ಗಾಂಧಿಯ ಪುನರುತ್ಥಾನ

0
43

♦ ಹಸನ್ ಗಿಯಾನ್ಸ್

1948ರ ಜನವರಿ 30ರಂದು ಶುಕ್ರವಾರ ಸಂಜೆ 5 ಗಂಟೆಯ ಕೊಂಚ ನಂತರ ಗೋಡ್ಸೆಯ ಪಿಸ್ತೂಲಿನಿಂದ ಪೊಂಟ್ ಬ್ಲಾಂಕ್ ರೇಂಜಲ್ಲಿ ಹಾರಿದ ಮೂರು ಗುಂಡುಗಳು ಮಹಾತ್ಮಾ ಗಾಂಧಿ ಪ್ರಾಣವನ್ನು ಕಿತ್ತುಕೊಂಡಿತ್ತು. ಗಾಂಧಿ ದಿಲ್ಲಿಯ ಬಿರ್ಲಾ ಭವನದ ಉದ್ಯಾನವನದಲ್ಲಿ ದೈನಂದಿನ ಪ್ರಾರ್ಥನೆ ನಡೆಸಲು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಗುಂಪಿನ ಮಧ್ಯೆ ಅದೆಲ್ಲಿಂದಲೋ ನುಸುಳಿಕೊಂಡು ಬಂದ ಗೋಡ್ಸೆ ಮಡಚಿಕೊಂಡಿದ್ದ ತನ್ನ ಕೈಗಳ ಅಂಗೈ ಮಧ್ಯೆ ಪಿಸ್ತೂಲನ್ನು ಅಡಗಿಸಿಟ್ಟುಕೊಂಡಿದ್ದ. ಹೇ ರಾಮ್ ಎಂದು ಹೇಳುತ್ತಲೇ ಬಾಪೂ ಪ್ರಾಣಪಕ್ಷಿ ಹಾರಿಹೋಗಿತ್ತು.

ಒಂದು ದ್ವೇಷ ಸಿದ್ಧಾಂತ ಅವರ ಪ್ರಾಣವನ್ನು ಕಿತ್ತುಕೊಂಡಿತ್ತು. ಅದೇ ಸಿದ್ಧಾಂತ ಗಾಂಧೀಜಿ ಪೋಷಿಸಿದ ರಾಷ್ಟ್ರಕ್ಕೆ ಗಂಭೀರ ಬೆದರಿಕೆಯಾಗಿ ಪರಿಣಮಿಸಿದೆ. ಗೋಡ್ಸೆಯ ಪಿಸ್ತೂಲಿನಿಂದ ಹಾರಿದ ಆ ಮಾರಣಾಂತಿಕ ಗುಂಡಿನ ದಾಳಿಯಿಂದ ಬಾಪೂವನ್ನು ಉಳಿಸಲು ನಮಗೆ ಸಾಧ್ಯವಾಗಲಿಲ್ಲ. ಆದರೆ ಗಾಂಧಿ ಬೆಂಬಲಿಸಿದ ಪ್ರತಿಯೊಂದನ್ನೂ ನಾಶಮಾಡಲು ಬಯಸಿರುವ ಗೋಡ್ಸೆ ಅನುಯಾಯಿಗಳ ಪ್ರತಿಯೊಂದು ಹೇಳಿಕೆ ಮತ್ತು ಕ್ರಮಗಳಿಂದ ನಿರಂತರವಾಗಿ ನಡೆಯುತ್ತಿರುವ ದಾಳಿಯಿಂದ ಗಾಂಧೀಜಿಗಿದ್ದ ಭಾರತದ ಕಲ್ಪನೆಯನ್ನು ರಕ್ಷಿಸಲು ನಾವು ವಿಫಲವಾಗಬಾರದು.

ಇಲ್ಲಿ ನಾನು ಜನರು ಮತ್ತು ದೇವರ ಮುಂದೆ ಘೋಷಿಸುವುದೇನೆಂದರೆ ಗಾಂಧಿಯನ್ನು ಹತ್ಯೆ ಮಾಡುವ ಮೂಲಕ ನಾನು ಭಾರತಕ್ಕೆ ಶಾಪವಾಗಿದ್ದ, ದುಷ್ಟರ ಶಕ್ತಿಯಾಗಿದ್ದ ಓರ್ವನನ್ನು ಅಳಿಸಿ ಹಾಕಿದ್ದೇನೆ ಎಂದು  ಹತ್ಯೆಯ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನಾಥೂರಾಮ್ ಗೋಡ್ಸೆ ಯಾವುದೇ ಅಳುಕಿಲ್ಲದೆ ಹೇಳಿಕೊಂಡಿದ್ದ.

