ಕೊರೊನಾದಿಂದ ಮೃತಪಟ್ಟವನ ಶವ ಸೈಕಲ್ ರಿಕ್ಷಾದಲ್ಲಿ ಸಾಗಾಟ | ವ್ಯಾಪಕ ಆಕ್ರೋಶ

Prasthutha|

ಗುಂಟೂರು : ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಸುಮಾರು 1,180 ಆ್ಯಂಬುಲೆನ್ಸ್ ಬಿಡುಗಡೆ ಮಾಡಿದ್ದ ಆಂಧ್ರ ಪ್ರದೇಶ ಸರಕಾರ, ದೇಶಾದ್ಯಂತ ಭಾರೀ ಪ್ರಚಾರ ಪಡೆದುಕೊಂಡಿತ್ತು. ಆದರೆ, ರಾಜ್ಯದ ಗುಂಟೂರಿನ ಬಪತಲಾ ಪ್ರದೇಶದಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಮೃತದೇಹವನ್ನು ಸೈಕಲ್ ರಿಕ್ಷಾದಲ್ಲಿ ಕೊಂಡೊಯ್ದ ಅಮಾನವೀಯ ಘಟನೆ ನಡೆದಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧ ವ್ಯಕ್ತಿಯೊಬ್ಬರು ಬಪತಲಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಮೃತ ವ್ಯಕ್ತಿಯ ಶವವನ್ನು ಕುಟುಂಬಸ್ಥರು ಪಡೆಯಲು ನಿರಾಕರಿಸಿದ ಕಾರಣ, ಬಪತಲಾ ಆಸ್ಪತ್ರೆಯ ವೈದ್ಯರು ಶವಸಂಸ್ಕಾರಕ್ಕಾಗಿ ಪುರಸಭೆ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದರು. ಆಸ್ಪತ್ರೆಯವರು ಮೃತದೇಹವನ್ನು ಪಾಲಿಥಿನ್ ಶೀಟ್ ನಲ್ಲಿ ಸುತ್ತಿ ನೀಡಿದ್ದರು. ಮುನ್ಸಿಪಲ್ ಸಿಬ್ಬಂದಿ ಆ ಮೃತದೇಹವನ್ನು ಸೈಕಲ್ ರಿಕ್ಷಾದಲ್ಲಿ ಶ್ಮಶಾನಕ್ಕೆ ಸಾಗಿಸಿದ್ದರು ಎನ್ನಲಾಗಿದೆ.

- Advertisement -

ಸೈಕಲ್ ರಿಕ್ಷಾದಲ್ಲಿ ಮೃತದೇಹ ಸಾಗಿಸುತ್ತಿರುವುದು ಟಿವಿ ವಾಹಿನಿಗಳಲ್ಲಿ ಪ್ರಸಾರವಾಯಿತು. ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯ ವಿಧಾನಸಭಾ ಉಪಾ ಸಭಾಪತಿ ಕೋನ ರಘುಪತಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುನ್ಸಿಪಲ್ ಸಿಬ್ಬಂದಿ ಹಾಗೂ ಆಸ್ಪತ್ರೆ ಸಿಬ್ಬಂದಿ ಈಗ ಮೃತರ ಕುಟುಂಬಸ್ಥರ ವಿವರ ಸಂಗ್ರಹಿಸಲು ಮುಂದಾಗಿದ್ದಾರೆ. ಇನ್ನೊಂದೆಡೆ, ಬಹಿರಂಗವಾಗಿಯೇ ಕೊರೊನಾದಿಂದ ಮೃತಪಟ್ಟವರ ಮೃತದೇಹ ಕೊಂಡೊಯ್ದಿದ್ದುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

- Advertisement -