January 30, 2021

ಗಣಿ ಮಾಫಿಯಾ ರಕ್ಷಣೆಗೆ ಇಳಿಯಿತಾ ಸರಕಾರ?!

-ಸೂರ್ಯ

ಜ.21ರಂದು ರಾತ್ರಿ ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ ದುರಂತ ಇಡೀ ರಾಜ್ಯದ ಅಕ್ರಮ ಕಲ್ಲು ಗಣಿಗಾರಿಕೆ ಮಾಫಿಯಾವನ್ನು ಬಯಲು ಮಾಡಿದ್ದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕುಟುಂಬದ ಆದಿಯಾಗಿ ಅಧಿಕಾರರೂಢ ಸಚಿವರು, ಶಾಸಕರ ರಾಜಾಶ್ರಯದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ನಿರ್ಭಯವಾಗಿ ನಡೆಯುತ್ತಿರುವುದು ಬಟಾಬಯಲಾಗಿದೆ. ಈ ಘಟನೆ ಬೆನ್ನಲ್ಲೆ ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಇದೆ, ಅದನ್ನು ಸಕ್ರಮಗೊಳಿಸಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಗಳೇ ಘೋಷಿಸಿರುವುದು ರಾಜ್ಯದ ಆಡಳಿತ ಅದೆಷ್ಟರ ಮಟ್ಟಿಗೆ ದಿಕ್ಕೆಟ್ಟು ಹೋಗಿದೆ ಎಂಬುದನ್ನು ಕಾಣಬಹುದು. ಜ.21ರಂದು ರಾತ್ರಿ 10:20ರ ಸಮಯದಲ್ಲಿ ಸಂಭವಿಸಿದ ಸ್ಫೋಟ ಅದೆಷ್ಟು ಪ್ರಬಲವಾಗಿತ್ತೆಂದರೆ 150 ಕಿ.ಮೀ.ವ್ಯಾಪ್ತಿಗೆ ಅದರ ಶಬ್ದ ಮತ್ತು ಭೂಮಿ ನಡುಗಿದ ಅನುಭವವಾಗಿತ್ತು. ಜನ ಭೂಕಂಪನವೇ ಸಂಭವಿಸಿದ ಆತಂಕದಿಂದ ಪರದಾಡುವಂತಾಯಿತು.

ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಈ ಸ್ಫೋಟಕ್ಕೆ ಆರು ಜನ ಕಾರ್ಮಿಕರು ಜೀವ ತೆತ್ತಿದ್ದಾರೆ. ಸುತ್ತಮುತ್ತ ಇದ್ದ ಹಳ್ಳಿಗಳ ಮನೆಗಳ ಛಾವಣಿ ಹಾರಿಹೋಗಿವೆ. ಹೊಟ್ಟೆಪಾಡಿಗೆ ಕೂಲಿಗೆ ಬಂದ ಬಡ ಕೂಲಿ ಕಾರ್ಮಿಕರು ಚಿಂದಿಯಾಗಿ ಹೆಣವಾಗಿದ್ದಾರೆ. ಸ್ಫೋಟದಲ್ಲಿ ಮೃತಪಟ್ಟ ಕೂಲಿ ಕಾರ್ಮಿಕರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ನೀಡಿ ಕೈಚೆಲ್ಲಿದೆ. ಪ್ರಕರಣದ ತನಿಖೆಗೆ ಪೊಲೀಸರ ಐದು ತಂಡಗಳನ್ನು ರಚಿಸಲಾಗಿದೆ. ಆದರೆ ಘಟನಾಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಗಣಿ ಸಚಿವ ಮುರುಗೇಶ್ ನಿರಾಣಿ ಅವರೆಲ್ಲರೂ ಸ್ಫೋಟ ಸಂಭವಿಸಿದ ಕ್ವಾರಿಯು ಸಕ್ರಮವಾಗಿದೆ ಎಂದು ಘೋಷಿಸಿದರೆ ವಿನಃ ಭಾರೀ ಪ್ರಮಾಣದ ಸ್ಫೋಟಕಗಳು ಇಷ್ಟೊಂದು ಸಲೀಸಾಗಿ ಶಿವಮೊಗ್ಗದ ಕಲ್ಲು ಕ್ವಾರಿಗೆ ಬಂದಿದ್ದಾರೂ ಹೇಗೆ? ಎಂಬುದರ ಬಗ್ಗೆ ಕನಿಷ್ಟ ಆತಂಕವನ್ನು ವ್ಯಕ್ತಪಡಿಸಲಿಲ್ಲ. ಇಡೀ ಪ್ರದೇಶವನ್ನು ನೋ ಮ್ಯಾನ್ ಏರಿಯಾ ಎಂದು ಸೀಜ್ ಮಾಡಲಾಯಿತು. ಪತ್ರಕರ್ತರನ್ನೂ ಅಲ್ಲಿಗೆ ಸುಳಿಯದಂತೆ ನಿರ್ಬಂಧಿಸಲಾಯಿತು. ಭಾರೀ ಪ್ರಮಾಣದಲ್ಲಿ ಸ್ಫೋಟಕಗಳ ಇಲ್ಲಿ ಬಂದ ಬಗ್ಗೆ, ಆಗಿರಬಹುದಾದ ಭದ್ರತಾಲೋಪದ ಬಗ್ಗೆ ಗಂಭೀರ ಅಭಿಪ್ರಾಯಗಳೇ ಹೊರಬೀಳಲಿಲ್ಲ. ಆಡಿದ್ದು ಮಾತ್ರ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡುವುದು ಮಾತ್ರ.

