ಕುಟುಂಬ ಸಂಬಂಧಗಳ ಪಾವಿತ್ರ್ಯತೆ

0
44

♦ ಕೆ.ವೈ.ಅಬ್ದುಲ್ ಹಮೀದ್, ಕುಕ್ಕಾಜೆ

ವ್ಯಕ್ತಿತ್ವ ವಿಕಸನಕ್ಕೆ ಕುಟುಂಬ ಬಲಿಷ್ಠ ಸಾಮಾಜಿಕ ವ್ಯವಸ್ಥೆಯಾಗಿದೆ. ಅದರಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು.  ಪ್ರತಿಯೊಬ್ಬರನ್ನು ಉತ್ತಮ ಸಾಮಾಜಿಕ ವ್ಯಕ್ತಿಯಾಗಿ ರೂಪಿಸುವಲ್ಲಿ ತಾಯಿ ಸಹಿಸಬೇಕಾದ ನೋವು, ತ್ಯಾಗ, ಸಹನೆಗೆ ಬೆಲೆ ಕಟ್ಟಲಾಗದು. ಅದು ಪ್ರತಿಫಲಾರ್ಹವಾಗಿದೆ.

ಸತ್ಕರ್ಮಗಳನ್ನು ಮಾಡಿದವರು ಪುರುಷರಿರಲಿ ಮಹಿಳೆಯರಿರಲಿ, ಅವರು ವಿಶ್ವಾಸಿಗಳಾಗಿದ್ದರೆ, ಅವರು ಸ್ವರ್ಗ ತೋಟವನ್ನು ಪ್ರವೇಶಿಸುವರು ಮತ್ತು ಅವರ ಮೇಲೆ ಎಳ್ಳಷ್ಟೂ ಅನ್ಯಾಯವಾಗದು (4:124) ಎಂದು ಅಲ್ಲಾಹನು ತಿಳಿಸಿದ್ದಾನೆ.

ಕುಟುಂಬದ ವ್ಯಾಪ್ತಿ ವಿಶಾಲವಾಗಿದೆ. ಎಲ್ಲರನ್ನು ಪ್ರೀತಿಸಿ ಹಿತಾಕಾಂಕ್ಷೆ ಬಯಸಿದರೆ ಶಾಂತಿಯ ಕುಟುಂಬ ನಿರ್ಮಾಣವಾಗುವುದರ ಜತೆಗೆ ಅಲ್ಲಾಹನ ಆದೇಶ ಪಾಲಿಸಿದಂತೆಯೂ ಆಗುತ್ತದೆ.

ಯಾವ ಅಲ್ಲಾಹನ ಹೆಸರಲ್ಲಿ ನೀವು ಹಕ್ಕುಗಳನ್ನು ಕೇಳುತ್ತೀರೋ ಅವನಿಗೆ ಸದಾ ಅಂಜಿರಿ ಮತ್ತು ಬಾಂಧವ್ಯಗಳನ್ನು ಕಾಪಾಡಿರಿ. (4:1) ಎಂದು ಅಲ್ಲಾಹನು ಕುರ್‌ಆನ್‌ನಲ್ಲಿ ತಿಳಿಸಿದ್ದಾನೆ.

ಇಂದು ಹೆಚ್ಚಿನ ಕುಟುಂಬಗಳು ಪರಸ್ಪರ ಶತ್ರುಗಳಂತೆ ವರ್ತಿಸಿ  ಸಂಬಂಧ ಮುರಿದವರಿದ್ದಾರೆ. ಕುಟುಂಬ ಸಂಬಂಧ ಬೆಸೆಯುವಿಕೆ, ಅವರ ಹಕ್ಕುಗಳ  ಪಾಲನೆ, ಒಳ್ಳೆಯ ರೀತಿಯ  ವರ್ತನೆ, ತಮ್ಮ ಸಂಪತ್ತನ್ನು ಅವರಿಗಾಗಿ ಖರ್ಚುಮಾಡುವುದು ದೊಡ್ಡ ಪುಣ್ಯಕಾರ್ಯ. ಇದು ಅಲ್ಲಾಹನು ಮೆಚ್ಚುವ ಕೆಲಸವಾಗಿದೆ. ಕುಟುಂಬದಲ್ಲಿ ಮೊದಲ ಆದ್ಯತೆ ತಂದೆತಾಯಿಗೆ. ನಮ್ಮನ್ನು  ಬೆಳೆಸುವಲ್ಲಿ  ಅವರ ತ್ಯಾಗ ಅಪಾರ. ಅವರೊಡನೆ ಸೌಜನ್ಯದಿಂದ ವರ್ತಿಸಬೇಕೆಂದು ಅಲ್ಲಾಹನ ಆಜ್ಞೆಯಿದೆ:

ತಂದೆತಾಯಿಯ ಜೊತೆ ಸೌಜನ್ಯಶೀಲರಾಗಬೇಕು. ಒಂದು ವೇಳೆ ಅವರಲ್ಲೊಬ್ಬರು ಅಥವಾ ಅವರಿಬ್ಬರೂ ನಿಮ್ಮ ಮುದಿ ವಯಸ್ಸನ್ನು ತಲುಪಿದರೆ, ಅವರೆದುರು ಚಕಾರವೆತ್ತಬೇಡಿ ಮತ್ತು ಅವರನ್ನು ಗದರಿಸಬೇಡಿ. ಅವರ ಜತೆ ಗೌರವದಿಂದ ಮಾತನಾಡಿರಿ (17:23) ಎಂದು ಕುರ್‌ಆನ್ ತಿಳಿಸಿದೆ.

ನಮ್ಮೊಡನೆ ಅಶಿಸ್ತಿನಿಂದ  ವರ್ತಿಸುವವರೊಡನೆಯೂ ನಾವು ಒಳ್ಳೆಯ ರೀತಿಯಲ್ಲಿ ವರ್ತಿಸಬೇಕಾಗುತ್ತದೆ. ನಮ್ಮೊಡನೆ ಕೆಟ್ಟದಾಗಿ ವರ್ತಿಸುವವರೊಡನೆ ಯೂ ಉತ್ತಮ ರೀತಿಯಲ್ಲಿ  ವರ್ತಿಸಿ, ಮುರಿದ ಸಂಬಂಧಗಳನ್ನು ಬೆಸೆಯಬೇಕೆಂದು ಪ್ರವಾದಿ(ಸ) ತಿಳಿಸಿದ್ದಾರೆ.

ಒಬ್ಬರು ಪ್ರವಾದಿ(ಸ)ಬಳಿಗೆ ಬಂದು: ನನಗೆ ಕೆಲವು ಸಂಬಂಧಿಕರಿದ್ದಾರೆ. ನಾನು ಅವರೊಡನೆ ಉತ್ತಮ ಸಂಬಂಧವನ್ನು ಬೆಸೆಯಲು ಪ್ರಯತ್ನಿಸುತ್ತಿದ್ದೇನೆ. ಆದರೆ ಅವರು  ಸಂಬಂಧವನ್ನು ಮುರಿಯುತ್ತಿದ್ದಾರೆ. ನಾನು ಅವರಿಗೆ ಒಳಿತನ್ನು ಮಾಡುತ್ತಿದ್ದೇನೆ. ಆದರೆ ಅವರು ನನ್ನೊಡನೆ ಕೆಟ್ಟದಾಗಿ ವರ್ತಿಸುತ್ತಾರೆ. ನಾನು ಅವರೊಡನೆ ವಿವೇಕದಿಂದ ವರ್ತಿಸುತ್ತೇನೆ. ಆದರೆ ಅವರು ನನ್ನೊಡನೆ ಅವಿವೇಕದಿಂದ ವರ್ತಿಸುತ್ತಿದ್ದಾರೆ. ನಾನೇನು ಮಾಡಬೇಕೆಂದು ಕೇಳುತ್ತಾರೆ. ಅದಕ್ಕೆ ಪ್ರವಾದಿ(ಸ): ವಾಸ್ತವ ನೀನು ಹೇಳಿದಂತೆ  ಆಗಿದ್ದಲ್ಲಿ ಅಲ್ಲಾಹನು ನಿನಗೆ ಸದಾ ನೆರವಾಗುವನೆಂಬ ಭರವಸೆ ನೀಡಿದ್ದರು.

