ಕಾಂಗ್ರೆಸ್, ರಾಹುಲ್ ವಿರುದ್ಧ  ‘ಸಮಸ್ತ’ ವಾಗ್ದಾಳಿ

0
26

ಕೇಂದ್ರ ಸರಕಾರವು ಅಲ್ಪಸಂಖ್ಯಾತ ವಿರೋಧಿ ನಿಲುವುಗಳನ್ನು ತಳೆಯುತ್ತಿರುವ ವೇಳೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಮೌನವಹಿಸಿದ್ದಾರೆ. ಇದು ಕಾಂಗ್ರೆಸ್ಸಿಗೆ ಮತ ಚಲಾಯಿಸಿದ ಅಲ್ಪಸಂಖ್ಯಾತರಿಗೆ ಮಾಡಿದ ವಂಚನೆ ಎಂದು ‘ಸಮಸ್ತ’ ನಾಯಕರು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನ್ಯೂಸ್18 ಮಲಯಾಳಂ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು, ಮುಸ್ಲಿಮ್ ಲೀಗ್ ಸಂಸದರು ಜನರು ವಹಿಸಿಕೊಟ್ಟ ಹೊಣೆಗಾರಿಕೆಯನ್ನು ನೆರವೇರಿಸಲಿಲ್ಲ ಹಾಗೂ ಅಮಿತ್‌ಷಾರನ್ನು ಭಯಪಟ್ಟು ಹಿಂಜರಿಯುತ್ತಿದ್ದಾರೆಂದು ಟೀಕಿಸಿದ್ದಾರೆ.

ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತಾರೆಂದು ನಂಬಿ ರಾಹುಲ್ ಗಾಂಧಿಗೂ, ಕಾಂಗ್ರೆಸ್ಸಿಗೂ ಮುಸ್ಲಿಮರು ಮತ ಚಲಾಯಿಸಿದ್ದಾರೆ. ಲೋಕಸಭೆಯಲ್ಲಿ ಅಲ್ಪಸಂಖ್ಯಾತ ವಿರೋಧಿ ಮಸೂದೆಗಳನ್ನು ತರುವಾಗ ಕಾಂಗ್ರೆಸ್, ಅಲ್ಪಸಂಖ್ಯಾತರ ನೆರವಿಗೆ ಬಂದು ಅವರಿಗೆ ಧೈರ್ಯವನ್ನು ತುಂಬುವ ಕೆಲಸ ಮಾಡಬೇಕಾಗಿತ್ತು. ಆದರೆ ಈ ವಿಚಾರದಲ್ಲಿ ಅವರು ಹಿಂಜರಿದದ್ದು ವಾಸ್ತವ. ಮಾತ್ರವಲ್ಲ, ಇದು ತನ್ನ ಮತದಾರರಿಗೆ ಮಾಡಿದ ಅನ್ಯಾಯವೂ ಆಗಿದೆ. ಈ ವಿಚಾರವನ್ನು ಮುಸ್ಲಿಮರು ಅರಿತುಕೊಂಡಿದ್ದಾರೆ ಹಾಗೂ ಇದನ್ನು ಕಾಂಗ್ರೆಸ್ ತಿಳಿದೂ ತಿಳಿಯದಂತೆ ವರ್ತಿಸಬಾರದು ಎಂದು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಮುಶಾವರ  ಸದಸ್ಯರಾದ ಉಮರ್ ಫೈಝಿ ಹೇಳಿದರು.

ಕರ್ನಾಟಕ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ‘ಸಮಸ್ತ’ ನೇತಾರರು, ರಾಜ್ಯದ ಕೆಲವು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಧಿಕಾರಕ್ಕೇರುವಂತೆ ಮಾಡಿದರು. ಇಂತಹ ಕಾಂಗ್ರೆಸ್ಸನ್ನು ಹೇಗೆ ತಾನೆ ನಂಬಬಹುದು ಎಂಬುದು ಮತ ನೀಡಿದ ಜನರ ಆತಂಕವಾಗಿದೆ. ರಾಷ್ಟ್ರದ ಜಾತ್ಯತೀತತೆಗೆ ಕಾವಲು ನಿಲ್ಲಬೇಕಾದ ರಾಹುಲ್ ಗಾಂಧಿ ಎಲ್ಲಿದ್ದಾರೆ? ಚೌಕಿದಾರ್ ಚೋರ್ ಹೈ ಎಂದ ವಿರೋಧ  ಪಕ್ಷಗಳು ಈಗ ಎಲ್ಲಿವೆೆ? ಅವರು ರಾಷ್ಟ್ರದ ಜಾತ್ಯತೀತತೆ ಮತ್ತು ಪ್ರಜಾತಂತ್ರವನ್ನು ಕಾಯುವವರಲ್ಲವೆ? ಆ ಕಾವಲು ಪಡೆಯ ಹೊಣೆಗಾರಿಕೆಯನ್ನು ಅವರು ನಿರ್ವಹಿಸಿದ್ದಾರೆಯೇ? ಒಂದು ವೇಳೆ ಆ ರೀತಿ ವರ್ತಿಸಿದ್ದರೆ ತ್ರಿವಳಿ ತಲಾಕ್‌ನಂತಹ ಮಸೂದೆಗಳು ಅಂಗೀಕಾರಗೊಳ್ಳುತ್ತಿರಲಿಲ್ಲ.

ನಿರ್ಣಾಯಕ ದಿವಸಗಳಲ್ಲಿ ಮುಸ್ಲಿಮ್ ಲೀಗ್ ಸಂಸದರು ಲೋಕ ಸಭೆಗೆ ಹಾಜರಾಗಲೇ ಇಲ್ಲ. ಅಮಿತ್ ಷಾರ ಬೆದರಿಕೆಗೆ ಕಾಂಗ್ರೆಸ್-ಲೀಗ್ ನೇತಾರರು ಭಯಪಟ್ಟಿದ್ದಾರೆ ಎಂಬ ಸಂಶಯವಿದೆ. ಅಮಿತ್ ಷಾ ಬೆದರಿಕೆಯಿಂದ ಲೀಗ್ ನೇತಾರರು ಅಂದು ಲೋಕಸಭೆಗೆ ತಲುಪಲಿಲ್ಲ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ನಮಗೂ ಅದೇ ಸಂಶಯವಿದೆ.  ಬಸ್ ಸಿಗಲಿಲ್ಲ, ವಿಳಂಬವಾಯಿತು ಅನ್ನೋದು ನಾಗರಿಕ ಸಮಾಜದೊಂದಿಗೆ ಹೇಳುವ ಸರಿಯಾದ ಉತ್ತರವಲ್ಲ.

