ಕೆಡುಕಿನ ವಕ್ತಾರರು ಪಾಠ ಕಲಿಯುವುದೇ ಇಲ್ಲ

0
105

♦ ಮುರ್ಶಿದ್

ಸಾವಿರಾರು ವರ್ಷಗಳ ಹಿಂದಿನ ವೃತ್ತಾಂತ. ಒಂಭತ್ತು ಜನರಿದ್ದ ಒಂದು ಗುಂಪು. ಅವರು ಉತ್ತಮ ದೇಹದಾರ್ಢ್ಯತೆಯನ್ನು ಹೊಂದಿದ್ದರು ಮತ್ತು ಒಳ್ಳೆಯ ಬುದ್ಧಿಶಾಲಿಗಳೂ ಆಗಿದ್ದರು. ಆದರೆ, ಅವರಲ್ಲಿ  ಪ್ರಾಮಾಣಿಕತೆ ಇರಲಿಲ್ಲ ಮತ್ತು ಸತ್ಯದ ಪರವಾಗಿ ಅವರು ನಿಲ್ಲಲು ಸಿದ್ಧರಿರಲಿಲ್ಲ. ಮೋಸ, ವಂಚನೆ, ಕುಟಿಲತೆಯನ್ನು ಅವರು ತಮ್ಮ ಬಂಡವಾಳವಾನ್ನಾಗಿಸಿಕೊಂಡಿದ್ದರು. ಬಲಿಷ್ಠ ಸಮೂದ್ ಗೋತ್ರದ ನೇತೃತ್ವ ಸ್ಥಾನದಲ್ಲಿ ಅವರು ವಿರಾಜಮಾನರಾಗಿದ್ದರು. ಆ ನಾಡಿನ ಜನರೆಲ್ಲಾ ಅವರಂತೆಯೇ ಬಲಿಷ್ಠರಾಗಿದ್ದರು. ಉತ್ತಮ ಆರೋಗ್ಯ, ಬೇಕಾದಷ್ಟು ಸಂಪತ್ತು ಮತ್ತು ಅಪಾರ ಶಕ್ತಿಯನ್ನು ಅಲ್ಲಾಹನು ಅವರಿಗೆ ನೀಡಿ ಕರುಣಿಸಿದ್ದನು. ವಿಶಾಲವಾದ ಸಂಪತ್ಭರಿತವಾದ ಕೃಷಿ ಜಮೀನುಗಳು, ಹಣ್ಣು ಹಂಪಲುಗಳು ತುಂಬಿ ತುಳುಕುವ ತೋಟಗಳು ಅವರಿಗಿದ್ದವು. ಬೆಟ್ಟದಷ್ಟು ದೊಡ್ಡ ಬಂಡೆಗಲ್ಲನ್ನು ಅವರು ಅನಾಯಾಸವಾಗಿ ಕೊರೆದು ಅತ್ಯಂತ ಸುಂದರವಾದ  ಮನೆಗಳನ್ನು ನಿರ್ಮಿಸುತ್ತಿದ್ದರು. ಅದರಲ್ಲೆ ಅವರ ವಾಸ. ಸುಖ ಸಂತೋಷದ ಆಡಂಭರದ ಜೀವನಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ಅವರ ಬಳಿ ಇದ್ದವು. ಆದರೆ ತಮ್ಮನ್ನು ಸೃಷ್ಟಿಸಿದ ದೇವನಪ್ರಜ್ಞೆ ಮಾತ್ರ ಅವರಿಗಿರಲಿಲ್ಲ. ಅದೇ ರೀತಿ ಉತ್ತಮ ಚಾರಿತ್ರವನ್ನೂ ಅವರು ಹೊಂದಿರಲಿಲ್ಲ. ಆದುದರಿಂದ ಅವರ ಮಧ್ಯೆ ಸದಾ  ಸಂಘರ್ಷ, ಜಗಳ ಸಾಮಾನ್ಯವಾಗಿದ್ದವು. ಒಂದು ರೀತಿಯ ಭೀತಿಯ ವಾತಾವರಣ ಎಲ್ಲೆಡೆ ವ್ಯಾಪಿಸಿತ್ತು.