ಇದಕ್ಕೆ ವಿರುದ್ಧವಾಗಿ, ನೈತಿಕ ಅವಸಾನದ ಈ ಯುಗದಲ್ಲಿ ಗಾಂಧೀಜಿಯೊಬ್ಬರೇ ನಾವೆಲ್ಲರೂ ಶಕ್ತಿಮೀರಿ ಬಯಸುವ ರಾಜಕೀಯ ವಲಯದಲ್ಲಿನ ಮಾನವ ಸಂಬಂಧಗಳ ಉನ್ನತ ಪರಿಕಲ್ಪನೆಯನ್ನು ಪ್ರತಿನಿಧಿಸುತ್ತಿದ್ದ ಏಕೈಕ ವ್ಯಕ್ತಿಯಾಗಿದ್ದರು. ಈ ಭಾವನೆಯನ್ನು ಹೊಂದಿದ್ದುದೇ, ಗಾಂಧೀಜಿಯನ್ನು ಇಡೀ ಜಗತ್ತು ಯಾವ ಮಟ್ಟಕ್ಕೆ ಪೂಜನೀಯ ಎಂದು ಭಾವಿಸಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಅಲ್ಬರ್ಟ್ ಐನ್‌ಸ್ಟೈನ್ ಬರೆಯುತ್ತಾರೆ.

ಗೋಡ್ಸೆಯನ್ನು ಗಲ್ಲಿಗೇರಿಸಲಾಯಿತು. ಆದರೆ ಆತನ ಸಿದ್ಧಾಂತ ಜೀವಂತವಿದೆ ಮತ್ತು ಆತನ ಅನುಯಾಯಿಗಳ ಹೃದಯ ಮತ್ತು ಮನಸ್ಸಿನಲ್ಲಿ ಭದ್ರವಾಗಿದೆ. ಅವರ ರಕ್ತದಾಹ ಇನ್ನೂ ಕಡಿಮೆಯಾಗಿಲ್ಲ.

ಜಗತ್ತಿನ ಅತೀದೊಡ್ಡ ಸಾಮ್ರಾಜ್ಯವನ್ನು ಉರುಳಿಸಲು ಗಾಂಧಿ ಅಹಿಂಸೆ, ಸತ್ಯ, ತ್ಯಾಗ ಮತ್ತು ನೋವು ಮುಂತಾದ ಅಸ್ತ್ರಗಳನ್ನು ಬಳಸಿದರು. ಅವರು ಕೋಟ್ಯಂತರ ಜನರನ್ನು ಆಕರ್ಷಿಸಿ ತನ್ನೆಡೆಗೆ ಸೆಳೆದರೂ ತನಗಾಗಿ ಎಂದೂ ಸ್ಥಾನಮಾನ ಅಥವಾ ಅಧಿಕಾರ ಅಥವಾ ವೈಭವವನ್ನು ಕೇಳಲಿಲ್ಲ. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಗಾಂಧಿ ಇಂಗ್ಲೆಂಡ್‌ನಲ್ಲಿ ಕಾನೂನು ಪದವಿ ಮುಗಿಸಿದ್ದು ಬಯಸಿದ್ದರೆ ಆರಾಮ ಮತ್ತು ಶ್ರೀಮಂತಿಕೆಯ ಜೀವನ ನಡೆಸಬಹುದಿತ್ತು. ಆದರೆ ಅವರು ಓರ್ವ ರೈತನ ಜೀವನ ಬದುಕಲು ಬಯಸಿದರು ಮತ್ತು ತನ್ನ ಜೀವನವನ್ನು ಜನಸಾಮಾನ್ಯರ ಸೇವೆಗೆ ಮತ್ತು ಅವರನ್ನು ವಿದೇಶಿ ಆಳ್ವಿಕೆಯಿಂದ ಮುಕ್ತಗೊಳಿಸಲು ಮುಡಿಪಾಗಿಟ್ಟರು.

