ಕರಾಳ ಕಾನೂನು ಇನ್ನಷ್ಟು ಕರಾಳ!

0
163

ಕರಾಳ ಯುಎಪಿಎ ಕಾನೂನು ಮತ್ತೇ ಚರ್ಚೆಯ ಮುನ್ನೆಲೆಗೆ ಬಂದಿದೆ. ಗೃಹ ಸಚಿವ ಜಿ.ಕಿಶನ್ ರೆಡ್ಡಿಯವರು ಕಾನೂನುಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ಮಸೂದೆ-2019ನ್ನು ಸಂಸತ್ತಿನಲ್ಲಿ ಮಂಡಿಸಿದ ನಂತರ ಇದರ ಕುರಿತ ಚರ್ಚೆ ಪ್ರಾರಂಭವಾಗಿದೆ. ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಭುತ್ವಕ್ಕೆ ಸುಲಭ ಅವಕಾಶ ಕಲ್ಪಿಸುವಂತಹ ಈ ಕಾನೂನು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಸಾಧಿಸಿರುವ ಬಿಜೆಪಿ ಸರಕಾರವು ಭಯೋತ್ಪಾದನೆಯ ಕುರಿತಂತೆ ಮತ್ತಷ್ಟು ಗಂಭೀರವಾಗಿದೆ. ಮೊದಲಿನಿಂದಲೂ ದುರುಪಯೋಗಕ್ಕೊಳಗಾಗಿ ಬಹಳಷ್ಟು ವಿವಾದಾತ್ಮಕವಾಗಿದ್ದ ಪೋಟಾ ಕಾನೂನಿನ ಸ್ಥಾನದಲ್ಲಿ ಕಾಂಗ್ರೆಸ್ ಸರಕಾರವು 2004ರಲ್ಲಿ ಹೊಸದಾಗಿ ಕಾನೂನುಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ (ಯುಎಪಿಎ)ಯನ್ನು ಪ್ರಸ್ತುತಪಡಿಸಿತ್ತು. ಇದೀಗ ಮಂಡಿಸಿರುವ ಈ ತಿದ್ದುಪಡಿ ಮಸೂದೆಯು ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಹೆಸರಿಸಲು ಸರಕಾರಕ್ಕೆ ಅಧಿಕಾರ ನೀಡಲು ಪ್ರಯತ್ನಿಸುತ್ತದೆ.

ಪ್ರಸಕ್ತ ದೇಶದಲ್ಲಿ ನಡೆಯುತ್ತಿರುವ ಸನ್ನಿವೇಶಗಳನ್ನು ಗಮನಿಸಿದರೆ, ಯುಎಪಿಎಯಂತಹ ಕರಾಳ ಕಾನೂನನ್ನು ಸರಕಾರದ ವಿರುದ್ಧದ ಅಸಹಮತಿಯ ಧ್ವನಿಗಳನ್ನು ನಿಗ್ರಹಿಸಲು ದುರುಪಯೋಗಪಡಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಕಳೆದ ವರ್ಷ ದಿಲ್ಲಿ ಮತ್ತು ಮುಂಬೈಯಲ್ಲಿ ನಗರ ನಕ್ಸಲ್‌ನ ಹೆಸರಿನಲ್ಲಿ ಖ್ಯಾತ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಕವಿಗಳು, ಶಿಕ್ಷಕರು ಮತ್ತು ನ್ಯಾಯವಾದಿಗಳನ್ನು ಈ ಕಾಯ್ದೆಯಡಿ ಬಂಧಿಸಿದ್ದು ಮತ್ತು ಸಾಮಾಜಿಕ ಸಂಘಟನೆಗಳನ್ನು ಗುರಿಪಡಿಸಿದ್ದು ತಾಜಾ ಉದಾಹರಣೆ. ಬಡವರ ವಿರುದ್ಧವಾಗಿರುವ ಆರ್ಥಿಕ ನೀತಿಗಳು, ಮುಸ್ಲಿಮರನ್ನು ಭೀತಿಗೊಳಪಡಿಸುವ ಬರ್ಬರ ಗುಂಪು ಹತ್ಯೆಗಳು, ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯಗಳು ಹಾಗೂ ಬಲವಂತದ ಒಕ್ಕಲೆಬ್ಬಿಸುವಿಕೆ ಮುಂತಾದ ಜ್ವಲಂತ ಸಮಸ್ಯೆಗಳನ್ನು ಟೀಕಿಸುವ ಮತ್ತು ಅದರ ವಿರುದ್ಧ ಜಾಗೃತಿ ಮೂಡಿಸುವ ವಿಚಾರಗೋಷ್ಠಿ, ಸಮಾವೇಶಗಳು ಮತ್ತು ಪ್ರತಿಭಟನಾ ಪ್ರದರ್ಶನಗಳನ್ನು ಹಮ್ಮಿಕೊಂಡ ಕಾರಣಕ್ಕಾಗಿ ಇಂತಹ ಒಂದು ಕ್ರಮ ಜರಗಿಸಲಾಗಿತ್ತು ಎಂಬುದು ಗಮನಾರ್ಹ.

