ಕನ್ನಡ- ರಾಜ್ಯ ರಾಜ್ಯೋತ್ಸವ ಮತ್ತು ಕರ್ನಾಟಕ

Prasthutha|

  • ನಾ ದಿವಾಕರ

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ” ಈ ಕವಿವಾಣಿ ಸದಾ ನಮ್ಮ ನಡುವೆ ಗುನುಗುನಿಸುತ್ತಿರುತ್ತದೆ. ಕನ್ನಡ ನಾಡು ಎನ್ನುವ ಅಮೂರ್ತ ಕಲ್ಪನೆಗೆ ಶತಮಾನಗಳ ಇತಿಹಾಸಿದೆ. ಮೂರ್ತ ರೂಪದ ಕನ್ನಡ ನಾಡು ಅಥವಾ ಕರ್ನಾಟಕ 64 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಈ ಬಾರಿ ರಾಜ್ಯೋತ್ಸವದ ಉತ್ಸಾಹ ಮತ್ತು ಆಡಂಬರಕ್ಕೆ ಕೋವಿಡ್ 19 ಅಡ್ಡಿಯುಂಟು ಮಾಡಿದೆ. ಕೋವಿಡ್ 19 ತನ್ನ ಪಯಣವನ್ನು ಮುಂದುವರೆಸಿದ್ದರೂ ಕನ್ನಡ ನಾಡಿನ ಸಾಹಿತ್ಯ ಲೋಕದ ಕೋವಿದರು ಹೆಚ್ಚು ಸದ್ದುಮಾಡಬೇಕಿತ್ತೇನೋ ಎನ್ನುವ ನೋವು ಮತ್ತು ವಿಷಾದದೊಂದಿಗೇ ಈ ಬಾರಿಯ ರಾಜ್ಯೋತ್ಸವವನ್ನು ಆಚರಿಸಬೇಕಿದೆ.

ರಾಜ್ಯೋತ್ಸವದ ಆಚರಣೆ ಎಂದರೆ ಹುಟ್ಟುಹಬ್ಬದ ಆಚರಣೆಯಂತಲ್ಲ ಎನ್ನುವ ವಾಸ್ತವವನ್ನು ಇನ್ನಾದರೂ ನಾವು ಅರ್ಥಮಾಡಿಕೊಳ್ಳಬೇಕಿದೆ. ತನಗೆ ಅರಿವಿಲ್ಲದೆಯೇ ಜನಿಸುವ ವ್ಯಕ್ತಿಯ ಹುಟ್ಟುಹಬ್ಬದಂತೆ ಒಂದು ಭೌಗೋಳಿಕ ಪ್ರದೇಶದ ಅಸ್ತಿತ್ವವನ್ನು ಆಚರಿಸುವ ಪರಂಪರೆಯಿಂದ ನಾವು ಹೊರಬರಬೇಕಿದೆ. ಇಂದು ಕನ್ನಡ ಒಂದು ಭಾಷೆಯಾಗಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದರೆ, ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಕನ್ನಡ ನಾಡು ತನ್ನ ಸಾಂವಿಧಾನಿಕ ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ. ಭೌಗೋಳಿಕವಾಗಿ, ಭೂಪಟದ ಸುಂದರ ಚಿತ್ತಾರದ ಮೂಲಕ ಕೆಂಪು ಹಳದಿ ಬಣ್ಣಗಳ ರಂಗಿನ ಲೋಕದಲ್ಲಿ ವಿಹರಿಸುವ ಮುನ್ನ ಈ ರಾಜ್ಯದ ಜನತೆಯ ಅಸ್ಮಿತೆ ಮತ್ತು ಅಸ್ತಿತ್ವ ಎದುರಿಸುತ್ತಿರುವ ಅಪಾಯಗಳನ್ನು ಕುರಿತು ಯೋಚಿಸಬೇಕಿದೆ.

- Advertisement -

“ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ” ಎನ್ನುವ ಮತ್ತೊಂದು ಕವಿವಾಣಿಯನ್ನು ಒಮ್ಮೆ ನೆನೆಯೋಣ. ಚರಿತ್ರೆಯ ಪುಟಗಳಲ್ಲಿ ಹುದುಗಿ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಸಂಭ್ರಮಿಸುವುದರ ನಡುವೆಯೇ ಕನ್ನಡ ನಮ್ಮ ಉಸಿರಾಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾದ ಸಂದರ್ಭ ಎದುರಾಗಿದೆ. ಕನ್ನಡ ಒಂದು ಭಾಷೆಯಾಗಿ ಸಮೃದ್ಧವಾಗಿದೆ, ಜನಸಾಮಾನ್ಯರ ಬದುಕಿನಲ್ಲಿ ಒಂದಾಗಿದೆ, ಕೋಟ್ಯಂತರ ಜನತೆಯ ನಿತ್ಯ ಬದುಕಿನ ಒಂದು ಭಾಗವಾಗಿದೆ. ಆದರೆ ಕನ್ನಡ ಉಸಿರಾಗುವುದು ಎಂದರೆ ಇಷ್ಟೇ ಅಲ್ಲ. ಭುವನೇಶ್ವರಿ ಮತ್ತು ಭೂಪಟ, ಇವೆರಡರ ನಡುವೆ ಪಟಪಟಿಸುವ ಕೆಂಪು-ಹಳದಿ ಬಣ್ಣದ ಬಾವುಟ ಕನ್ನಡದ ಉಸಿರನ್ನು ಪ್ರತಿನಿಧಿಸುತ್ತಿದೆಯೇ ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ ಅಲ್ಲವೇ ?

ಈ ಸಂದರ್ಭದಲ್ಲಿ ನಮ್ಮೊಳಗೆ ಮೂಡಬೇಕಾದ ಜಿಜ್ಞಾಸೆ ಎಂದರೆ ನಾವು ಪ್ರತಿವರ್ಷ ಆಚರಿಸುತ್ತಿರುವುದು ಕನ್ನಡ ರಾಜ್ಯೋತ್ಸವವನ್ನೋ ಅಥವಾ ಕರ್ನಾಟಕ ರಾಜ್ಯೋತ್ಸವವನ್ನೋ ? ಏಕೆಂದರೆ ಕನ್ನಡ ಅಮೂರ್ತ ಸ್ವರೂಪದ ಒಂದು ವಿರಾಟ್ ಅಸ್ಮಿತೆಯ ನೆಲೆಗಟ್ಟು. ಕರ್ನಾಟಕ ಮೂರ್ತ ಸ್ವರೂಪದ ಒಂದು ಭೌಗೋಳಿಕ ಚೌಕಟ್ಟು. ಗಡಿ ವಿವಾದಗಳನ್ನು ಹೊರತುಪಡಿಸಿದರೆ ಕರ್ನಾಟಕದ ಸಮಸ್ಯೆಗಳು ನಗಣ್ಯ. ಆದರೆ ಕನ್ನಡ ಸಮಸ್ಯೆಗಳು ಬೆಟ್ಟದಷ್ಟು. ಇಲ್ಲಿ ರಾಜ್ಯದ ಜನಸಾಮಾನ್ಯರನ್ನು ನಾವು “ ಕನ್ನಡದ ” ಭಾಗವಾಗಿ ನೋಡುತ್ತೇವೆಯೋ ಅಥವಾ “ ಕರ್ನಾಟಕದ ” ಭಾಗವಾಗಿ ನೋಡುತ್ತೇವೆಯೋ ?

ಭಾಷೆ ಮುಖ್ಯವಾಗುವುದು ಇಲ್ಲಿಯೇ. ಆಡುಭಾಷೆಯಾಗಿ, ಬಳಕೆಯ ಭಾಷೆಯಾಗಿ, ಸಾಹಿತ್ಯಕ ಅಭಿವ್ಯಕ್ತಿಯಾಗಿ, ಸಾಂಸ್ಕೃತಿಕ ಭೂಮಿಕೆಯಾಗಿ ಕನ್ನಡದ ಅಸ್ಮಿತೆ ತನ್ನ ಛಾಪು ಮತ್ತು ಹೊಳಹನ್ನು ಉಳಿಸಿಕೊಂಡಿದೆ. ಆದರೆ ಬದುಕಿನ ಭಾಷೆಯಾಗಿ, ಜೀವನ ಮತ್ತು ಜೀವನೋಪಾಯದ ನುಡಿಯಾಗಿ, ಅಸ್ತಿತ್ವದ ಭೂಮಿಕೆಯಾಗಿ ಕನ್ನಡದ ಅಸ್ಮಿತೆ ಏನಾಗಿದೆ ? ಮಾತೃಭಾಷಾ ಶಿಕ್ಷಣ, ಶಿಕ್ಷಣ ಮಾಧ್ಯಮವಾಗಿ ಕನ್ನಡ ಮತ್ತು ಕನ್ನಡ ಕಲಿಕೆಯ ಪ್ರಾಧಾನ್ಯತೆ ಈ ನೆಲೆಗಳಲ್ಲಿ ರಾಜ್ಯದ ಭೂಪಟವನ್ನು ಇರಿಸಿದಾಗ ನಮಗೆ ಕನ್ನಡ ತನ್ನ ಇರುವಿಕೆಯನ್ನು ತಾನೇ ಪ್ರಶ್ನಿಸಿಕೊಳ್ಳುತ್ತಿರುವಂತೆ ಕಾಣುತ್ತದೆ.

