ಕ್ಷೀಣಿಸಿದ ಆದಾಯ, ಕಡಿಮೆಯಾದ ಆಹಾರ ಸೇವನೆ-ಖರೀದಿ, ದುರ್ಬಲಗೊಂಡ ಅರ್ಥವ್ಯವಸ್ಥೆ

Prasthutha: February 22, 2021

-ರವೀಶ್ ಕುಮಾರ್, ಹಿರಿಯ ಪತ್ರಕರ್ತರು

ಭಾರತದ ಜನಸಾಮಾನ್ಯರು ಕಡಿಮೆ ಆಹಾರ ಸೇವಿಸುತ್ತಿದ್ದಾರೆ. ಏನು ಉಣ್ಣುತ್ತಿದ್ದಾರೆಯೋ ಅದರಲ್ಲೇ ಕಡಿತಗೊಳಿಸುತ್ತಿದ್ದಾರೆ. ಆಹಾರ ಸೇವನೆಗೆ ಹಣ ಇಲ್ಲವಾದಾಗ, ವೃದ್ಧಾಪ್ಯಕ್ಕೆಂದು ಕೂಡಿಟ್ಟ ಹಣವನ್ನು ಅವರು ಖರ್ಚು ಮಾಡುತ್ತಿದ್ದಾರೆ. ಇದರ ಬಗ್ಗೆ ಚರ್ಚೆಯಾಗುತ್ತಿಲ್ಲ. ಯಾರ ಮೇಲೆ ಪ್ರಭಾವ ಬೀರಿದೆಯೋ, ಅವರು ಇದರ ಬಗ್ಗೆ ಖಂಡಿತಾ ಮಾತನಾಡುತ್ತಿರಬಹುದು. ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಯಶಸ್ಸು ಭಲೇ ಪ್ರಚಂಡವಾಗಿದ್ದರೂ, ಅವರ ಕಾರ್ಯಾವಧಿಯ ಸಾಧನೆಗಳು ಬಹುತೇಕ ಸಾಮಾನ್ಯವಾಗಿವೆ.

ನೀವು ಬಯಸುವುದಾದರೆ, ಇದೇ ಜನವರಿ 22ರಂದು ಇಂಡಿಯಾ ಸ್ಪೆಂಡ್‌ ನ ತಾಣದಲ್ಲಿ ರೋಹಿತ್ ಇನಾನಿಯವರ ವರದಿಯನ್ನು ಓದಬಹುದು. ಭಾರತದಲ್ಲಿ ಸಮೃದ್ಧಿಯ ವಸಂತ ಕಾಲವಿದೆ ಎಂದು ಮಾಧ್ಯಮದಿಂದಾಗಿ ನಿಮಗೆ ಅನಿಸಿರಬಹುದು. ಆದರೆ ಈ ಪ್ರಜ್ವಲಿಸುವಿಕೆಯ ಕಥೆಯು ಕೇವಲ 10 ಕೋಟಿ ಮಂದಿಯದ್ದಾಗಿದೆ. ಪ್ರಧಾನಿಯವರ ಆರ್ಥಿಕ ಸಲಹೆಗಾರ ಸಮಿತಿಯ ಮಾಜಿ ಸದಸ್ಯ ರಾಥಿನ್ ರಾಯ್ ಅವರು ಹೇಳುವಂತೆ, ಭಾರತದಲ್ಲಿರುವ ಅಭಿವೃದ್ಧಿಯ ಕಥೆಯು ಅದು ಕೇವಲ 10 ಕೋಟಿ ಜನರ ಅಭಿವೃದ್ಧಿಯ ಕಥೆಯಾಗಿದೆ. ಉಣ್ಣುವ, ಖರೀದಿಸುವ ಇದೇ 10 ಕೋಟಿಯಿಂದಾಗಿಯೇ ಅಭಿವೃದ್ಧಿ ದರವು ವೇಗ ಪಡೆದುಕೊಳ್ಳುತ್ತದೆ. ಶತಕೋಟಿಗೂ ಅಧಿಕ ಜನಸಂಖ್ಯೆಗೆ ಹೋಲಿಸಿದರೆ ಇದು ಎಷ್ಟು ಕಡಿಮೆಯಾಗುತ್ತದೆ ಎಂಬುದನ್ನು ತಾವು ತಿಳಿದುಕೊಳ್ಳಬಹುದು. ಇದರರ್ಥ 10 ಕೋಟಿಯ ನಂತರದ ಜನಸಂಖ್ಯೆಯ ಉಳಿದ ಭಾಗ ಕೆಳ ಮಧ್ಯಮ ವರ್ಗ ಮತ್ತು ಬಡವರೇ ಆಗಿದ್ದಾರೆ.

