ಕಾಶ್ಮೀರ : ಹೊಗೆಯುಗುಳುವ ಅಗ್ನಿ ಪರ್ವತ

0
50

ಕಾಶ್ಮೀರದಲ್ಲಿ ಷಾನ್ ದ್ರೆಸ್ (ಆರ್ಥಿಕ ತಜ್ಞ), ಕವಿತಾ ಕೃಷ್ಣನ್ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಮಾರ್ಕಿಸ್ಟ್, ಲೆನಿನಿಸ್ಟ್ ಆ್ಯಂಡ್ ಎ.ಐ.ಪಿ.ಡಬ್ಲೂ.ಎ) ಮೈಮೂನಾ ಮುಲ್ಲಾ (ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ ಅಸೋಸಿಯೇಷನ್, ಎಐಪಿಡಬ್ಲೂಎ), ವಿಮಲ್ ಭಾ (ನ್ಯಾಷನಲ್ ಅಲೈನ್ಸ್ ಆಫ್ ಪೀಪುಲ್ಸ್ ಮೂವ್‌ಮೆಂಟ್ಸ್), ಮತ್ತಿತರರನ್ನು ಒಳಗೊಂಡ ನಿಯೋಗವು 5 ದಿವಸಗಳ ಸಂದರ್ಶನದ ನಂತರ ತಯಾರಿಸಿದ ವರದಿ.

 

ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ನಾವು ಕಳೆದ ಐದು ದಿವಸಗಳಲ್ಲಿ (ಆಗಸ್ಟ್ 9-13, 2019)ಬಹಳಷ್ಟು ಪ್ರವಾಸ ನಡೆಸಿದೆವು. ನಮ್ಮ ಪ್ರವಾಸ ಆರಂಭವಾಗಿರುವುದು ಕಳೆದ ಆಗಸ್ಟ್ 9ರಂದಾಗಿತ್ತು. ಅಂದರೆ, ಇಂಡಿಯಾ ಸರಕಾರ ವಿಧಿ 370 ಮತ್ತು 35ಎ ಮೊದಲಾದವುಗಳನ್ನು  ರದ್ದುಗೊಳಿಸಿ ಜಮ್ಮುಕಾಶ್ಮೀರ ಸರಕಾರವನ್ನು ವಿಸರ್ಜಿಸಿ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದ ನಾಲ್ಕು ದಿವಸಗಳ ಬಳಿಕ.

ಆಗಸ್ಟ್ 9ರಂದು ನಾವು ಶ್ರೀನಗರ ತಲುಪಿದಾಗ ಕರ್ಫ್ಯೂ ಕಾರಣ ನಗರ ಸಂಪೂರ್ಣ ನಿರ್ಜನವಾಗಿತ್ತು. ಅದೇ ವೇಳೆ ಸೇನೆ ಮತ್ತು ಅರ್ಧ ಸೈನಿಕರಿಂದ ನಗರ ತುಂಬಿತ್ತು.

ಆಗಸ್ಟ್ 5ರಿಂದಲೇ ಕರ್ಫ್ಯೂ ಮುಂದುವರಿದಿದ್ದರಿಂದ ಸೇನೆಯ ನಿಯೋಜನೆ ಪೂರ್ಣಗೊಂಡಿತ್ತು. ಶ್ರೀನಗರದ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವು. ಅಂಗಡಿ ಮುಂಗಟ್ಟು, ಸಂಸ್ಥೆಗಳೆಲ್ಲಾ ಮುಚ್ಚಿದ್ದವು (ಶಾಲೆ, ಲೈಬ್ರರಿ, ಪೆಟ್ರೊಲ್ ಬಂಕ್, ಬ್ಯಾಂಕ್, ಸರಕಾರಿ ಸಂಸ್ಥೆಗಳು). ಕೆಲವೇ ಕೆಲವು ಎ.ಟಿ.ಎಂ, ಮೆಡಿಕಲ್ ಶಾಪ್, ಪೊಲೀಸ್ ಸ್ಟೇಶನ್‌ಗಳು ಮಾತ್ರ ತೆರೆದಿದ್ದವು. ಅಪರೂಪಕ್ಕೆ ಒಂದಿಬ್ಬರು ರಸ್ತೆಯಲ್ಲಿ ನಡೆದಾಡುವುದನ್ನು ಕಂಡರೂ ಅವರೂ ಗುಂಪಾಗಿ ನಡೆಯುತ್ತಿರಲಿಲ್ಲ.