ಭಾಷೆಯ ಅಳಿವು ಉಳಿವು ಎಷ್ಟು ಗಂಭೀರ ಪ್ರಶ್ನೆಯಾಗಿ ನಮ್ಮ ಮುಂದಿರುವುದೋ, ಅಷ್ಟೇ ಗಂಭೀರವಾಗಿ ಭಾಷಿಕರ ಅಳಿವು ಉಳಿವು ಸಹ ಎದುರಾಗಿದೆ. ಭಾಷಿಕರು ಎಂದರೆ ಕನ್ನಡವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರು ಮಾತ್ರವೇ? ಕರ್ನಾಟಕದ ಸಂದರ್ಭದಲ್ಲಿ ಹೀಗೆ ಹೇಳಲಾಗುವುದಿಲ್ಲ. ಕೊಂಕಣಿ, ತುಳು, ಹವ್ಯಕ, ಕೊಡವ, ಅರೆಭಾಷೆ ಹೀಗೆ ಕನ್ನಡ ಮತ್ತು ಕರ್ನಾಟಕದ ಚೌಕಟ್ಟಿನಲ್ಲಿ ಹಲವು ಆಯಾಮಗಳನ್ನು ಗುರುತಿಸಬೇಕಾಗುತ್ತದೆ.. ಹಾಗೆಯೇ ಹೊರ ರಾಜ್ಯಗಳಿಂದ ಬಂದು ತಮ್ಮದೇ ಆದ ಮಾತೃಭಾಷೆಯನ್ನೇ ಉಳಿಸಿಕೊಂಡಿದ್ದರೂ , ಕರ್ನಾಟಕ ಎನ್ನುವ ಭೌಗೋಳಿಕ ಅಸ್ತಿತ್ವದ ಉಳಿವಿಗೆ ಶ್ರಮಿಸಿರುವ, ಶ್ರಮಿಸುತ್ತಿರುವ ಜನರೂ ನಮ್ಮ ನಡುವೆ ಇದ್ದಾರೆ. ಈ ಸಮಸ್ತ ಜನತೆಯ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆ ಎದುರಾದಾಗ ಕನ್ನಡ ರಾಷ್ಟ್ರೀಯತೆಯ ಪ್ರಶ್ನೆಯೂ ಎದುರಾಗುತ್ತದೆ.

ಕರ್ನಾಟಕದ ಸಂದರ್ಭದಲ್ಲಿ ಇಂದು ರಾಷ್ಟ್ರೀಯತೆಯ ಪ್ರಶ್ನೆ ಚರ್ಚೆಗೊಳಗಾಗುತ್ತಿಲ್ಲ. ಪ್ರಾದೇಶಿಕ ಅಸ್ಮಿತೆ ಭಾರತದ ರಾಷ್ಟ್ರೀಯತೆಯಲ್ಲಿ ಸಮ್ಮಿಳಿತವಾಗಿ ಮರೆಯಾಗುತ್ತಿದೆ. ಆದರೆ ಈ ರಾಜ್ಯದ ದುಡಿಯುವ ಜನತೆಗೆ, ದುಡಿಮೆಯನ್ನೇ ನಂಬಿ ಬದುಕುವ ಬಹುಸಂಖ್ಯಾತ ಜನತೆಗೆ ರಾಷ್ಟ್ರೀಯತೆ ಒಂದು ಗಂಭೀರ ಪ್ರಶ್ನೆಯಾಗಿ ಕಾಡಲೇಬೇಕಿದೆ. ನಮ್ಮ ಭೌಗೋಳಿಕ ಅಸ್ಮಿತೆ ಮತ್ತು ಅಸ್ತಿತ್ವ ಎಂದರೆ ಸುಂದರವಾದ ಭೂಪಟವಲ್ಲ. ಈ ರಾಜ್ಯದ ನೈಸರ್ಗಿಕ ಸಂಪತ್ತು ಮತ್ತು ಸಂಪನ್ಮೂಲಗಳು, ಈ ರಾಜ್ಯದ ಶ್ರಮ ಮತ್ತು ಶ್ರಮ ಶಕ್ತಿ, ದುಡಿಮೆಯ ನೆಲೆಗಳು ಮತ್ತು ಉತ್ಪಾದನೆಯ ಮೂಲಗಳು, ಉತ್ಪಾದನೆಯ ಶಕ್ತಿಗಳು ಇವೆಲ್ಲವನ್ನೂ ನವ ಉದಾರವಾದ ಮತ್ತು ಜಾಗತೀಕರಣ ಮುಕ್ತ ಮಾರುಕಟ್ಟೆಯಲ್ಲಿ ಸಮ್ಮಿಳಿತಗೊಳಿಸುವುದರಲ್ಲಿ ಯಶಸ್ವಿಯಾಗಿದೆ.