ಅಕ್ಟೋಬರ್ 2020ರಲ್ಲಿ ಆಹಾರ ಹಣದುಬ್ಬರ ಶೇ. 11 ಆಗಿತ್ತು. ಇದು ನವೆಂಬರ್ 2020ರಲ್ಲಿ ಕಡಿಮೆಯಾದರೂ ಶೇ. 9.4ರಷ್ಟಿತ್ತು. ಭಾರತ ಸರಕಾರದ ಹಣದುಬ್ಬರದ ಗರಿಷ್ಟ ಗುರಿ ಶೇ. 6 ಆಗಿತ್ತು. ಆದರೆ ವಾಸ್ತವಿಕ ಬೆಲೆ ಏರಿಕೆಯು ಇದರಿಂದ ಹೆಚ್ಚಾಗಿಯೇ ಉಳಿದಿದೆ. ಮಾಧ್ಯಮ ಮತ್ತು ರಾಜಕೀಯದಲ್ಲಿ ಉದ್ಯೋಗ ಮತ್ತು ಬೆಲೆ ಏರಿಕೆಯ ಚರ್ಚಾ ವಿಷಯ ಇಲ್ಲದಿರುವುದರಿಂದ ಇದು ಗೋಚರಿಸುತ್ತಿಲ್ಲ. ಧರ್ಮವಿದೆ ಮತ್ತು ಅದರ ನಕಲಿ ಅಸ್ಮಿತೆ ಇದೆ. ನೀವು ತಿಳಿದಿರುವಂತೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನಿರಂತರ ಏರುತ್ತಲೇ ಇದೆ. ಆದರೆ ಸಾಮಾನ್ಯ ಜೀವನದ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದರ ಕುರಿತ ಚರ್ಚೆ ಗಣನೀಯವಾಗಿ ಕುಸಿಯುತ್ತಿದೆ.

2012ರಲ್ಲಿ ದೇಶೀಯ ಉಳಿತಾಯದ ಪಾಲು ಜಿಡಿಪಿಯ ಶೇ. 24ರಷ್ಟಿತ್ತು. ಇದು 2018ರಲ್ಲಿ ಕುಸಿದು ಶೇ.17ರಷ್ಟಾಯಿತು. ಇದರರ್ಥ ಜನರ ಗಳಿಕೆ ಏರಲಿಲ್ಲ ಮತ್ತು ಅವರು ಉಳಿತಾಯದಿಂದ ಖರ್ಚು ಮಾಡಲು ತೊಡಗಿದರು. 1991ರ ಮಟ್ಟಕ್ಕೆ ದೇಶೀಯ ಉಳಿತಾಯ ತಲುಪಿದೆ. ಸರಳವಾಗಿ ಅರ್ಥ ಮಾಡಿಕೊಳ್ಳುವುದಾದರೆ, 1991ರಲ್ಲಿ ಜನರ ಪರಿಸ್ಥಿತಿ ಯಾವ ರೀತಿಯಲ್ಲಿತ್ತೋ ಇಂದು ಅದೇ ಸ್ಥಿತಿಗೆ ತಲುಪಿದೆ. ಅರ್ಥಶಾಸ್ತ್ರಜ್ಞರೋರ್ವರ ಪ್ರಕಾರ, ಒಂದು ವೇಳೆ ಜನರು ಕಳೆದ ಆರು ವರ್ಷಗಳಲ್ಲಿ ಒಂದೇ ರೀತಿ ಖರೀದಿಸುತ್ತಿದ್ದು, ಅದರಲ್ಲಿ ಯಾವುದೇ ಏರಿಕೆ ಇಲ್ಲವೆಂದಾದರೂ ಅವರು ತಮ್ಮ ಉಳಿತಾಯದ ಪಾಲನ್ನು ತೆಗೆದುಕೊಳ್ಳಬೇಕಾಯಿತು ಅನ್ನಬಹುದು. ಲಾಕ್ಡೌನ್ ಸಂದರ್ಭದಲ್ಲಿ ಈ ಪ್ರವತ್ತಿಯು ಮತ್ತಷ್ಟು ಭಯಾನಕವಾಗಿದೆ. ಉದ್ಯೋಗಗಳು ನಷ್ಟವಾಗಿವೆ ಮತ್ತು ಗಳಿಕೆ ಕಡಿಮೆಯಾಗಿದೆ.