ಇದೀಗ ಹೊಸ ತಿದ್ದುಪಡಿಯ ನಂತರ ಭಯೋತ್ಪಾದನೆ, ಮಾವೋವಾದದಂತಹ ಆರೋಪದಲ್ಲಿ ಈ ರೀತಿಯ ಬಂಧನಗಳಿಗೆ ಆರೋಪಿ ಎನ್ನಲಾದವರನ್ನು ಯಾವುದೇ ನಿಷೇಧಿತ ಸಂಘಟನೆಗಳೊಂದಿಗೆ ಸಂಬಂಧ ಕಲ್ಪಿಸಲು ತನಿಖಾ ಏಜೆನ್ಸಿಗೆ ಯಾವುದೇ ಪತ್ರ ಅಥವಾ ಇತರ ಸಂಪರ್ಕದ ಅಗತ್ಯವಿರುವುದಿಲ್ಲ. ಇದಕ್ಕಿಂತಲೂ ಮಿಗಿಲಾಗಿ ಆ ಮಂದಿಯನ್ನು ಬಂಧಿಸಲು ಕಾನೂನು ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಹೊರಿಸುವ ಅಧಿಕಾರ ತನಿಖಾ ಏಜೆನ್ಸಿಗಳಿಗೆ ದೊರಕಬಹುದು. ಇಂತಹ ಸಂಗತಿಗಳು ಈ ಹಿಂದೆಯೂ ನಡೆದಿದ್ದರೂ, ಇದೀಗ ಈ ಕಾರ್ಯಾಚರಣೆ ಕಾನೂನುಬದ್ಧವಾಗಲಿದೆ.

ವಾಸ್ತವದಲ್ಲಿ ಗೋವು, ಜೈ ಶ್ರೀರಾಮ್, ಭಾರತ ಮಾತೆಯ ಹೆಸರಿನಲ್ಲಿ ಸಂಘಪರಿವಾರ ಪ್ರೇರಿತ ಮತಾಂಧ ಗುಂಪುಗಳು ಹಿಂಸಾತ್ಮಕ ಕೃತ್ಯಗಳನ್ನು ನಡೆಸುತ್ತಿವೆ. ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಗುಂಪುಹತ್ಯೆಗಳು ಭಯೋತ್ಪಾದನಾ ಕೃತ್ಯಗಳಿಗಿಂತಲೂ ಭೀಕರ ಸ್ವರೂಪವನ್ನು ಪಡೆಯುತ್ತಿವೆ. ಆದರೆ ಇವೆಲ್ಲದಕ್ಕೂ ಸರಕಾರ ಜಾಣಮೌನ ವಹಿಸುತ್ತಿದೆ. ಮಾತ್ರವಲ್ಲ, ಆಡಳಿತ ವಿರೋಧಿ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಪ್ರಭುತ್ವವು ಆಡಳಿತ ಯತ್ರಾಂಗದ ಮೂಲಕ ನಿಗ್ರಹಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಇಂಥಹ ಹೊತ್ತಿನಲ್ಲಿ ಕೇಂದ್ರ ಸರಕಾರವು ಯುಎಪಿಎ ತಿದ್ದುಪಡಿ ಮಾಡಿ ವ್ಯಕ್ತಿಗಳನ್ನು ಭಯೋತ್ಪಾದನೆಯ ಸೀಮೆಯೊಳಗೆ ತರುವ ಯೋಜನೆಯ ಗೂಡಾರ್ಥವನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವೇನಲ್ಲ.

ಮೋದಿ ಸರಕಾರವು ಭಯೋತ್ಪಾದನೆಯ ಮೂಲೋತ್ಪಾಟನೆಯ ಕುರಿತಂತೆ ಗಂಭೀರವಾದಂತೆ ವರ್ತಿಸುತ್ತಿದೆ. ಆದರೆ ಪ್ರಜ್ಞಾಸಿಂಗ್ ಠಾಕೂರ್‌ಳ ಮೇಲೆ ಭಯೋತ್ಪಾದನೆಯ ಕುರಿತು ಗಂಭೀರ ಆರೋಪಗಳಿವೆ. ಆದರೂ ಬಿಜೆಪಿ ಆಕೆಯನ್ನು ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿ ಗೌರವಿಸಿದೆ. ಭಯೋತ್ಪಾದನೆಯ ಗಂಭೀರ ಆರೋಪ ಹೊತ್ತ ಪ್ರಜ್ಞಾಸಿಂಗ್‌ಳನ್ನು ನೀತಿ ನಿರೂಪಕರ ಸ್ಥಾನದಲ್ಲಿ ಕುಳ್ಳಿರಿಸಿ ಭಯೋತ್ಪಾದನೆ ನಿರ್ಮೂಲನೆಯ ಕಾನೂನು ರಚಿಸಲಾಗುತ್ತಿರುವುದು ಬಿಜೆಪಿ ಸರಕಾರದ ಈ ಹೊತ್ತಿನ ಕ್ರೂರ ವ್ಯಂಗ್ಯವಾಗಿದೆ.

ಸುಳ್ಳು ಪ್ರಕರಣಗಳಲ್ಲಿ ಸಿಲುಕಿದ ಅಮಾಯಕ ಯುವಕರನ್ನು ಹಲವು ವರ್ಷಗಳ ಕಾಲ ಜೈಲುಕಂಬಿಗಳ ಹಿಂದೆ ದೂಡಿದ ಮತ್ತು ಅಮಾಯಕರು ಈಗಲೂ ಜೈಲುವಾಸ ಅನುಭವಿಸುವಂತೆ ಮಾಡಿದ ಈ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲಾಗುತ್ತಿದೆ. ನಾಗರಿಕರ ಬದುಕುವ ಮೂಲಭೂತ ಹಕ್ಕನ್ನು ಕಸಿಯುವ ಮತ್ತು ಜನವಿರೋಧಿ ಆಡಳಿತದ ವಿರುದ್ಧದ ಧ್ವನಿಗಳನ್ನು ನಿಗ್ರಹಿಸುವ ಪ್ರಭುತ್ವದ ದಮನಕಾರಿ ಕಾನೂನುಗಳ ವಿರುದ್ಧ ಸಂದರ್ಭಾನುಸಾರ ಪಕ್ಷಾತೀತವಾದ ಜನಾಂದೋಲನ ರೂಪುಗೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.

LEAVE A REPLY

Please enter your comment!
Please enter your name here