ಬರಿಗಾಲಲ್ಲಿ ನಡೆದಾಡುತ್ತಿದ್ದ ಮತ್ತು ಮೂರನೇ ದರ್ಜೆ ಸಾರಿಗೆ ವ್ಯವಸ್ಥೆಗಳಲ್ಲಿ ಸಂಚರಿಸುತ್ತಿದ್ದ ಗಾಂಧಿ ತಾವೇ ಸ್ಥಾಪಿಸಿದ್ದ ಆಶ್ರಮಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಅವರೊಬ್ಬ ಸಂಪ್ರದಾಯಬದ್ಧ ಹಿಂದುವಾಗಿದ್ದು ಮಾನವಕುಲಕ್ಕೆ ವಿಶ್ವ ಭ್ರಾತೃತ್ವವನ್ನು ಬೋಧಿಸುತ್ತಿದ್ದರು, ಹಿಂದುತ್ವದ ಹೆಸರಲ್ಲಿ ಪ್ರಚೋದಿಸಲಾಗುವ ಹಿಂಸೆ ಮತ್ತು ಮತಾಂಧತೆಯನ್ನು ತೀರಾ ವಿರುದ್ಧ.

ಅವರು ತನ್ನ ರಾಮರಾಜ್ಯದ ಪರಿಕಲ್ಪನೆಯನ್ನು ಈ ರೀತಿ ವಿವರಿಸುತ್ತಿದ್ದರು, ಅದನ್ನು ಭೂಮಿಯಲ್ಲಿ ದೇವರ ಸಾಮ್ರಾಜ್ಯ ಎಂದು ವ್ಯಾಖ್ಯಾನಿಸಬಹುದು. ಅದೊಂದು ಪರಿಪೂರ್ಣ ಪ್ರಜಾಪ್ರಭುತ್ವವಾಗಿದ್ದು, ಶ್ರೀಮಂತ-ಬಡವ, ಬಣ್ಣ, ಜನಾಂಗ ಅಥವಾ ಪಂಗಡ, ಲಿಂಗ ಇತ್ಯಾದಿ ಆಧಾರಿತ ಅಸಮಾನತೆಗಳು ಇರುವುದಿಲ್ಲ, ಅದರಲ್ಲಿ ಜಮೀನು ಮತ್ತು ಸರಕಾರ ಜನರಿಗೆ ಸೇರಿರುತ್ತದೆ. ನ್ಯಾಯ ಪ್ರಾಮಾಣಿಕವಾಗಿರುತ್ತದೆ, ಪರಿಪೂರ್ಣ ಮತ್ತು ಅಗ್ಗವಾಗಿರುತ್ತದೆ. ಪ್ರಾರ್ಥನೆಯ, ಮಾತು ಮತ್ತು ಮಾಧ್ಯಮ ಸ್ವಾತಂತ್ರ ಇರುತ್ತದೆ. ಸ್ವಯಂ ಹೇರಿರುವ ನೈತಿಕ ನಿರ್ಬಂಧಗಳ ಕಾರಣದಿಂದ ಇವೆಲ್ಲವೂ ಸಾಧ್ಯವಾಗಲಿದೆ.

1946ರ ಬೇಸಿಗೆಯಲ್ಲಿ ಕೋಮು ಉದ್ವಿಗ್ನತೆ ಹೆಚ್ಚುತ್ತಲೇ ಹೋದಾಗ ಗಾಂಧೀಜಿ ಆಕ್ರೋಶವೂ ಹೆಚ್ಚಾಗತೊಡಗಿತು. ನೇರ ಕ್ರಮ ತೆಗೆದುಕೊಳ್ಳಲು ಜಿನ್ನಾ ನೀಡಿದ ಕರೆಯಿಂದ ಪ್ರಚೋದನೆಗೊಂಡ ಗುಂಪುಗಳು ನಡೆಸಿದ ಹಿಂಸಾಚಾರದಿಂದ ಆಗಸ್ಟ್ 16ರಂದು ಕಲ್ಕತ್ತಾದಲ್ಲಿ ಕೋಮು ದಳ್ಳುರಿಯ ಧಗೆ ಹರಡಿತು. ನಾಲ್ಕು ದಿನ ಮತ್ತು ನಾಲ್ಕು ರಾತ್ರಿ ಮುಸ್ಲಿಮರು ಮತ್ತು ಹಿಂದುಗಳು ಪರಸ್ಪರರನ್ನು ಹತ್ಯೆಗೈಯ್ಯುತ್ತಾ ಕಲ್ಕತ್ತಾವನ್ನು ರಕ್ತಮಯಗೊಳಿಸಿದರು. ಕೆಲವೇ ಸಮಯದ ನಂತರ ಪೂರ್ವ ಬಂಗಾಳದ ನೌಖಾಲಿಯಲ್ಲಿ ಅಲ್ಪಸಂಖ್ಯಾತ ಹಿಂದುಗಳನ್ನು ಗುರಿ ಮಾಡಿ ಹತ್ಯೆಗಳು ನಡೆದವು. ಇದರ ಮುಂದುವರಿದ ಭಾಗವಾಗಿ ಬಿಹಾರದಲ್ಲಿ ಮುಸ್ಲಿಮರ ಮೇಲೆ ದಾಳಿಗಳು ನಡೆದವು.

