ಕುರ್‌ಆನ್: ಮನುಕುಲದ ಮಾರ್ಗದರ್ಶಿ

0
843

-ಮುಝಾಹಿದಾ

ರಮಝಾನ್ ಮತ್ತೊಮ್ಮೆ ಆಗಮಿಸಿದೆ. ಇದು ಒಳಿತಿನ ಕೊಯ್ಲಿನ ಮಾಸವಾಗಿದೆ. ಸಕಲ ಮಾನವರಾಶಿಗೆ ಮಾರ್ಗದರ್ಶನದಂತೆ ಕುರ್‌ಆನ್ ಅವತೀರ್ಣಗೊಂಡ ಪುಣ್ಯ ಮಾಸವಾಗಿದೆ. ಅಲ್ಲಾಹನು ಹೇಳುತ್ತಾನೆ: ‘‘(ದೂತರೇ,) ನನ್ನ (ಅಲ್ಲಾಹನ) ದಾಸರು ನನ್ನ ಕುರಿತು ನಿಮ್ಮನ್ನು ವಿಚಾರಿಸಿದಾಗ (ಅವರಿಗೆ ತಿಳಿಸಿರಿ): ನಾನು ಅವರ ಹತ್ತಿರವೇ ಇದ್ದೇನೆ ಮತ್ತು ಕೂಗುವಾತನು ನನ್ನನ್ನು ಕೂಗಿದಾಗ ನಾನು ಅದಕ್ಕೆ ಉತ್ತರ ನೀಡುತ್ತೇನೆ. ಅವರಿನ್ನು ನನ್ನ ಕರೆಗೆ ಉತ್ತರ ನೀಡಲಿ ಮತ್ತು ನನ್ನಲ್ಲಿ ನಂಬಿಕೆ ಇಡಲಿ – ಅವರು ಸರಿದಾರಿಯನ್ನು ಪಡೆದವರಾಗಬಹುದು’’(2:186)

ಇದು ಸಕಲ ಮಾನವ ಕುಲದ ಗ್ರಂಥವಾಗಿದೆ. ಇದು ಯಾವುದೇ ವ್ಯಕ್ತಿಯ, ಜನಾಂಗದ, ದೇಶದ, ಧರ್ಮದ ಜನರಿಗೆ ಸೀಮಿತವಾದ ಗ್ರಂಥವಾಗಿರದೆ ಮಾನವನೊಂದಿಗೆ ಅಭಿಸಂಭೋದಿಸುತ್ತದೆ. ಈ ಗ್ರಂಥವು ದೇವನನ್ನು ಪರಿಚಯಿಸುವುದು ಕೂಡಾ ಸರ್ವ ‘ಮಾನವ ಜನಾಂಗದ ಪ್ರಭು’ ಎಂದಾಗಿದೆ. ‘‘ಹೇಳಿರಿ ನಾನು ಸಕಲ ಮಾನವರ ಪ್ರಭುವಿನೊಂದಿಗೆ ಅಭಯ ಯಾಚಿಸುತ್ತೇನೆ’’(114:1)

ಕುರ್‌ಆನಿನ ಈ ಮಾಸದಲ್ಲಿ ಕುರ್‌ಆನಿನ ಮಾನವೀಯ ವೌಲ್ಯಗಳು ಮತ್ತು ಘನತೆಯ ಸಂದೇಶಗಳನ್ನು ಅರ್ಥಮಾಡಿಕೊಳ್ಳುವುದು ಅವಶ್ಯವಾಗಿದೆ. ‘‘ಓದಲ್ಪಡುವ’’ ಎಂಬ ನಾಮಾರ್ಥವಿದ್ದರೂ ಅದಕ್ಕಿಂತಲೂ ಮಿಗಿಲಾಗಿ ಇದು ಮಾನವ ಬದುಕಿನ ಕೈಪಿಡಿಯಾಗಿದೆ. ಪರಲೋಕದ ದಾರಿಯ ದೀವಟಿಯಾಗಿದೆ. ಮನುಷ್ಯನಿಗೆ ತನ್ನ ಸಷ್ಟಿಯನ್ನು ನೆನಪು ಮಾಡಿ ಕೊಡುತ್ತಲೇ ಬದುಕಲು ಬೇಕಾದ ಘನತೆಯನ್ನೂ ಖಾತರಿಪಡಿಸುತ್ತದೆ. ಕುರ್‌ಆನ್ ಸಕಲ ಮಾನವರನ್ನೂ ಸಮತ್ವ ಭಾವದಿಂದ ಕಾಣುತ್ತದೆ. ‘‘ಓ ಮನುಷ್ಯರೇ! ನಿಮ್ಮನ್ನು ಒಂದೇ ಶರೀರದಿಂದ ಸಷ್ಟಿಸಿರುವ ಮತ್ತು ಅದರಿಂದಲೇ ಅದರ ಸಂಗಾತಿಯನ್ನು ಸಷ್ಟಿಸಿರುವ ಹಾಗೂ ಅವರಿಬ್ಬರಿಂದಲೂ ಅನೇಕ ಪುರುಷರನ್ನು ಸ್ತ್ರೀಯರನ್ನೂ ಹಬ್ಬಿಸಿರುವ ನಿಮ್ಮ ಪ್ರಭುವನ್ನು ಭಯಪಡಿರಿ’’