ಶಿವಮೊಗ್ಗ ಜಿಲ್ಲೆಯ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ಆಡಳಿತ ರೂಢ ಪಕ್ಷದ ಅಧಿಕಾರಸ್ಥರ ಬೆಂಬಲದಿಂದಲೇ ನಡೆಯುತ್ತಿದೆ. ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕ ಆಶೋಕ ನಾಯ್ಕಾ ಎಲ್ಲರೂ ಅಕ್ರಮ ಗಣಿಗಾರಿಕೆಯ ರಕ್ಷಣೆಗೆ ಕಟಿಬದ್ಧರಾಗಿ ನಿಂತಿದ್ದು, ಅದಕ್ಕೆ ತಕ್ಕಂತೆ ಜಿಲ್ಲಾಡಳಿತ ತಲೆಯಾಡಿಸುತ್ತಿರುವುದರ ಪರಿಣಾಮ ಒಂದು ಘೋರ ಸ್ಫೋಟಕ್ಕೆ ಕಾರಣವಾಗಿದೆ. ಶಿವಮೊಗ್ಗದ ಅಧಿಕಾರಸ್ಥ ರಾಜಕಾರಣಿಗಳು, ಗಣಿ, ಪರಿಸರ, ಅರಣ್ಯ, ಕಂದಾಯ ಕಾರ್ಮಿಕ ಇಲಾಖೆಗಳ ಅಧಿಕಾರಿಗಳು ಮತ್ತು ಪೊಲೀಸರು ಗಣಿಗಾರಿಕೆ ಮಾಫಿಯಾದೊಂದಿಗೆ ಹೊಂದಿದ್ದ ನಂಟು ಕೊನೆಗೂ ಆರು ಜನ ಕೂಲಿ ಕಾರ್ಮಿಕರನ್ನು ಬಲಿ ತೆಗೆದುಕೊಂಡಿದೆ. ಈ ಘಟನೆಗೆ ಸದ್ಯಕ್ಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲವಾದರೂ ತಮ್ಮದೇ ಜಿಲ್ಲೆಯಲ್ಲಿ ನಡೆದ ಈ ದುರ್ಘಟನೆಗೆ ಉತ್ತರದಾಯಿಗಳಾಗಬೇಕಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊಣೆಗಾರಿಕೆಯಿಂದ ಪಾರಾಗಲು ಗಣಿಮಾಫಿಯಾದ ನಂಟನ್ನು ಜಿಲ್ಲಾ ಉಸ್ತುವಾರಿ ಸಚಿವರ ಕೆ.ಎಸ್.ಈಶ್ವರಪ್ಪ ಅವರ ತಲೆಗೆ ಕಟ್ಟುವ ರಾಜಕೀಯ ಆಟ ಹೂಡಿದಂತಿದೆ. ತಮ್ಮ ಮಗ ಸಂಸದ ರಾಘವೇಂದ್ರನೆ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳುವ ಮೂಲಕ ಸಚಿವ ಈಶ್ವರಪ್ಪ ಅವರನ್ನು ಪಕ್ಕಕ್ಕೆ ಸರಿಸಿದ್ದಾರೆ. ಇಂತಹ ಹೊತ್ತಿನಲ್ಲೂ ರಾಜಕೀಯ ಮೇಲಾಟ ನಡೆದಿದೆ.