ಶ್ರೀನಗರದೊಳಗೆ ಮತ್ತು ಹೊರಗೆ ನಾವು ಹಲವಾರು ಕಡೆ ಸಂಚರಿಸಿದೆವು. ಭಾರತದ ಪ್ರಮುಖ ಮಾಧ್ಯಮಗಳು ಕಾರ್ಯಾಚರಿಸುವ ಶ್ರೀನಗರದ ಕೇಂದ್ರ ಪ್ರದೇಶದಿಂದ ಹೊರಗೂ ನಾವು ಸುತ್ತಾಡಿದೆವು. ಅದೇ ವೇಳೆ  ಈ ಸಣ್ಣ ಪ್ರದೇಶದಲ್ಲಿದ್ದುಕೊಂಡು ಭಾರತದ ಮಾಧ್ಯಮಗಳು ಕಾಶ್ಮೀರ ಜನಜೀವನ ಶಾಂತವಾಗಿದೆ ಎಂದು ವರದಿ ಮಾಡಿತು.  ವಾಸ್ತವದಲ್ಲಿ ಇದಕ್ಕಿಂತ ಹೆಚ್ಚಿನದ್ದೇನೂ ಅವರಿಗೆ ಸಾಧ್ಯವಿಲ್ಲ. ಐದು ದಿವಸಗಳ ಕಾಲ ಶ್ರೀನಗರ ಮತ್ತು ಅದರ ಹೊರಗಿರುವ ಸಣ್ಣ ಗ್ರಾಮಗಳಲ್ಲಿರುವ  ನೂರಾರು ಸಾಮಾನ್ಯ ಜನರನ್ನು ಕಂಡು ನಾವು ಮಾತನಾಡಿಸಿದೆವು. ಅಲ್ಲಿನ ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಂಗಡಿ ಮಾಲಕರು, ಪತ್ರಕರ್ತರು, ಸಣ್ಣ ವ್ಯಾಪಾರಿಗಳು, ಕೂಲಿ ಕೆಲಸಗಾರರು ಹೀಗೆ ಹಲವು ಮಂದಿಯನ್ನು ನಾವು ಸಂದರ್ಶಿಸಿದೆವು.  ಯು.ಪಿ, ಪಶ್ಚಿಮ ಬಂಗಾಲ ಮೊದಲಾದ ಪ್ರದೇಶಗಳಿಂದ ಆಗಮಿಸಿದ ವಲಸಿಗರೊಡನೆಯೂ ನಾವು ಸಂವಾದ ನಡೆಸಿದೆವು. ಅದೇ ರೀತಿ ಕಾಶ್ಮೀರಿ ಪಂಡಿತರು, ಕಣಿಯಲ್ಲಿ ವಾಸಿಸುವ ಸಿಖ್ಖರು, ಕಾಶ್ಮೀರಿ ಮುಸ್ಲಿಮರೊಡನೆಯೂ ನಾವು ಮಾತನಾಡಿದೆವು.

ಈಗಿನ ಪರಿಸ್ಥಿತಿಯಲ್ಲಿ ಕೋಪಗೊಂಡವರು, ನಮ್ಮ ಉದ್ದೇಶದ ಕುರಿತಂತೆ ಸಂಶಯಪಟ್ಟವರು ಸೇರಿದಂತೆ ಎಲ್ಲರೂ ನಮ್ಮನ್ನು ಆತ್ಮೀಯತೆಯಿಂದ ಬರಮಾಡಿಕೊಂಡಿದ್ದರು. ಜನರು ಸರಕಾರದ ವಿರುದ್ಧ ನೋವು ವ್ಯಕ್ತಪಡಿಸುವಾಗಲೂ,  ವಿಶ್ವಾಸ ವಂಚನೆಯ ಕುರಿತಂತೆ ಮಾತನಾಡುವಾಗಲೂ ನಮಗೆ ಅವರು ಹೃದಯ ಸ್ಪರ್ಶಿಯಾದ ಆತಿಥ್ಯವನ್ನು ನೀಡಿದ್ದರು. ಈ ವಿಚಾರದಲ್ಲಿ ನಾವು ಅವರಿಗೆ ಚಿರಋಣಿಯಾಗಿದ್ದೇವೆ.