‘‘ನಾನು ಜಿನ್ನ್‌ಗಳನ್ನು ಹಾಗೂ ಮಾನವರನ್ನು ನನ್ನ ಆರಾಧನೆಗೆಂದೇ ಸಷ್ಟಿಸಿರುವೆನು. ನಾನು ಅವರಿಂದ ಯಾವುದೇ ಆಹಾರವನ್ನು ಬಯಸುವುದಿಲ್ಲ ಮತ್ತು ಅವರು ನನಗೆ ಉಣಿಸಬೇಕೆಂದೂ ನಾನು ಅಪೇಕ್ಷಿಸುವುದಿಲ್ಲ’’ (51:56, 57)

ನಿಸ್ಸಂದೇಹವಾಗಿ ಈ ವಚನವು ಮಾನವ ಸಷ್ಟಿಯ ಉದ್ದೇಶವನ್ನು ಸಾರುತ್ತದೆ. ಹೌದು ಮಾನವನನ್ನು ಅಲ್ಲಾಹನು ತನಗೆ ಆರಾಧಿಸಲೆಂದು ಸಷ್ಟಿಸಿದನು. ಹಾಗೆಂದು ಮಾನವನು ಆರಾಧಿಸದಿದ್ದರೆ ಅಲ್ಲಾಹನ ದೇವತ್ವದಲ್ಲಿ ಏನೂ ಕಡಿತಗೊಳ್ಳುವುದಿಲ್ಲ. ಆರಾಧನೆಯ ಕಾರಣದಿಂದ ಹೆಚ್ಚಾಗುವುದೂ ಇಲ್ಲ. ಮಾನವನು ಕೇವಲ ಅಲ್ಲಾಹನ ಸಷ್ಟಿಯಷ್ಟೆ. ತನ್ನನ್ನು ಸಷ್ಟಿಸಲು ಮಾನವನು ಅಲ್ಲಾಹನೊಂದಿಗೆ ಬೇಡಿಕೆಯನ್ನೂ ಇಡಲಿಲ್ಲ. ಏನಿದ್ದರೂ ಪರಮೋನ್ನತವಾದ ಯಜಮಾನನು ಅಲ್ಲಾಹು ಮಾತ್ರ. ಸಷ್ಟಿ, ಲಯ, ಜೀವನ, ಮರಣ, ರೋಗ-ಶಮನ ಎಂದೇಕೆ ಸಮಷ್ಠಿ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಚಲನೆಗಳು ಮಹಾನನಾದ ಅಲ್ಲಾಹನ ಅಣತಿಯಂತೆ ನಡೆಯುತ್ತಿರುತ್ತದೆ. ಆದ್ದರಿಂದಲೇ ಜಗದ್‌ನಿಯಂತ್ರಕಣಾದ ಅಲ್ಲಾಹನಿಗೆ ಮನುಷ್ಯ ಕೇವಲ ದಾಸ. ಆದ್ದರಿಂದ ಅವನಿಗೆ ತಲೆಬಾಗದೆ ನಿರ್ವಾಹವಿಲ್ಲ.