ದ್ವೇಷದ ಕಾಡ್ಗಿಚ್ಚು ಅನಿಯಂತ್ರಿತವಾಗಿ ದೇಶಾದ್ಯಂತ ಹರಡಿದ ಕಾರಣ ಅಸಂಖ್ಯಾತ ಜೀವಗಳು ಬಲಿಯಾದವು ಮತ್ತು ಬ್ರಿಟಿಷ್ ಆಳ್ವಿಕೆ ಮತ್ತು ದೇಶದ ವಿಭಜನೆ ವಾಸ್ತವಾಗಿ ತೋರುತ್ತಿದ್ದ ಸಂದರ್ಭದಲ್ಲಿ ದೇಶ ನಾಗರಿಕ ಯುದ್ಧಕ್ಕೆ ಒಳಗಾಗುವ ಅಂಚಿಗೆ ಬಂತು ನಿಂತಿತ್ತು.

ನೌಖಾಲಿಯಲ್ಲಿ ನಾಲ್ಕು ತಿಂಗಳು ಕಳೆದ ಗಾಂಧಿ, ಹಳ್ಳಿಯಿಂದ ಹಳ್ಳಿಗೆ ಭಾರವಾದ ಹೆಜ್ಜೆಗಳನ್ನಿರಿಸುತ್ತಾ ಕೋಮು ಉದ್ವಿಗ್ನತೆ ಬಿಸಿಯಾಗಿರುವಂತೆ ಮಾಡಿದ್ದ ದ್ವೇಷದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಮುಸ್ಲಿಮರನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, ಹಿಂದುಗಳು ನಿಮ್ಮ ಮಧ್ಯೆ ಇರಬೇಕೆಂದು ನೀವು ಬಯಸುವುದಾದರೆ, ನೀವು ರಕ್ಷಣೆಗಾಗಿ ಸೇನೆಯತ್ತ ನೋಡುವ ಅಗತ್ಯವಿಲ್ಲ, ಬದಲಿಗೆ ನಿಮ್ಮ ಮುಸ್ಲಿಂ ಸಹೋದರರತ್ತ ನೋಡಿ ಎಂದು ನೀವು ಅವರಿಗೆ ಹೇಳಬೇಕು. ಅವರ ಪುತ್ರಿಯರು, ಸಹೋದರಿಯರು ಮತ್ತು ತಾಯಂದಿರು ನಿಮ್ಮ ಪುತ್ರಿಯರು, ಸಹೋದರಿಯರು ಮತ್ತು ತಾಯಂದಿರಾಗಿದ್ದಾರೆ ಮತ್ತು ನೀವು ಅವರನ್ನು ನಿಮ್ಮ ಪ್ರಾಣ ಕೊಟ್ಟಾದರೂ ರಕ್ಷಿಸಬೇಕು ಎಂದು ತಿಳಿಸಿದ್ದರು.

