ಕೆಡುಕಿನ ವಿರುದ್ಧ ದೃಢತೆಯ ರಮಝಾನ್

Prasthutha|

ಅಧ್ಯಯನದ ದೃಷ್ಟಿಯಿಂದ ಕೆಲವು ಸಮಾಜ ವಿಜ್ಞಾನಿಗಳು ನ್ಯೂರಂಬರ್ಗ್‌ ನ ಕಾಡಿನಲ್ಲಿ ಒಂಟಿಯಾಗಿ ಬದುಕಲು ಬಿಟ್ಟ ಕಥೆಯೊಂದನ್ನು ಹೆಚ್ಚಿನ ಸಮಾಜವಿಜ್ಞಾನಿಗಳು ಪ್ರಸ್ತಾಪಿಸುತ್ತಾರೆ. ಕಾಸ್ಪರ್ ಹೌಸರ್ (Kaspar Houser) ಮಗು ಹದಿನೇಳು ವರ್ಷಗಳ ಕಾಲ ಆತ ಕಾಡಿನಲ್ಲಿ ಒಂಟಿಯಾಗಿ ಕಳೆದಿದ್ದ. ಆತನ ಕುರಿತಾಗಿ ನಡೆಸಿದ ಅಧ್ಯಯನಗಳು ಅವರನ್ನು ಅಚ್ಚರಿಗೊಳಿಸಿದ್ದವು. 17ರ ಹರೆಯದಲ್ಲೂ ಆತನಿಗೆ ನಡೆದಾಡಲು ಸಾಧ್ಯವಾಗಿರಲಿಲ್ಲ. ಆತನ ಮನಸ್ಸು ಮಗುವಿನ ಮನಸ್ಸಿನಂತಿತ್ತು. ಅರ್ಥವಿಲ್ಲದ ಶಬ್ದಗಳ ಹೊರತು ಒಂದೇ ಒಂದು ಮಾತುಗಳನ್ನಾಡಲು ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ಅದೇ ಪ್ರಾಯದ ಇತರ ಯುವಕರಂತೆ ಆತನಿಗೆ ಶಿಕ್ಷಣ ನೀಡಲು ಪ್ರಯತ್ನಿಸಿದರೂ ಒಂದಿನಿತೂ ಸಾಧ್ಯವಾಗಲಿಲ್ಲ. ಸಮಾಜವೊಂದರಲ್ಲಿ ಪರಸ್ಪರ ನೆರವು, ಸಹಕಾರವಿಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೆ. ಅದೇ ವೇಳೆ ಜಗತ್ತು ಜಾಗತಿಕ ಗ್ರಾಮವಾಗಿ ದಶಕಗಳೇ ಕಳೆದಿವೆ. ಅಂತಹ ಸಮಾಜದ ಕೊಡುಕೊಳ್ಳುವಿಕೆ, ಸಂಪರ್ಕ, ಸಂವಹನ, ಸಂವಾದದಿಂದಲೇ ಸಮಾಜ, ಸಮಾಜವೆಂದು ಗುರುತಿಸಿಕೊಳ್ಳುತ್ತದೆ. ಇದು ಜಗನ್ನಿಯಮವೂ ಹೌದು. ಜಗತ್ತೇ ಒಂದು ಮುಷ್ಟಿಯೊಳಗೆ ಹುದುಗುತ್ತಿರುವ ಈ ಸಂದರ್ಭದಲ್ಲಿ ನಮ್ಮ ದೇಶದ ಕೆಲವೊಂದು ಪ್ರತಿಗಾಮಿ ಶಕ್ತಿಗಳು ಸಮಾಜವನ್ನು ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಔದ್ಯೋಗಿಕವಾಗಿ ಒಡೆಯಲು ಪ್ರಯತ್ನಿಸುತ್ತಿದೆ. ದಶಕಗಳ ಕಾಲದ ದೀರ್ಘ ಸೈತಾನೀ ಕುತಂತ್ರದ ಪ್ರಯತ್ನದ ಫಲವನ್ನು ಕೋಮುವಾದಿಗಳು ಕೊಯ್ಯುತ್ತಿದ್ದಾರೆ. ಇಂತಹ ಫಲಗಳನ್ನು ಕೊಯ್ಯಲು ಈ ಫ್ಯಾಶಿಸ್ಟ್ ಶಕ್ತಿಗಳು, ನೂರು ವರ್ಷಗಳಲ್ಲಿ ನೂರಾರು ಗ್ರಾಮಗಳನ್ನು ಸುಟ್ಟಿದ್ದಾರೆ. ಮಹಾನಗರಗಳಿಗೆ ಕೊಳ್ಳಿ ಇಟ್ಟಿದ್ದಾರೆ. ಸಾವಿರಾರು ಜೀವ, ಮಾನ ಹರಣಗೊಂಡಿದೆ. ಕೋಟ್ಯಂತರ ಸೊತ್ತು ವಿತ್ತಗಳು ನಷ್ಟಗೊಂಡಿವೆ. ಎಲ್ಲಕ್ಕಿಂತ ಮಿಗಿಲಾಗಿ ಮನುಷ್ಯ ಮನಸ್ಸುಗಳು ಒಡೆದುಹೋಗಿವೆ.

