ಕೃಷಿ ಮಸೂದೆ ಕರಡು ಪ್ರತಿಗೆ ಒತ್ತಾಯಿಸಿ ವಿಧಾನಸಭೆಯಲ್ಲೇ ಮಲಗಿದ ಪಂಜಾಬ್ ಆಪ್ ಶಾಸಕರು

Prasthutha|

ಚಂಡೀಗಢ : ಹೊಸ ಕೃಷಿ ನೀತಿಯ ಕಾನೂನಿನ ಕರಡನ್ನು ಹಂಚಿಕೊಳ್ಳದ ಕ್ಯಾಪ್ಟನ್ ಅಮರೀಂದರ್ ಸರಕಾರದ ಕ್ರಮವನ್ನು ಪ್ರತಿಭಟಿಸಿ ಪ್ರತಿಪಕ್ಷ ಆಮ್ ಆದ್ಮಿ ಪಕ್ಷದ ಶಾಸಕರು ರಾತ್ರಿ ರಾಜ್ಯ ವಿಧಾನಸಭೆಯಲ್ಲೇ ಮಲಗಿದ ಘಟನೆ ನಡೆದಿದೆ. ವಿಧಾನಸಭಾ ಕಟ್ಟಡದೊಳಗಿನ ಪ್ರದೇಶಗಳಲ್ಲಿ ಶಾಸಕರು ಮಲಗಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತಾಪಿತ ಕಾನೂನಿನ ಕರಡು ಪ್ರತಿಯನ್ನು ಬಹಿರಂಗ ಪಡಿಸುವಂತೆ ಕಾಂಗ್ರೆಸ್ ಸರಕಾರವನ್ನು ಆಪ್ ಶಾಸಕರು ಒತ್ತಾಯಿಸಿದ್ದಾರೆ. ಇಂದು ಈ ಪ್ರಸ್ತಾಪಿತ ಕಾನೂನಿನ ಮಸೂದೆ ವಿಧಾನಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಆಪ್ ಶಾಸಕರು ವಿಧಾನಸಭೆಯಲ್ಲೇ ಕಳೆದು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

- Advertisement -

ಹಲವು ಆಪ್ ಶಾಸಕರು ಸೋಮವಾರ ತಡರಾತ್ರಿ ವರೆಗೂ ಸದನದ ಬಾವಿಯಲ್ಲೇ ಕಳೆದು, ಮಸೂದೆಯ ಕರಡು ಪ್ರತಿ ನೀಡುವಂತೆ ಒತ್ತಾಯಿಸಿದ್ದಾರೆ. ಕೇಂದ್ರದ ಹೊಸ ಕೃಷಿ ಕಾನೂನನ್ನು ಪ್ರತಿರೋಧಿಸಿ, ಅದಕ್ಕೆ ವ್ಯತಿರಿಕ್ತವಾದ ಮಸೂದೆಯನ್ನು ಕಾಂಗ್ರೆಸ್ ಸರಕಾರ ಮಂಡಿಸುವ ನಿರೀಕ್ಷೆಯಿದೆ.

- Advertisement -