ಕ್ಯಾಲಿಕಟ್ ವಿವಿಯ ಪಠ್ಯದಿಂದ ಅರುಂಧತಿ ರಾಯ್ ಭಾಷಣ ಕೈಬಿಡಲು ಬಿಜೆಪಿ ಒತ್ತಾಯ

ತಿರುವನಂತಪುರಂ : ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದ ಬಿಎ ಇಂಗ್ಲಿಷ್ ಕೋರ್ಸ್ ನಲ್ಲಿ ಸೇರ್ಪಡೆಗೊಳಿಸಲಾದ ಖ್ಯಾತ ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರ ಭಾಷಣವೊಂದರ ಪಠ್ಯವನ್ನು ಅಲ್ಲಿನ ಬಿಜೆಪಿ ವಿರೋಧಿಸಿದೆ. ಅರುಂಧತಿ ರಾಯ್ ಅವರ 2002ರ “ಕಮ್ ಸೆಪ್ಟಂಬರ್” ಭಾಷಣದ ಪಠ್ಯವನ್ನು ವಿರೋಧಿಸಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಮನವಿ ಸಲ್ಲಿಸಿದ್ದಾರೆ. ಈ ಪಠ್ಯವು ಭಾರತದ ಪರಮಾಧಿಕಾರ ಮತ್ತು ಸಮಗ್ರತೆಯನ್ನು ಪ್ರಶ್ನಿಸುತ್ತದೆ ಎಂದು ಅವರು ತಮ್ಮ ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.

ದೇಶದ್ರೋಹದ ಈ ಭಾಷಣದ ಸೇರ್ಪಡೆಯಿಂದ ಶೈಕ್ಷಣಿಕ ವಲಯ ಮತ್ತು ಸಾರ್ವಜನಿಕರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಕಾಶ್ಮೀರಕ್ಕೆ ಸಂಬಂಧಿಸಿ ರಾಯ್ ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ. ಪಠ್ಯಪುಸ್ತಕದ ಸಂಪಾದಕರಾದ ಮುರುಗನ್ ಬಾಬು ಮತ್ತು ಅಬೀದಾ ಫಾರೂಕಿ ಅವರು ರಾಯ್ ಅವರನ್ನು ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ. ರಾಯ್ ತಮ್ಮ ಭಾಷಣದಲ್ಲಿ ಹಿಂದೂಗಳನ್ನು ಫ್ಯಾಶಿಸ್ಟರು ಎಂದಿದ್ದಾರೆ. ಹೀಗಾಗಿ ಅವರ ಭಾಷಣವನ್ನು ಪಠ್ಯಕ್ರಮದಿಂದ ತೆಗೆಯಬೇಕು ಎಂದು ಅವರು ಹೇಳಿದ್ದಾರೆ.

- Advertisement -

ಈ ಪಠ್ಯದ ಸೇರ್ಪಡೆಗೆ 10 ಮಂದಿ ಸದಸ್ಯರ ಸಮಿತಿ ಕಳೆದ ವರ್ಷ ಶಿಫಾರಸ್ಸು ಮಾಡಿತ್ತು. ಪಠ್ಯಕ್ಕೆ ಸೇರ್ಪಡೆಗೆ ಮೊದಲು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯೂ ಇದಕ್ಕೆ ಸಮ್ಮತಿ ಸೂಚಿಸಿತ್ತು. ಭಾಷಣ ಒಂದು ನಿಯತಕಾಲಿಕೆಯಲ್ಲಿ ಮುದ್ರಣವಾಗಿತ್ತು. ಇಲ್ಲಿ ವರೆಗೆ ಯಾರೊಬ್ಬರೂ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಪಠ್ಯ ಪುಸ್ತಕ ಸಮಿತಿಯಲ್ಲೂ ಯಾರೊಬ್ಬರೂ ಇದರ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎಂದು ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಯ ಅಧ್ಯಕ್ಷೆ ಡಾ. ಅಬೀದಾ ಫಾರೂಕಿ ಹೇಳಿದ್ದಾರೆ.

ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ವಿಷಯದ ಬಗ್ಗೆ ಪರಿಶೀಲಿಸಿ ಶೈಕ್ಷಣಿಕ ಮಂಡಳಿ ನಿರ್ಧಾರ ಕೈಗೊಳ್ಳಲಿದೆ ಎಂದು ವಿವಿಯ ರಿಜಿಸ್ಟ್ರಾರ್ ಡಾ. ಸಿ.ಎಲ್. ಜೋಶಿ ಹೇಳಿದ್ದಾರೆ. ಈ ಭಾಷಣವನ್ನು ಬೋಧಿಸದಿರಲು ಕಾಲೇಜುಗಳು ಅನಧಿಕೃತವಾಗಿ ನಿರ್ಧರಿಸಿರುವ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.