ದುಷ್ಕೃತ್ಯದಲ್ಲಿ ಮುಳುಗಿದ ಆ ಸಮೂದ್ ಗೋತ್ರದ  ಜನರು, ಸೃಷ್ಟಿಕರ್ತನಾದ ಅಲ್ಲಾಹನಿಂದ ಮಾನಸಿಕವಾಗಿ ದೂರವಾಗಿದ್ದರು. ದೇವನ ಕುರಿತಾದ ನೈಸರ್ಗಿಕವಾದ ಪ್ರಜ್ಞೆಯನ್ನು ತಣಿಸಲು ಅವರು ಕೃತಕ ಮಾರ್ಗವನ್ನು ಅವಲಂಬಿಸಿದ್ದರು. ಅದಕ್ಕಾಗಿ ಅವರು ಮೂರ್ತಿಗಳ ಪೂಜೆಯನ್ನು ಮಾಡಿಕೊಂಡಿದ್ದರು. ಸಮಾಜದಲ್ಲಿ ಅಪರಾಧಿಗಳೆನಿಸಿಕೊಂಡವರು ಅಲ್ಲಿನ ದೇವಾಲಯಗಳ ಮೇಲಿನ ಅಧಿಕಾರವನ್ನು ಹೊಂದಿದ್ದರು. ಕಾಲಸರಿದಂತೆ ಅಲ್ಲಿನ ಅಳಿದುಳಿದ ಒಳಿತುಗಳೂ ಒಂದೊಂದಾಗಿ ನಾಶವಾಗತೊಡಗಿದವು. ಇಂತಹ ಸಂದರ್ಭದಲ್ಲಿ ಅಲ್ಲಾಹನು ಅವರದೇ ವಂಶದವರಾದ ಸಾಲಿಹ್(ಅ)ರನ್ನು ಅವರಿಗೆ ಸನ್ಮಾರ್ಗದರ್ಶಕನಾಗಿ ಪ್ರವಾದಿಯಾಗಿ ಕಳಿಸಿಕೊಡುತ್ತಾನೆ. ಪ್ರವಾದಿ ಸಾಲಿಹ್(ಅ)ರವರು  ಅವರೊಡನೆ ಹೀಗೆ ಹೇಳುತ್ತಾರೆ: ‘‘ಅಪರಾಧಗಳಲ್ಲಿ ನಿಮಗೇಕೆ ಇಷ್ಟೊಂದು ಉತ್ಸಾಹ? ನಿಮ್ಮ ಅಪರಾಧಗಳಿಗೆ ಅಲ್ಲಾಹನಲ್ಲಿ ಏಕೆ ಕ್ಷಮೆ ಕೇಳುತ್ತಿಲ್ಲ?, ಅವನ ಅನುಗ್ರಹಗಳನ್ನು ನೀವೇಕೆ ಬೇಡುವುದಿಲ್ಲ?’’