ಕಾಶ್ಮೀರ ವಿಚಾರದಲ್ಲಿ ನಮ್ಮೊಂದಿಗೆ ಮಾತನಾಡಿದ ಬಿ.ಜೆ.ಪಿ ವಕ್ತಾರನನ್ನು ಹೊರತುಪಡಿಸಿದರೆ ಉಳಿದ ಯಾರೂ 370ನೇ ವಿಧಿ ರದ್ದುಪಡಿಸಿದ ಬಗ್ಗೆ ಸಹಮತ ವ್ಯಕ್ತಪಡಿಸಲಿಲ್ಲ. ವಿಧಿ 370ನ್ನು ರದ್ದು ಪಡಿಸಿದ ವಿಚಾರ ಮತ್ತು ಅದನ್ನು ರದ್ದುಪಡಿಸಿದ ರೀತಿಯಲ್ಲಿ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲೆಡೆ ಕೋಪ ಮತ್ತು ಭಯವನ್ನು ನಮಗೆ ಕಾಣಲು ಸಾಧ್ಯವಾಯಿತು. ಈ ಕೋಪ ಮತ್ತು ಪ್ರತಿಭಟನೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಕರ್ಫ್ಯೂ ಮೊದಲಾದವುಗಳ ವ್ಯವಸ್ಥೆಗಳನ್ನು ಮಾಡಿದೆ. ಸಾರ್ವಜನಿಕ ಜನಜೀವನವನ್ನು ತಡೆದ ಸರಕಾರದ ಕರ್ಫ್ಯೂ ಕಾಶ್ಮೀರದ ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬುಡಮೇಲುಗೊಳಿಸಿದೆ. ಅನೌಪಚಾರಿಕವಾದ ಮಾತುಕತೆಯಲ್ಲಿ ಕೋಪ ಪ್ರದರ್ಶಿಸಿದರೂ ಕ್ಯಾಮರದ ಮುಂದೆ ಯಾರು ಅದನ್ನು ಪ್ರದರ್ಶಿಸಲು ಮುಂದಾಗಲಿಲ್ಲ. ಸತ್ಯ ಹೇಳಿದರೆ ಸರಕಾರ, ಪೊಲೀಸ್ ಅಥವಾ ಸೇನೆಯಿಂದ ಕಿರುಕುಳಕ್ಕೆ ಒಳಗಾಗುವೆವೆಂಬ ಭಯ ಎಲ್ಲರಲ್ಲಿತ್ತು. ಕಾಶ್ಮೀರದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂಬ ದೇಶದ ಮಾಧ್ಯಮಗಳ ವರದಿ ಸಂಪೂರ್ಣ ಸುಳ್ಳು ಮತ್ತು ತಪ್ಪು ಗ್ರಹಿಕೆಗೆ ಕಾರಣವಾದ ವಿಚಾರವಾಗಿದೆ. ಈ ವರದಿಗಳೆಲ್ಲಾ ಶ್ರೀನಗರದ ಆಯ್ದ ಸಣ್ಣ ಒಂದು ಪ್ರದೇಶವನ್ನು ಆದರಿಸಿ ಮಾಡಿದವುಗಳಾಗಿವೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ತಲುಪಿಲ್ಲ. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ ಒಂದು ಸಣ್ಣ ಶಾಂತಿಯುತ ಪ್ರತಿಭಟನೆಗೂ ಅಲ್ಲಿ ಈಗ ಅವಕಾಶವಿಲ್ಲ. ಶೀಘ್ರದಲ್ಲೆ ಅಲ್ಲಿ ದೊಡ್ಡಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. (ಈದ್‌ನ ಬಳಿಕ, ಆಗಸ್ಟ್ 15ರ ಬಳಿಕ ಅಥವಾ ಅದರ ಬಳಿಕ ಅಥವಾ ನಿಯಂತ್ರಣಕ್ಕೆ ಸಡಿಲ ಉಂಟಾದ ತಕ್ಷಣ) ಆದರೆ, ಪ್ರತಿಭಟನೆ ಶಾಂತಿಯುತವಾಗಿದ್ದರೂ ಸರಕಾರ ಬಲವಂತವಾಗಿ ಅದನ್ನು ದಮನಿಸಬಹುದೆಂಬ ಭೀತಿ ಎಲ್ಲರಲ್ಲಿದೆ.

 ಸರಕಾರದ ಕ್ರಮದ ಕುರಿತಾದ ಪ್ರತಿಕ್ರಿಯೆಗಳು

 1. ನಮ್ಮ ವಿಮಾನ ಕಾಶ್ಮೀರದಲ್ಲಿ ಇಳಿದಾಗ ಪ್ರಯಾಣಿಕರು ತಮ್ಮ ಮೊಬೈಲ್ ಆನ್ ಮಾಡಬಹುದೆಂದು ಏರ್‌ಲೈನ್ಸ್ ಸಿಬ್ಬಂದಿ ಘೋಷಿಸಿದರು. ತಕ್ಷಣ ವಿಮಾನದಲ್ಲಿದ್ದ ಎಲ್ಲರೂ (ಅದರಲ್ಲಿ ಹೆಚ್ಚಿನವರು ಕಾಶ್ಮೀರಿಗಳು) ಕುಹಕದ ನಗೆಯನ್ನು ಬೀರಿದರು. ಆಗಸ್ಟ್ 5ರಿಂದ ಮೊಬೈಲ್, ಇಂಟರ್‌ನೆಟ್, ಲ್ಯಾಂಡ್ ಪೋನುಗಳ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಕೆಲವರಂತು ಇದು ಎಂತಹ ತಮಾಷೆಯ ಮಾತು ಎಂದು ಹೇಳಿಯೂ ಬಿಟ್ಟರು.
 2. ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸರಕಾರದ ತೀರ್ಮಾನದ ಕುರಿತಂತೆ ಜನರಿಂದ ನಾವು ಪುನಃ ಪುನಃ ಕೇಳಿದ ಮಾತು ಝುಲ್ಮ್ (ದಮನ), ಝ್ಯದ್‌ತಿ (ಕ್ರೌರ್ಯ), ದೋಖಾ (ವಿಶ್ವಾಸ ವಂಚನೆ) ಎಂದಾಗಿತ್ತು. ಶ್ರೀನಗರದ ಹೊರವಲಯದ ಗ್ರಾಮಸ್ಥನೊಬ್ಬ ಈ ತೀರ್ಮಾನದ ಕುರಿತಂತೆ ಹೇಳಿದ ಮಾತು ಹೀಗಿದೆ: ನಾವು ಬಂಧಿಗಳಾಗಿರುವಾಗ ನಮ್ಮ ಜೀವನ ಮತ್ತು ಭವಿಷ್ಯದ ಕುರಿತಂತೆ ಸರಕಾರ ತೀರ್ಮಾನ ಕೈಗೊಳ್ಳುತ್ತಿದೆ. ನಮ್ಮನ್ನು ಅವರು ಗುಲಾಮರೆಂದು ಪರಿಗಣಿಸಿದ್ದಾರೆ. ನಮ್ಮ ತಲೆಯ ಮೇಲೆ ಬಂದೂಕನ್ನಿಟ್ಟು ಬಂಧಿಸಿ ಕಟ್ಟಿಹಾಕಿ ಬಲವಂತವಾಗಿ ತಿನ್ನಿಸುವಂತಹ ಪರಿಸ್ಥಿತಿ ಇದು.
 3. ಶ್ರೀನಗರಕ್ಕೆ ಕಾಲಿರಿಸಿದಾಗ ಕೆಲ ಪುಟ್ಟ ಮಕ್ಕಳು ಪಾರ್ಕ್‌ನಲ್ಲಿ ಆಟವಾಡುತ್ತಿರುವುದನ್ನು ನಾವು ಕಂಡೆವು. ಇಬ್ಲೀಸ್ ಮೋದಿ ಎಂದು ಜೋರಾಗಿ ಹೇಳುವುದನ್ನು ನಾವು ಕೇಳಿದೆವು. ಇಬ್ಲೀಸ್ ಎಂದರೆ ಸೈತಾನ ಎಂದಾಗಿದೆ ಅರ್ಥ.
