October 28, 2020
ಗಡಿ ವಿವಾದದಲ್ಲಿ ಮೂರನೇ ಪಕ್ಷಗಾರರ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ : ಅಮೆರಿಕ ಹೇಳಿಕೆಗೆ ಚೀನಾ ಗರಂ

ನವದೆಹಲಿ : ಲಡಾಕ್ ನಲ್ಲಿ ತನ್ನ ಮತ್ತು ಭಾರತದ ನಡುವಿರುವ ಗಡಿ ವಿವಾದ ದ್ವಿಪಕ್ಷೀಯ ವಿಚಾರ, ಮೂರನೇ ಪಕ್ಷಗಾರರಿಗೆ ಇದರಲ್ಲಿ ಮಧ್ಯಪ್ರವೇಶಿಸುವುದಕ್ಕೆ ಯಾವುದೇ ಅವಕಾಶವಿಲ್ಲ ಎಂದು ಚೀನಾ ಹೇಳಿದೆ. ಭಾರತ ಭೇಟಿಯ ವೇಳೆ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೊಂಪ್ಯೊ, ಭಾರತದ ಸಾರ್ವಭೌಮತ್ವದ ರಕ್ಷಣೆಯ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲವಿದೆ ಎಂದು ನುಡಿದಿದ್ದುದಕ್ಕೆ ಪ್ರತಿಯಾಗಿ ಚೀನಾದ ಈ ಹೇಳಿಕೆ ಹೊರಬಿದ್ದಿದೆ.
ತಮ್ಮ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯಕ್ಕೆ ಬೆದರಿಕೆಯನ್ನು ಎದುರಿಸಲು ಅಮೆರಿಕ ಭಾರತದೊಂದಿಗೆ ನಿಲ್ಲಲಿದೆ ಎಂದು ಮೈಕ್ ಪೊಂಪ್ಯೊ ಹೇಳಿದ್ದರು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಜೊತೆ ಸಂವಾದ ನಡೆಸಿದ ಬಳಿಕ ಮಾತನಾಡುತ್ತಾ ಅವರು ಈ ಮಾತುಗಳನ್ನಾಡಿದ್ದರು.
ಗಡಿಯ ಪ್ರಶ್ನೆ ಭಾರತ ಮತ್ತು ಚೀನಾದ ನಡುವಿನ ದ್ವಿಪಕ್ಷೀಯ ವಿಚಾರ. ಎರಡೂ ರಾಷ್ಟ್ರಗಳು ರಾಜತಾಂತ್ರಿಕ ಮತ್ತು ಸೇನಾ ಮಾಧ್ಯಮಗಳ ಮೂಲಕ ಎರಡೂ ಕಡೆಗಳಿಂದ ಈ ಸಂಬಂಧ ಮಾತುಕತೆಗಳು ನಡೆಯುತ್ತಿವೆ. ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವಲ್ಲಿ ಭಾರತ ಮತ್ತು ಚೀನಾಕ್ಕೆ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವಿದೆ. ಇದರಲ್ಲಿ ಮೂರನೇ ಪಕ್ಷಗಾರರಿಗೆ ಮಧ್ಯಪ್ರವೇಶಿಸಲು ಅವಕಾಶವೇ ಇಲ್ಲ ಎಂದು ಚೀನಾ ರಾಯಭಾರಿ ಕಚೇರಿಯು ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.