ಕಮಲೇಶ್ ತಿವಾರಿ ಹತ್ಯೆ ಮತ್ತು ರಿಹಾಯಿ ಮಂಚ್ ಎತ್ತಿರುವ  ಗಂಭೀರ ಪ್ರಶ್ನೆಗಳು

0
49

ಹಿಂದೂ ಮಹಾಸಭಾ ನಾಯಕನಾಗಿದ್ದ ಕಮಲೇಶ್ ತಿವಾರಿ, ನಂತರ ಹಿಂದೂ ಸಮಾಜ್ ಪಾರ್ಟಿಯನ್ನು ಕಟ್ಟಿದ್ದ. ಇದೀಗ ತಿವಾರಿ ಹತ್ಯೆ ಪ್ರಕರಣವು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಕುಟುಂಬದ ಸಂಶಯದ ಸೂಜಿಯು ನೇರವಾಗಿ ಬಿಜೆಪಿಯನ್ನು ಚುಚ್ಚುತ್ತಿದೆ. ಈ ಮಧ್ಯೆ ‘ಸಬರಂಗ್ ಇಂಡಿಯಾ’ ಪ್ರಕಟಿಸಿರುವ ತಿವಾರಿ ಹತ್ಯೆ ಮತ್ತು ಪ್ರಕರಣದ ತನಿಖೆಯ ವಿರೋಧಾಭಾಸಗಳ ಕುರಿತು ರಿಹಾಯಿ ಮಂಚ್ ಎತ್ತಿರುವ ಗಂಭೀರ ಪ್ರಶ್ನೆಗಳು ನ್ಯಾಯದ ಕಣ್ಣಿಗೆ ಮಣ್ಣೆರಚುವ ಆಡಳಿತ ವ್ಯವಸ್ಥೆಯ ನಡೆಯನ್ನು ಬಹಿರಂಗಪಡಿಸಿದೆ.

ಕಮಲೇಶ್ ತಿವಾರಿ ಹತ್ಯೆಯ ಕುರಿತಂತೆ ಕುಟುಂಬವು ಯಾರನ್ನೋ ಕೊಲೆಗಾರರು ಎಂದು ಭಾವಿಸುತ್ತಿದ್ದರೆ, ಪೊಲೀಸರು ಇನ್ಯಾರನ್ನೋ ಬಂಧಿಸುತ್ತಿದ್ದಾರೆ. ಹರೇನ್ ಪಾಂಡ್ಯಾ ಹತ್ಯೆಯ ನಂತರವೂ ಇದೇ ರೀತಿಯ ಸನ್ನಿವೇಶ ನಿರ್ಮಾಣವಾಗಿತ್ತು. ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಕಕ್ಷಿಗಳು ಮುಂದೆ ಬಂದಿವೆ – ಒಂದನೇಯದು ಕುಟುಂಬ, ಎರಡನೇಯದ್ದು ಉತ್ತರ ಪ್ರದೇಶ ಪೊಲೀಸ್, ಮೂರನೇಯದ್ದು ಗುಜರಾತ್ ಎಟಿಎಸ್ ಕಮಲೇಶ್ ತಿವಾರಿಯ ಹತ್ಯೆಯ ಕುರಿತು ಆತನ ತಾಯಿ ಕುಸುಮ್, ಬಿಜೆಪಿ ನಾಯಕ ಶಿವಕುಮಾರ್ ಗುಪ್ತಾನ ಮೇಲೆ ಸ್ಪಷ್ಟವಾದ ಆರೋಪ ಹೊರಿಸಿದೆ.  ಮುಖ್ಯಮಂತ್ರಿಯೊಂದಿಗೆ ಕುಟುಂಬದ ಭೇಟಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಭೇಟಿಗಾಗಿ ಒತ್ತಡ ಹೇರಿದ ಮತ್ತು ಬಲವಂತವಾಗಿ ಲಕ್ನೋಗೆ ಕರೆತಂದಿರುವ ಆರೋಪವನ್ನು ಪೊಲೀಸರ ಮೇಲೆ ಹೊರಿಸಿದ್ದಾರೆ. ಮುಖ್ಯಮಂತ್ರಿಯವರ ನಿಲುವಿನಿಂದ ನಮಗೆ ಕೇವಲ ಭದ್ರತೆಯಷ್ಟೇ ಸಿಗಬಹುದು, ಇದರ ಹೊರತಾಗಿ ಏನೂ ಇಲ್ಲ ಎಂದು ಅವರು ಹೇಳಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ರಿಹಾಯಿ ಮಂಚ್, ರಾಜ್ಯದಲ್ಲಿ  ಜಂಗಲ್ ರಾಜ್ ಇದೆ ಎಂಬ ಮಾತನ್ನು ಸುಪ್ರೀಂ ಕೋರ್ಟ್ ಕೂಡ ಹೇಳಬೇಕಾಯಿತು ಮತ್ತು ಹತ್ಯೆಗಳಲ್ಲೂ ಜಾತಿ ಆಧಾರದಲ್ಲಿ ತಾರತಮ್ಯ ನಡೆಸುವುದಾದರೆ, ಈ ಸರಕಾರದಿಂದ ನ್ಯಾಯ ನಿರೀಕ್ಷಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದೆ. ಝಾನ್ಸಿಯಲ್ಲಿ ಪುಷ್ಪೇಂದ್ರ ಯಾದವ್‌ನ ಹತ್ಯೆ ನಡೆಸಿದ ಪೊಲೀಸರು ಅದನ್ನು ಎನ್‌ಕೌಂಟರ್ ಎಂದು ಹೇಳಿದ್ದರು ಮತ್ತು ಎಫ್‌ಐಆರ್ ದಾಖಲಿಸುವುದಂತೂ ದೂರದ ಮಾತು, ಕುಟುಂಬಸ್ಥರಿಗೆ ಮೃತದೇಹವನ್ನೂ ತೋರಿಸದೆ ಸ್ವತಃ ಅದನ್ನು ಅಂತ್ಯಸಂಸ್ಕಾರ ಮಾಡಿದ್ದರು.