- Advertisement -

ಮಾನವ ಒಂದೇ ಕುಲ ಎಂಬುದು ಸರ್ವ ಧಾರ್ಮಿಕ ಗ್ರಂಥಗಳ ಮೂಲಭೂತಪಾಠವಾಗಿದೆ. ಅದರೊಂದಿಗೆ ಮಾನವ ಪ್ರೇಮವನ್ನು ಎತ್ತಿ ಹಿಡಿಯದ ಗ್ರಂಥಗಳೇ ಜಗತ್ತಿನಲ್ಲಿ ಇಲ್ಲ ಎನ್ನಬಹುದು. ಆದರೆ ಅಧಿಕಾರ ಕೇಂದ್ರಗಳಲ್ಲಿರುವ ಮತ್ತು ಸಾಮಾಜಿಕ ನಾಯಕತ್ವವನ್ನು ಬಯಸುವ ಜನರು ಈ ಸಮಾಜ ಎಂದೂ ಒಡೆದ ಕನ್ನಡಿಯಾಗಿಯೇ ಇರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಧರ್ಮ, ಸಂಸ್ಕೃತಿ, ಜಾತಿ, ಮತ, ಪಂಗಡದ ಹೆಸರಿನಲ್ಲಿ ಈ ಮಂದಿ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೆಣೆಯುತ್ತಲೇ ಇದ್ದಾರೆ. ಇವರ ಅಧಿಕಾರ ಹಪಹಪಿಕೆ ಎಲ್ಲಿಯ ತನಕವಿದೆಯೆಂದರೆ ಇವರು ಅದಕ್ಕೆ ತಾವು ನೆಲೆಸಿದ ನೆಲವನ್ನೇ ಬಲಿಕೊಡಲು ತಯಾರಾಗಿರುತ್ತಾರೆ.