ಆದಂ-ಹವ್ವಾ ಸಷ್ಟಿಕರ್ತನ ಸಷ್ಟಿಗಳು ಅವರಿಬ್ಬರಿಂದ ಅವರಂತೆಯೇ ಇರುವ ಸಕಲ ಮಾನವರನ್ನೂ ಸಷ್ಟಿಸಲಾಯಿತು ಎಂದು ಇಲ್ಲಿ ನಮಗೆ ಸ್ಪಷ್ಟವಾಗುತ್ತದೆ. ತಾನು ಸಷ್ಟಿಸಿದ ಮಾನವ ಕುಲವನ್ನು ಯಾವುದೇ ತಾರತಮ್ಯವಿಲ್ಲದೆ ತಾನು ಆದರಿಸಿದ್ದೇನೆ ಮತ್ತು ಗೌರವಿಸಿದ್ದೇನೆ ಎಂದು ಸಷ್ಟಿಕರ್ತನು ಕುರ್‌ಆನಿನಲ್ಲಿ ಸ್ಪಷ್ಟಪಡಿಸುತ್ತಾನೆ. ‘‘ಖಂಡಿತವಾಗಿಯೂ ನಾವು ಆದಮರ ಸಂತತಿಗಳನ್ನು ಗೌರವಿಸಿರುವೆವು. ಅವರನ್ನು ಸಮುದ್ರದಲ್ಲೂ, ನೆಲದಲ್ಲೂ ವಾಹನದಲ್ಲಿ ವಹಿಸಿರುವೆವು. ವಿಶಿಷ್ಟ ವಸ್ತುಗಳಿಂದ ಅವರಿಗೆ ನಾವು ಜೀವನಾಧಾರವನ್ನು ಒದಗಿಸಿರುವೆವು. ನಾವು ಸಷ್ಟಿಸಿರುವವುಗಳ ಪೈಕಿ ಎಲ್ಲವುಗಳಿಗಿಂತಲೂ ಅವರಿಗೆ ನಾವು ವಿಶೇಷವಾದ ಶ್ರೇಷ್ಠತೆಯನ್ನು ದಯಪಾಲಿಸಿರುವೆವು.’’(17:70)

‘‘ಭೂಮಿಯಲ್ಲಿರುವ ಎಲ್ಲವನ್ನೂ ನಿಮಗಾಗಿ ಸಷ್ಟಿಸಿದವನು ಅವನೇ. ತರುವಾಯ ಅವನು ಆಕಾಶದೆಡೆಗೆ ಗಮನ ಹರಿಸಿ, ಆ ಏಳು ಆಕಾಶಗಳನ್ನು ರೂಪಿಸಿದನು. ಅವನು ಎಲ್ಲವನ್ನೂ ಬಲ್ಲವನಾಗಿದ್ದಾನೆ’’(2:29)

 

ಪ್ರಪಂಚದಲ್ಲಿರುವ ಎಲ್ಲವನ್ನೂ ಮಾನವನಿಗಾಗಿ ಸಷ್ಟಿಸಲಾಯಿತೆಂದು ಕುರ್‌ಆನ್; ನಾವು ನೋಡುತ್ತಿರುವ ಎಲ್ಲವನ್ನೂ ನಮಗಾಗಿ ಸಷ್ಟಿಸಿರಬೇಕಾದರೆ ನಮ್ಮ ಘನತೆಯೇನೆಂದು ತಿಳಿಯುತ್ತದೆ. ‘‘ಆದಮರ ಮಕ್ಕಳನ್ನು ನಾವು ಆದರಿಸಿದೆವು’’ ಎಂಬ ವಚನವೂ ಇದನ್ನೇ ಸೂಚಿಸುತ್ತದೆ. ಒಟ್ಟಾರೆ ಮಾನವನನ್ನು ಅಲ್ಲಾಹನು ಸಷ್ಟಿಸಿ ಅವನಿಗೆ ಘನತೆಯನ್ನು ನೀಡಿದನು. ಆ ಘನತೆಯನ್ನು ಅಲ್ಲಾಹನನ್ನು ನಿಷ್ಕಳಂಕವಾಗಿ ಆರಾಧಿಸುವ ವೇಳೆ ಉಳಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ ಮಾನವನು ದೇವನನ್ನು ನಿರಾಕರಿಸಿ ಅವನ ಆಜ್ಞಾದೇಶಗಳನ್ನು ಉಲ್ಲಂಘಿಸುವುದರೊಂದಿಗೆ ಸ್ವಯಂ ಗೌರವ, ಘನತೆಯನ್ನು ಕಳೆದುಕೊಳ್ಳುತ್ತಾನೆ. ಇದನ್ನೇ ಕುಫ್ರ್(ನಿರಾಕರಣೆ) ಅನ್ನಲಾಗುತ್ತದೆ. ‘‘(ದೂತರೇ) ನಾವು ಪ್ರತಿಯೊಂದು ಸಮುದಾಯದ ಕುರಿತು ಸಾಕ್ಷಿಯಾಗಿ ಅವರೊಳಗಿಂದಲೇ ಒಬ್ಬ ವ್ಯಕ್ತಿಯನ್ನು ಎಬ್ಬಿಸುವ ದಿನ, ಅವರೆಲ್ಲರ ಕುರಿತು ಸಾಕ್ಷಿಯಾಗಿ ನಿಮ್ಮನ್ನು ಮುಂದೆ ತರುವೆವು. ಎಲ್ಲ ವಿಷಯಗಳನ್ನೂ ವಿವರಿಸುವ ಗ್ರಂಥವನ್ನು(ಕುರ್‌ಆನ್‌ಅನ್ನು) ನಾವು ನಿಮಗೆ ಇಳಿಸಿಕೊಟ್ಟಿರುವವೆವು – ಇದು ಶರಣಾಗಿರುವವರ ಪಾಲಿಗೆ ಮಾರ್ಗದರ್ಶಿಯೂ ಅನುಗ್ರಹವೂ ಶುಭವಾರ್ತೆಯೂ ಆಗಿದೆ’’(16: 89)