ಶ್ರೀಮಂತಿಕೆಯಿಂದ ಅಹಂಕಾರಿಗಳಾದ ಆ ಜನತೆ ಪ್ರವಾದಿ ಸಾಲಿಹ್(ಅ)ರ ಆಹ್ವಾನವನ್ನು ತಿರಸ್ಕರಿಸುತ್ತಾರೆ. ಅವರ ಬೋಧನೆಯಿಂದ ಸಮೂದ್ ಜನತೆ ಪಾಠ ಕಲಿಯಲು ಮುಂದಾಗುವುದಿಲ್ಲ. ಪಾಠ ಕಲಿಸುವ ಉದ್ದೇಶದಿಂದ ಅಲ್ಲಾಹನು  ಅಪರಾಧಿಗಳಾದ ಅವರ ಮೇಲೆ ಕ್ರಮಕೈಗೊಳ್ಳುತ್ತಾನೆ. ಸಾಲು ಸಾಲು ಸೋಲುಗಳು, ಪರೀಕ್ಷೆಗಳು ಅವರಿಗೆ ಎದುರಾಗ ತೊಡಗುತ್ತದೆ. ಅದರಿಂದ  ಪಾಠ ಕಲಿತು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬಹುದಾದ ಅವಕಾಶ ಅವರಿಗೆ ಅಲ್ಲಾಹನು ನೀಡಿದ್ದನು. ಆದರೆ ಸಂಪತ್ತು, ಅಧಿಕಾರ, ದೈಹಿಕ ಶಕ್ತಿಯಿಂದ ಮೈಮರೆತ ದುಷ್ಟ ಜನರಾದ ಅವರು ತಮ್ಮನ್ನು ತಿದ್ದಿಕೊಳ್ಳಲು ಮುಂದಾಗಲಿಲ್ಲ. ಅವರು ತಮಗೆ ಸನ್ಮಾರ್ಗ ತೋರಲು ಆಗಮಿಸಿದ ಪ್ರವಾದಿ ಸಾಲಿಹ್(ಅ)ರ ವಿರುದ್ದವೇ ತಿರುಗಿ ಬೀಳುತ್ತಾರೆ. ‘‘ನಾನು ನಿಮ್ಮೆಡೆಗೆ ಬಂದಿರುವ, ನಂಬಲರ್ಹ ದೇವದೂತನಾಗಿದ್ದೇನೆ. ನೀವು ಅಲ್ಲ್ಲಾಹನಿಗೆ ಅಂಜಿರಿ ಮತ್ತು ನನ್ನನ್ನು ಅನುಸರಿಸಿರಿ. ನಾನು ಇದಕ್ಕಾಗಿ ನಿಮ್ಮಿಂದ ಪ್ರತಿಫಲವನ್ನೇನೂ ಅಪೇಕ್ಷಿಸುತ್ತಿಲ್ಲ. ನನ್ನ ಪ್ರತಿಫಲವು ಎಲ್ಲ ಲೋಕಗಳ ಒಡೆಯನ ಬಳಿ ಮಾತ್ರವಿದೆ (ಪವಿತ್ರ ಕುರ್‌ಆನ್:26:143-145)’’ ಎಂದು ಹೇಳಿದ ಪ್ರವಾದಿ ಸಾಲಿಹ್(ಅ)ರನ್ನು ಸಮೂದರು ತಮ್ಮ ಶತ್ರುವೆಂದು ಘೋಷಿಸುತ್ತಾರೆ. ‘‘ನೀನು ಮತ್ತು ನಿನ್ನ ಸಂಗಡಿಗರಿಂದಾಗಿ ನಮಗೆ ಗ್ರಹಚಾರ ಉಂಟಾಗಿದೆ’’ ಎಂದು ಅವರು ಸಾಲಿಹ್(ಅ)ರ ಮೇಲೆ ದೋಷಾರೋಪಣೆ ಮಾಡುತ್ತಾರೆ. ‘‘ಗ್ರಹಚಾರ ನಿಮಗೆ ಇನ್ನು ಬರಬೇಕಷ್ಟೆ’’ ಎಂದು ಪ್ರವಾದಿ ಸಾಲಿಹ್(ಅ) ಅವರಿಗೆ ಮಾರುತ್ತರ ನೀಡುತ್ತಾರೆ. ಅತ್ಯಂತ ವಿನಾಶವಾದ ಶಿಕ್ಷೆ ನಿಮ್ಮ ಮೇಲೆ ಎರಗಲಿದೆ ಎಂದು ಅವರು ಮುನ್ನೆಚ್ಚರಿಕೆ ನೀಡುತ್ತಾರೆ. ಸಮೂದ್ ಸಮುದಾಯದ ಈ ದುಷ್ಟ ನಾಯಕರ ಬಗ್ಗೆ ಜನಸಾಮಾನ್ಯರಲ್ಲಿ ಪ್ರಜ್ಞಾವಂತಿಕೆಯನ್ನು ಮೂಡಿಸುವ ಕೆಲಸವನ್ನು ಪ್ರವಾದಿ ಸಾಲಿಹ್(ಅ) ಮುಂದುವರಿಸುತ್ತಾರೆ. ಜನರ ಬಳಿ ಸೋಗಲಾಡಿತನದ  ಮುಖವಾಡವನ್ನು ತೊಟ್ಟು ಸಾಮಾಜಿಕ ವಂಚನೆಯನ್ನು ಈ ನಾಯಕರು ಎಸಗುತ್ತಿದ್ದರು. ಈ ಕುರಿತಾದ ಅರಿವನ್ನು ತಿಳಿಸಿ ಜನರಲ್ಲಿ ಪ್ರಜ್ಞಾವಂತಿಕೆಯನ್ನು ಮೂಡಿಸುವ ಕೆಲಸವನ್ನು ಅವರು ಮಾಡುತ್ತಾರೆ. ‘‘ನೀವು ಅತಿಕ್ರಮಿಗಳನ್ನು ಅನುಸರಿಸಬೇಡಿ. ಅವರು ಭೂಮಿಯಲ್ಲಿ ಅಶಾಂತಿ ಹಬ್ಬುವವರೇ ಹೊರತು ಯಾವುದೇ ಸುಧಾರಣೆಯ ಕೆಲಸ ಮಾಡುವವರಲ್ಲ’’ (ಕುರ್‌ಆನ್: 26:151,152) ಎಂಬುದನ್ನು ಪ್ರವಾದಿ ಸಾಲಿಹ್(ರ)ರವರು ಜನರಿಗೆ ಮನವರಿಕೆ ಮಾಡಿದರು.