ತೀರ್ಥಹಳ್ಳಿ, ಹೊಸನಗರ, ಸೇರಿದಂತೆ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೋಮಿನಕೊಪ್ಪ, ಅಬ್ಬಲಗೆರೆ, ಹುಣಸೋಡು, ಮತ್ತೋಡು, ಗೆಜ್ಜೇನಳ್ಳಿ, ದೇವಕಾತಿಕೊಪ್ಪ, ಸೂಳೆಬೈಲು ಪ್ರದೇಶಗಳನ್ನು ಕಲ್ಲುಕ್ವಾರಿ ಮತ್ತು ಕ್ರಷರ್‌ ಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ನಾಯಿಕೊಡೆಗಳಂತೆ ಗಣಿಗಾರಿಕೆ, ಕ್ರಷರ್‌ ಗಳು ತಲೆ ಎತ್ತಿವೆ. ಗಣಿ-ಕ್ರಷರ್‌ ಗಳ ಮಾಲೀಕರ ಸಂಘಗಳು ತಲೆ ಎತ್ತಿವೆ ಕೂಡ. ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಅವರ ಹಿಂಬಾಲಕರೆಂದು ಗುರುತಿಸಿಕೊಂಡವರೆ ಮರಳು ಮತ್ತು ಕಲ್ಲು ಗಣಿಗಾರಿಕೆಯ ಮಾಲೀಕರಾಗಿದ್ದಾರೆ. ಸರಕಾರಿ, ಅರಣ್ಯ ಭೂಮಿಗಳಲ್ಲೂ ಅಕ್ರಮವಾಗಿ ಗಣಿಗಾರಿಕೆಗೆ ಬಳಸಿಕೊಳ್ಳುತ್ತಾ ದಿನಬೆಳಗಾಗುವುದರೊಳಗೆ ಆಗರ್ಭ ಶ್ರೀಮಂತರಾಗಿದ್ದಾರೆ. ಕ್ರಷರ್ ಮಾಲೀಕರ ಸಂಘ, ಗಣಿಕೋರರ ಸಂಘಟನೆಗಳ ಮೂಲಕ ಅಧಿಕಾರಿಗಳಿಗೆ ಮಾಮೂಲು ಸಲ್ಲಿಸುವುದಲ್ಲದೆ, ಕಳೆದ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ, ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲೂ ಗಣಿಗಾರಿಕೆ ಮಾಫಿಯಾ ರಾಜಕಾರಣಿಗಳಿಗೆ ಲಕ್ಷಾಂತರ ರೂಪಾಯಿಗಳ ಎಲೆಕ್ಷನ್ ಫಂಡ್ ಸಂಗ್ರಹಿಸಿಕೊಟ್ಟಿದ್ದು ಅದರ ಪ್ರತಿಫಲವಾಗಿ ಅಧಿಕಾರಸ್ಥರು ಗಣಿ ಮಾಫಿಯಾ ಸುಲಲೀತವಾಗಿ ಲೂಟಿ ಹೊಡೆಯಲು ರಹದಾರಿಯನ್ನೆ ಹಾಕಿಕೊಟ್ಟಿದ್ದಾರೆ.