ಮಾನವನ ಮಾರ್ಗದರ್ಶನಕ್ಕಾಗಿ ಸಕಲ ವಿಚಾರಗಳನ್ನು ವಿವರಿಸುವ ಕುರ್‌ಆನನ್ನು ಅಲ್ಲಾಹನು ಅವತೀರ್ಣಗೊಳಿಸಿದನು. ಯಾರು ಅಲ್ಲಾಹನ ಆಜ್ಞಾದೇಶವನ್ನು ಪಾಲಿಸಿ ಜೀವಿಸಲು ಬಯಸುತಾರೋ ಅವರಿಗೆ ಸಮಗ್ರವಾದ ಮಾರ್ಗದರ್ಶನವನ್ನು ಕುರ್‌ಆನ್ ನೀಡುತ್ತದೆ. ಗತಕಾಲದ ಪ್ರವಾದಿಗಳಿಗೆ ಅಮಾನುಷಕತೆ(ಮುಅ್ಜಿಝತ್) ನೀಡಿದಂತೆ ಅಂತ್ಯಪ್ರವಾದಿಗೆ ಅಲ್ಲಾಹನು ನೀಡಿದ ಅತ್ಯಂತ ದೊಡ್ಡ ಮುಅ್ಜಿಝತ್ ಪವಿತ್ರ ಕುರ್‌ಆನ್ ಆಗಿದೆ. ಇಬ್ರಾಹಿಂ(ಅ), ಇಸ್ಮಾಈಲ್ (ಅ), ಮೂಸಾ(ಅ), ಈಸಾ(ಅ)ರವರಿಗೆ ಕೊಟ್ಟ ಮುಅ್ಜಿಝತ್‌ಗಳ ಬಗ್ಗೆ ಕುರ್‌ಆನ್ ನೆನಪಿಸುತ್ತದೆ. ಇವೆಲ್ಲವೂ ಮಾನವನು ವಕ್ರದಾರಿಯನ್ನು ತೊರೆದು ಸರಿದಾರಿಯನ್ನು ಹಿಡಿಯಲು ಮತ್ತು ಬಹುದೇವಾರಾಧನೆಯಿಂದ ಏಕದೇವಾರಾಧನೆಗೆ ಮರಳಲು ಅಲ್ಲಾಹನು ವ್ಯವಸ್ಥಿತಗೊಳಿಸಿದ ದಷ್ಠಾಂತವಾಗಿದೆ. ದಷ್ಠಾಂತಗಳ ಪೈಕಿ ಅತ್ಯಂತ ದೊಡ್ಡ ದಷ್ಠಾಂತ ಪವಿತ್ರ ಕುರ್‌ಆನ್ ಆಗಿದೆ.

ಎಲ್ಲಾ ಅರ್ಥದಲ್ಲೂ ಕುರ್‌ಆನ್ ಮಾನವ ಸಮೂಹಕ್ಕೆ ಅನುಗ್ರಹವೆಂದು ಪವಿತ್ರ ಕುರ್‌ಆನ್ ಹೇಳುತ್ತದೆ: ‘‘ನಾವು ಇಳಿಸಿಕೊಡುವ ಕುರ್‌ಆನ್‌ನ ಭಾಗವು ವಿಶ್ವಾಸಿಗಳ ಪಾಲಿಗೆ ಗುಣ ಹಾಗೂ ಅನುಗ್ರಹವಾಗಿರುತ್ತದೆ. ಆದರೆ ಅಕ್ರಮಿಗಳ ಮಟ್ಟಿಗೆ ಇದು ಅವರ ನಷ್ಟವನ್ನಷ್ಟೇ ಹೆಚ್ಚಿಸುತ್ತದೆ’’(17:82)