 ಕೇವಲ ಸಾರಿಗೆ ಕ್ಷೇತ್ರವನ್ನು ಗಮನಿಸಿದರೂ ಸಾಕು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಈ ಕ್ಷೇತ್ರದಲ್ಲಿ ತೊಡಗಿರುವ ಜನರ ಪರಿಸ್ಥಿತಿ ಏನಾಗಿರಬಹುದು. ಈ ಕ್ಷೇತ್ರವು ಅತಿ ಕಡಿಮೆ ಲಾಭದಲ್ಲಿ ಕಾರ್ಯ ನಿರ್ವಹಿಸುತ್ತದೆ. ಬೆಲೆ ಏರಿಕೆಯಿಂದಾಗಿ ಸಣ್ಣ ಸಣ್ಣ ಟೆಂಪೋದಿಂದ ಸರಕು ಹೊರುವವರ ಗಳಿಕೆ ಬಹಳಷ್ಟು ಕಡಿಮೆಯಾಗುತ್ತದೆ. ಆಗಸ್ಟ್ 2020ರಲ್ಲಿ ಐಸಿಆರ್‌ ಎ ವರದಿಯ ಪ್ರಕಾರ, ಸಾರಿಗೆ ಕ್ಷೇತ್ರವು ಶೇ. 20ರಷ್ಟು ಕುಗ್ಗಲಿದೆ. ಇದರರ್ಥ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವರು ಮತ್ತು ಅವರ ಗಳಿಕೆ ಬಹುತೇಕ ಕಡಿಮೆಯಾಗಲಿದೆ. ಇಂತವರಿಗೆ ಸರಕಾರ ಯಾವುದೇ ನೆರವು ನೀಡಲಿಲ್ಲ. ಅದು ಆರ್ಥಿಕ ನಷ್ಟದ ಸಬೂಬು ನೀಡುತ್ತಾ ಬಂತು. ಈ ಕಾರಣದಿಂದಲೂ ಜನರಿಗೆ ಕೆಲಸ ದೊರಕಲಿಲ್ಲ. ಬಡವರಿಗೆ ಧಾನ್ಯ ನೀಡಲಾಯಿತು. ಆದರೆ, ಅದು ಸಾಕಷ್ಟಿರಲಿಲ್ಲ. ನೀವು ಕೇವಲ ಅಕ್ಕಿ ಅಥವಾ ರೊಟ್ಟಿಯನ್ನು ತಿನ್ನಲಾರಿರಿ. ತರಕಾರಿಗೂ ಹಣದ ಅಗತ್ಯವಿದೆ ಅನ್ನುವುದು ವಾಸ್ತವ.

 2018ರ ಅಕ್ಟೋಬರ್‌ ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ ಗೆ 80 ಡಾಲರ್ ಇತ್ತು. ಆ ವೇಳೆ ಭಾರತದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಗಗನಕ್ಕೇರಿತ್ತು. ಇಂದು ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ ಗೆ 52-54 ಡಾಲರ್ ಇದೆ. ಇದರ ನಂತರವೂ ಭಾರತೀಯರು ಅಕ್ಟೋಬರ್ 2018ರ ರೀತಿಯಲ್ಲೇ ಪೆಟ್ರೋಲ್ ಮತ್ತು ಡಿಸೇಲ್‌ ನ ಬೆಲೆ ತೆರಬೇಕಾಗಿದೆ. 2020ರ ಎಪ್ರಿಲ್‌ ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 19 ಡಾಲರ್ ಆಯಿತು. ಲಾಕ್ಡೌನ್ ಕಾರಣದಿಂದಾಗಿ ಸರಕಾರಗಳ ರಾಜಸ್ವ ಹೆಚ್ಚಿತ್ತು. ವಾಹನಗಳು ಸ್ಥಗಿತಗೊಂಡಿದ್ದವು. ಆದರೆ ಪೆಟ್ರೋಲ್ ಮತ್ತು ಡಿಸೇಲ್ ಖರೀದಿಸಲು ಹೋಗುವಾತ ಅದಕ್ಕೆ ಹೆಚ್ಚು ಬೆಲೆ ತೆರಬೇಕಾಗಿತ್ತು.