ಕುಟುಂಬ ಸದಸ್ಯರ ಮೇಲಿರುವ ಹಕ್ಕುಗಳು ವಿವಿಧ ರೀತಿಯಲ್ಲಿವೆ. ಅವರೆಲ್ಲರೂ ಪ್ರೀತಿ, ಕರುಣೆ, ಗೌರವ ತೋರಿಸಿ ಸಂಬಂಧವನ್ನು ಬಲಪಡಿಸಬೇಕು. ನಮ್ಮ ಸಾಮಿಪ್ಯ ಅತ್ಯಗತ್ಯವಾಗಿರುವ ಸಂದರ್ಭದಲ್ಲಿ ಅವರ ಜತೆ ನಿಲ್ಲಬೇಕು. ಭೇಟಿ ನೀಡಬೇಕು, ಸಂಕಷ್ಟದ ವೇಳೆ ಅವರಿಗೆ ಆಸರೆಯಾಗಬೇಕು. ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಬೇಕು.  ಸಹಕರಿಸಿ ಜೀವಿಸಬೇಕು.

ಸಂಬಂಧಿಕರ ಕಷ್ಟಗಳಿಗೆ ನೆರವಾಗುವ ಬದಲು ಇತರ ಧಾರ್ಮಿಕ ಕೆಲಸಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕೆಲ ಶ್ರೀಮಂತರಿದ್ದಾರೆ. ನೆರೆಮನೆಯವರು, ಸಂಬಂಧಿಕರು, ಅನಾಥರು ದಾನಧರ್ಮಗಳಿಗೆ ಹೆಚ್ಚು ಅರ್ಹರೆಂದು ಅಲ್ಲಾಹನು ತಿಳಿಸಿದ್ದಾನೆ. ಹೀಗಿದ್ದೂ ಸತ್ಯವಿಶ್ವಾಸಿಗಳು ಇದನ್ನು ನಿರ್ಲಕ್ಷಿಸುವುದು ಸರಿಯಲ್ಲ.

ನೀವು ಬಂಧುಗಳಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ಅವರ ಹಕ್ಕನ್ನು ಸಲ್ಲಿಸಿರಿ ಮತ್ತು ನೀವು ದುಂದು ವೆಚ್ಚ ಮಾಡಬೇಡಿ (17:26) ಎಂದು ಅಲ್ಲಾಹನು ತಿಳಿಸಿದ್ದಾನೆ.  ಅಲ್ಲಾಹನ ಮಾರ್ಗದಲ್ಲಿ ನಡೆಸುವ ಹೋರಾಟಕ್ಕಾಗಿ ವ್ಯಯಿಸುವ ದಿರ್‌ಹಮ್‌ಗಿಂತ ಕುಟುಂಬಕ್ಕಾಗಿ ವ್ಯಯಿಸುವ ದಿರ್‌ಹಮ್ ಹೆಚ್ಚು ಪ್ರತಿಫಲಾರ್ಹವಾದುದೆಂದು ಪ್ರವಾದಿ(ಸ) ತಿಳಿಸಿದ್ದಾರೆ.