ಜ.21ರಂದು ರಾತ್ರಿ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ 6 ಜನರನ್ನು ಬಲಿತೆಗೆದುಕೊಂಡಿದ್ದರೆ, ಅದೇ ಸ್ಫೋಟ ನಗರ ಪ್ರದೇಶದಲ್ಲಿ ಸಂಭವಿಸಿದ್ದರೆ ಇಷ್ಟೊತ್ತಿಗೆ ಶಿವಮೊಗ್ಗ ನಗರವೇ ಸ್ಮಶಾನವಾಗಿರುತ್ತಿತ್ತು. ಹುಣಸೋಡಿನ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಕ್ವಾರಿಗಳ ಬಂಡೆ ಸಿಡಿಸಲು ತಮಿಳುನಾಡು, ಆಂಧ್ರ ಪ್ರದೇಶದಿಂದ ಜಿಲೆಟಿನ್ ಸ್ಫೋಟಕಗಳನ್ನು ತರಿಸಿಕೊಳ್ಳಲಾಗುತ್ತದೆ. ಬಂಡೆಯನ್ನು ಬುಡಮಟ್ಟದಲ್ಲಿ ಚೂರು ಚೂರು ಮಾಡಲು ಸುಧಾರಿತ ಜಿಲೆಟಿನ್ ಬೂಸ್ಟರ್ ಗಳನ್ನು ಕಾನೂನು ಬಾಹಿರವಾಗಿ ಬಳಸಿಕೊಳ್ಳುವುದು ನಡೆಯುತ್ತಲೆ ಬಂದಿದೆ. ಅಂತಹ ಸುಧಾರಿತ ಸುಮಾರು ಒಂದು ನಾನೂರು ಕೆ.ಜಿ.ಗೂ ಹೆಚ್ಚಿನ ಪ್ರಮಾಣದ ಜಿಲೆಟಿನ್ ಬೂಸ್ಟರ್‌ ಗಳ ಹೊತ್ತ ಲಾರಿಯೊಂದು ತೆಲಂಗಾಣದಿಂದ ಭದ್ರಾವತಿ, ಭದ್ರಾವತಿಯಿಂದ ಶಿವಮೊಗ್ಗದ ಕಲ್ಲು ಕ್ವಾರಿಯ ವರೆಗೂ ಯಾವುದೇ ಅಡೆತಡೆಯಿಲ್ಲದೆ ಬಂದು ತಲುಪಿದೆ.

ಹುಣಸೋಡಿಗೆ ಆರು ಕಿ.ಮೀ. ಇರುವಾಗಲೆ ಶಿವಮೊಗ್ಗ ನಗರದ ಸವಳಂಗ ರಸ್ತೆಯಲ್ಲಿ ಚಾಲಕ ಟೀ ಕುಡಿಯಲು ಸ್ಫೋಟಕ ತುಂಬಿದ ಲಾರಿಯನ್ನು ಅರ್ಧತಾಸು ನಿಲ್ಲಿಸಿಕೊಂಡಿದ್ದ. ಆ ಸಮಯದಲ್ಲೇನಾದರೂ ಸ್ಫೋಟ ಸಂಭವಿಸಿದಿದ್ದರೆ ಇಡೀ ಶಿವಮೊಗ್ಗ ನಗರ ಪುಲ್ವಾಮಗಿಂತಲೂ ರಣ ಭೀಕರವಾಗಿ ಸಾವು-ನೋವು ಮತ್ತು ನಾಶವನ್ನು ಅನುಭವಿಸಬೇಕಿತ್ತು. ಮೊದಲೇ ಕೋಮು ಸಂಘರ್ಷದ ಅತಿಸೂಕ್ಷ್ಮ ಪ್ರದೇಶವೆಂದೆ ಗುರುತಿಸಲ್ಪಟ್ಟಿರುವ ಶಿವಮೊಗ್ಗ ನಗರವು ಈ ಘಟನೆ ಕಲ್ಲು ಗಣಿಗಾರಿಕೆಯ ಬಿಟ್ಟು ಪಾಕಿಸ್ತಾನಕ್ಕೂ, ಉಗ್ರಗಾಮಿಗಳಿಗೂ ನಂಟು ಬಿಗಿದುಕೊಂಡು ನಿರ್ಲಜ್ಜ ರಾಜಕಾರಣವೊಂದು ನಡೆದು ಹೋಗುತ್ತಿತ್ತು. ಇಷ್ಟೊಂದು ಸಲೀಸಾಗಿ ಸ್ಫೋಟಕಗಳು ಸಿಗುತ್ತಿರುವುದು ರಾಜ್ಯದ ಭದ್ರತಾ ವ್ಯವಸ್ಥೆಯ ದುರ್ಬಲತೆ ಕನ್ನಡಿ ಹಿಡಿದಂತಿದೆ. ಕೊರೋನಾ ಸೋಂಕನ್ನು ತಬ್ಲಿಘಿಗಳ ತಲೆಗೆ ಕಟ್ಟಿ ಒಂದು ಸಮುದಾಯವನ್ನೆ ಕಟಕಟೆಗೆ ನಿಲ್ಲಿಸಿದ ಜನರು ಜಿಲೆಟಿನ್ ಸ್ಫೋಟದಲ್ಲೂ ಇದನ್ನೆ ಮಾಡುತ್ತಿರಲಿಲ್ಲ ಎಂದು ನಂಬುವುದು ಕಷ್ಟಕರ.