 4. ಶ್ರೀನಗರದಲ್ಲಿ ನಾವು ಸಂದರ್ಶಿಸಿದ ಪ್ರತಿಯೊಂದು ಬೀದಿ, ನಗರ, ಸಣ್ಣ ಗ್ರಾಮಗಳಲ್ಲಿದ್ದ ಸಾಮಾನ್ಯ ಜನರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಕೂಡ ನಮಗೆ ಕಾಶ್ಮೀರದ ಸಮಸ್ಯೆಯ ಇತಿಹಾಸವನ್ನು ಕಲಿಸಿದರು. ಇಂಡಿಯಾದ ಮಾಧ್ಯಮಗಳು ಈ ಇತಿಹಾಸದಲ್ಲಿ ಸುಳ್ಳನ್ನು ಸೇರಿಸುವುದರ ಕುರಿತಂತೆ ಅವರು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು. ವಿಧಿ 370 ಎಂಬುದು ಕಾಶ್ಮೀರ ನಾಯಕರು ಮತ್ತು ಇಂಡಿಯಾ ಸರಕಾರದ ಕರಾರಾಗಿದೆ. ಆ ಕರಾರು ಇಲ್ಲದಿದ್ದಲ್ಲಿ ಕಾಶ್ಮೀರ ಎಂದಿಗೂ ಇಂಡಿಯಾದೊಂದಿಗೆ ಸೇರುತ್ತಿರಲಿಲ್ಲ. ಅದು ರದ್ದು ಪಡಿಸುವುದರೊಂದಿಗೆ ಕಾಶ್ಮೀರದೊಂದಿಗೆ ಇಂಡಿಯಾಗೆ ಯಾವುದೇ ಹಕ್ಕೂ ಇಲ್ಲ ಎಂದು ಹಲವರು ಹೇಳಿದರು. ಲಾಲ್ ಚೌಕ್‌ನ ಬಳಿ ಒಬ್ಬ ವಿಧಿ 370 ರ ಕುರಿತಂತೆ ಹೀಗೆ ಹೇಳಿದ: ವಿಧಿ 370 ಎಂಬುದು ಇಂಡಿಯಾ ಮತ್ತು ಕಾಶ್ಮೀರದ ಮಧ್ಯದ ಪವಿತ್ರ ಮಂಗಳ ಸೂತ್ರವಾಗಿತ್ತು.
 5. ಕಾಶ್ಮೀರದಲ್ಲಿ ಇಂಡಿಯಾದ ಮಾಧ್ಯಮಗಳ ಕುರಿತಂತೆ ವ್ಯಾಪಕ ಆಕ್ರೋಶ ಪ್ರಕಟವಾಗಿದೆ. ಜನರು ಗೃಹಬಂಧನದಲ್ಲಿದ್ದಾರೆ. ಅವರ ಧ್ವನಿಯನ್ನು ಹೊರಗೆ ತಿಳಿಸಲು ಯಾವುದೇ ಮಾರ್ಗವಿಲ್ಲ. ಇಂಟರ್‌ನೆಟ್, ಮೊಬೈಲ್ ವ್ಯವಸ್ಥೆಗಳಿಲ್ಲ. ಆದರೆ ಕಾಶ್ಮೀರಿಗಳು ಇಂಡಿಯಾದ ತೀರ್ಮಾನವನ್ನು ಎರಡು ಕೈಗಳಿಂದ ಸ್ವೀಕರಿಸಿದರು ಎಂಬ ವಾರ್ತೆಗಳನ್ನು ಇಂಡಿಯಾದ ಮಾಧ್ಯಮಗಳು ಪ್ರಚಾರ ಮಾಡುತ್ತಿರುವುದನ್ನು ಅವರು ಕಾಣುತ್ತಿದ್ದಾರೆ. ತಮ್ಮ ಧ್ವನಿಯನ್ನು ಮೂಲೆಗುಂಪಾಗಿಸಿದ ಬಗ್ಗೆ ಯುವಕನೊಬ್ಬ ಹೀಗೆ ಹೇಳುತ್ತಾನೆ:

ಕಿಸೀ ಕೀ ಶಾದಿ ಹೇ. ಔರ್ ಕೋನ್, ನಾಚ್ ರಹಾ ಹೇ? (ಯಾರದ್ದೋ ಮದುವೆ, ಅದಾರೋ ನೃತ್ಯ ಮಾಡುತ್ತಿದ್ದಾರೆ) ಇದು ನಮ್ಮ ಯಶಸ್ಸಿಗಾಗಿ ಆಗಿದ್ದಲ್ಲಿ ಅಭಿವೃದ್ಧಿ, ಪ್ರಗತಿಯ ಬಗ್ಗೆ ನಮ್ಮಲ್ಲಿ ಅಭಿಪ್ರಾಯ ಕೇಳಬೇಕಿತ್ತು ತಾನೆ?

 ವಿಧಿ 370 ರದ್ದುಗೊಳಿಸಿರುವುದರ ಬಗ್ಗೆ ಜನರ ಪ್ರತಿಕ್ರಿಯೆಗಳು:

 1. ನಾವು ಮತ್ತು ಇಂಡಿಯಾದ ಸಂಬಂಧ ವಿಧಿ 370 ಮತ್ತು 35 ಎ. ಆಗಿದೆ. ಅದು ರದ್ದುಗೊಳಿಸಿದೊಡನೆ ನಮ್ಮ ಮತ್ತು ಅವರ ಸಂಬಂಧ ಮುಗಿದವು. ಇದರೊಂದಿಗೆ ನಾವು ಸ್ವತಂತ್ರರಾಗಿದ್ದೇವೆ. ನಮಗೆ ಸ್ವಾತಂತ್ರ ಬೇಕು. ಇದು ಗೋರಿ ಜಿಲ್ಲೆಯ ಒಬ್ಬರ ಪ್ರತಿಕ್ರಿಯೆಯಾಗಿತ್ತು. 370 ವಿಧಿ ರದ್ದುಗೊಳಿಸಿರುವುದರ ವಿರುದ್ಧ ಆತ ಘೋಷಣೆ ಕೂಗತೊಡಗಿದ.
 2. ವಿಧಿ 370 ಕಾಶ್ಮೀರದ ಅಸ್ಮಿತೆ ಎಂದು ಹಲವರು ಹೇಳಿದರು. ಅದನ್ನು ರದ್ದುಗೊಳಿಸಿರುವುದರಿಂದ ನಮ್ಮ ಘನತೆ, ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಇದು ಕಾಶ್ಮೀರದ ಮೇಲಿನ ದಾಳಿ ಎಂದು ಅವರು ಹೇಳಿದರು.
 3. ಅದೇ ವೇಳೆ ವಿಧಿ 370 ಪುನಃ ಸ್ಥಾಪಿಸಬೇಕೆಂದು ಯಾರೂ ಕೂಡ ಹೇಳಲಿಲ್ಲ. ಇದನ್ನು ನಂಬಲು ಹೇಳಿರುವುದು ಮತ್ತು ನಂಬುವಂತೆ ಮಾಡಿರುವುದು ಪಾರ್ಲಿಮೆಂಟ್ ಪ್ರತಿನಿಧಿಗಳು ಮಾತ್ರ. ಇಂಡಿಯಾದ ರಾಜಕೀಯ ಪಕ್ಷಗಳಿಗೆ ಇದರಿಂದ ನಿರಾಶೆಯಾಗಿದೆ. ಕಾಶ್ಮೀರದ ಸ್ವಾತಂತ್ರವನ್ನು ಬಯಸುವವರಿಗೆ ಇದರಿಂದ ನಿರಾಶೆಯಿಲ್ಲ. ಮುಖ್ಯವಾಹಿನಿಯಲ್ಲಿರುವ ಪಕ್ಷಗಳ ಹಲವಾರು ಪ್ರತಿನಿಧಿಗಳಿಗೆ ಈಗಿನ ಪರಿಸ್ಥಿತಿಯಲ್ಲಿ ಸಂತೋಷವಿದೆ. ಈ ಪ್ರತಿನಿಧಿಗಳು ಭಾರತಕ್ಕಾಗಿ ಮಾತ್ರ ಇರುವವರೆಂದು ಅವರು ಹೇಳಿದರು.