‘‘ಕುರ್‌ಆನ್‌ಅನ್ನು ಓದಲಾದಾಗ ಅದನ್ನು ಕೇಳಿರಿ ಮತ್ತು ವೌನವಾಗಿರಿ -ನೀವು ಕರುಣೆಗೆ ಪಾತ್ರರಾಗಬಹುದು’’(7:204)

ಕುರ್‌ಆನ್ ಪಾರಾಯಣದ ವೇಳೆ ಶಾಂತಚಿತ್ತರಾಗಿ ಆಲಿಸಬೇಕೆಂದೂ ಅದರಿಂದ ಅಲ್ಲಾಹನ ಬಳಿಯಿಂದ ಅನುಗ್ರಹಗಳು ವರ್ಷಿಸುತ್ತದೆಯೆಂದೂ ಕುರ್‌ಆನ್ ತಿಳಿಸುತ್ತದೆ. ಆದ್ದರಿಂದ ಕುರ್‌ಆನನ್ನು ಸುಶ್ರಾವ್ಯವಾಗಿ ಓದಬೇಕೆಂಬ ಶಿಸ್ತನ್ನು ಇಸ್ಲಾಮ್ ಕಲಿಸುತ್ತದೆ. ಕೇವಲ ಕುರ್‌ಆನ್ ಪಾರಾಯಣವನ್ನು ಕೇಳಿ ಮನವು ಅರಳಿ ಕಣ್ಣೀರ್‌ಗೈದು ಸತ್ಯವಿಶ್ವಾಸ ದಢಗೊಳಿಸಿದವರೂ ಇದ್ದಾರೆ.

‘‘ಖಂಡಿತವಾಗಿಯೂ ಅಲ್ಲಾಹನ ಹೆಸರೆತ್ತಿದಾಗ ವಿಶ್ವಾಸಿಗಳ ಹದಯಗಳಲ್ಲಿ ಭಕ್ತಿ ಉಕ್ಕುತ್ತದೆ ಹಾಗೂ ಅವರ ಮುಂದೆ ಅವನ ವಚನಗಳನ್ನು ಓದಲಾದಾಗ ಅವರ ವಿಶ್ವಾಸವು ಬಲಿಷ್ಠವಾಗುತ್ತದೆ ಮತ್ತು ಅವರು ತಮ್ಮ ಒಡೆಯನಲ್ಲಿ ಸಂಪೂರ್ಣ ಭರವಸೆ ಇಟ್ಟಿರುತ್ತಾರೆ’’(8: 2)

‘‘ನಾವು ಇಳಿಸಿಕೊಡುವ ಕುರ್‌ಆನ್‌ನ ಭಾಗವು ವಿಶ್ವಾಸಿಗಳ ಪಾಲಿಗೆ ಗುಣ ಹಾಗೂ ಅನುಗ್ರಹವಾಗಿರುತ್ತದೆ. ಆದರೆ ಅಕ್ರಮಿಗಳ ಮಟ್ಟಿಗೆ ಇದು ಅವರ ನಷ್ಟವನ್ನಷ್ಟೇ ಹೆಚ್ಚಿಸುತ್ತದೆ’’(17: 82)

