ಕೋಮು ದ್ವೇಷ ಹರಡಿದ ಆರೋಪ | ಫೇಸ್ ಬುಕ್ ಭಾರತ ನಿರ್ದೇಶಕಿ ಅಂಖಿ ದಾಸ್ ವಿರುದ್ಧ ಎಫ್ ಐಆರ್

Prasthutha|

ನವದೆಹಲಿ : ಕೋಮು ದ್ವೇಷ ಹರಡುತ್ತಿರುವ ಆರೋಪದಡಿ ಭಾರತದ ಫೇಸ್ ಬುಕ್ ಸಾರ್ವಜನಿಕ ನೀತಿ ನಿರ್ದೇಶಕಿ ಅಂಖಿ ದಾಸ್ ವಿರುದ್ಧ ಛತ್ತೀಸ್ ಗಢದ ರಾಯ್ಪುರದಲ್ಲಿ ಎಫ್ ಐಆರ್ ದಾಖಲಾಗಿದೆ. ಇನ್ನೊಂದೆಡೆ, ಈ ದೂರು ದಾಖಲಿಸಿರುವ ವ್ಯಕ್ತಿಯ ವಿರುದ್ಧ ಅಂಖಿ ದಾಸ್ ಅವರು ದೆಹಲಿಯಲ್ಲಿ ಪ್ರತ್ಯೇಕ ಎಫ್ ಐಆರ್ ದಾಖಲಿಸಿದ್ದಾರೆ. ರಾಯ್ಪುರದ ಪತ್ರಕರ್ತ ಅವೇಶ್ ತಿವಾರಿ ಫೇಸ್ ಬುಕ್ ಭಾರತೀಯ ನಿರ್ದೇಶಕಿ ಅಂಖಿ ದಾಸ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಅಮೆರಿಕದ ದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ವರದಿಯಾದ ಅಂಶಗಳನ್ನು ಆಧರಿಸಿ ತಿವಾರಿ ದೂರು ದಾಖಲಿಸಿದ್ದಾರೆ.
ಎಫ್ ಐಆರ್ ನಲ್ಲಿ ಛತ್ತೀಸ್ ಗಢ ಮುಂಗೇಲಿ ನಿವಾಸಿ ರಾಮ್ ಸಾಹು ಮತ್ತು ಇಂದೋರ್ ನ ವಿವೇಕ್ ಸಿನ್ಹಾ ಎಂಬವರ ಹೆಸರೂ ಇದೆ. ಐಪಿಸಿ ಕಲಂಗಳಾದ 295(ಎ), 505 (1) (ಸಿ), 506 ಮತ್ತು 500ರಡಿ ಎಫ್ ಐಆರ್ ದಾಖಲಾಗಿದೆ.
ಆ.14ರಂದು ದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ವಿವಾದಕ್ಕೆ ಮೂಲ ಕಾರಣವಾಗಿದೆ. ಭಾರತದಲ್ಲಿ ಫೇಸ್ ಬುಕ್ ಆಡಳಿತ ಪಕ್ಷ ಬಿಜೆಪಿಯ ಕೈಗೊಂಬೆಯಂತಿದೆ ಎಂಬರ್ಥದ ಲೇಖನ ಪ್ರಕಟವಾಗಿತ್ತು. ಭಾರತದಲ್ಲಿನ ಕಂಪೆನಿಯ ವ್ಯವಹಾರಕ್ಕೆ ಧಕ್ಕೆಯುಂಟು ಮಾಡಬಹುದು ಎಂಬ ಭಾವನೆಯಿಂದ , ಬಿಜೆಪಿ ನಾಯಕರು ಪೋಸ್ಟ್ ಮಾಡುವ ದ್ವೇಷ ಹರಡುವ ಪೋಸ್ಟ್ ಗಳನ್ನು ರದ್ದು ಮಾಡುವುದಕ್ಕೆ ಅಂಖಿ ದಾಸ್ ವಿರೋಧವಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಬಿಜೆಪಿಗೆ ಸಂಬಂಧಿಸಿದ ಸುಳ್ಳು ಸುದ್ದಿ ಹರಡುವ ಪೇಜ್ ಗಳನ್ನು ಡಿಲೀಟ್ ಮಾಡಿದ ಬಗ್ಗೆಯೂ ದಾಸ್ ಮಾಹಿತಿ ಬಹಿರಂಗ ಪಡಿಸಿಲ್ಲ ಎಂದು ವರದಿ ತಿಳಿಸಿತ್ತು. ಈ ವರದಿ ಪ್ರಕಟವಾದ ಬಳಿಕ ತಮಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಗೂ ನಿಂದನೆಯ ಸಂದೇಶಗಳು ಬರುತ್ತಿವೆ ಎಂದು ಆಪಾದಿಸಿ ಅಂಖಿ ದಾಸ್ ದೂರು ದಾಖಲಿಸಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿ ಆಧಾರದಲ್ಲಿ ತಾನು ಫೇಸ್ ಬುಕ್ ಪೋಸ್ಟ್ ಹಾಕಿದ್ದೆ. ವರದಿಯ ಅಂಶಗಳನ್ನಾಧರಿಸಿ ಕಾಮೆಂಟ್ ಗಳು ಬಂದಿವೆ. ವರದಿಯನ್ನಾಧರಿಸಿ ಅಂಖಿ ದಾಸ್ ಬಗ್ಗೆಯೂ ನಾನು ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದೆ. ವರದಿಯ ಪ್ರಕಾರ, ಕಳೆದ ಲೋಕಸಭಾ ಚುನಾವಣೆಗೂ ಮುನ್ನಾ ಫೇಸ್ ಬುಕ್ ನಿಂದ ದ್ವೇಷ ಭಾಷಣ ತೆಗೆಯದಂತೆ ತನ್ನ ಅಧೀನ ಸಿಬ್ಬಂದಿಗೆ ಅಂಖಿ ದಾಸ್ ಬಲವಂತಪಡಿಸಿದ್ದರು ಎಂಬ ಉಲ್ಲೇಖವಿದೆ. ಸಾಹು ಮತ್ತು ಸಿನ್ಹಾ ಅಂಖಿ ದಾಸ್ ಅವರ ಪರವಹಿಸಿದ್ದಾರೆ. ಅಂಖಿ ದಾಸ್ ಹಿಂದೂ ಹೀಗಾಗಿ ಅವರು ಧರ್ಮದ ಅನುಕೂಲಕ್ಕಾಗಿ ಕಾರ್ಯ ಮಾಡಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ. ಅಲ್ಲದೆ, ಸಾಹು ಎಂಬಾತ ಕೋಮು ಸೂಕ್ಷ್ಮದ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ ಮತ್ತು ತಮಗೆ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ತಿವಾರಿ ತಿಳಿಸಿದ್ದಾರೆ. ಅಂಖಿ ದಾಸ್ ವಿರುದ್ಧ ಪೋಸ್ಟ್ ಹಾಕಿದ ಬಳಿಕ ತಮಗೂ ಬೆದರಿಕೆ ಕರೆಗಳು ಬಂದಿವೆ ಎಂದು ತಿವಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಸುದ್ದಿ ಸಂಸ್ಥೆಯೊಂದರ ರಾಜ್ಯ ಬ್ಯೂರೊ ಮುಖ್ಯಸ್ಥರಾದ ತಿವಾರಿ, ತಮ್ಮ ವಿರುದ್ಧ ಅಂಖಿ ದಾಸ್ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ತಾವು ಅಂಖಿ ದಾಸ್ ಅವರನ್ನು ಸಂಪರ್ಕಿಸಿಯೇ ಇಲ್ಲ, ಬೆದರಿಕೆ ಹಾಕಿಯೂ ಇಲ್ಲ, ಆದರೂ ತಮ್ಮ ವಿರುದ್ಧ ಯಾಕೆ ದೂರು ದಾಖಲಿಸಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ತಿವಾರಿ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸರಕಾರದ ನೀತಿಗಳನ್ನು ಪ್ರಶ್ನಿಸುತ್ತಿದ್ದ ತಮ್ಮ ಪೋಸ್ಟ್ ಗಳಿಗೆ ನಿಯಂತ್ರಣ ಹೇರಿದ್ದ ಫೇಸ್ ಬುಕ್ ವರ್ತನೆಯ ಬಗ್ಗೆಯೂ ತಿವಾರಿ ಮಾತನಾಡಿದ್ದಾರೆ. “25 ವರ್ಷಗಳಿಂದ ಪತ್ರಕರ್ತನಾಗಿರುವ ನಾನು ಪ್ರಶ್ನೆ ಕೇಳುವುದು ನನ್ನ ಕರ್ತವ್ಯ. ಈ ಹಿಂದೆ ನಾನು ಪುಲ್ವಾಮ ದಾಳಿ, ಸಿಎಎ-ಎನ್ ಆರ್ ಸಿ ಮತ್ತು ಛತ್ತೀಸ್ ಗಢದ ಆದಿವಾಸಿಗಳ ಸಮಸ್ಯೆಗಳ ಕುರಿತಂತೆ ಕೇಳಿದ್ದ ಪ್ರಶ್ನೆಗಳಿಗೆ ಸಂಬಂಧಿಸಿದ ಹಲವು ಪೋಸ್ಟ್ ಗಳನ್ನು ಫೇಸ್ ಬುಕ್ ಬ್ಲಾಕ್ ಮಾಡಿದೆ. ಭಿಲಾಯಿನಲ್ಲಿ ಆದಿವಾಸಿ ಹೋರಾಟದ ವೈರಲ್ ಆಗುತಿದ್ದ ನನ್ನ ಲೈವ್ ವೀಡಿಯೊ ಒಂದು ಬಾರಿ ಏಕಾಏಕಿ ಬ್ಲಾಕ್ ಆಗಿತ್ತು. ಅದು ಗೈಡ್ ಲೈನ್ಸ್ ಗೆ ವಿರುದ್ಧವಾಗಿತ್ತು ಎಂದು ನನಗೆ ಸೂಚಿಸಲಾಗಿತ್ತು, ಆದರೆ ನಾನು ಮಾಡಿದ ತಪ್ಪು ಏನು ಎಂದು ಯಾವತ್ತೂ ಉತ್ತರ ಕೊಟ್ಟಿಲ್ಲ ಎಂದು ತಿವಾರಿ ಫೇಸ್ ಬುಕ್ ನಿಂದ ತನಗಾದ ಈ ಹಿಂದಿನ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.

- Advertisement -