 4. ಮೋದಿ ಇಂಡಿಯಾದ ನಿಯಮಗಳನ್ನು ಮತ್ತು ಸಂವಿಧಾನವನ್ನು ನಾಶಗೊಳಿಸದರೆಂದು ಮತ್ತೆ ಕೆಲವರ ಅಭಿಪ್ರಾಯವಾಗಿತ್ತು. ಇವರ ಅನಿಸಿಕೆಯಂತೆ ವಿಧಿ 370 ಕಾಶ್ಮೀರಕ್ಕೆ ಮಾತ್ರವಲ್ಲ, ಇಡೀ ಭಾರತಕ್ಕೆ ಸಂಬಂಧಿಸಿದ ವಿಷಯವಾಗಿದೆ. ಇದನ್ನು ರದ್ದುಪಡಿಸಿದವರ ಗುರಿ ಕೇವಲ ಕಾಶ್ಮೀರವನ್ನು ಮಾತ್ರವಲ್ಲ್ಲ, ಇಡೀ ಇಂಡಿಯಾವನ್ನೇ ನಾಶಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆ.
 5. ಶ್ರೀನಗರ ಜಹಾಂಗೀರ್ ಚೌಕ್‌ನ ವ್ಯಾಪಾರಿ; ಕಾಂಗ್ರೆಸ್ ನಮ್ಮ ಬೆನ್ನ ಹಿಂದೆ ಇರಿಯಿತು, ಬಿಜೆಪಿ ಮುಂದಿನಿಂದ ಇರಿಯಿತು. ಅವರು ತಮ್ಮ ಸಂವಿಧಾನದ ಕತ್ತನ್ನೇ ಹಿಸುಕಿದರು. ಇದು ಹಿಂದೂ ರಾಷ್ಟ್ರಕ್ಕಿರುವ ಮೊದಲ ಮೆಟ್ಟಿಲು ಎಂದು ಅವರು ಹೇಳಿದರು.
 6. ವಿಧಿ 370 ಮತ್ತು 35ಎ. ಯ ಬಗ್ಗೆ ಜನರು ಮತ್ತೊಂದು ರೀತಿಯ ಆತಂಕದಲ್ಲಿದ್ದಾರೆ. ಏಕೆಂದರೆ,  ವಿಧಿ 370 ಸ್ವಯಮಾಡಳಿತ ಹಕ್ಕುಗಳ ಬಗ್ಗೆಯಾಗಿದೆ. ಅದನ್ನು ಇದಕ್ಕೆ ಮೊದಲೇ ದುರ್ಬಲಗೊಳಿಸಲಾಗಿತ್ತು. ಆದರೆ 35ಎ ರದ್ದು ಮಾಡುವುದರೊಂದಿಗೆ ಕಾಶ್ಮೀರದ ಭೂಮಿ ಅಂಬಾನಿ, ಪತಂಜಲಿ ಮೊದಲಾದವರ ವ್ಯಾಪಾರದ ಸರಕಾಗಲಿದೆ  ಮತ್ತು ಕಾಶ್ಮೀರದ ಸಂಪತ್ತು ದುರ್ಬಳಕೆಯಾಗಬಹುದೆಂದು ಅವರು ಭಯಪಡುತ್ತಾರೆ. ಇಂದಿನ ಪರಿಸ್ಥಿತಿ ಪ್ರಕಾರ ಶಿಕ್ಷಣ ಮಟ್ಟ ಮತ್ತು ಉದ್ಯೋಗಾವಕಾಶಗಳು ಭಾರತಕ್ಕಿಂತ ಕಾಶ್ಮೀರದಲ್ಲಿ ಹೆಚ್ಚಿದೆ. ಒಂದು ತಲೆಮಾರುಗಳ ಬಳಿಕ ಕಾಶ್ಮೀರಿ ಜನತೆ ಕೆಲಸಕ್ಕಾಗಿ ರಾಜ್ಯ ತೊರೆಯಬೇಕಾದೀತೆಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

