ಯಾಕೋ ಬಿಜೆಪಿ ನಾಯಕರನ್ನೇ ಹೆಚ್ಚೆಚ್ಚು ಅಂಟಿಕೊಳ್ಳುತ್ತಿರುವುದು ಕುತೂಹಲಕಾರಿಯಾದುದು. ಇದೀಗ, ಗೋವಾ ಉಪಮುಖ್ಯಮಂತ್ರಿ ಚಂದ್ರಕಾಂತ್ ಬಾಬು ಕವ್ಲೇಕರ್ ಅವರ ಫೋನ್ ನಿಂದ ಭಾನುವಾರ ಮಧ್ಯರಾತ್ರಿ ಬಳಿಕ ಸಾಮಾಜಿಕ ಕಾರ್ಯಕರ್ತರಿರುವ ವಾಟ್ಸಪ್ ಗ್ರೂಪ್ ಒಂದಕ್ಕೆ ಅಶ್ಲೀಲ ವೀಡಿಯೊವೊಂದು ರವಾನೆಯಾದ ಬಗ್ಗೆ ವರದಿಯಾಗಿದೆ. ಆದರೆ, ತನ್ನ ಫೋನ್ ಹ್ಯಾಕ್ ಆಗಿದೆ ಎಂದು ಡಿಸಿಎಂ ಚಂದ್ರಕಾಂತ್ ಪೊಲೀಸ್ ದೂರು ದಾಖಲಿಸಿದ್ದಾರೆ

‘ವಿಲೇಜಸ್ ಆಫ್ ಗೋವಾ’ ಎಂಬ ವಾಟ್ಸಪ್ ಗ್ರೂಪ್ ಗೆ ಡಿಸಿಎಂ ಚಂದ್ರಕಾಂತ್ ಅವರ ಫೋನ್ ನಿಂದ ಅಶ್ಲೀಲ ವೀಡಿಯೊ ರವಾನೆಯಾಗಿದೆ. ಕೆಲವೊಂದು ಅಪರಾಧಿಕ ಉದ್ದೇಶದಿಂದ ನನ್ನ ಹೆಸರಲ್ಲಿ ವೀಡಿಯೊ ಉದ್ದೇಶಪೂರ್ವಕವಾಗಿ ರವಾನಿಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ತಾನು ಮಲಗಿದ್ದಾಗ ತನ್ನ ಮೊಬೈಲ್ ನಿಂದ ವೀಡಿಯೊ ರವಾನೆಯಾಗಿದೆ ಎಂದೂ ಹೇಳಿದ್ದಾರೆ. ಈ ಹಿಂದೆಯೂ ಹಲವು ಬಾರಿ ಇಂತಹ ಪ್ರಯತ್ನ ನಡೆದಿದ್ದು, ತಮ್ಮ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

- Advertisement -

ಪ್ರತಿಪಕ್ಷಗಳು ಕೂಡ ಈ ಸಂಬಂಧ ಪೊಲೀಸ್ ದೂರು ದಾಖಲಿಸಿವೆ. ಸೋಮವಾರ ರಾತ್ರಿ 1:20ರ ಸುಮಾರಿಗೆ ಡಿಸಿಎಂಚಂದ್ರಕಾಂತ್ ಅವರು ಅಶ್ಲೀಲ ವೀಡಿಯೊ ವಾಟ್ಸಪ್ ಗ್ರೂಪ್ ಗೆ ರವಾನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ದೂರು ನೀಡಿದೆ. ಗೋವಾ ಫಾರ್ವರ್ಡ್ ಪಾರ್ಟಿ ಮಹಿಳಾ ಘಟಕವೂ ಈ ಸಂಬಂಧ ದೂರು ದಾಖಲಿಸಿದೆ. ಚಂದ್ರಕಾಂತ್ ಕಳೆದ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು ಮತ್ತು ಸರಕಾರದಲ್ಲಿ ಎರಡನೇ ಅತಿದೊಡ್ಡ ಹುದ್ದೆ ಪಡೆದಿದ್ದರು.

ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದ್ದಾಗ ಸಚಿವರುಗಳು ವಿಧಾನಸಭೆಯಲ್ಲೇ ಅಶ್ಲೀಲ ಚಿತ್ರ ನೋಡಿ ಭಾರಿ ಸುದ್ದಿಯಾಗಿದ್ದರು.

- Advertisement -