ಅಂದರೆ ಕನ್ನಡ ಜನತೆಯ ಸವಾಲುಗಳು ಈಗ ಮುಕ್ತವಾಗಿ ಮುನ್ನೆಲೆಗೆ ಬಂದಿದೆ. ನೆಲ, ಜಲ, ಅರಣ್ಯ, ಭೂಗರ್ಭ, ಹಸಿರು ಘಟ್ಟಗಳು ಮತ್ತು ಈ ಎಲ್ಲ ಪ್ರಾಕೃತಿಕ ಸಂಪತ್ತಿನೊಡನೆ ಸಂವಾದಿಸುತ್ತಾ ತಮ್ಮ ಅಸ್ಮಿತೆಯನ್ನು, ಅಸ್ತಿತ್ವವನ್ನು ಕಂಡುಕೊಳ್ಳಲು ದಿನನಿತ್ಯ ಬೆವರು ಸುರಿಸುತ್ತಿರುವ ಕೋಟ್ಯಂತರ ಶ್ರಮಜೀವಿಗಳ ಬದುಕು. ಇದು ಇಂದು ಅಪಾಯ ಎದುರಿಸುತ್ತಿದೆ. ಒಕ್ಕೂಟ ವ್ಯವಸ್ಥೆಯ ಸಾಂವಿಧಾನಿಕ ಸ್ವರೂಪದಲ್ಲಿ ನಮ್ಮ ಉಸಿರನ್ನು ಕಂಡುಕೊಳ್ಳುತ್ತಾ 70 ವರ್ಷಗಳ ಕಾಲ ನೆಮ್ಮದಿಯಿಂದ ಬದುಕಿದ ಕನ್ನಡ ಮತ್ತು ಕನ್ನಡಿಗರು ಇಂದು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಭಾರತೀಯ ರಾಷ್ಟ್ರೀಯತೆಯ ಸುಳಿಗೆ ಸಿಲುಕಿರುವುದನ್ನು ಗಂಭೀರವಾಗಿ ಗಮನಿಸಬೇಕಿದೆ. ಇದು ಕೇವಲ ಆಡಳಿತಾತ್ಮಕ ಪ್ರಶ್ನೆಗಳಲ್ಲ ಅಥವಾ ಆಡಳಿತಾರೂಢ ಸರ್ಕಾರಗಳ ನೀತಿಗಳ ಪ್ರಶ್ನೆಯಲ್ಲ ಎನ್ನುವುದನ್ನೂ ಗಮನಿಸಬೇಕಿದೆ.

ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕೃಷಿ ಮಸೂದೆ, ಅರಣ್ಯ ಹಕ್ಕು ಕಾಯ್ದೆ, ಭೂ ಸ್ವಾಧೀನ ಕಾಯ್ದೆ, ಹೊಸ ಕಾರ್ಮಿಕ ಕಾನೂನುಗಳು, ಹೊಸ ಶಿಕ್ಷಣ ನೀತಿ ಮತ್ತು ಹಣಕಾಸು ನೀತಿಗಳು ಕನ್ನಡದ, ಕನ್ನಡಿಗರ ಮತ್ತು ಭೌಗೋಳಿಕ ಕರ್ನಾಟಕದ ಅಸ್ತಿತ್ವ ಮತ್ತು ಅಸ್ಮಿತೆ ಎರಡನ್ನೂ ಅಪಾಯದ ಅಂಚಿಗೆ ತಳ್ಳುತ್ತಿರುವುದನ್ನು ಗಂಭೀರವಾಗಿ ಅವಲೋಕನ ಮಾಡಬೇಕಿದೆ. ಬಂಡವಾಳದ ಜಾಗತೀಕರಣ ಮತ್ತು ಬಂಡವಾಳ ವ್ಯವಸ್ಥೆಯ ವಿಸ್ತರಣಾವಾದ ಈ ರಾಜ್ಯದ ಸಕಲ ಸಂಪನ್ಮೂಲಗಳನ್ನೂ ಮಾರುಕಟ್ಟೆಯ ಹರಾಜು ಕಟ್ಟೆಗಳಲ್ಲಿಟ್ಟು ಕಾರ್ಪೋರೇಟ್ ಉದ್ಯಮಿಗಳ ವಶಕ್ಕೆ ಒಪ್ಪಿಸಲು ಮುಂದಾಗಿರುವುದನ್ನು ಈ ಮೇಲಿನ ಮಸೂದೆಗಳಲ್ಲಿ, ಸಾಂವಿಧಾನಿಕ ತಿದ್ದುಪಡಿಗಳಲ್ಲಿ ಕಾಣಬಹುದು.