ರಿಹಾಯ್ ಮಂಚ್ ಅಧ್ಯಕ್ಷ ಮುಹಮ್ಮದ್ ಶುಹೈಬ್‌ರವರು ಹೇಳುವಂತೆ, ಹಿಂದೂ ಸಮಾಜ್ ಪಾರ್ಟಿಯ ಅಧ್ಯಕ್ಷ ಕಮಲೇಶ್ ತಿವಾರಿಯನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಹತ್ಯೆಗೈದರು. ಇದರ ನಂತರ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಓ.ಪಿ.ಸಿಂಗ್ ತನ್ನ ಹೇಳಿಕೆಯಲ್ಲಿ ಅದನ್ನು ಸ್ಪಷ್ಟವಾಗಿ ಅಪರಾಧಿಕ ಘಟನೆ ಎಂದು ಹೇಳಿದರು. ಆದರೆ ಕೆಲವೇ ಘಂಟೆಗಳ ನಂತರ ಪೊಲೀಸ್ ಇಲಾಖೆಯ ವಿವೇಚನೆಯ ದಿಕ್ಕು ಸಂಪೂರ್ಣವಾಗಿ ಬದಲಾಗುತ್ತದೆ ಮತ್ತು ಮಾಧ್ಯಮ ವಿಚಾರಣೆ ಪ್ರಾರಂಭವಾಗುತ್ತದೆ. ಘಟನೆಯ ಕುರಿತು ವಿವರಿಸಿರುವ ತಿವಾರಿಯ ಖಾಸಗಿ ಕೆಲಸಗಾರ ಸೌರಾಷ್ಟ್ರಜೀತ್, ಮಧ್ಯಾಹ್ನ ಸುಮಾರು 12:30ರ ವೇಳೆಗೆ ಇಬ್ಬರು ವ್ಯಕ್ತಿಗಳು ಭಯ್ಯರನ್ನು ಕಾಣಲು ಕಚೇರಿಗೆ ಬಂದಿದ್ದರು. ಇಬ್ಬರೂ ಅವರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದರು ಎಂದಿದ್ದಾನೆ. ನಂತರ ತಿವಾರಿ ಹೇಳಿದ ಕಾರಣ ಆತ ಸ್ವತಃ ಇಬ್ಬರಿಗೂ ಚಹಾ-ತಿಂಡಿ ನೀಡಿದ್ದ. ಡಿಜಿಪಿ ಓ.ಪಿ.ಸಿಂಗ್, ಇದನ್ನು ಇಬ್ಬರು ವ್ಯಕ್ತಿಗಳು ನಡೆಸಿದ್ದಾರೆ ಮತ್ತು ಕೊಲೆಗಾರರು ಅವರ ಪರಿಚಿತರು ಎಂದು ಹೇಳಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಕಮಲೇಶ್‌ಗೆ ಹಲವು ತಿಂಗಳುಗಳಿಂದ ಭದ್ರತೆಯನ್ನೂ ಕಲ್ಪಿಸಲಾಗಿತ್ತು ಮತ್ತು ಮನೆಯ ಕೆಳಗೆ ನಿರತರಾಗಿದ್ದ ಭದ್ರತಾ ಸಿಬ್ಬಂದಿ ಕಮಲೇಶ್ ತಿವಾರಿಯ ಅನುಮತಿ ದೊರಕಿದ ಬಳಿಕವೇ ಇಬ್ಬರನ್ನು ಮೇಲೆ ಹೋಗಲು ಬಿಟ್ಟಿದ್ದರು ಎಂಬುದಾಗಿಯೂ ಅವರು ಹೇಳಿದ್ದರು. ಇದೇ ರೀತಿ ಭಯೋತ್ಪಾದನಾ ಸಂಘಟನೆ ಅಥವಾ ಸುಪಾರಿ ಪಡೆದು ಹತ್ಯೆ ನಡೆಸಿದ ಸಾಕ್ಷಗಳು ದೊರಕದ ಕಾರಣ ಗೃಹ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅವನೀಶ್ ಅವಸ್ಥಿ, ಹತ್ಯೆಯು ವೈಯಕ್ತಿಕ ದ್ವೇಷದಿಂದ ನಡೆದಿದೆ, ಪೊಲೀಸ್ ಇಲಾಖೆಯು ಇದೇ ಆಧಾರದಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಮಾಧ್ಯಮಗಳಿಗೆ ಹೇಳಿದ್ದರು. ಆದರೆ ಎಸ್‌ಎಸ್‌ಪಿ ಕಲಾನಿಧಿ ನೈತಾನಿ,  ಮಧ್ಯಾಹ್ನ 12:30ರ ವೇಳೆಗೆ ಕಮಲೇಶ್ ತನ್ನ ನಿವಾಸದ ಮೊದಲನೇ ಅಂತಸ್ತಿನಲ್ಲಿರುವ ಹಿಂದೂ ಸಮಾಜ್ ಪಾರ್ಟಿಯ ಕಚೇರಿಯಲ್ಲಿ ಕುಶೀ ನಗರ್ ನಿವಾಸಿಯಾಗಿರುವ ಕೆಲಸಗಾರ ಸೌರಾಷ್ಟ್ರಜೀತ್ ಸಿಂಗ್‌ನೊಂದಿಗೆ ಕುಳಿತಿದ್ದ.  ಅದೇ ವೇಳೆ ಕೇಸರಿ ವಸ್ತ್ರ ಧರಿಸಿದ್ದ ಇಬ್ಬರು ಯುವಕರು ಮಿಠಾಯಿಯ ಪೊಟ್ಟಣದೊಂದಿಗೆ ಅಲ್ಲಿಗೆ ಆಗಮಿಸಿದರು. ಬಹುಶಃ ಕಮಲೇಶ್‌ಗೆ ಅವರ ಪರಿಚಯವಿತ್ತು.