ನಖೋಲಿಯಿಂದ ಬಿಹಾರ ದತ್ತ ತೆರಳಿದ ಗಾಂಧಿ ಅಲ್ಲಿ ಮನುಷ್ಯರನ್ನು ರಾಕ್ಷಸರನ್ನಾಗಿ ಮಾಡಿದ್ದ ಹಿಂಸಾಚಾರವನ್ನು ಶಮನಗೊಳಿಸಲು ಪ್ರಯತ್ನಿಸಿದರು. ಬಿಹಾರದಲ್ಲಿ ಮುಸ್ಲಿಮರ ಮೇಲಿನ ದಾಳಿ ಪೂರ್ವ ಬಂಗಾಳದಲ್ಲಿ ಹಿಂದುಗಳ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿತ್ತು ಎಂದು ಅವರಿಗೆ ತಿಳಿಸಿದಾಗ, ಗಾಂಧೀಜಿ, ಬಿಹಾರ ಪೂರ್ವ ಬಂಗಾಳದ ಹಿಂದುಗಳಿಗೆ ನೀಡಬಹುದಾಗಿದ್ದ ಅತ್ಯುತ್ತಮ ನೆರವೆಂದರೆ ಅವರ ಮಧ್ಯೆ ಜೀವಿಸುತ್ತಿರುವ ಮುಸ್ಲಿಮರನ್ನು ತಮ್ಮ ಪ್ರಾಣವನ್ನು ನೀಡಿಯಾದರೂ ರಕ್ಷಿಸುತ್ತೇವೆ ಎಂಬ ಭರವಸೆ. ಆ ಉದಾಹರಣೆಯನ್ನು ನಂತರವೂ ಹೇಳಬಹುದಿತ್ತು ಎಂದು ಹೇಳಿದ್ದರು.

ಬಿಹಾರದ ಪಾಟ್ನಾದ ಗುರುದ್ವಾರ ಹರ್ ಮಂದಿರ್‌ನಲ್ಲಿ ನಡೆದ ಹಿಂದುಗಳು, ಮುಸ್ಲಿಮರು ಮತ್ತು ಸಿಖ್ಖರ ಸಭೆಯಲ್ಲಿ ಗಾಂಧೀಜಿ, ಇಂದು ಭಾರತ ಹುಚ್ಚುತನದ ಬೆಂಕಿಯುಂಡೆಯಂತೆ ಕಾಣುತ್ತಿದೆ ಮತ್ತು ನಮ್ಮವರೇ ನಮ್ಮ ಮನೆಗಳಿಗೆ ಬೆಂಕಿ ಹಾಕುತ್ತಿರುವುದನ್ನು ಕಂಡಾಗ ನನ್ನ ಹೃದಯ ಬಿಕ್ಕಿಬಿಕ್ಕಿ ಅಳುತ್ತದೆ. ಇಂದು ಭಾರತದಲ್ಲಿ ಕತ್ತಲು ಆವರಿಸುತ್ತಿರುವುದನ್ನು ನಾನು ಕಾಣುತ್ತಿದ್ದೇನೆ ಮತ್ತು ನನ್ನ ಕಣ್ಣುಗಳು ಬೆಳಕಿಗಾಗಿ ಎಲ್ಲ ದಿಕ್ಕಿನತ್ತಲೂ ನೋಡುತ್ತಿದೆ ಎಂದು ಭಾವುಕರಾಗಿ ನುಡಿದಿದ್ದರು.

ಮಹಾತ್ಮಾ ಗಾಂಧಿ ವಿಭಜನೆಯ ಪರಿಕಲ್ಪನೆಯನ್ನು ಶತಾಯಗತಾಯ ವಿರೋಧಿಸಿದ್ದರು, ಅದನ್ನು ಅವರು ಭಾರತದ ಛೇದನ ಎಂದು ಕರೆದಿದ್ದರು. ಅದನ್ನು ಯಾವ ರೀತಿಯಲ್ಲಾದರೂ ತಪ್ಪಿಸಬೇಕು ಎಂದು ಬಯಸಿದ್ದ ಅವರು ಭಾರತ ಒಗ್ಗಟ್ಟಾಗುಳಿಯಲು ಯಾವ ಬೆಲೆಯನ್ನು ತೆರಲೂ ಸಿದ್ದರಿದ್ದರು. ಸ್ವಾತಂತ್ರದ ಸಾಧ್ಯತೆ ಖಚಿತಗೊಳ್ಳುತ್ತಾ ಸಾಗಿದಾಗ ಮತ್ತು ವಿಭಜನೆ ಒಂದು ತಪ್ಪಿಸಲಾಗದಂತ ವಾಸ್ತವವಾಗಿ ಬದಲಾಗದ ಅಧಿಕಾರ ಹಿಡಿಯಲು ಮುಂದಾಗಿದ್ದರು ಮತ್ತು ಪ್ರಭಾವೀ ಸ್ಥಾನಗಳಲ್ಲಿದ್ದವರು ಗಾಂಧೀಜಿ ಸಲಹೆ ಕೇಳುವಲ್ಲಿ ಆಸಕ್ತಿ ತೋರಲಿಲ್ಲ.