ಭಾರತದ ಸಂವಿಧಾನ ಭಾಷಾವಾರು ರಾಜ್ಯಗಳಿಗೆ ನೀಡಿರುವ ಮಾನ್ಯತೆಯ ಮೂಲ ಇರುವುದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯಲ್ಲಿ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಸ್ವಾಯತ್ತ ಸಾಂಸ್ಥಿಕ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಲ್ಪಿಸಬೇಕಾದ್ದು ಕೇಂದ್ರ ಸರ್ಕಾರದ ಅಥವಾ ಪ್ರಭುತ್ವದ ಆದ್ಯತೆಯೂ ಹೌದು ಕರ್ತವ್ಯವೂ ಹೌದು. ಆದರೆ ಇಂದು ಭಾರತ ಈ ಸಾಂವಿಧಾನಿಕ ಕರ್ತವ್ಯದಿಂದ ವಿಮುಖವಾಗಿದೆ. ಭಾರತದ ರಾಷ್ಟ್ರೀಯತೆ ಎಂದರೆ ಒಕ್ಕೂಟ ವ್ಯವಸ್ಥೆಯೊಳಗಿನ ಪ್ರಾದೇಶಿಕ ಅಸ್ಮಿತೆಗಳನ್ನೊಳಗೊಂಡ ಒಂದು ಪರಿಕಲ್ಪನೆ. ಆದರೆ ಇಂದು ನಾವು ಎದುರಿಸುತ್ತಿರುವ ರಾಷ್ಟ್ರೀಯತೆ ಮೂಲತಃ ಸಾಂಸ್ಕೃತಿಕ ನೆಲೆಯಲ್ಲಿ ಅನಾವರಣಗೊಳ್ಳುತ್ತಿದ್ದು, ಪ್ರಾದೇಶಿಕ ಅಸ್ಮಿತೆಯನ್ನು ನುಂಗಿಹಾಕುವಂತೆ ಕಾಣುತ್ತಿದೆ.

ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ ಎನ್ನುವ ಘೋಷಣೆಯಲ್ಲೇ ಈ ಅಪಾಯವನ್ನು ನಾವು ಗುರುತಿಸಬಹುದಾಗಿದೆ. ಹಿಂದಿ ಹೇರಿಕೆಯನ್ನು ಜನಸಾಮಾನ್ಯರ ಪ್ರತಿರೋಧದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದರೂ ಇದು ದೀರ್ಘಕಾಲಿಕ ದೂರದೃಷ್ಟಿಯ ಯೋಜನೆ ಎನ್ನುವುದನ್ನು ಮರೆಯುವಂತಿಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ಶಿಕ್ಷಣ ನೀತಿ ಇದನ್ನು ಸಾರ್ವತ್ರೀಕರಿಸುವುದಷ್ಟೇ ಅಲ್ಲದೆ ಸಾಂಸ್ಥಿಕವಾಗಿ ಜಾರಿಗೊಳಿಸಿಬಿಡುತ್ತದೆ. ಭಾಷೆಯ ಅಳಿವು ಉಳಿವು ಇಲ್ಲಿ ಪ್ರಶ್ನೆಗೊಳಗಾಗುತ್ತದೆ. ನಾವು ಕನ್ನಡಿಗರು ಎನ್ನುತ್ತಲೋ, ಕನ್ನಡ ನಾಡು ನಮ್ಮದು ಎನ್ನುತ್ತಲೋ ಅಬ್ಬರಿಸುವ ಮುನ್ನ ನಮ್ಮ ಕನ್ನಡದ ನೆಲೆಗಳು ಏನಾಗುತ್ತಿವೆ ಎನ್ನುವುದರ ಪರಿವೆ ನಮಗಿರಬೇಕಲ್ಲವೇ ?