ಸತ್ಯವಿಶ್ವಾಸಿಗಳು ಯಾರೆಂದು ಪರಿಚಯಿಸುವ ವೇಳೆ, ಕುರ್‌ಆನ್ ಸೂಕ್ತಗಳನ್ನು ಕೇಳಿದಾಗ ಅಲ್ಲಾಹನ ಭಯದಿಂದ ಹದಯ ಕಂಪನಗೊಂಡವರೆಂದೂ, ಸತ್ಯವಿಶ್ವಾಸದ ತೇಜಸ್ಸು ದುಪ್ಪಟ್ಟುಗೊಳಿಸಿದವರೆಂದೂ ಕುರ್‌ಆನ್ ಹೇಳುತ್ತದೆ. ಆದ್ದರಿಂದ ಅಂತಹ ಸತ್ಯವಿಶ್ವಾಸಿಗಳಿಗೆ ಕುರ್‌ಆನ್ ಪಾರಾಯಣದ ಸುಶ್ರಾವ್ಯತೆ ಕೇವಲ ಆನಂದಾನುಭೂತಿಯನ್ನು ನೀಡುವುದು ಮಾತ್ರವಾಗಿರದೆ, ಹದಯವನ್ನು ಕಂಪಿಸುವಂತೆಯೂ ಮಾಡುತ್ತದೆ. ಆ ಮೂಲಕ ಅವರು ತಮ್ಮ ಸತ್ಯವಿಶ್ವಾಸಕ್ಕೆ ಹೊಳಪನ್ನು ನೀಡುತ್ತಾರೆ. ಆದರೆ ಇನ್ನು ಕೆಲವು ಮಂದಿ ಕುರ್‌ಆನ್ ಕೇಳಿದೊಡನೆ ಇನ್ನಷ್ಟು ಗೊಂದಲಗೊಂಡು ವಕ್ರದಾರಿಯಲ್ಲಿ ಸಾಗುತ್ತಾರೆ. ಅವರ ಹದಯಗಳು ಇನ್ನಷ್ಟು ಸಂಶಯಗಳಿಗೀಡಾಗುತ್ತದೆ ಮತ್ತು ಸತ್ಯದಾರಿಯಿಂದ ದೂರಗೊಂಡು ದುರ್ಮಾಗದಲ್ಲೇ ಸಾಗಿ ಸತ್ಯನಿಷೇಧಿಗಳಾಗಿ ಸಾಯುತ್ತಾರೆ. ಪ್ರವಾದಿ(ಸ)ಯವರಿಗೆ ಕುರ್‌ಆನ್ ಅವತೀರ್ಣ ಬಳಿಕ ಅದನ್ನು ಕಿವಿಯಾರೆ ಕೇಳಿದ ಕುರೈಷರಿದ್ದರು. ಮದೀನಾದಲ್ಲಿ ಯಹೂದ್ಯರೂ ಕುರ್‌ಆನ್ ಅವತೀರ್ಣಕ್ಕೆ ಸಾಕ್ಷಿಯಾಗಿದ್ದರು. ಆದರೆ ಪ್ರತಿಯೊಂದು ಕುರ್‌ಆನ್ ಅವತೀರ್ಣದ ವೇಳೆಯೂ ಅವರ ಸಂಶಯವು ಇನ್ನಷ್ಟು ವರ್ಧಿಸುತ್ತಿತ್ತು. ಮಾತ್ರವಲ್ಲ ಕೆಲವೊಂದು ಸೂಕ್ತಿಗಳ ವಿಚಾರಗಳನ್ನು ತಮಗಿಷ್ಟ ಬಂದಂತೆ ದುರ್ವಾಖ್ಯಾನಿಸಿ ರಸೂಲರನ್ನು ಅವಮಾನಗೊಳಿಸುವುದರೊಂದಿಗೆ ಅಲ್ಲಾಹನ ಅಸ್ತಿತ್ವವನ್ನೇ ಪ್ರಶ್ನಿಸತೊಡಗಿದರು. ಒಂದು ವೇಳೆ ತಾನು ಹೇಳುತ್ತಿರುವುದು ಸತ್ಯವೇ ಆಗಿದ್ದರೆ ಯಾತಕ್ಕಾಗಿ ಓರ್ವ ದೇವದೂತನೇ ಆಕಾಶದಿಂದ ಇಳಿದು ಬರಲಿಲ್ಲ? ನಿನ್ನ ರಬ್ಬ್ ಅಷ್ಟು ಶಕ್ತನಾಗಿದ್ದರೆ ಇದೀಗಲೇ ಅಲ್ಲಾಹನ ಕಡೆಯಿಂದ ಶಿಕ್ಷೆ ಎರಗಲಿ… ಈ ರೀತಿ ಉದ್ಧಟತನ ಮತ್ತು ಅಹಂಕಾರದ ಮಾತುಗಳನ್ನು ಅವರು ಆಡುತ್ತಿದ್ದರು. ಆದ್ದರಿಂದ ಕುರ್‌ಆನ್ ನಮ್ಮನ್ನು ಈ ರೀತಿ ಎಚ್ಚರಿಸುತ್ತದೆ.

‘‘ಅವರೇನು, ಕುರ್‌ಆನಿನ ಕುರಿತು ಚಿಂತನೆ ನಡೆಸುವುದಿಲ್ಲವೇ? ಅವರ ಮನಸ್ಸುಗಳಿಗೇನು ಬೀಗ ಜಡಿದಿದೆಯೇ’’(47: 24)

ಕುರ್‌ಆನ್ ಪ್ರಶ್ನಿಸುವಂತೆ, ಕುರ್‌ಆನ್ ಪಾರಾಯಣದ ವೇಳೆ ಓದುವ ಸೂಕ್ತಿಯ ಬಗ್ಗೆ ಅರ್ಥವನ್ನು ಮನನ ಮಾಡಿಕೊಂಡು ಚಿಂತನೆಯನ್ನು ನಡೆಸುತ್ತಾ ಇರಬೇಕು. ಕೇವಲ ಪಾರಾಯಣದಿಂದ ನಮ್ಮ ಗ್ರಹಿಕೆಗೆ ಏನೂ ದೊರಕದು. ಈ ರೀತಿಯ ಗ್ರಹಿಕೆಯೊಂದಿಗೆ ಪಾರಾಯಣ ಮಾಡುವ ವೇಳೆ ಕುರ್‌ಆನ್ ನಮ್ಮ ಉಭಯಲೋಕದ ಜೀವನವನ್ನು ಹಸನಾಗಿಸಬಹುದು.