ಬೃಹತ್ ಜನಸಮೂಹ ದಿಲ್ಲಿಯ ರಸ್ತೆಗಳಿಗೆ ಇಳಿದ ಮತ್ತು ಅದೃಷ್ಟದ ಜೊತೆ ಭಾರತದ ಸಂಯೋಗದ ಬಗ್ಗೆ ನೆಹರೂ ಮಾತನಾಡಿದ್ದ ಮಧ್ಯರಾತ್ರಿಯ ಆ ಗಳಿಗೆಯಲ್ಲಿ ಮಹಾತ್ಮಾ ಗಾಂಧೀಜಿ, ಈ ಹುಚ್ಚು ವಿಜಯೋತ್ಸವದಲ್ಲಿ ಭಾಗವಹಿಸಲು ಒಪ್ಪದೆ ಕಲ್ಕತ್ತಾದ ಪರಿತ್ಯಕ್ತ ಹೈದರಿ ಮಂಝಿಲ್‌ನಲ್ಲಿ ಮಲಗಿದ್ದರು. ಈ ಜೀರ್ಣಾವಸ್ಥೆಯಲ್ಲಿದ್ದ ಬಂಗಲೆಗೆ ಅವರು, ಕಲ್ಕತ್ತಾದಲ್ಲಿ ಶಾಂತಿ ಸ್ಥಾಪಿಸಲು ಅವರಿಗೆ ಬೆಂಬಲ ಸೂಚಿಸಿದ್ದ ಮುಸ್ಲಿಂ ಲೀಗ್ ನಾಯಕ ಸುಹ್ರವರ್ದಿ ಜೊತೆ ಆಗಮಿಸಿದ್ದರು. ಗಾಂಧೀಜಿಯ ಮನವಿ ಚಮತ್ಕಾರಿ ಪರಿಣಾಮ ಬೀರಿ ಹಿಂಸಾಚಾರ ಬಹುತೇಕ ಹದಿನೈದು ದಿನಗಳ ಕಾಲ ನಿಂತಿತ್ತು ಮತ್ತು ಆಗಸ್ಟ್‌ನ ಕೊನೆಯ ದಿನಗಳಲ್ಲಿ ಮತ್ತೆ ಆರಂಭವಾಗಿತ್ತು.

ಮುಂದಿನ ರಾತ್ರಿಯಿಂದ ಗಾಂಧೀಜಿ ಉಪವಾಸ ಆರಂಭಿಸಿದರು ಮತ್ತು ಗಲಭೆ ನಿಂತರೆ ಮಾತ್ರ ಆಹಾರ ಸೇವಿಸುವುದಾಗಿ ತಿಳಿಸಿದರು. ಮುಂದಿನ ದಿನ ಕಲ್ಕತ್ತಾ ಮತ್ತೆ ಶಾಂತವಾಯಿತು. ಸೆಪ್ಟಂಬರ್ 4ರ ರಾತ್ರಿ 9.15ರ ಹೊತ್ತಿಗೆ ಅವರು ಕಿತ್ತ್ತಳೆ ರಸ ಸೇವಿಸುವ ಮೂಲಕ ಉಪವಾಸ ಮುರಿದರು. ನಂತರ ಪಂಜಾಬ್‌ಗೆ ತೆರಳುವ ಉದ್ದೇಶದಿಂದ ಸೆಪ್ಟಂಬರ್ 7ರಂದು ದಿಲ್ಲಿಗೆ ರೈಲು ಹತ್ತಿದರು.

ಆದರೆ ದಿಲ್ಲಿಯಲ್ಲಿ ನಡೆಯುತ್ತಿದ್ದ ಹಿಂಸಾಚಾರದ ತೀವ್ರತೆ ಅವರನ್ನು ಎಲ್ಲಿಗೂ ಹೋಗದಂತೆ ತಡೆಯಿತು. ದಿಲ್ಲಿಯ ಜನರು ಹುಚ್ಚರಾಗಿದ್ದಾರೆಯೇ? ಅವರಲ್ಲಿ ಮಾನವೀಯತೆ ಉಳಿದಿಲ್ಲವೇ? ಅವರಿಗೆ ದೇಶದ ಮೇಲಿನ ಪ್ರೀತಿ ಮತ್ತು ಅದರ ಸ್ವಾತಂತ್ರ ಯಾವುದೇ ಪರಿಣಾಮ ಬೀರುವುದಿಲ್ಲವೇ? ಗಾಂಧಿ, ಸರ್ದಾರ್ ಪಟೇಲರ ಬಳಿ ಅಲವತ್ತುಕೊಂಡಿದ್ದರು.

