ಕೇಂದ್ರೀಯ ವಿವಿಗಳಲ್ಲಿ ಕೇವಲ 9 ಜನ ಒಬಿಸಿ ಪ್ರೊಫೆಸರ್ ಗಳು | 313 ಸ್ಥಾನ ಮೀಸಲಿದ್ದರೂ ಹುದ್ದೆ ತುಂಬದೆ ಬಹುದೊಡ್ಡ ವಂಚನೆ

Prasthutha|

ನವದೆಹಲಿ : ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸುವವರಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದ ಯುವಕರು ಮುಂಚೂಣಿಯಲ್ಲಿರುತ್ತಾರೆ. ಆದರೆ, ಅವರ ಈ ವರ್ತನೆಗೆ ಪ್ರಚೋದಿಸುವವರು ಸ್ವತಃ ಮೀಸಲಾತಿ ಪಡೆದು, ಇತರ ಸಾಮಾನ್ಯ ವರ್ಗದ ಬಹುಪಾಲನ್ನು ಪಡೆದು ಮೆರೆಯುತ್ತಿರುತ್ತಾರೆ. ಎಸ್ ಸಿ/ಎಸ್ ಟಿಗಳನ್ನು ವಿರೋಧಿಸುವ ಸಲುವಾಗಿ, ಮೀಸಲಾತಿಯನ್ನೇ ಟೀಕಿಸುವ ಸ್ಥಿತಿ ದೇಶದಲ್ಲಿ ಹೇಗಿದೆ ಎಂಬುದಕ್ಕೆ ಇದೊಂದೇ ಉದಾಹರಣೆ ಸಾಕು. ದೇಶಾದ್ಯಂತದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಒಬಿಸಿ ಸಮುದಾಯದ ಕೇವಲ 9 ಮಂದಿ ಪ್ರೊಫೆಸರ್ ಗಳಿದ್ದಾರೆ ಎಂಬುದನ್ನು ‘ದ ಪ್ರಿಂಟ್’ ಬಹಿರಂಗ ಪಡಿಸಿದೆ.

2020ರ ವೇಳೆಗೆ ದೇಶದ ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 313 ಸ್ಥಾನಗಳು ಒಬಿಸಿ ಮೀಸಲಾಗಿವೆ. ಆದರೆ, ಇಲ್ಲಿವರೆಗೆ ಅಲ್ಲಿ ತುಂಬಿರುವುದು ಕೇವಲ 9 ಸ್ಥಾನಗಳನ್ನು ಮಾತ್ರ ಎಂದು ‘ದ ಪ್ರಿಂಟ್’ ಆನ್ ಲೈನ್ ವಾಹಿನಿ ವರದಿ ಮಾಡಿದೆ. ಹೀಗಾಗಿ, ಮಂಜೂರಾದ ಇನ್ನೂ 304 ಪ್ರೊಫೆಸರ್ ಹಂತದ ಹುದ್ದೆಗಳು ತುಂಬದೆ ಇನ್ನೂ ಬಾಕಿಯುಳಿದಿವೆ.

- Advertisement -

ಅಂಕಿ ಅಂಶಗಳ ಪ್ರಕಾರ, ಬಹುಪ್ರಗತಿಪರ ಎನಿಸುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್ ಯು), ದೆಹಲಿ ವಿಶ್ವವಿದ್ಯಾಲಯ (ಡಿಯು) ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ ಯು) ಮತ್ತು ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ 2020 ಜ.1ರ ವರೆಗೆ ಒಂದೇ ಒಂದು ಪ್ರೊಫೆಸರ್ ಸ್ಥಾನ ಒಬಿಸಿ ಕೋಟಾದಡಿ ತುಂಬಿಲ್ಲ.

ಇನ್ನು, ಅಸೋಸಿಯೇಟ್ ಪ್ರೊಫೆಸರ್ ಹಂತದ ಹುದ್ದೆಗಳಲ್ಲಿಯೂ ಕೇವಲ ಶೇ. 5.17 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಅಂದರೆ, ದೇಶಾದ್ಯಂತದ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಮಂಜೂರಾಗಿ, ಒಬಿಸಿಗೆ ಮೀಸಲಾಗಿರುವ 735 ಅಸೋಸಿಯೇಟೆಡ್ ಪ್ರೊಫೆಸರ್ ಹುದ್ದೆಗಳಲ್ಲಿ ಕೇವಲ 38 ಹುದ್ದೆಗಳು ಮಾತ್ರ ಭರ್ತಿಯಾಗಿವೆ.

ಆದರೆ, ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಲ್ಲಿ ಒಬಿಸಿಗಳಿಗೆ ಮೀಸಲಾದ ಹುದ್ದೆಗಳಲ್ಲಿ ಶೇ.60ರಷ್ಟು ಹುದ್ದೆಗಳನ್ನು ತುಂಬಲಾಗಿದೆ. ಅಂದರೆ, ದೇಶಾದ್ಯಂತದ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಲ್ಲಿ ಒಬಿಸಿಗೆ 2,232 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಅವುಗಳಲ್ಲಿ 1,327 ಹುದ್ದೆಗಳನ್ನು ತುಂಬಲಾಗಿದೆ.

ಮೇಲ್ಜಾತಿಗರಿಗೆ ಶೇ.10 ಮೀಸಲಾತಿ ನೀಡಿದ್ದನ್ನು ಸಂಭ್ರಮಿಸುತ್ತಿರುವ ಒಬಿಸಿಗಳು, ಸರಕಾರಿ ಹುದ್ದೆಗಳಲ್ಲಿ ತಮ್ಮ ಪಾಲು ಎಷ್ಟಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದರೆ ಒಳ್ಳೆಯದಿತ್ತು. ಆಗ ಮೀಸಲಾತಿಯ ಅನಿವಾರ್ಯತೆ ಅವರಿಗೆ ಅರ್ಥವಾಗುತ್ತಿತ್ತು. ಇಷ್ಟೊಂದು ಸ್ಥಾನಗಳು ಸರಕಾರಿ ಸಂಸ್ಥೆಗಳಲ್ಲಿ ಮೀಸಲಾಗಿದ್ದರೂ, ಆ ಸ್ಥಾನಗಳನ್ನು ಭರ್ತಿ ಮಾಡದಿರುವವರು, ಇನ್ನು ಮೀಸಲಾತಿಯೇ ಇಲ್ಲದಿದ್ದಾಗ ಸರಕಾರಿ ಹುದ್ದೆಗಳಲ್ಲಿ ತಮ್ಮ ಪಾಲು ಎಷ್ಟಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಫೊಟೊ ಕೃಪೆ : ThePrint

- Advertisement -