 

ಪ್ರಪಂಚದಲ್ಲಿರುವ ಭೂಮಿ, ಆಕಾಶ, ಸೂರ್ಯ, ಚಂದ್ರ, ನಕ್ಷತ್ರ, ಪರ್ವತ, ಮರಗಳು, ನದಿಗಳು, ಕಲ್ಲು, ಪ್ರಾಣಿ-ಪಕ್ಷಿ ಯಾವುದೇ ಸಷ್ಟಿಗಳನ್ನು ಆರಾಧಿಸಬಾರದು. ಅಲ್ಲಾಹನ ಹೊರತಾದ ಸಷ್ಟಿಗಳಿಗೆ ಆರಾಧಿಸುವುದರೊಂದಿಗೆ ದೇವದತ್ತವಾದ ಘನತೆಯನ್ನು ಮಾನವನು ಕಳೆದುಕೊಳ್ಳುತ್ತಾನೆ. ಮಾನವನನ್ನು ವಿಶ್ವಮಾನವನಂತೆ ಅಭಿಸಂಭೋದಿಸಿದ ಕುರ್‌ಆನ್ ದೇಶ, ಬಣ್ಣ, ಗೋತ್ರಗಳಲ್ಲಿರುವ ವ್ಯತ್ಯಾಸಗಳೆಲ್ಲವೂ ಕೇವಲ ಪರಸ್ಪರ ಗುರುತಿಸುವಂತಾಗಲು ಎಂದು ಸ್ಪಷ್ಟಪಡಿಸುತ್ತದೆ. ‘‘ಓ ಮನುಷ್ಯರೇ ಖಂಡಿತವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸಷ್ಟಿಸಿರುವೆವು. ನೀವು ಪರಸ್ಪರ ಗುರುತಿಸುವಂತಾಗಲೂ ನಾವು ನಿಮ್ಮನ್ನು ವಿವಿಧ ಸಮುದಾಯ ಮತ್ತು ಜನಾಂಗಗಳನ್ನಾಗಿಯೂ ಮಾಡಿರುವೆವು. ಖಂಡಿತವಾಗಿಯೂ ಅಲ್ಲಾಹನ ಬಳಿ ನಿಮ್ಮ ಪೈಕಿ ಅತ್ಯಂತ ಗೌರವಾರ್ಹನು ಹೆಚ್ಚು ಭಯಭಕ್ತಿಯುಳ್ಳವನು’’(49:13)

‘‘ನಾವು ಉಪದೇಶಕ್ಕಾಗಿ ಕುರ್‌ಆನನ್ನು ಸರಳಗೊಳಿಸಿರುವೆವು. ಯಾರಾದರೂ ಇದ್ದಾರೆಯೇ, ಉಪದೇಶ ಸ್ವೀಕರಿಸುವವರು?’’(54:17)