ನಾನು ಯಾವ ಪಾಪ ಮಾಡಿದ್ದೇನೆ ಎಂದು ದೇವರು ಈ ಭಯಾನಕತೆಗಳನ್ನು ವೀಕ್ಷಿಸಲು ನನ್ನನ್ನು ಜೀವಂತವಾಗಿರಿಸಿದ್ದಾನೆ ಎಂದು ಗಾಂಧಿ ಮರುಗಿದರು. ಕೊನೆಗೂ ಅವರ ಜೀವನ ಉಳಿದಿದ್ದು ಕೇವಲ ಕೆಲವೇ ತಿಂಗಳು. ಆದರೆ ಕೊನೆಯ ಉಪವಾಸ ಆಚರಿಸುವುದಕ್ಕೂ ಮೊದಲು ಸಾಯುವುದು ಅವರ ವಿಧಿಯಲ್ಲಿರಲಿಲ್ಲ. ಈ ಬಾರಿ ನನ್ನ ಉಪವಾಸ ಹಿಂದುಗಳು ಅಥವಾ ಮುಸ್ಲಿಮರ ವಿರುದ್ಧವಲ್ಲ, ಬದಲಿಗೆ ನಕಲಿ ವೇಷ ಧರಿಸಿ ತಮ್ಮನ್ನು ಮತ್ತು ನನ್ನನ್ನು ಹಾಗೂ ಸಮಾಜವನ್ನು  ವಂಚಿಸುವ ಜುಡಾಸಿಸ್ (ನಕಲಿ ನ್ಯಾಯಾಧೀಶರು) ಗಳ ವಿರುದ್ಧ ಎಂದು ಅವರು ತನ್ನ ಸೋದರ ಮೊಮ್ಮಗಳು ಮನುಬೆನ್ ಬಳಿ ಹೇಳಿದರು.

ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ ನಗದು ಬಾಕಿಯ ಬಗ್ಗೆ ವಿಳಂಬ ಧೋರಣೆ ತೋರಿದ್ದ ಭಾರತೀಯ ಸಂಪುಟ ಮೂರು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿತು. ದಿಲ್ಲಿಯಲ್ಲಿ ಸಹೋದರರಂತೆ ಶಾಂತಿಯಿಂದ ಬದುಕುವುದಾಗಿ ನೂರಕ್ಕೂ ಅಧಿಕ ಹಿಂದುಗಳು ಮುಸ್ಲಿಮರು ಮತ್ತು ಕ್ರೈಸ್ತರು ಏಳಂಶದ ಘೋಷಣೆಗೆ ಸಹಿಹಾಕಿದ ನಂತರ ಉಪವಾಸ ತೊರೆದರು. ಆದರೆ ಸಾವು ಕೊನೆಗೂ ಆಗಮಿಸಿತು. ಆದರೆ ಉಪವಾಸ ಆಚರಿಸಿದ ಹೊಡೆತದಿಂದಲ್ಲ ಬದಲಿಗೆ ಕೊಲೆಗಾರರ ಹುನ್ನಾರದ ಕ್ರಮದಿಂದ.

ಜನವರಿ 20ರಂದು ಗಾಂಧಿ ಪ್ರತಿದಿನ ಪ್ರಾರ್ಥನಾ ಸಭೆ ನಡೆಸುತ್ತಿದ್ದ ವೇದಿಕೆಯ ಹಿಂದೆ ಗ್ರೆನೇಡ್ ಎಸೆಯಲಾಗಿತ್ತು. ಘಟನೆಯಲ್ಲಿ ಯುವ ಪಂಜಾಬಿ ನಿರಾಶ್ರಿತ ಮದನ್ ಲಾಲ್ ಪಹ್ವ ಎಂಬಾತನನ್ನು ಬಂಧಿಸಲಾಗಿತ್ತು ಮತ್ತು ಇನ್ನೊಂದು ಗ್ರೆನೇಡ್ ಆತನ ಜೇಬಿನಲ್ಲಿ ಪತ್ತೆಯಾಗಿದ್ದು ಅದನ್ನು ನೇರವಾಗಿ ಗಾಂಧೀಜಿ ಮೇಲೆ ಎಸೆಯಲು ಉದ್ದೇಶಿಸಲಾಗಿತ್ತು. ಮುಂದಿನ ಕೊಲೆಗಾರ ಗೋಡ್ಸೆಯೂ ಸೇರಿದಂತೆ ಇತರ ಸಹಚರರು ಮೊದಲೇ ಕಾಯುತ್ತಿದ್ದ ಟ್ಯಾಕ್ಸಿಯಲ್ಲಿ ಪರಾರಿಯಾಗಿದ್ದರು.