ಘಟನಾ ಸ್ಥಳಕ್ಕೆ ಸಂಬಂಧಿಸಿದಂತೆಯೂ ಹಲವು ವಿರೋಧಾಭಾಸಗಳಿವೆ. ಒಂದೆಡೆ, ಭದ್ರತಾ ಸಿಬ್ಬಂದಿ ಮುಸಾಫಿರ್ ಪ್ರಸಾದ್, ಗುಂಡು ಹಾರಿಸಿದ ಸದ್ದು ಕೇಳಿಲ್ಲ ಮತ್ತು ಯಾರೂ ಓಡುತ್ತಿರುವುದನ್ನು ನೋಡಿಲ್ಲ ಎಂದು ಹೇಳಿದ್ದ. ಅದೇ ವೇಳೆ ಕಟ್ಟಡದ ಮೇಲ್ಭಾಗದಲ್ಲಿದ್ದ ಬಾಡಿಗೆದಾರ ನೀತೂ ಸಿಂಗ್ ಗುಂಡಿನ ಸದ್ದು ಕೇಳಿದ್ದರು. ಕಚೇರಿಗೆ ತಾಗಿಕೊಂಡಿರುವ ಕೊಠಡಿಯಲ್ಲಿದ್ದ ಕಮಲೇಶ್ ಪತ್ನಿ ಕಿರಣ್‌ಗೆ ತಿವಾರಿ ಗುಂಡು ಹಾರಾಟದ ಸದ್ದು ಕೇಳಿಲ್ಲ. ಮಾತ್ರವಲ್ಲ ಕಚೇರಿಯಿಂದ ಯಾವುದೇ ಸದ್ದು ಕೇಳದ ಕಾರಣ ಆಕೆ ಅಲ್ಲಿಗೆ ತೆರಳಿ ನೋಡಿದಾಗ ಆಕೆಯ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದರು.  ಅದೇ ರೀತಿ ಖಾಲ್ಸಾ ಇನ್ ಹೊಟೇಲ್‌ನ ಸ್ವಾಗತಕಾರ ಹೇಳುವಂತೆ, ಅವರು ಆತನಿಂದ ಹಝ್ರತ್ ಅಬ್ಬಾಸ್ ದರ್ಗಾದ ಕುರಿತು ವಿಚಾರಿಸಿದ್ದರು. ವರದಿಗಳ ಪ್ರಕಾರ ಕಮಲೇಶ್‌ನ ಮನೆಯ ಸಮೀಪವೂ ದರ್ಗಾವಿತ್ತು. ಬಹುಶಃ ಅವರು ಅದರ ಬಗ್ಗೆಯೇ ಕೇಳುತ್ತಿದ್ದರು. ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ, ಒಂದು ವೇಳೆ ಅವರು ಆ ಪ್ರದೇಶದ ಕುರಿತು ಅರಿತವರಾದರೆ ಮತ್ತೇಕೆ ವಿಚಾರಿಸುತ್ತಿದ್ದರು. ಪೊಲೀಸರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗಳ ಪ್ರಕಾರ, ಕೊಲೆಗಾರರು ಒಂದೋ ಆಸುಪಾಸಿನಲ್ಲೇ ಇರುವವರಾಗಿದ್ದಾರೆ. ಇಲ್ಲವೇ ಅವರು ಉತ್ತಮ ರೀತಿಯಲ್ಲಿ ಮಾಹಿತಿ ಪಡೆದು ಹತ್ಯೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಗಳು ನಡೆದಾಡಿಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ. ಅದೇ ವೇಳೆ ಸೌರಾಷ್ಟ್ರಜೀತ್ ಹೇಳುವಂತೆ ಕೊಲೆಗಾರರು ಬೈಕ್‌ನಲ್ಲಿ ಬಂದಿದ್ದರು.

ಮುಹಮ್ಮದ್ ಶೊಯೆಬ್‌ರವರು ಹಿಂದಿನ ದಿನದ ಘಟನಾವಳಿಗಳ ಕುರಿತು ಅಚ್ಚರಿ ವ್ಯಕ್ತಪಡಿಸುತ್ತಾ ಈ ರೀತಿ ಹೇಳಿದ್ದಾರೆ; ಹತ್ಯೆಯ ನಂತರ ಪೊಲೀಸ್ ಮಹಾ ನಿರ್ದೇಶಕರು ಇದನ್ನು ಅಪರಾಧಿಕ ಕೃತ್ಯ ಎಂದು ಹೇಳುತ್ತಾ ಸಿಸಿಟಿವಿ ದೃಶ್ಯಾವಳಿ ಮತ್ತು ಕೆಲವು ಮಹತ್ವದ ಸುಳಿವು ಪೊಲೀಸರ ಕೈ ತಲುಪಿವೆ ಮತ್ತು 48 ಘಂಟೆಗಳಲ್ಲಿ ಈ ಹತ್ಯೆಯ ಕುರಿತ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಹೇಳಿದ್ದರು. ಆದರೆ ಮಾರನೆ ದಿನದಿಂದಲೇ ಘಟನಾ ಸ್ಥಳವು ಸಂಪೂರ್ಣವಾಗಿ ಕಥೆಯಿಂದ ಮಾಯವಾಗಿದೆ. ನಂತರ ಸಂಶಯದ ಸೂಜಿಯು, ಕಮಲೇಶ್ ತಿವಾರಿಯ ಹಿಂದಿನ ವಿವಾದಿತ ಹೇಳಿಕೆಗಳಿಗಾಗಿ ಹತ್ಯೆಗೈಯ್ದರೆ ಬಹುಮಾನ ಘೋಷಿಸಿದವರ ಕಡೆಗೆ ಹೋಯಿತು. ಅದೇ ವೇಳೆ ಕಮಲೇಶ್ ತಿವಾರಿಯ ತಾಯಿ ಹತ್ಯೆಯ ಆರೋಪವನ್ನು ಸ್ಪಷ್ಟವಾಗಿ ಬಿಜೆಪಿ ನಾಯಕ ಶಿವಕುಮಾರ್ ಗುಪ್ತಾನ ಮೇಲೆ ಹೊರಿಸಿದ್ದಾರೆ. ಮಂದಿರದ ಮೇಲಿನ ನಿಯಂತ್ರಣದ ಕುರಿತಂತೆ ತನ್ನ ಮಗನಿಗೆ ಮತ್ತು ಶಿವಕುಮಾರ್ ಗುಪ್ತಾಗೆ ವೈರತ್ವವಿತ್ತು ಮತ್ತು ಇಬ್ಬರ ನಡುವೆ ಹಲವು ಪ್ರಕರಣಗಳೂ ಇವೆ. ಮುಹಮ್ಮದ್ ಶುಹೈಬ್ ಹೇಳುವಂತೆ, ತನಿಖೆಯ ವಿಚಾರಣೆಯಲ್ಲಿ ಈ ಪ್ರಶ್ನೆಗಳಿಗೆ ಖಂಡಿತವಾಗಿಯೂ ಉತ್ತರ ದೊರಕಬೇಕಾಗಿದೆ. ಪೊಲೀಸ್ ಇಲಾಖೆಯ ಕಾರ್ಯಾಚರಣೆಯನ್ನು ಟೀಕಿಸಿರುವ ಅವರು, ಪೊಲೀಸರಿಗೆ ಇನ್ನೂ ಅರೋಪಿಗಳನ್ನು ಸೆರೆಹಿಡಿಯಲು ಸಾಧ್ಯವಾಗಿಲ್ಲ. ಆದರೆ ಸಂಚುಗಾರರನ್ನು ಹಿಡಿಯುವ  ಕುರಿತಂತೆ ಸಾರ್ವಜನಿಕರಲ್ಲಿ ಭಯ ಮತ್ತು ಆತಂಕದ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.