ಪವಿತ್ರ ಕುರ್‌ ಆನ್ ಮನುಷ್ಯರನ್ನು ಮನುಷ್ಯರಿಗಾಗಿ ನಿಯೋಗಿಸಲಾಗಿದೆಯೆಂಬ ಪಾಠವನ್ನು ನೀಡುತ್ತಿದೆ. ಅಂದರೆ ನಿಸ್ವಾರ್ಥಿಯಾಗಿ ಇತರರಿಗಾಗಿ ಬದುಕಿ ಬಾಳಬೇಕೆಂಬ ಸಂದೇಶವನ್ನು ಕುರ್‌ಆನ್ ನೀಡುತ್ತದೆ. ಅದರೊಂದಿಗೆ ಕೂಡಿ ಬಾಳುವ, ಹಂಚಿ ತಿನ್ನುವ ಉದಾತ್ತ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಸದ್ಯ ನಾವು ಉಪವಾಸದೊಂದಿಗೆ ಪ್ರಯಾಣಿಸುತ್ತಿದ್ದೇವೆ. ಪವಿತ್ರ ರಮಝಾನಿನ ಉಪವಾಸವು ನೈಜ ದೇವಭಕ್ತಿಯೊಂದಿಗೆ ಸಹನೆ, ಶಕ್ತಿ, ಕರುಣೆ, ಪಾವಿತ್ರ್ಯತೆಯನ್ನು ಗಳಿಸುವ ಮಾಸವಾಗಿದೆ. ಅಂಚಿಗೆ ತಳ್ಳಲ್ಪಟ್ಟ ಬಡ ಬಗ್ಗರು, ಅನಾಥರು, ನಿರ್ಗತಿಕರನ್ನು ಬರಸೆಳೆದು ಅವರ ಹಸಿವು, ನೋವು, ತಲ್ಲಣವನ್ನು ದೂರಗೊಳಿಸಲು, ತನು ಮನವನ್ನು ಸಿದ್ಧಗೊಳಿಸಬೇಕಾದ ತಿಂಗಳು. ಒಂದು ಆರಾಧನೆ ಎಂಬುದರ ಹೊರತಾಗಿ ರಮಝಾನ್ ವ್ರತವು ಮಾನವೀಯ ಕಳಕಳಿಯ ಸಂದೇಶವನ್ನು ಜಗತ್ತಿಗೆ ರವಾನಿಸುತ್ತದೆ. ಹಸಿವನ್ನು ಖುದ್ದು ಅನುಭವಿಸಿ ಯಾರೂ ಹಸಿದಿರಬಾರದೆನ್ನುವ ಉದಾತ್ತ ಸಂದೇಶವನ್ನು ರವಾನಿಸುವ ಮಾಸವಾಗಿದೆ. ಇದು ಮಾನವನನ್ನು ಸಂಸ್ಕರಿಸುವ, ತರಬೇತು ನೀಡುವ ಮಾಸವಾಗಿದೆ. ಮನುಷ್ಯನನ್ನು ಪರಿಪೂರ್ಣ ಮನುಷ್ಯನಂತೆ ರೂಪಿಸಲು ರಮಝಾನ್ ಪ್ರೇರೇಪಿಸುತ್ತದೆ. ಅದರೊಂದಿಗೆ ಕೆಡುಕಿನ ಶಕ್ತಿಗಳು ಹರಡುವ ಎಲ್ಲಾ ರೀತಿಯ ಭಯಾಶಂಕೆಯ ಎದುರು ದೃಢತೆಯಿಂದ ನಿಲ್ಲುವ ಅಪಾರ ಸಹನೆಯನ್ನು ಅದು ನೀಡುತ್ತದೆ. ಮುಂಜಾನೆಯಿಂದ ಸಂಜೆಯವರೆಗೆ ಒಂದು ತೊಟ್ಟು ಹನಿ ನೀರನ್ನೂ ಸೇವಿಸದೆ ಇರುವ ಓರ್ವ ಮುಸ್ಲಿಮನ ಸಹನೆ, ದೃಢತೆ ವಿರೋಧಿಗಳನ್ನು ಅಚ್ಚರಿಗೊಳಿಸುವಂತೆ ಮಾಡುತ್ತದೆ ಎಂದರೆ ತಪ್ಪಾಗಲಾರದು. ಆದ್ದರಿಂದ ಒಂದು ಸಮಾಜ ಎಂಬ ನೆಲೆಯಲ್ಲಿ ಕೊಡು ಕೊಳ್ಳುವಿಕೆ, ಸಹಕಾರ, ಅಗತ್ಯ ಯಾವತ್ತೂ ಇದೆ. ಮುಸ್ಲಿಮ್ ಸಮಾಜ, ಸಮಾಜಮುಖಿಯಾಗಿ ಬದುಕಲು ಬಯಸುತ್ತದೆ. ಶತ ಶತಮಾನಗಳಿಂದ ಅದು ನಡೆದು ಬಂದ ದಾರಿಯೂ ಅದೇ ಆಗಿದೆ. ಆದರೆ ಅಪಾರ ತಪ್ಪು ಕಲ್ಪನೆಗಳು ಜಾಗತಿಕ ಮಟ್ಟದಲ್ಲಿ ಇಸ್ಲಾಮೋಫೋಬಿಯಾವನ್ನು ಸೃಷ್ಟಿಸಿವೆ. ಅದೇ ವೇಳೆ ಸಾವಿರಾರು ವರ್ಷಗಳಿಂದ ಪವಿತ್ರ ರಕ್ತವನ್ನು ಪ್ರತಿಪಾದಿಸುವ ಒಂದು ವರ್ಗವು ಈ ನೆಲದಲ್ಲಿ ಜಾತಿ, ಧರ್ಮ, ಕೋಮು ಹೆಸರಿನಲ್ಲಿ ಸಮಾಜವನ್ನು ಒಡೆದಿದೆ. ಸದ್ಯ ಅದು ಹೊಸ ಆಯಾಮಗಳನ್ನು ಪಡೆದುಕೊಂಡಿದೆ. ಆಹಾರ, ಉಡುಪು ಮತ್ತಿತರ ವಿಚಾರಗಳಲ್ಲಿ ಅವರು ಒಂದರ ನಂತರ ಒಂದರಂತೆ ಫರ್ಮಾನುಗಳನ್ನು ಹೊರಡಿಸುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನದಲ್ಲಿ ಜಗತ್ತು ಮಿಂಚಿನ ವೇಗದಲ್ಲಿ ಧಾವಿಸುತ್ತಿದ್ದರೆ ನಮ್ಮೀ ನಾಡಿನ ಪ್ರತಿಗಾಮಿ ಶಕ್ತಿಗಳು ವಿರುದ್ಧಗತಿಯೆಡೆಗೆ ಓಡುತ್ತಿದೆ. ಅದರೊಂದಿಗೆ ಈ ನೆಲದಲ್ಲಿ ಸದಾ ಅಶಾಂತಿ, ಅಸಹನೆಯ ಸನ್ನಿವೇಶವನ್ನು ಅವರು ಸೃಷ್ಟಿಸುತ್ತಿದ್ದಾರೆ. ಆದ್ದರಿಂದ ಮೈನಸ್ಸುಗಳನ್ನು ಪ್ರಫುಲ್ಲಗೊಳಿಸುವ ರಮಝಾನ್ ಉಪವಾಸದ ಮೂಲಕ ಶಕ್ತಿಯನ್ನು ಪಡೆದುಕೊಂಡು ಸೈತಾನೀ ಶಕ್ತಿಗಳ ಸರ್ವ ಕುತಂತ್ರಗಳಿಗೆ ತಡೆ ಒಡ್ಡಲೇಬೇಕಾಗಿದೆ.

Join Whatsapp