ಪಾರ್ಲಿಮೆಂಟ್‌ನಲ್ಲಿ ಅಲ್ಪಸಂಖ್ಯಾತರೊಂದಿಗೆ ನಿಂತ ಎಡಪಕ್ಷಗಳ ಮತ್ತು ಇತರ ಸಂಸದರನ್ನು ಸಮಸ್ತ ನೇತಾರರು ಅಭಿನಂದಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮತ್ತು ಎಲ್‌ಡಿಎಫ್‌ಗೆ ‘ಸಮಸ್ತ’ ಬೆಂಬಲವನ್ನು ನೀಡಿತ್ತು. ಚುನಾವಣೆ ವೇಳೆ ಅಲ್ಪಸಂಖ್ಯಾತರ ಸಂರಕ್ಷಣೆಯ ಹೆಸರಿನಲ್ಲಿ ಅವರ ಮತವನ್ನು ಕಾಂಗ್ರೆಸ್ ಪಡೆದಿತ್ತು. ಅಲ್ಪಸಂಖ್ಯಾತರ ರಕ್ಷಣೆಗಾಗಿ ಪಾರ್ಲಿಮೆಂಟಿನ ಒಳಗೂ ಹೊರಗೂ ನಾವು ಹೋರಾಡುತ್ತೇವೆಂದು ಕಾಂಗ್ರೆಸ್ ಭರವಸೆಯನ್ನು ನೀಡಿತ್ತು. ಅಲ್ಪಸಂಖ್ಯಾತರ ವಿರುದ್ಧ ಸಂಘಪರಿವಾರ ಒಡ್ಡುವ ಬೆದರಿಕೆಯನ್ನು ತಡೆಯಲು ರಾಹುಲ್ ಗಾಂಧಿಯ ನಾಯಕತ್ವದಲ್ಲಿರುವ ಕಾಂಗ್ರೆಸ್‌ಗೆ ಮಾತ್ರವೇ ಸಾಧ್ಯ. ಆದ್ದರಿಂದ ಮುಸ್ಲಿಮರು ಕಾಂಗ್ರೆಸ್ಸನ್ನು ಬೆಂಬಲಿಸಬೇಕೆಂದು ಪ್ರಚಾರ ನಡೆಸಿ ಕಾಂಗ್ರೆಸ್ ಮತಯಾಚನೆ ನಡೆಸಿತ್ತು. ಈ ಕಾರಣದಿಂದ ಮುಖ್ಯವಾಗಿ ಲೀಗ್-ಕಾಂಗ್ರೆಸ್ ಮೈತ್ರಿ ಯುಡಿಎಫ್‌ಗೆ ಗಣನೀಯ ಪ್ರಮಾಣದಲ್ಲಿ ಮತಗಳನ್ನು ಪಡೆಯಲು ಸಾಧ್ಯವಾಗಿತ್ತೆಂದು ‘ಸಮಸ್ತ’ ಹೇಳುತ್ತಿದೆ. ಆದರೆ ಮತಗಳನ್ನು ಪಡೆದು ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದ ನಂತರ ಯಾವುದೇ ರೀತಿಯ ಉತ್ತರದಾಯಿತ್ವವನ್ನು ತೋರಲಿಲ್ಲ ಮತ್ತು ಕಾಂಗ್ರೆಸ್ಸನ್ನು ಅದರಲ್ಲೂ ರಾಹುಲ್‌ಗಾಂಧಿಯ ಹೆಸರೆತ್ತಿ ‘ಸಮಸ್ತ’ ನೇತಾರರು ಟೀಕಿಸಿದ್ದಾರೆ. ವಯನಾಡಿನಲ್ಲಿ ರಾಹುಲ್ ಗಾಂಧಿ ಬೃಹತ್ ಚುನಾವಣಾ ಪ್ರಚಾರದಲ್ಲಿ ಸಮಸ್ತ ಮತ್ತು ಪೋಷಕ ಸಂಘಟನೆ ಮತ್ತು ವಿದ್ಯಾರ್ಥಿ ಸಂಘಟನೆಗಳು ಪಾಲ್ಗೊಂಡಿದ್ದವು. ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಿರಂತರ ಪ್ರಮಾದಗಳನ್ನು ಎಸಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಮಾತ್ರವಲ್ಲ ಇತ್ತೀಚೆಗೆ ಲೋಕಸಭೆಯಲ್ಲಿ ಪಾಸು ಮಾಡಿದ ಎನ್‌ಐಎ ತಿದ್ದುಪಡಿ ಮಸೂದೆ, ಯುಎಪಿಎ ತಿದ್ದುಪಡಿ ಮಸೂದೆ, ತ್ರಿವಳಿ ತಲಾಖ್ ಮಸೂದೆ ಮತ್ತು ಕೊನೆಯದಾಗಿ ಕಾಶ್ಮೀರದ ಕುರಿತಾದ ವಿಚಾರದಲ್ಲಿ ಕಾಂಗ್ರೆಸ್ ಸೂಕ್ತ ರೀತಿಯಲ್ಲಿ ವಿರೋಧಿಸುವ ವಿಚಾರದಲ್ಲಿ ಸೋತುಹೋಗಿದ್ದಾರೆಂದೂ ‘ಸಮಸ್ತ’ ನೇತಾರರು ಆರೋಪಿಸಿದ್ದಾರೆ.

‘ಸಮಸ್ತ’ದ ಈ ಹಿಂದಿನ ನಿಲುವುಗಳಿಗೆ ವಿರುದ್ಧವಾಗಿ ಈ ರೀತಿಯ ಹೊಸ ಕ್ರಿಯಾತ್ಮಕ ನಿಲುವುಗಳು ಸ್ವಾಗತಾರ್ಹವೆಂದೂ, ‘ಸಮಸ್ತ’ದ ಹೆಚ್ಚಿನ ನೇತಾರರೇ ಲೀಗಿನ ನೇತಾರರಾಗಿರುವ ಕಾರಣ ಅಲ್ಲಿಂದಲೇ ಟೀಕಾವಿಮರ್ಶೆಗಳು ಬರುತ್ತಿರುವುದು ಆಶಾದಾಯಕ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.

LEAVE A REPLY

Please enter your comment!
Please enter your name here