ರಿಹಾಯಿ ಮಂಚ್‌ನ ಪ್ರಧಾನ ಕಾರ್ಯದರ್ಶಿ ರಾಜೀವ್ ಯಾದವ್ ಹೇಳುವಂತೆ, ಗುಜರಾತ್ ಎಟಿಎಸ್ ಉಲ್ಲೇಖದ ಮೂಲಕ ಉತ್ತರ ಪ್ರದೇಶದ ಡಿಜಿಪಿ ಅವರು ಹತ್ಯೆಯ ಮುಖ್ಯ ಸಂಚುಗಾರ ರಶೀದ್ ಅಹ್ಮದ್ ಖುರ್ಷಿದ್ ಅಹ್ಮದ್ ಪಠಾಣ್, ಮೌಲಾನಾ ಮೊಹ್ಸಿನ್ ಶೇಖ್ ಸಲೀಂ ಮತ್ತು ಮಿಠಾಯಿ ಖರೀದಿಸಿದ ಫೈಝಾನ್ ಯೂನುಸ್‌ನನ್ನು ಸೂರತ್‌ನಿಂದ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಆರೋಪಿಗಳು ಕಮಲೇಶ್ ತಿವಾರಿಗೆ ಕೊನೆಯದಾಗಿ ಕರೆ ಮಾಡಿರುವ ನಂಬರ್‌ನಿಂದ ಗುಜರಾತ್‌ನ ಹಲವು ನಂಬರ್‌ಗಳೊಂದಿಗೆ ಸಂಭಾಷಣೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಸೂರತ್‌ನ ಗೌರವ್ ತಿವಾರಿಯನ್ನೂ ಬಂಧಿಸಲಾಗಿತ್ತಾದರೂ, ನಂತರದಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು. ಮೂಲತಃ ಉತ್ತರ ಪ್ರದೇಶದವನಾಗಿದ್ದ ಗೌರವ್ ಕಮಲೇಶ್‌ಗೆ ಕರೆ ಮಾಡಿ ಆತ ಸಂಘಟನೆಯೊಂದಿಗೆ ಸೇರುವ ಬಯಕೆ ವ್ಯಕ್ತಪಡಿಸಿದ್ದ. ರವಿವಾರ ಮಧ್ಯಾಹ್ನ ಖುರ್ಷಿದ್‌ಬಾದ್‌ನಲ್ಲಿರುವ ಕಮಲೇಶ್‌ನ ಮನೆಗೆ ತಲುಪಿದ ಪಕ್ಷದ ಪಶ್ಚಿಮ ಯುಪಿಯ ಪ್ರಭಾರಿ ಗೌರವ್ ಗೋಸ್ವಾಮಿಯು, ರೋಹಿತ್ ಸೋಲಂಕಿ ಹೆಸರಿನ ಯುವಕನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಅಳವಡಿಸಿದ್ದ ಡಿಪಿ ಮತ್ತು ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದ ಹತ್ಯೆ ಆರೋಪಿಯೋರ್ವನ ಚಹರೆ ದೊರಕಿದ ಬಳಿಕ ಹೇಳಿದ್ದೇನೆಂದರೆ, ಆ ಯುವಕ ಕೆಲವು ತಿಂಗಳ ಹಿಂದೆಯೇ ಫೇಸ್‌ಬುಕ್‌ನಲ್ಲಿ ಪ್ರೊಫೈಲ್ ರಚಿಸಿದ್ದ. ಆತ ಯಾವಾಗಲೂ ಕರೆ ಮಾಡಿ ಪಕ್ಷಕ್ಕೆ ಸೇರುವ ಕುರಿತು ಮಾತನಾಡುತ್ತಿದ್ದ. ಆತ ಮೂರು ತಿಂಗಳ ಹಿಂದೆ ಮೊಬೈಲ್ ನಂಬರ್‌ವೊಂದರಿಂದ ಸಂಭಾಷಣೆ ನಡೆಸಿದ್ದ. ಈ ನಂಬರ್‌ನಿಂದ ಆತ ಹಲವು ಬಾರಿ ಕರೆ ಮಾಡಿ ಕಮಲೇಶ್ ತಿವಾರಿ ಮತ್ತು ಪಕ್ಷದ ಕುರಿತು ಮಾಹಿತಿ ಪಡೆದಿದ್ದ. ಪಕ್ಷದ ಕಚೇರಿಯ ಕುರಿತೂ ವಿಚಾರಿಸಿದ್ದ ಆತ, ಒಂದು ವೇಳೆ ಲಕ್ನೋಗೆ ಬಂದು ತಂಗಲು ಬಯಸಿದರೆ ಪಕ್ಷದ ಕಚೇರಿಯಲ್ಲಿ ವ್ಯವಸ್ಥೆ ಇದೆಯೇ ಎಂದು ಕೇಳಿದ್ದ. ಕಚೇರಿಯಲ್ಲಿ ಯಾವುದೇ ವ್ಯವಸ್ಥೆ ಇಲ್ಲ ಎಂದು ತಿಳಿಸಿದ್ದ ಗೌರವ್, ಆತನಿಗೆ ಹೊಟೇಲ್‌ನಲ್ಲಿ ತಂಗಲು ಹೇಳಿದ್ದರು.  ಇತ್ತೀಚೆಗೆ ಈ ನಂಬರ್  ನಿಷ್ಕ್ರಿಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಲಕ್ನೋದ ಹೊಟೇಲ್ ಖಾಲ್ಸಾ ಇನ್‌ನಲ್ಲಿ ಆರೋಪಿಗಳು ತಂಗಿದ್ದ ಮಾತು ಕೇಳಿ ಬರುತ್ತಿದ್ದು, ಅಲ್ಲಿಂದ ಸೋಲಂಕಿ ಹೆಸರಿನ ಆಧಾರ್ ಕಾರ್ಡ್ ಕೂಡ ದೊರಕಿದೆ.