ಇತರರಿಗಾಗಿ ವ್ಯಯಿಸುವ ವಸ್ತು ಅತ್ಯಂತ ಉತ್ತಮವಾಗಿರಬೇಕು. ತನಗೆ ಇಷ್ಟವಾಗಿರುವುದನ್ನು ವ್ಯಯಿಸಿದರೆ ಅದಕ್ಕೆ ಹೆಚ್ಚು ಪ್ರತಿಫಲವಿದೆ ಎಂದು ಕುರ್‌ಆನ್ ತಿಳಿಸುತ್ತದೆ: ನೀವು ನಿಮಗೆ ಪ್ರಿಯವಾಗಿರುವುದನ್ನು (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡುವ ತನಕ ನಿಮಗೆ ಶ್ರೇಷ್ಠತೆ ಪ್ರಾಪ್ತವಾಗದು. ನೀವು ಖರ್ಚು ಮಾಡುವ ಪ್ರತಿಯೊಂದು ವಸ್ತುವಿನ ಕುರಿತು ಅಲ್ಲಾಹನು ಅರಿತಿರುತ್ತಾನೆ (3:92) ಎಂದು ಕುರ್‌ಆನ್ ತಿಳಿಸಿದೆ.

ಈ ಸೂಕ್ತ ಅವತೀರ್ಣಗೊಂಡಾಗ ಅಬೂತಲ್ಹಾ(ರ) ತನಗೆ ಅತ್ಯಂತ ಪ್ರಿಯವಾದ ಬೈರುಹಾ ಎಂಬ ತೋಟವನ್ನು ತನ್ನ ಕುಟುಂಬದವರಿಗೆ ದಾನ ಮಾಡಿದ್ದರು. ಪ್ರವಾದಿವರ್ಯರು(ಸ) ಅದೊಂದು ಲಾಭದಾಯಕ ವ್ಯಾಪಾರ ಎಂದು ಹೇಳಿ ಪ್ರೋತ್ಸಾಹಿಸಿದ್ದರು.

ಕುಟುಂಬ ಸಂಬಂಧ ಮುರಿದವರಿಗೆ ಅಲ್ಲಾಹನು ಕಠಿಣ ಶಿಕ್ಷೆಯ ಮುನ್ನೆಚ್ಚರಿಕೆಯನ್ನು ನೀಡಿದ್ದಾನೆ. ಅಲ್ಲಾಹನು ರಕ್ಷಿಸಬೇಕೆಂದು ಆದೇಶಿಸಿರುವ ಬಾಂಧವ್ಯಗಳನ್ನು ಮುರಿಯುವವರು ಶಾಪಕ್ಕೆ ತುತ್ತಾಗುವರು, ಪರಲೋಕದಲ್ಲಿ ನಷ್ಟ ಅನುಭವಿಸುವರೆಂದು  ಕುರ್‌ಆನ್ ತಿಳಿಸಿದೆ.

ಅಲ್ಲಾಹನ ಪ್ರವಾದಿವರ್ಯರೇ(ಸ), ನಾನು ಕಾರ್ಯಗತಗೊಳಿಸಿದಲ್ಲಿ ಆ ಮೂಲಕ ತನ್ನ ಸ್ವರ್ಗ ಪ್ರವೇಶ ಖಾತರಿಯಾಗಿಸುವ ಒಂದು ಕರ್ಮದ ಕುರಿತು ಹೇಳಿಕೊಡುವಿರಾ ಎಂದು ಒಬ್ಬರು ಕೇಳಿದಾಗ ಪ್ರವಾದಿ(ಸ); ಅಲ್ಲಾಹನಲ್ಲಿ ವಿಶ್ವಾಸವಿಟ್ಟು, ನಮಾಝ್ ಸರಿಯಾಗಿ ಅನುಷ್ಠಾನ ಮಾಡಿ, ಝಕಾತ್ ನೀಡಿ ಕುಟುಂಬ ಸಂಬಂಧವನ್ನು ಉಳಿಸಿಕೊಳ್ಳು ಎಂದು ಸಲಹೆ ನೀಡಿದ್ದರು.

ಯಾರಾದರೂ ಅವನ ಸಂಪತ್ತಿನಲ್ಲಿ ಸಮೃದ್ಧಿ ಮತ್ತು ಆಯುಷ್ಯದಲ್ಲಿ ವಿಶಾಲತೆಯನ್ನು ಬಯಸುವುದಾದರೆ ಅವನು ತನ್ನ ಕುಟುಂಬ ಸಂಬಂಧವನ್ನು ಬಲಪಡಿಸಲಿ ಎಂದು ಅಬೂಸಈದುಲ್ ಖುದ್‌ರಿ(ರ)ರಿಂದ ವರದಿಯಾದ ಪ್ರವಾದಿ ವಚನ ತಿಳಿಸುತ್ತದೆ.