2000-21ರಲ್ಲಿ ಭಾರತವು ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯ ಶೇ. 75ರಷ್ಟನ್ನು ಆಮದು ಮಾಡಿಕೊಳ್ಳುತ್ತಿತ್ತು. 2016-19ರಲ್ಲಿ ಅದು ಶೇ. 95ರಷ್ಟಾಯಿತು. ಈ ವೇಳೆ ತನ್ನ ಬಳಕೆಯ ಶೇ. 84ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಕೆಲ ದಿನಗಳ ಹಿಂದೆ ಈ ರೀತಿ ಟ್ವೀಟ್ ಮಾಡಿದ್ದರು. ಕಾಂಗ್ರೆಸ್ ಆಡಳಿತಾವಧಿಯ ವೇಳೆ ಮೇ 2014ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ ಗೆ 108 ಆಗಿತ್ತು. ಆ ವೇಳೆ ಭಾರತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 71.51 ರೂಪಾಯಿ ಮತ್ತು ಡಿಸೇಲ್ 57.28 ರೂಪಾಯಿಗೆ ಮಾರಾಟವಾಗುತ್ತಿತ್ತು. ಇಂದು ಹಲವು ಕಡೆಗಳಲ್ಲಿ ಪ್ರತಿ ಲೀಟರ್‌ ಗೆ ಪೆಟ್ರೋಲ್ 80ರಿಂದ 90 ರೂಪಾಯಿ ವರೆಗೆ ತಲುಪಿದೆ. ಈ ವರ್ಷ ಎಪ್ರಿಲ್‌ ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ ಗೆ 19 ಡಾಲರ್ ಆದಾಗಲೂ ಇಲ್ಲಿ ಬೆಲೆ ಕಡಿಮೆಯಾಗಲಿಲ್ಲ. ಲಾಕ್ಡೌನ್ ಸಂದರ್ಭ ಜನರು ದುಡಿಮೆ ಇಲ್ಲದ ವೇಳೆಯಲ್ಲೂ ಅಧಿಕ ಬೆಲೆಯಲ್ಲಿ ತೈಲವನ್ನು ಖರೀದಿಸುತ್ತಿದ್ದರು. ಅದಕ್ಕೆ ಕಾರಣ, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸುವ ತೆರಿಗೆಗಳ ಸ್ವರೂಪ.

ನೀವು ಪೆಟ್ರೋಲ್ ತುಂಬಿಸಿಕೊಳ್ಳುವಾಗ ಕೇಂದ್ರ ಮತ್ತು ರಾಜ್ಯಕ್ಕೆ ಶೇ. 62ರಷ್ಟು ತೆರಿಗೆಯನ್ನು ನೀಡುತ್ತೀರಿ. ಒಂದು ವರ್ಷದೊಳಗೆ ಕೇಂದ್ರ ಸರಕಾರವು ಪೆಟ್ರೋಲ್‌ ನ ಮೇಲೆ ಅಬಕಾರಿ ಸುಂಕ 9.98 ರೂಪಾಯಿಂದ ಹೆಚ್ಚಿಸಿ 32.98 ರೂಪಾಯಿ ಮಾಡಿದೆ. ಇದೇ ರೀತಿ ಡಿಸೇಲ್ ಮೇಲೆ ಅಬಕಾರಿ ಸುಂಕ 15.83 ರೂಪಾಯಿಯಿಂದ ಹೆಚ್ಚಿಸಿ 31.83 ರೂಪಾಯಿ ಮಾಡಲಾಗಿದೆ. 2014ರಲ್ಲಿ ಕೇಂದ್ರವು ಪೆಟ್ರೋಲ್ ಮತ್ತು ಡಿಸೇಲ್‌ ನಿಂದ ವಸೂಲಿ ಮಾಡುವ ರಾಜಸ್ವವು ಸುಮಾರು ದುಪ್ಪಟ್ಟಾಗಿದೆ. ಭಾರತವು ಪೆಟ್ರೋಲಿಯಂ ಉತ್ಪನ್ನಗಳ ರಫ್ತನ್ನೂ ಮಾಡುತ್ತದೆ ಮತ್ತು ಇದು ಜಗತ್ತಿನ ಹತ್ತನೇ ದೊಡ್ಡ ರಫ್ತುದಾರ ದೇಶವಾಗಿದೆ. ಆದರೆ ಒಟ್ಟು ರಫ್ತಿನಲ್ಲಿ ಭಾರತದ ಪಾಲು ಶೇ. 3.9ರಷ್ಟಿದೆ.