ಹೊಟೇಲ್‌ನ ಪ್ರಕಾರ, ಶೇಖ್ ಅಶ್ಫಾಕ್ ಹುಸೈನ್ ಮತ್ತು ಪಠಾಣ್ ಮೊನುದ್ದೀನ್ ಅಹ್ಮದ್ ತಮ್ಮ ನೈಜ ಹೆಸರು ಮತ್ತು ಗುಜರಾತ್‌ನ ಸೂರತ್‌ನ ಪದ್ಮಾವತಿ ಸೊಸೈಟಿಯಲ್ಲಿರುವ ಜಿಲಾನಿ ಅಪಾರ್ಟ್‌ಮೆಂಟ್ ವಿಳಾಸದಲ್ಲಿ ಹೊಟೇಲ್‌ನಲ್ಲಿ ಕೋಣೆ ಕಾಯ್ದಿರಿಸಿದ್ದರು. ಅದೇ ವೇಳೆ ಅಕ್ಟೋಬರ್ 17ರಂದು ರೇಲ್ ಬಝಾರ್‌ನ ಹೈರಿಸ್‌ಗಂಜ್‌ನಲ್ಲಿರುವ ಕಾನ್ಹಾ ಟೆಲಿಕಾಂ ಶಾಪ್‌ನಿಂದ ಸಿಮ್ ಮತ್ತು ಮೊಬೈಲ್‌ಅನ್ನು ಸೂರತ್ ನಿವಾಸಿ ಅಶ್ಫಾಕ್ ಹುಸೈನ್‌ನ ಐಡಿಯಿಂದ ಖರೀದಿಸಲಾಗಿತ್ತು. ಎಸ್‌ಟಿಎಫ್ ಮೂಲಗಳ ಪ್ರಕಾರ, ವಲ್‌ಸಾಡ್ ಗುಜರಾತ್‌ನಿಂದ ಕಾನ್ಪುರಕ್ಕೆ ಬರುವ ಉದ್ಯೋಗ್‌ಕರ್ಮಿ ಎಕ್ಸ್‌ಪ್ರೆಸ್‌ನಿಂದ ಹತ್ಯಾ ಆರೋಪಿಗಳು ಘಟನೆಯ ಒಂದು ದಿನ ಮೊದಲು ಅಕ್ಟೋಬರ್ 17ರಂದು ಸಂಜೆ ಕಾನ್ಪುರಕ್ಕೆ ಆಗಮಿಸಿದ್ದರು. ರೈಲು ಸಂಜೆ ಸುಮಾರು 7.45ಕ್ಕೆ ಸೆಂಟ್ರಲ್ ಸ್ಟೇಷನ್‌ಗೆ ತಲುಪಿತ್ತು. ಇದರ ನಂತರ ಸರಿಯಾಗಿ 15 ನಿಮಿಷಗಳ ನಂತರ 8 ಗಂಟೆಗೆ ಆರೋಪಿಗಳು ಒಂದನೇ ಫ್ಲಾಟ್‌ಫಾರಂನಿಂದ ಸ್ಟೇಷನ್‌ನಿಂದ ಹೊರ ಬಂದಿದ್ದರು ಮತ್ತು ರೇಲ್‌ಬಝಾರ್ ಮೂಲಕ ಹೈರಿಸ್‌ಗಂಜ್‌ನಲ್ಲಿರುವ ಟೆಲಿಕಾಂನಿಂದ ಸಿಮ್ ಖರೀದಿಸಿದ್ದರು. ಅಲ್ಲಿಂದ ಟಾಟಾಮಿಲ್ ಚೌರಾಹಾ ಮೂಲಕ ಝಕರ್‌ಕಟ್ಟಿ ತಲುಪಿದ್ದರು. ನಿಮಿಷ ನಿಮಿಷದ ಕುರಿತ ಅವರ ಚಲನೆಯ ಬಗ್ಗೆ ಪ್ರತಿಪಾದನೆ ಮಾಡಲಾಗುತ್ತಿದ್ದು, ಆರೋಪಿಗಳು ಬಂಧನದಿಂದ ಹೊರಗಿರುವಾಗ ಇಂಥದ್ದೆಲ್ಲಾ ಸಾಧ್ಯವೇ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ‘ಅಮರ್ ಉಜಾಲಾ’ದಲ್ಲಿ ಅಕ್ಟೋಬರ್ 20ರಂದು ಪ್ರಕಟವಾದ ವರದಿಯ ಪ್ರಕಾರ, ಎಸ್‌ಎಸ್‌ಪಿ ರಹಸ್ಯ ಶೋಧನೆಗೆ ಒಳಪಡಿಸಿದ್ದ ಮೊಬೈಲ್ ಸಂಖ್ಯೆಗಳ ಪೈಕಿ ಒಂದು ಸಂಖ್ಯೆಯು ಅಕ್ಟೋಬರ್ 17ರ ಗುರುವಾರವೇ ಚಾಲನೆಯಾಗಿತ್ತು. ಮೇಲೆ ಹೇಳಲಾದ ನಂಬರ್‌ಅನ್ನು ರಾಜಸ್ತಾನದಿಂದ ಪಡೆಯಲಾಗಿತ್ತು. ಆರೋಪಿಗಳ ಮೊಬೈಲ್‌ಗಳು ನಡುವೆ ಸ್ಥಗಿತಗೊಳ್ಳುತ್ತಿದ್ದವು ಅಥವಾ ಬಹುಶಃ ಅವುಗಳ ನೆಟ್‌ವರ್ಕ್ ಕಣ್ಮರೆಯಾಗುತ್ತಿತ್ತು ಎಂಬ ಸುದ್ದಿ ಮಾಧ್ಯಮಗಳ ನಿರಂತರವಾಗಿ ಬರುತ್ತಿದ್ದವು. ತಮ್ಮ ಗುರುತಿನ ಮೂಲಕ ಹೊಟೇಲ್ ಪಡೆಯುವುದು, ಮೊಬೈಲ್ ತೆರೆಯುವುದು/ಬಂದ್ ಮಾಡುವುದು ವಿಶೇಷವಾಗಿ ಇಂತಹ ಉನ್ನತ ಮಟ್ಟದ ಪ್ರಕರಣದಲ್ಲಿ ಸಾಮಾನ್ಯ ಕೆಲಸವೇನಲ್ಲ. ತನಿಖಾ ಏಜೆನ್ಸಿ ಮತ್ತು ಎಸ್‌ಎಸ್‌ಪಿಗೆ ಯಾರೋ ಅನಾಮಧೇಯ ಪತ್ರ ಕಳುಹಿಸಿ ಮಲೂಕ್‌ಪುರ್‌ನಲ್ಲಿ ಯಾವನೋ ಮೌಲಾನಾ ಬರೇಲಿಯಲ್ಲಿ ಕೊಲೆ ಆರೋಪಿಗಳಿಗೆ ನೆರವಾದ ಕುರಿತು ಸುಳಿವು ನೀಡಿದ್ದ ಎಂದು ಹೇಳಲಾಗುತ್ತಿದೆ. ಈ ಮೌಲಾನಾಗೆ ಭಯೋತ್ಪಾದಕ ಸಂಘಟನೆಯೊಂದಿಗೆ ಸಂರ್ಪಕವಿದೆ ಮತ್ತು ಈತ  ಎರಡೇ ವರ್ಷಗಳಲ್ಲಿ ಬಹಳಷ್ಟು ಹಣ ಗಳಿಸಿಕೊಂಡಿದ್ದಾನೆ ಎಂದೂ ಹೇಳಲಾಗಿದೆ. ಇತ್ತೀಚೆಗೆ ಪೊಲೀಸ್ ತನಿಖಾ ಏಜೆನ್ಸಿಗಳು ತನಿಖೆ ಪ್ರಾರಂಭಿಸಿರುವ ಮಾತು ಮಾಧ್ಯಮಗಳಲ್ಲಿ ಕೇಳಿ ಬಂದಿವೆಯಾದರೂ, ಇದರಲ್ಲಿ ವೈಯಕ್ತಿಕ ದ್ವೇಷಕ್ಕಿಂತ ಹೆಚ್ಚಿನದ್ದೇನೂ ತೋರುತ್ತಿಲ್ಲ. ಈ ರೀತಿ ಮೌಲಾನಾರ ಮಾಹಿತಿದಾರ ಅಥವಾ ಸ್ವತಃ ಆ ಜಾಲದ ಭಾಗವಾಗಿರುವ ವ್ಯಕ್ತಿಯಷ್ಟೇ ಹೇಳಬಹುದು. ‘ಅಮರ್ ಉಜಾಲಾ’ ಅಕ್ಟೋಬರ್ 20ರಂದು ‘ಆರು ಗಂಟೆಗೂ ಅಧಿಕ ಸಮಯ ನಗರದಲ್ಲಿ ಓಡಾಡುತ್ತಿದ್ದ ಕೊಲೆಗಾರರು’ ಎಂದು ವರದಿ ಪ್ರಕಟಿಸಿದ್ದರೆ, ಅದೇ ಖಾಲ್ಸಾ ಇನ್ ಹೊಟೇಲ್‌ಗೆ ಅವರು 1:21ಕ್ಕೆ ತಲುಪಿದರು ಮತ್ತು 1:37ಕ್ಕೆ ಯಾವುದೇ ಮಾಹಿತಿ ನೀಡಿದೆ ತೆರಳಿದರು. ತಾವು ಕೃತ್ಯ ಎಸಗಿದ ನಗರದಲ್ಲಿಯೇ ಕೊಲೆಗಾರರು ಆರು ಗಂಟೆಗಳ ವರೆಗೆ ನಿಲ್ಲಬಹುದೇ ಎಂಬುದು ಇಲ್ಲಿ ಉದ್ಭವಿಸುವ ಸಹಜವಾದ ಪ್ರಶ್ನೆಯಾಗಿದೆ.

ಉತ್ತರ ಪ್ರದೇಶದ ಯೋಗಿ ಸರಕಾರವು ತನ್ನ ಭದ್ರತೆಯನ್ನು ಹಿಂಪಡೆದ ಕುರಿತಂತೆ ಕಮಲೇಶ್ ತಿವಾರಿ ಖಾರವಾಗಿ ಪ್ರತಿಕ್ರಿಯಿಸಿದ್ದರು.  2017ರ ಅಕ್ಟೋಬರ್ 24ರಂದು ಗುಜರಾತ್ ಎಟಿಎಸ್ ಉಬೈದ್ ಮಿರ್ಝಾ ಮತ್ತು ಕಾಸಿಮ್ ಸಿಂಬರ್‌ವಾಲಾನನ್ನು ಬಂಧಿಸಿತ್ತು. ಈ ಬಂಧನದ ನಂತರ ಅವರಿಗೆ ಐಎಸ್‌ಐಎಸ್‌ನೊಂದಿಗೆ ಸಂಪರ್ಕವಿತ್ತೆಂದು ತೋರಿಸುತ್ತಾ, ಪೈಗಂಬರ್‌ರವರ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅವರು ಕಮಲೇಶ್ ತಿವಾರಿಗೆ ಪ್ರಾಣ ಬೆದರಿಕೆ ಒಡ್ಡಿದ್ದರು ಎಂದು ಹೇಳಲಾಯಿತು. ಪತ್ರಿಕೆಗಳ ಪ್ರಕಾರ, ಈ ವಿಚಾರ ಎಸ್‌ಟಿಎಸ್‌ನ ಚಾರ್ಜ್‌ಶೀಟ್‌ನಲ್ಲಿಯೂ ಇದೆ. ಬಿಜೆಪಿ ಮತ್ತು ಆರೆಸ್ಸೆಸ್ ತನ್ನ ಹತ್ಯೆಗೆ ಸಂಚು ರೂಪಿಸುತ್ತಿವೆ ಎಂಬುದಾಗಿಯೂ ಕಮಲೇಶ್ ತಿವಾರಿ ಆರೋಪಿಸಿದ್ದ. ಇದೀಗ ಆತನ ತಾಯಿ ಬಿಜೆಪಿ ನಾಯಕನೋರ್ವನ ಮೇಲೆ ಕೊಲೆ ಆರೋಪವನ್ನು ಹೊರಿಸಿರುವುದು ಈ ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕೊಲೆಗಾರರು ಕಮಲೇಶ್ ತಿವಾರಿಯ ಬಳಿ ಸುಮಾರು ಅರ್ಧ ಗಂಟೆ ವರೆಗೂ ಇದ್ದರು ಮತ್ತು ಈ ಮಧ್ಯೆ ಮೃತರು ಅವರಿಗೆ ಚಹಾ-ತಿಂಡಿಯ ವ್ಯವಸ್ಥೆಯನ್ನೂ ಮಾಡಿದ್ದರು. ಕೇಸರಿ ವಸ್ತ್ರದೊಂದಿಗೆ ಆಗಮಿಸಿದ್ದ ಕೊಲೆಗಾರರನ್ನು ಅವರು ಮೊದಲೇ ಅರಿತಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಕೊಲೆಗಾರರು ಚಾಕುವಿನಿಂದ ಅವರ ಕತ್ತು ಕುಯ್ದರು, ಚಾಕು ಕೊಂಡೊಯ್ದು ಹೊಟೇಲ್‌ನಲ್ಲಿಟ್ಟರು ಮತ್ತು ರಿವಾಲ್ವರ್ ಮತ್ತು ಮಿಠಾಯಿಯನ್ನು ಘಟನಾಸ್ಥಳದಲ್ಲೇ ಬಿಟ್ಟರು. ಆರೋಪಿಗಳು  ಪೊಟ್ಟಣದ ಜತೆಗೆ ಅದರ ಬಿಲ್ಲನ್ನೂ ತಂದಿದ್ದರು. ಅವರ ಗುರುತನ್ನು ಸುಲಭವಾಗಿ ಕಂಡುಹಿಡಿಯಬಹುದಾದ ಇಂತಹ ಸಾಕ್ಷಗಳು ಸ್ಥಳದಲ್ಲಿ  ಏಕೆ ಬಿಟ್ಟು ಹೋದರು ಎಂಬುದು ಕೂಡ ಪ್ರಶ್ನೆಯಾಗಿದೆ. ಸೂರತ್‌ನಲ್ಲಿ ಮಿಠಾಯಿ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮರಾದಿಂದ ಹಿಡಿದು ಲಕ್ನೋ ಹೊಟೇಲ್ ವರೆಗೆ ಅವರು ತಮ್ಮ ಗುರುತನ್ನು ಅಡಗಿಸಲಿಲ್ಲ ಎಂಬುದು ಮಹತ್ವದ ಅಂಶವಾಗಿದೆ. ಪ್ರಧಾನ ಕಾರ್ಯದರ್ಶಿ(ಗೃಹ), ಡಿಜಿಪಿ ಮತ್ತು ಎಸ್‌ಎಸ್‌ಪಿಯವರ ಪ್ರಾರಂಭದ ಹೇಳಿಕೆಗಳಿಗೆ ವಿರುದ್ಧವಾಗಿ ಮಿಠಾಯಿ ಪೊಟ್ಟಣವನ್ನು ಕೇಂದ್ರವಾಗಿಟ್ಟುಕೊಂಡು ತನಿಖೆಯು ಗುಜರಾತ್ ಎಟಿಎಸ್ ವರೆಗೆ ತಲುಪಿತು ಮತ್ತು ಅವಸರದಲ್ಲಿ ಆರೋಪಿಗಳ ಬಂಧನಕ್ಕೂ ಮೊದಲು ಸಂಚುಗಾರರ ಬಂಧನವೂ ಆಯಿತು. ಈ ಮಧ್ಯೆ ತನಿಖೆಯ ದಿಕ್ಕಿನಲ್ಲಿ ಪ್ರಶ್ನೆ ಉದ್ಭವಿಸುವ ಘಟನೆಗಳೂ ನಡೆದವು. ಆರೋಪಿಗಳ ಬಂಧನವಾಗದೆಯೇ ಅವರು ಬಂದು ಹೋಗುವ ಸಮಯದ ವಿವರಣೆಯೂ ಅದರಲ್ಲೊಂದು. ದೊಡ್ಡ ವಿಚಾರವೆಂದರೆ, ಘಟನೆ ಮತ್ತು ಆಡಳಿತ ವ್ಯವಸ್ಥೆಯ ವರ್ತನೆಯ ಕುರಿತು ಕಮಲೇಶ್ ತಿವಾರಿಯ ತಾಯಿ ನೀಡಿದ ಹೇಳಿಕೆ. ಅವರ ಹೇಳಿಕೆ ಸರಕಾರ ಮತ್ತು ತನಿಖಾ ಏಜೆನ್ಸಿಗಳ ಉದ್ದೇಶದ ಕುರಿತು ಪ್ರಶ್ನೆಯನ್ನು ಹುಟ್ಟುಹಾಕಿದೆ. ಆಕೆ ಸಂಭಾವ್ಯ ಕೊಲೆಗಾರನ ಹೆಸರನ್ನು ಪೂರ್ಣ ವಿಶ್ವಾಸದೊಂದಿಗೆ ಹೇಳುತ್ತಾರೆ. ನಂತರ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿದ ಕುರಿತು ಪ್ರತಿಕ್ರಿಯಿಸಿರುವ ಆಕೆ, ತಮ್ಮನ್ನು ಅಲ್ಲಿಗೆ ಬಲವಂತವಾಗಿ ಕರೆದೊಯ್ಯಲಾಗಿತ್ತು ಮತ್ತು ಭೇಟಿಯಿಂದ ತೃಪ್ತಿಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಮೂರನೇ ಮಾತು ತುಂಬಾ ಚುಚ್ಚುವಂತದ್ದು. ವಾರಣಾಸಿಯಲ್ಲಿ ತನ್ನ ಮಗನ ಅಸ್ಥಿ ವಿಸರ್ಜನೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಆಕೆ, ತಮ್ಮ ಮೇಲೆ ಪೊಲೀಸರ ಕಾವಲಿದೆ ಮತ್ತು ಒಂದು ರೀತಿಯಲ್ಲಿ ಕುಟುಂಬವು ಕಣ್ಗಾವಲಿನಲ್ಲಿದೆ ಎಂದು ಹೇಳಿದ್ದರು. ಕುಟುಂಬಕ್ಕೆ ರಕ್ಷಣೆ ನೀಡುವುದು ಮತ್ತು ಅದರ ಚಟುವಟಿಕೆಗಳನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ವಹಿಸುವುದರಲ್ಲಿ ಬಹಳಷ್ಟು ಅಂತರವಿದೆ. ಕೊನೆಗೂ ಏನನ್ನು ಮುಚ್ಚಿಡಲು ಅಥವಾ ಏನನ್ನು ತಡೆಯಲು ಈ ರೀತಿ ಮಾಡಲಾಗುತ್ತಿದೆ ಎಂಬಂತಹ ಹಲವು ಪ್ರಶ್ನೆಗಳಿವೆ. ರಾಜಕೀಯ ಹಸ್ತಕ್ಷೇಪವಿರದೆ ಇಂಥದೆಲ್ಲಾ ನಡೆಯುವುದು ಸಾಧ್ಯವೇ? ಇದೇ ಕಾರಣಕ್ಕಾಗಿ ತನಿಖೆಯ ಮಧ್ಯೆಯೇ ಇದರ ವಿವರಣೆ ಮತ್ತು ಕಥೆಯ ಸೂಕ್ಷ್ಮ ಅಂಶಗಳನ್ನು ಸುದ್ದಿ ಮಾಧ್ಯಮಗಳಲ್ಲಿ ಸೋರಿಕೆ ಮಾಡಲಾಗುತ್ತಿದೆಯೇ? ಒಂದು ವಿಶೇಷ ವಿಚಾರಧಾರೆಯ ವ್ಯಕ್ತಿಗಳು ಟ್ವಿಟ್ಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದಾರೆ ಮತ್ತು ತನಿಖೆಯ ಮಿಠಾಯಿಯ ಪೊಟ್ಟಣದ  ಪರವಾಗಿ ಅವರು ಶಕ್ತಿಯನ್ನು ವ್ಯಯಿಸುತ್ತಿದ್ದಾರೆ. ಹಾಗಾದರೆ ಇವೆಲ್ಲಾ ವಿಚಾರಗಳು ನಿರಾಧಾರವೇ?