ಇಹಲೋಕದಲ್ಲಿ ಓರ್ವ ಸತ್ಯವಿಶ್ವಾಸಿಯ ಸಂಕಷ್ಟವನ್ನು ದೂರ ಮಾಡಿದರೆ ಅವನ ಪರಲೋಕದ ಸಂಕಷ್ಟವನ್ನು ಅಲ್ಲಾಹನು ದೂರ ಮಾಡುವನು. ಕಷ್ಟದಲ್ಲಿರುವ ಓರ್ವನಿಗೆ ನೆರವಾಗುವವನಿಗೆ ಅಲ್ಲಾಹನು ಇಹಪರಗಳಲ್ಲಿ ನೆರವಾಗುವನು. ಓರ್ವ ಮುಸ್ಲಿಮನ ನ್ಯೂನತೆಗಳನ್ನು ಮರೆಮಾಚಿದರೆ ಆತನ ನ್ಯೂನತೆಗಳನ್ನು ಅಲ್ಲಾಹ್ ಇಹಪರಗಳಲ್ಲಿ ಮರೆಮಾಚುವನು ಎಂದು ಪ್ರವಾದಿವರ್ಯರು(ಸ) ತಿಳಿಸಿರುತ್ತಾರೆ.

ಕಾಯಿಲೆ ವಾಸಿ, ಪಾಪ ವಿಮೋಚನೆ, ಸನ್ಮಾರ್ಗದಲ್ಲಿ ದೃಢತೆ ಮತ್ತು ಕುಟುಂಬ ಸಂಬಂಧ ಬಲಪಡಿಸಲು ಪರಸ್ಪರ ಪ್ರಾರ್ಥನೆ ಅತ್ಯಗತ್ಯವಾಗಿದೆ.

ವೈಯಕ್ತಿಕ ಮತ್ತು ಕೌಟುಂಬಿಕ ಸಂಬಂಧಗಳ ಹಳಸಲು ಸಂಶಯ ದೊಡ್ಡ ಕಾರಣವಾಗಿದೆ. ಮನಸ್ಸಿನಲ್ಲಿ ಪರಸ್ಪರ ಅಪನಂಬಿಕೆ, ಹಗೆ, ಅಸೂಯೆ ಮೊದಲಾದ ದುರ್ಗುಣಗಳು ನಾಶವಾಗಲು  ಅಲ್ಲಾಹನಲ್ಲಿ ನಾವು ಪ್ರಾರ್ಥಿಸಬೇಕು. ಸತ್ಯವಿಶ್ವಾಸಿಗಳ ಪ್ರಾರ್ಥನೆ ಕುರ್‌ಆನ್‌ನಲ್ಲಿ ಹೀಗಿದೆ:

ನಮ್ಮೊಡೆಯಾ, ನಮ್ಮನ್ನು ಹಾಗೂ ನಮಗಿಂತ ಮುನ್ನ ಸತ್ಯವಿಶ್ವಾಸಿಗಳಾಗಿದ್ದ ನಮ್ಮ ಸಹೋದರರನ್ನು ಕ್ಷಮಿಸು. ಸತ್ಯವಿಶ್ವಾಸಿಗಳ ಕುರಿತು ನಮ್ಮ ಮನಸ್ಸುಗಳಲ್ಲಿ ಯಾವುದೇ ದುರ್ಭಾವನೆಯನ್ನು ಬೆಳೆಸಬೇಡ. ನಮ್ಮೊಡೆಯಾ ನೀನು ತುಂಬಾ ವಾತ್ಸಲ್ಯಮಯಿ ಹಾಗೂ ಕರುಣಾಳುವಾಗಿರುವೆ. (59:10)

LEAVE A REPLY

Please enter your comment!
Please enter your name here