ಗ್ಯಾಸ್ ಸಿಲಿಂಡರ್‌ ನದ್ದು ಅದೇ ಪರಿಸ್ಥಿತಿ ಇದೆ. 10 ಲಕ್ಷ ರೂಪಾಯಿ ಆದಾಯವಿರುವವರಿಗೆ ಗ್ಯಾಸ್ ಸಬ್ಸಿಡಿ ದೊರಕುವುದಿಲ್ಲ. ಇದೀಗ 5 ಲಕ್ಷಕ್ಕಿಂತ ಹೆಚ್ಚು ಆದಾಯವಿರುವವರನ್ನು ಕೂಡ ಸಬ್ಸಿಡಿಯಿಂದ ತೆಗೆದುಹಾಕುವ ಕುರಿತು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿರುತ್ತವೆ. ಆದಾಗ್ಯೂ, ಬಡವರು ಹಾಗೂ ಒಂದು ವರ್ಷದಲ್ಲಿ 10 ಲಕ್ಷ ದುಡಿಮೆ ಸಾಧ್ಯವಿಲ್ಲದವರಿಗೆ ಸರಕಾರ ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ನೀಡುತ್ತದೆ. ಈ ವರ್ಗದ ಗ್ರಾಹಕರಿಗೆ ಒಂದು ವರ್ಷದಲ್ಲಿ 12 ಸಿಲಿಂಡರ್ ಮಾತ್ರ ದೊರಕುತ್ತದೆ ಮತ್ತು ಪ್ರತಿ ಸಿಲಿಂಡರ್‌ ಗೆ 530ರಿಂದ 550 ರೂಪಾಯಿ ವರೆಗೆ ಪಾವತಿಸಬೇಕಾಗುತ್ತದೆ. ಇದೀಗ 100 ರೂಪಾಯಿ ವರೆಗೆ ಸಿಲಿಂಡರ್ ದುಬಾರಿಯಾಗಿದೆ. ಯಾಕೆಂದರೆ, ಸರಕಾರವು ಸಬ್ಸಿಡಿಯನ್ನು ರದ್ದುಪಡಿಸಿದೆ. ಪ್ರತಿ ತಿಂಗಳು ಸಿಲಿಂಡರ್ ಬೆಲೆಯನ್ನು ನಿಧಾನವಾಗಿ ಏರಿಸಲಾಗುತ್ತಿದೆ. ನೀವು ಸಿಲಿಂಡರ್ ಪಡೆದುಕೊಳ್ಳುವಾಗ ಶೇ. 5ರಷ್ಟು ಜಿಎಸ್‌ ಟಿ ತೆರಬೇಕಾಗುತ್ತದೆ. ಇಷ್ಟು ಮಾತ್ರವಲ್ಲ, ಗ್ಯಾಸ್ ಸಿಲಿಂಡರ್ ಖರೀದಿಗೆ ಎರಡು ವರ್ಷಗಳ ಕಡ್ಡಾಯ ಪರಿಶೀಲನೆಯ ವೆಚ್ಚವನ್ನೂ ಹೆಚ್ಚಿಸಲಾಗಿದೆ. ಈ ರೀತಿ ಗ್ರಾಹಕರ ಜೇಬಿನಿಂದ ಮತ್ತಷ್ಟು ಹಣವನ್ನು ಎಗರಿಸಲಾಗಿದೆ. ಗ್ಯಾಸ್ ಸಿಲಿಂಡರ್‌ ನ ದರವು ನಿಧಾನವಾಗಿ ಏರಿಕೆಯಾಗುತ್ತಲೇ ಇರುತ್ತದೆ. ರೂಪಾಯಿ ದುರ್ಬಲವಾದ ವೇಳೆಯೂ ಇದು ದುಬಾರಿಯಾಗುತ್ತದೆ.