ಆದರೂ ಆ ದುಷ್ಟ ಜನನಾಯಕರನ್ನು ತಿದ್ದಲು  ಸಾಧ್ಯವಾಗಲಿಲ್ಲ.  ಇತಿಹಾಸದಲ್ಲಿ ಸಾಮಾನ್ಯವಾಗಿ ಕಂಡುಬಂದಂತೆ ಆ ಜನತೆಯೂ ಸಂದೇಶವಾಹಕರನ್ನು  ತಿರಸ್ಕರಿಸುತ್ತಾರೆ. ಪ್ರವಾದಿ ಸಾಲಿಹ್(ರ)ರ ಕೊಲೆ ನಡೆಸುವ ಸಂಚನ್ನೂ ಅಲ್ಲಿನ ಮೇಲ್ವರ್ಗದ ಜನರು ಮಾಡುತ್ತಾರೆ. ಒಳನೋಟವನ್ನು ಕಳೆದುಕೊಂಡ ಆ ಜನತೆಯ ನಾಯಕರು ಸಮೂದ್ ಗೋತ್ರವನ್ನು ಸಂಪೂರ್ಣ ನಾಶದತ್ತ ಕರೆದೊಯ್ಯುತ್ತಾರೆ. ಅದೇ ವೇಳೆ ತಮ್ಮ ಹಿತಾಕಾಂಕ್ಷಿಗಳಾಗಿದ್ದ ಪ್ರವಾದಿ ಸಾಲಿಹ್(ರ) ಮತ್ತು ಸಂಗಡಿಗರನ್ನು ಅವರು ತಮ್ಮ  ನಾಶದ ಕಾರಣಕರ್ತರೆಂಬಂತೆ ಕಾಣುತ್ತಾರೆ. ಇದು ಕೊನೆಗೆ ಅವರ ಅಂತಿಮ ನಾಶಕ್ಕೆ ಕಾರಣವಾಗಿ ಬಿಟ್ಟವು.