ಹುಣಸೋಡು ಸ್ಫೋಟ ಸ್ಥಳ ಎಸ್.ಎಸ್.ಕ್ರಷರ್‌ ಗೆ ಸಂಸದ ಬಿ.ವೈ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಅದರ ಬೆನ್ನಲ್ಲೆ ಜಿಲ್ಲಾ ಉಸ್ತುವಾರಿ ಸಚಿವರೂ ಬಂದು ನೋಡಿದರು. ಎಲ್ಲವೂ ತನಿಖೆಯಿಂದ ಗೊತ್ತಾಗಬೇಕಿದೆ ಎಂದರು. ಅದಕ್ಕಿಂತ ಮುಂಚೆ ಪರವಾನಿಗೆಯೇ ಇಲ್ಲದ ಕಲ್ಲು ಕ್ವಾರಿ ಸಕ್ರಮ ಎಂದು ಸರ್ಟೀಫಿಕೇಟ್ ಕೊಟ್ಟುಬಿಟ್ಟರು. ಕ್ವಾರಿ ನಡೆಸುತ್ತಿದ್ದ ಸುಧಾಕರನನ್ನು ರಕ್ಷಿಸಲು ಆಗಲೇ ಎಲ್ಲವೂ ತೀರ್ಮಾನಿಸಲಾಗಿತ್ತು. ತೆಲಂಗಾಣ, ಆಂಧ್ರದಿಂದ ನಗರಕ್ಕೆ ಜಿಲೆಟಿನ್ ಸಪ್ಲೈ ಮಾಡುವ ಒಂದು ಮಾಫಿಯಾವೇ ಇದೆ. ಪ್ರತಿ ತಿಂಗಳು ಲೋಡು ಗಟ್ಟಲೆ ಜಿಲೆಟಿನ್ ಬೂಸ್ಟರ್ ಸ್ಫೋಟಕಗಳು ನಗರಕ್ಕೆ ತರಲಾಗುತ್ತದೆ. ಇಲ್ಲಿನ ಕಲ್ಲು ಕ್ವಾರಿಗಳಿಗೆ ಇವುಗಳನ್ನು ಹಂಚಲಾಗುತ್ತದೆ. ಇದು ಗಣಿ ಮತ್ತು ಪೊಲೀಸ್ ಇಲಾಖೆಗೆ ಗೊತ್ತಿರುವ ಸಂಗತಿ. ಗಣಿ ಮಾಲೀಕರಿಗೆ ಕಿಂಚಿತ್ತೂ ತೊಂದರೆ ಆದರೂ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಆಪತ್ಭಾಂಧವರಂತೆ ಆತುಕೊಳ್ಳುತ್ತಾರೆ. ಬಿಜೆಪಿಗೆ ಓಟು ಮತ್ತು ನೋಟು ಎರಡನ್ನೂ ತಂದು ಕೊಡಬಲ್ಲ ಶಕ್ತಿ ಗಣಿ ಮಾಲೀಕರಿಗಿದೆ. ತಮ್ಮದೇ ಪಕ್ಷದ ಕಾಲಾಳುಗಳಿಂದ ಹಿಡಿದು ಸಚಿವರು, ಶಾಸಕರ ಮಕ್ಕಳು, ಅಳಿಯ ಮತ್ತು ಬಂಧುಬಳಗವೆಲ್ಲಾ ಭಾಗಿಯಾಗಿರುವ ಈ ಅಕ್ರಮ ಗಣಿಗಾರಿಕೆಯನ್ನು ಸಕ್ರಮಗೊಳಿಸಿ ಅವರನ್ನೆಲ್ಲಾ ರಕ್ಷಿಸಲು ಅಕ್ರಮ-ಸಕ್ರಮದ ನಿರ್ಧಾರಕ್ಕೆ ಸರಕಾರ ಬಂದಿದೆಯಾ? ಅಥವಾ ಯಾರ ರಕ್ಷಣೆಗೆ ಸರಕಾರ ಮುಂದಾಗಿದೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕಿದೆ.

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!