ಹತ್ತು ದಿನಗಳ ನಂತರ ಗೋಡ್ಸೆ ಮತ್ತೊಮ್ಮೆ ದಾಳಿ ನಡೆಸಿದ ಮತ್ತು ಈ ಬಾರಿ ತಾನು ಅತೀಹೆಚ್ಚು ದ್ವೇಷಿಸಿದ್ದ ಮತ್ತು ಇಡೀ ಜಗತ್ತು ಅತೀಹೆಚ್ಚು ಪ್ರೀತಿಸಿದ್ದ ವ್ಯಕ್ತಿಯ ಜೀವನವನ್ನು ಕೊನೆಯಾಗಿಸುವಲ್ಲಿ ಯಶಸ್ವಿಯಾದ.

ಗೋಡ್ಸೆಯ ಭೂತ ಮತ್ತೆ ಮತ್ತೆ ದಾಳಿ ಮಾಡುತ್ತಿದೆ. ಎಂ.ಎಂ ಕಲಬುರ್ಗಿ ನರೇಂದ್ರ ದಾಬೋಲ್ಕರ್, ಗೌರಿ ಲಂಕೇಶ್, ಗೋವಿಂದ ಪನ್ಸಾರೆ, ಪೆಹ್ಲೂ ಖಾನ್, ಮುಹಮ್ಮದ್ ಅಖ್ಲಾಕ್, ಉಮರ್ ಮುಹಮ್ಮದ್, ತಬ್ರೇಝ್ ಅನ್ಸಾರಿ, ಜುನೈದ್, ಅಫ್ರಝುಲ್  ಹಾಗೂ ಇತರ ಅನೇಕರು ಈ ಕೆಟ್ಟ ಭೂತಕ್ಕೆ ಬಲಿಯಾಗಿದ್ದಾರೆ. ವಿವಿಧ ರೂಪ ಮತ್ತು ವೇಷದಲ್ಲಿರುವ ಆತನ ಹಲವು ಮರು ಅವತಾರಗಳು ಭಾರತದ ವಿನ್ಯಾಸವನ್ನು ಪುಡಿಗೈಯುವ ಬೆದರಿಕೆಯೊಡ್ಡುತ್ತಿವೆ.

ಆತನ ದೆವ್ವವನ್ನು ನಮ್ಮ ಮನಸ್ಸಿನಿಂದ ಓಡಿಸಲು ನಾವು ಗಾಂಧಿಯನ್ನು ಪುನರುತ್ಥಾನಗೊಳಿಸಬೇಕು. ನಮ್ಮನ್ನು ಗಾಂಧೀಜಿಯ ತತ್ವಗಳು ಮತ್ತು ಮೌಲ್ಯಗಳಿಗೆ ಮರು ಅರ್ಪಿಸಬೇಕು. ಅಹಿಂಸೆ ಮತ್ತು ಸತ್ಯಾಗ್ರಹದ ಶಕ್ತಿಯನ್ನು ಮರು ಅನ್ವೇಷಿಸಬೇಕು. ಅವರ ನೈತಿಕ ಎತ್ತರಕ್ಕೆ ನಮ್ಮನ್ನು ಸಮರ್ಪಿಸಬೇಕು. ಅವರ ದಾರಿಯನ್ನು ಅನುಸರಿಸಬೇಕು.

ಆ ಮೂಲಕ ನಮ್ಮ ಅತ್ಯಂತ ನಿರ್ಲಜ್ಜ ರಾಜಕೀಯ ವರ್ಗ ಹಾಗೂ ಅವರ ಸಹಚರರು ಮತ್ತು ಬಂಡವಾಳಶಾಹಿಗಳಿಂದ ದೇಶದ ದೇಹದೊಳಗೆ ಚುಚ್ಚಿರುವ ಮಾರಣಾಂತಿಕ ವಿಷವನ್ನು ತಟಸ್ಥಗೊಳಿಸಲು ಅತ್ಯಂತ ಶಕ್ತಿಶಾಲಿ ವಿಷಹಾರಿ ಪಡೆಯಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here