 ಸಾಮಾನ್ಯ ಸ್ಥಿತಿಯೇ ಅಥವಾ ಸ್ಮಶಾನ ಮೌನವೇ

 1. ಸೊಪೂರ್‌ನ ಓರ್ವ ಯುವಕ ಹೇಳಿದ ಮಾತು: ಯಹ್ ಬಂದೂಕಿ ಖಾಮೋಷಿ (ಇದು ಬಂದೂಕಿನ ಮೊನೆಯ ಮೌನ), ಖಬರ್‌ಸ್ಥಾನ್‌ಕಿ ಖಾಮೋಷಿ (ಸ್ಮಶಾನ ಮೌನ).
 2. ಗ್ರೇಟರ್ ಕಾಶ್ಮೀರ್ ದಿನಪತ್ರಿಕೆಗೆ ಒಂದು ಸುದ್ದಿಯ ಪುಟ ಮತ್ತು ಮತ್ತೊಂದು ಕ್ರೀಡೆಯ ಪುಟ ಮಾತ್ರವಿದೆ. ಒಳಗಿನ ಎರಡು ಪುಟಗಳಲ್ಲಿ ಮದುವೆ ಮುಂತಾದ ಶುಭಕಾರ್ಯ ರದ್ದುಗೊಂಡ ಸುದ್ದಿಗಳಿಂದ ತುಂಬಿತ್ತು.
 3. ಆಗಸ್ಟ್ 5ರಿಂದ 9ರ ವರೆಗೆ ಜನರು ಆಹಾರ ಪದಾರ್ಥ, ಹಾಲು ಮೊದಲಾದ ಅಗತ್ಯ ವಸ್ತುಗಳ ಅಭಾವವನ್ನು ಎದುರಿಸಿದರು. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವುದನ್ನೂ ತಡೆಹಿಡಿಯಲಾಗಿತ್ತು.
 4. ಕರ್ಫ್ಯೂ ಹೇರಿಲ್ಲ, ಸೆಕ್ಷನ್ 144 ಮಾತ್ರ ಹೇರಲಾಗಿದೆ ಎಂಬುದು ಸರಕಾರದ ವಾದ. ಆದರೆ ವಾಸ್ತವದಲ್ಲಿ ಪೊಲೀಸ್ ವಾಹನ ಶ್ರೀನಗರದಲ್ಲಿ ಸುತ್ತಾಡುತ್ತಾ ಕರ್ಫ್ಯೂ ವೇಳೆ ಮನೆಯಿಂದ ಹೊರಬರಬಾರದು, ಅಂಗಡಿಗಳನ್ನು ಮುಚ್ಚಿರಿ ಮೊದಲಾದ ಘೋಷಣೆಗಳನ್ನು ಕೂಗುತ್ತಿತ್ತು. ಜನರಿಗೆ ಪ್ರಯಾಣಿಸಲು ಅಗತ್ಯವಾದ ಕರ್ಫ್ಯೂ ಪಾಸ್ ಪ್ರದರ್ಶಿಸಬೇಕೆಂದು ಪೊಲೀಸರು ಮನವಿ ಮಾಡುತ್ತಿದ್ದರು.

LEAVE A REPLY

Please enter your comment!
Please enter your name here