ಪವಿತ್ರ ಕುರ್‌ಆನನ್ನು ಅಲ್ಲಾಹನು ಸರಳಗೊಳಿಸಿದನು. ಇಂದಿಗೂ ಪವಿತ್ರ ಕುರ್‌ಆನನ್ನು ಕಂಠಪಾಠ ಮಾಡಿದ ಕೋಟ್ಯಂತರ ಮಂದಿ ಜಗತ್ತಿನಲ್ಲಿದ್ದಾರೆ ಮತ್ತು ಅಷ್ಟೇ ಪ್ರಮಾಣದಲ್ಲಿ ಸುಲಭದಲ್ಲಿ ಕಂಠಪಾಠ ಮಾಡುತ್ತಿದ್ದಾರೆ. ಕುರ್‌ಆನಿನ ಉಪದೇಶಗಳು ಅತ್ಯಂತ ಸರಳ ಮತ್ತು ಸ್ಪಷ್ಟತೆಯಿಂದ ಕೂಡಿದೆ. ಕಾಲಸೀಮಾತೀತವಾಗಿ ಕುರ್‌ಆನಿನ ಆಜ್ಞಾದೇಶಗಳನ್ನು ಸ್ವೀಕರಿಸಿದ ಮುಸ್ಲಿಮರು ಜಗತ್ತಿನಾದ್ಯಂತ ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ಕುರ್‌ಆನ್ ಅವತೀರ್ಣಗೊಂಡು ಇಂದಿನವರೆಗೆ ಅದು ಯಾರಿಗೂ ಭಾರವಾದದ್ದಿಲ್ಲ. ಅದರ ಆಜ್ಞಾದೇಶಗಳು ಕಷ್ಟವಾದದ್ದೂ ಇಲ್ಲ. ಅದರಿಂದ ಯಾರೂ ತೊಂದರೆಗೊಳಗಾದದ್ದೂ ಇಲ್ಲ. ಇನ್ನಿತರ ಧರ್ಮ ಸಂಸ್ಕೃತಿಗಳು ಆಧುನಿಕ ಕಾಲದಲ್ಲಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿರಬೇಕಾದರೆ ಪವಿತ್ರ ಕುರ್‌ಆನ್ ಕಾಲ, ದೇಶ, ಭಾಷಾತೀತವಾಗಿ ತನ್ನ ಸಾರ್ವಕಾಲಿಕತೆಯನ್ನು ಎತ್ತಿ ಹಿಡಿಯುತ್ತಿದೆ. ಆದ್ದರಿಂದ ಮಾನವನ ವಿಮೋಚನೆ ಕುರ್‌ಆನನ್ನು ಅನುಸರಿಸುವುದು ಕಡ್ಡಾಯವಾಗುತ್ತದೆ. ಹಸಿದವನಿಗೆ ಉಣಿಸದವನು, ಅನಾಥರನ್ನು ಸಂರಕ್ಷಿಸದವನು, ನಿರಾಶ್ರಿತರಿಗೆ ಆಶ್ರಯ ನೀಡದವನು, ಬೇಡುವವರನ್ನು ದೂರತಳ್ಳುವವನು, ಒಳಿತನ್ನು ಆಜ್ಞಾಪಿಸಿ ಕೆಡುಕನ್ನು ತಡೆಯಲು ಪ್ರಯತ್ನಿಸಿದವನು, ಉತ್ತಮ ಸ್ವಭಾವ ಹೊಂದದೆ, ರೋಗಿಗಳ ಪರಿಪಾಲನೆ ಮಾಡದೆ, ಸಮಾಜಕ್ಕೆ ವಿಮುಖವಾಗಿ ಬದುಕುವವನು ಅಲ್ಲಾಹನಲ್ಲೂ, ಪರಲೋಕದಲ್ಲೂ ವಿಶ್ವಾಸ ಇರಿಸದವನು ಎಂದು ಸಾರುವ ಕುರ್‌ಆನ್ ಭೌತಿಕ ಅಗತ್ಯಗಳ ಬಗ್ಗೆ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲ ಸಂತುಲಿತ, ಸಂತಪ್ತ ಜೀವನದ ಅಗತ್ಯವನ್ನು ಎತ್ತಿಹಿಡಿಯುತ್ತದೆ.

ತನ್ನ ಸುತ್ತಮುತ್ತಲಿರುವ ಸಷ್ಟಿಗಳ ಹಕ್ಕುಗಳನ್ನು ಪೂರ್ತಿಗೊಳಿಸದೆ ಜಗದೊಡೆಯನ ಹಕ್ಕುಗಳು ಪೂರ್ಣಗೊಳ್ಳದು ಎಂದು ಸಾರಿದ ಗ್ರಂಥವಾಗಿದೆ ಕುರ್‌ಆನ್. ಕುರ್‌ಆನಿನ ವಸಂತವಾದ ಒಳಿತಿನ ಚೈತ್ರಮಾಸವಾದ ರಮಝಾನ್ ಲೋಕದ ಜನರಿಗೆ ಅದರಲ್ಲೂ ಮರ್ದಿತ, ಶೋಷಿತ, ನಿರಾಶ್ರಿತ, ಭಯಭೀತ, ಅಪಮಾನಿತ ಮತ್ತು ಯುದ್ಧ, ವಂಶಹತ್ಯೆಯಿಂದ ತತ್ತರಿಸಿದ ಸಂತ್ರಸ್ತರಿಗೆ ಶಾಂತಿಯನ್ನು ವರ್ಷಿಸಲಿ ಆಮೀನ್….

***

LEAVE A REPLY

Please enter your comment!
Please enter your name here