ಸರಕಾರ ಹಣದುಬ್ಬರದ ಗುರಿಯನ್ನು ನಿರ್ಧರಿಸುತ್ತದೆ. ಮಾರ್ಚ್ 2021ರ ವರೆಗೆ ಗ್ರಾಹಕ ಬೆಲೆ ಸೂಚ್ಯಂಕವು ಶೇ .4ರ ವರೆಗೆ ಇರಲಿದೆ ಎಂದು 2016ರಲ್ಲಿ ಅಧಿಸೂಚನೆಯೊಂದನ್ನು ಹೊರಡಿಸಲಾಗಿತ್ತು. ಇದು ಗರಿಷ್ಟ ಶೇ. 6ರ ತನಕ ಮತ್ತು ಕನಿಷ್ಟ ಶೇ. 2ರ ವರೆಗೆ ಇರಬೇಕಾಗಿದೆ. ಕಾನೂನಿನ ಪ್ರಕಾರ ಸರಕಾರವು ಪ್ರತಿ ಐದು ವರ್ಷಗಳಿಗೆ ಇಂತಹ ಗುರಿಯನ್ನು ನಿರ್ಧರಿಸಬೇಕಾಗುತ್ತದೆ. ಆದರೆ ಇದೀಗ ಸರಕಾರವು ಮುಂದಿನ ಐದು ವರ್ಷಗಳಿಗೆ ಈ ಗುರಿಯನ್ನು ಶೇ. 5ಕ್ಕೆ ನಿಗದಿಪಡಿಸಲು ಬಯಸುತ್ತದೆ ಎಂದು ಹೇಳಲಾಗುತ್ತದೆ. ಕಳೆದ ವರ್ಷ ಅಕ್ಟೋಬರ್‌ ನಲ್ಲಿ ಹಣದುಬ್ಬರ ಶೇ. 7.61ರ ವರೆಗೆ ತಲುಪಿತ್ತು. ಇದು ಗರಿಷ್ಟ ಮಿತಿಗಿಂತಲೂ ಅಧಿಕ.

ಲಾಕ್ಡೌನ್ ಸಂದರ್ಭದಲ್ಲಿ ಭಾರತದ ಅರ್ಥವ್ಯವಸ್ಥೆ ತೀವ್ರ ಹದಗೆಟ್ಟಿತು. ಯಾವುದೇ ಯೋಜನೆ-ಚಿಂತನೆಯಿಲ್ಲದ ಈ ನಿರ್ಧಾರವು ದೇಶದ ಅರ್ಥವ್ಯವಸ್ಥೆಯನ್ನು ನಾಶಪಡಿಸಿಬಿಟ್ಟಿತು. ಅರ್ಥಶಾಸ್ತ್ರಜ್ಞರು ಹೇಳುವಂತೆ, ಲಾಕ್ಡೌನ್‌ ನ ಮೊದಲಿನ ಮಟ್ಟಕ್ಕೆ ತಲುಪಲು ಭಾರತಕ್ಕೆ 13 ವರ್ಷಗಳು ಹಿಡಿಯಬಹುದು. ನೀವು ತಿಳಿದಿರುವಂತೆ, ಭಾರತದ ಅರ್ಥವ್ಯವಸ್ಥೆಯು ಲಾಕ್ಡೌನ್‌ ಗಿಂತ ಮೊದಲೇ ಹದಗೆಡಲು ಶುರುವಾಗಿತ್ತು. ಕಳವಳದ ವಿಚಾರವೆಂದರೆ, ಒಂದು ವೇಳೆ ಜನರಿಗೆ ಉದ್ಯೋಗವಿಲ್ಲದಿದ್ದರೆ, ವೇತನ ದೊರಕದಿದ್ದರೆ, ಮಜೂರಿ ಹೆಚ್ಚಳವಾಗದಿದ್ದರೆ ಅವರ ಖರೀದಿಸುವ ಶಕ್ತಿ ಮತ್ತಷ್ಟು ಕುಂಠಿತವಾಗಲಿದೆ. ಇದರಿಂದ ಭಾರತದಲ್ಲಿ ಗ್ರಾಹಕ ಮಟ್ಟ ಮತ್ತಷ್ಟು ಕ್ಷೀಣಿಸಲಿದೆ ಮತ್ತು ಅದರ ಪರಿಣಾಮವು ಅಭಿವೃದ್ಧಿಯ ಮೇಲೆ ಬೀಳಲಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!