ಕಾನೂನು ಪಾಲಕರ ವೇಷದಲ್ಲಿ ಈ ಹಿಂದೆಯೂ ಕಾನೂನಿನ ಕಣ್ಣಿಗೆ ಮಣ್ಣೆರಚಲಾಗಿದೆ. ಕಮಲೇಶ್ ತಿವಾರಿ ಹಿಂದೂ ಸಮಾಜ್ ಪಾರ್ಟಿಯನ್ನು ಕಟ್ಟಿದ್ದ. ಅದಕ್ಕೂ ಮೊದಲು ಆತ ಹಿಂದೂ ಮಹಾಸಭಾದಲ್ಲಿದ್ದ. ಆತ ಮುಸ್ಲಿಮರು ಭಾರತ ಬಿಟ್ಟು ತೊಲಗಿ ಅಭಿಯಾನ ನಡೆಸುವ ಘೋಷಣೆಯನ್ನೂ ಮಾಡಿದ್ದ ಮತ್ತು ಗೋಡ್ಸೆಯನ್ನು ಪ್ರತೀ ಮನೆಯಲ್ಲೂ ಪ್ರತಿಸ್ಥಾಪಿಸಲು ಬಯಸಿದ್ದ. ಯೋಗಿ ಸರಕಾರವು ಆತನ ಭದ್ರತೆಯನ್ನು ಹಿಂಪಡೆದ ಕಾರಣ ಆತ ಖಿನ್ನನಾಗಿದ್ದ. ಅಖಿಲೇಶ್ ಯಾದವ್ ಆತನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಿತ್ತು. ಹೈಕೋರ್ಟ್‌ನಲ್ಲಿ ಸರಕಾರದ ತೀರ್ಮಾನದ ವಿರುದ್ಧ ಆತನಿಗೆ ಶೀಘ್ರ ಬಿಡುಗಡೆ ದೊರಕುವ ರೀತಿಯಲ್ಲಿ ಇದನ್ನು ಹಾಕಲಾಗಿತ್ತು ಮತ್ತು ಕೊನೆಗೆ ಅದೇ ರೀತಿ ನಡೆಯಿತು. ಕಮಲೇಶ್ ತಿವಾರಿ ಒಳಗೆ ಹೋದ ಬಳಿಕ ಹೈಕೋರ್ಟ್  ಸರಕಾರದ ಎನ್‌ಎಸ್‌ಎ ತನಿಖೆಯನ್ನು ರದ್ದುಪಡಿಸಿತು. ಸರಕಾರವು ಒಂದು ವರ್ಷದ ವರೆಗೆ ಒಮ್ಮೆಲೆ ಎನ್‌ಎಸ್‌ಎ ಹಾಕಿತ್ತು. ಅದೇ ವೇಳೆ ಕಾನೂನಿನ ಪ್ರಕಾರ ಒಂದು ಬಾರಿ ಎನ್‌ಎಸ್‌ಎಯನ್ನು ಕೇವಲ ಮೂರು ತಿಂಗಳ ವರೆಗೆ ಹೇರಬಹುದಾಗಿದೆ ಮತ್ತು ನಂತರ ಮೂರು-ಮೂರು ತಿಂಗಳ ವಿಸ್ತರಣೆಯೊಂದಿಗೆ ಯಾರಿಗೂ ಗರಿಷ್ಠ ಒಂದು ವರ್ಷದ ವರೆಗೆ ನಿರ್ಬಂಧಕ್ಕೆ ಒಳಪಡಿಸಬಹುದಾಗಿದೆ. ಈ ರೀತಿ ಅಖಿಲೇಶ್ ಸರಕಾರವು ಕಠೋರ ಕ್ರಮವನ್ನೂ ಕೈಗೊಂಡಿತ್ತು ಮತ್ತು ಆತನ ಹೊರಬರುವ ಹಾದಿಯನ್ನು ಸುಗಮಗೊಳಿಸಿತ್ತು. ಪ್ರಜಾತಂತ್ರದಲ್ಲಿ ಯಾರಿಗೂ ಯಾರನ್ನೂ ಹತ್ಯೆ ನಡೆಸುವ ಅನುಮತಿ ನೀಡಲು ಸಾಧ್ಯವಿಲ್ಲ. ಕೊಲೆಗಾರನು ಯಾವುದೇ ಸಮುದಾಯ, ಜಾತಿಯ ಸಾಮಾನ್ಯ ಅಥವಾ ವಿಶೇಷ ವ್ಯಕ್ತಿಯಾಗಿದ್ದರೂ ಅಥವಾ ಸ್ವತಃ ಪೊಲೀಸ್ ಪಡೆ ಅಥವಾ ಯಾವುದೇ ಏಜೆನ್ಸಿಯಲ್ಲಿದ್ದರೂ ಸರಿಯೇ. ಕಾನೂನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆಯಾಗಲೇಬೇಕು. ಎಲ್ಲಿಯವರೆಗೆ ಹೀಗೆ ಆಗುವುದಿಲ್ಲವೋ, ಅಲ್ಲಿಯ ತನಕ ಕಾನೂನು ರಾಜ್‌ನ ವಿಚಾರವೇ ಅರ್ಥಹೀನವಾಗಿದೆ. ಉತ್ತರ ಪ್ರದೇಶದ ವಿದ್ಯಾಮಾನಗಳಿಂದ ಅಚ್ಚರಿಗೊಂಡಿರುವ ಸುಪ್ರೀಂ ಕೋರ್ಟ್   ಕೂಡ ಇಲ್ಲಿ ಜಂಗಲ್ ರಾಜ್ ಇರುವುದರ ಕುರಿತ ವಿಚಾರವನ್ನೇ ಹೇಳಿದೆ.

 

 

LEAVE A REPLY

Please enter your comment!
Please enter your name here