October 20, 2020

ಅ.26ರಂದು ದೆಹಲಿಯಲ್ಲಿ ಎಸ್ ಡಿಪಿಐ ನೇತೃತ್ವದಲ್ಲಿ ‘ಕಿಸಾನ್ ಪ್ರತಿನಿಧಿ ಸಮಾಗಮ’

►► ”ಕಾರ್ಪೊರೇಟ್ ಶಕ್ತಿಗಳು, ಭೂಮಾಲಕರ ಲಾಭಕ್ಕಾಗಿ ಕೃಷಿ ಕಾನೂನು ತಿದ್ದುಪಡಿ’

►► ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ಇಲಿಯಾಸ್ ಮುಹಮ್ಮದ್ ತುಂಬೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪದೋನ್ನತಿ

ನವದೆಹಲಿ : ಅ.26ರಂದು ಎಸ್ ಡಿಪಿಐ ವತಿಯಿಂದ ದೆಹಲಿಯಲ್ಲಿ ‘ಕಿಸಾನ್ ಪ್ರತಿನಿಧಿ ಸಮಾಗಮ’ ಕಾರ್ಯಕ್ರಮ ನಡೆಯಲಿದ್ದು, ವಿವಿಧ ರೈತ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದ್ದಾರೆ. ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಅವರು, ಪಕ್ಷದ ವತಿಯಿಂದ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಆನ್ ಲೈನ್ ಸಭೆಯ ಕುರಿತು ಮಾಹಿತಿ ನೀಡಿದ್ದಾರೆ. ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ಇಲಿಯಾಸ್ ಮುಹಮ್ಮದ್ ತುಂಬೆ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕೇಂದ್ರ ಸರಕಾರದ ಕೃಷಿ ಕಾನೂನು ಹಾಗೂ ಪಕ್ಷದ ರಾಷ್ಟ್ರೀಯ ನಾಯಕತ್ವವನ್ನು ಬಲಪಡಿಸುವಿಕೆ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು ಎಂದು ಅವರು ತಿಳಿಸಿದ್ದಾರೆ.  

ಕೇಂದ್ರ ಸರಕಾರವು ಕೃಷಿ ಕಾನೂನನ್ನು ಅತ್ಯಂತ ಅಪ್ರಜಾಸತ್ತಾತ್ಮಕ ವಿಧಾನದ ಮೂಲಕ ತಿದ್ದುಪಡಿಗೆ ಮುಂದಾಗಿದೆ. ಕಾರ್ಪೊರೇಟ್ ಶಕ್ತಿಗಳು ಮತ್ತು ಧನಾಡ್ಯ ಭೂ ಮಾಲಕರಿಗೆ ಲಾಭ ಮಾಡುವ ಉದ್ದೇಶಕ್ಕಾಗಿ, ರೈತರ ಹಿತಾಸಕ್ತಿಗಳನ್ನು ಈ ಕಾನೂನಿನ ಮೂಲಕ ಬಲಿ ಕೊಡಲಾಗಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದವರು ಅಭಿಪ್ರಾಯ ಪಟ್ಟರು.

ಆ ಪ್ರಯುಕ್ತ ಈಗಾಗಲೇ ಪಕ್ಷವು ರಾಷ್ಟ್ರೀಯ ಅಭಿಯಾನ ‘ಜಾಗೋ ಕಿಸಾನ್’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದೇಶಾದ್ಯಂತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅಭಿಯಾನದ ಮುಂದಿನ ಹಂತವಾಗಿ ಅ.26ರಂದು ದೆಹಲಿಯಲ್ಲಿ ‘ಕಿಸಾನ್ ಪ್ರತಿನಿಧಿ ಸಮಾಗಮ’ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ದೇಶದ ವಿವಿಧ ಭಾಗಗಳ ರೈತ ಪ್ರತಿನಿಧಿಗಳು ಭಾಗವಹಿಸಿ ಕೃಷಿ ಕಾನೂನು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಎಸ್ ಡಿಪಿಐಗೆ ದೇಶಾದ್ಯಂತ ಭಾರೀ ಉತ್ತಮ ಸ್ಪಂದನೆ ದೊರೆಯುತ್ತಿದೆ. ಪಕ್ಷದ ವಿಸ್ತರಣೆ ಮತ್ತು ಸಂಘಟನಾ ಕೆಲಸವನ್ನು ಹೆಚ್ಚಿನ ಕಡೆಗಳಿಗೆ ವಿಸ್ತರಿಸುವ ಅಗತ್ಯವಿದೆ. ಆ ಪ್ರಯುಕ್ತ ರಾಷ್ಟ್ರಮಟ್ಟದಲ್ಲಿ ಪಕ್ಷದ ನಾಯಕತ್ವವನ್ನು ಮತ್ತು ಸಂಪನ್ಮೂಲವನ್ನು ಹೆಚ್ಚಿಸಬೇಕಾಗಿದೆ. ಹೀಗಾಗಿ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ಇಲಿಯಾಸ್ ಮುಹಮ್ಮದ್ ತುಂಬೆ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಪದೋನ್ನತಿ ನೀಡಲಾಗಿದೆ. ರಿಯಾಝ್ ಫರಂಗಿಪೇಟೆ ಮತ್ತು ಮುಹಮ್ಮದ್ ಫಾರೂಕ್ ಚೆನ್ನೈ ಅವರನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ನಾಮಕರಣ ಸದಸ್ಯರನ್ನಾಗಿ ಸೇರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಭೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ದಹ್ಲಾನ್ ಬಾಖವಿ ಮತ್ತು ಪ್ರೊಫೆಸರ್ ನಾಝ್ನಿ ಬೇಗಂ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಮೈಸೂರು ಮತ್ತು ಮುಹಮ್ಮದ್ ಶಫಿ, ರಾಷ್ಟ್ರೀಯ ಕಾರ್ಯದರ್ಶಿಗಳಾದ ಸೀತಾರಾಮ್ ಕೊಹಿವಾಲ್, ಅಲ್ಫೋನ್ಸ್ ಫ್ರಾಂಕೊ, ಯಾಸ್ಮೀನ್ ಫಾರೂಖಿ, ಡಾಕ್ಟರ್ ಮಹಬೂಬ್ ಶರೀಫ್ ಅವಾದ್ ಮತ್ತು ಇತರ ಸದಸ್ಯರು ಪಾಲ್ಗೊಂಡಿದ್ದರು.

 

ಟಾಪ್ ಸುದ್ದಿಗಳು

ವಿಶೇಷ ವರದಿ