ಇಂದೂ ಕೂಡ ಇದೇ ರೀತಿಯ ಸಾಮಾಜಿಕ ಬೆಳವಣಿಗೆ ಜಗತ್ತಿನೆಲ್ಲೆಡೆ ಕಾಣಬಹುದು. ಅಧಿಕಾರವನ್ನು ಕೈವಶ ಇಟ್ಟುಕೊಂಡಿರುವ ಮೇಲ್ವರ್ಗವು  ಒಳಿತಿನ ಕರೆಯ ಮುಂದೆ ಜಾಣ ಕುರುಡುತನ ಪ್ರದರ್ಶಿಸುತ್ತಾರೆ. ಸರ್ವ ಶಕ್ತಿಯನ್ನು ಬಳಸಿ ಒಳಿತಿನ ಉಸಿರನ್ನು ಶಾಶ್ವತವಾಗಿ ನಿಲ್ಲಿಸಲು ಅವರು ಪ್ರಯತ್ನಿಸುತ್ತಿದ್ದಾರೆ.

ಅವರಿಗೆ ಆ ಸತ್ಯದ ಮುಂದೆ  ಸಮರ್ಪಕ ಉತ್ತರವಿಲ್ಲ. ನಿಜವಾದ ಶತ್ರು ಯಾರೆಂದು ತಿಳಿಯುವ ವಿವೇಕವನ್ನು ಅವರು ತಮ್ಮ ದುಷ್ಟತನದಿಂದಾಗಿ ಕಳೆದುಕೊಂಡಿರುತ್ತಾರೆ. ಯಶಸ್ಸಿನ ಹಾದಿಗೆ ದಾರಿ ತೋರುವವರನ್ನು ಅವರು ಪರಮ ಶತ್ರುಗಳಾಗಿ ಕಾಣುತ್ತಾರೆ. ಒಳಿತಿನ ಉಪದೇಶಕರನ್ನು ಸಂಶಯದಿಂದ ನೋಡುತ್ತಾರೆ. ಅವರನ್ನು ನಿರ್ನಾಮಗೊಳಿಸುವ  ಸಂಚುಗಳನ್ನು ಅವರು ಹೂಡುತ್ತಾರೆ. ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಸಂಕಷ್ಟದಲ್ಲಿ ಸಿಲುಕಿಸುತ್ತಾರೆ. ಆದರೆ ಅವರೆಂದೂ ಸ್ವಯಂ ಪಾಠ ಕಲಿಯುವುದೇ ಇಲ್ಲ. ತಮ್ಮಲ್ಲಿರುವ ಪ್ರಭಾವ, ಅಧಿಕಾರ, ಸಂಪತ್ತು, ಆರೋಗ್ಯ ಶಾಶ್ವತವೆಂದು ಬಗೆದು ಸ್ವಾರ್ಥಕ್ಕಾಗಿ ಎಂತಹ ದುಷ್ಟತನಕ್ಕೂ ಮುಂದಾಗುತ್ತಾರೆ. ಇದೆಲ್ಲವೂ ಇಂದಿನ ಜಗತ್ತಿನಲ್ಲಿಯೂ ಕಾಣಬಹುದು. ವಿದ್ಯಮಾನಗಳ ಸೂಕ್ಷ್ಮ ಅವಲೋಕನ ನಡೆಸಬೇಕಷ್ಟೆ. ತನ್ನ ಸಮುದಾಯದ ನಾಯಕರೊಡನೆ ಪ್ರವಾದಿ ಸಾಲಿಹ್(ಅ) ಹೇಳಿದ ಕೊನೆಯ ಮಾತು ಇಲ್ಲಿ ಪ್ರಸ್ತುತವಾಗಿದೆ: ‘‘ನಿಮ್ಮ ಜತೆಯಲ್ಲಿ ನಾನೂ ಸೇರಿಕೊಂಡೆ. ಆದರೆ ಹಿತಾಕಾಂಕ್ಷಿಗಳನ್ನು ಪ್ರೀತಿಸಲು ನಿಮ್ಮಿಂದ ಸಾಧ್ಯವಾಗಲೇ ಇಲ್ಲ’’

***

LEAVE A REPLY

Please enter your comment!
Please enter your name here