ಕನ್ನಡಿಗರ ಶ್ರಮ, ಪರಿಶ್ರಮದ ಮೂಲಕವೇ ಬೆಳೆದು ನಿಂತ ಸಾಂವಿಧಾನಿಕ ನೆಲೆಗಳು ಇಂದು ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಚೌಕಟ್ಟಿನಲ್ಲಿ ನೇಪಥ್ಯಕ್ಕೆ ಸರಿಯುತ್ತಿವೆ. ಇದನ್ನು ನಾವು ಭೌಗೋಳಿಕ ರಾಷ್ಟ್ರೀಯತೆಯ ಉನ್ಮಾದದಲ್ಲಿ ಮರೆಯುತ್ತಿದ್ದೇವೆ. ಮತ್ತೊಂದೆಡೆ ಕನ್ನಡಿಗರೇ ಕಟ್ಟಿ ಬೆಳೆಸಿದ ಸಾಂಸ್ಥಿಕ ನೆಲೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಇದನ್ನು ಸಾಂಸ್ಕøತಿಕ ಅಸ್ಮಿತೆಯ ಉನ್ಮಾದದಲ್ಲಿ ನಿರ್ಲಕ್ಷಿಸುತ್ತಿದ್ದೇವೆ. ಕನ್ನಡ ಮತ್ತು ಕನ್ನಡತನ ಉಳಿಯಬೇಕೆಂದರೆ ಕನ್ನಡಿಗರು ಕಟ್ಟಿ ಬೆಳೆಸಿದ ನೆಲೆಗಳೂ ಉಳಿಯಬೇಕಲ್ಲವೇ ? ಒಮ್ಮೆ ಹಿಂದಿರುಗಿ ನೋಡೋಣ.

ಕಳೆದ ಅರು ವರ್ಷಗಳಲ್ಲಿ ನಮ್ಮ ಅಸ್ಮಿತೆಯ ಕುರುಹಾಗಿದ್ದ, ನಮ್ಮ ಶ್ರಮಶಕ್ತಿಯ ಸ್ಥಾವರದಂತಿದ್ದ ಸಾಂಸ್ಥಿಕ ನೆಲೆಗಳು ಸದ್ದಿಲ್ಲದೆ ಮರೆಯಾಗುತ್ತಿಲ್ಲವೇ ? ಮೈಸೂರು ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ ಈ ಎಲ್ಲವೂ ರಾಷ್ಟ್ರೀಕೃತ ಸಾರ್ವಜನಿಕ ಸಂಸ್ಥೆಗಳಾಗಿದ್ದವು. ಆದರೆ ಈ ಬ್ಯಾಂಕುಗಳ ಅಸ್ಮಿತೆ ಉಳಿದುಕೊಂಡು ಬಂದಿದ್ದುದು ಕನ್ನಡತನದಲ್ಲಿ, ಕನ್ನಡಿಗರ ನೆಲೆಯಲ್ಲಿ, ಕನ್ನಡ ಭಾಷೆಯ ನೆಲೆಯಲ್ಲಿ ಮತ್ತು ಈ ನೆಲದ ಶ್ರಮಿಕರ ಶ್ರಮದಲ್ಲಿ. ಇಂದು ಈ ಬ್ಯಾಂಕುಗಳು ಇತಿಹಾಸದ ಪುಟಗಳಲ್ಲೂ ಕಾಣದಂತೆ ಮರೆಯಾಗಿಬಿಟ್ಟಿವೆ. ಕೆನರಾ ಮತ್ತು ಕರ್ನಾಟಕ ಬ್ಯಾಂಕ್ ಉಳಿದುಕೊಂಡಿದೆ. ಹೆಚ್ಚು ಕಾಲ ಇರುವುದಿಲ್ಲ ಎನ್ನುವುದನ್ನೂ ಅರ್ಥಮಾಡಿಕೊಳ್ಳಬೇಕಿದೆ. ಆದರೆ ಕನ್ನಡವೇ ನಮ್ಮ ಉಸಿರು ಎಂದು ಕೂಗಿ ಹೇಳುವ ದನಿಗಳಿಗೆ ಇದು ಒಂದು ಗಂಭೀರ ಸಮಸ್ಯೆ ಎನಿಸಲೇ ಇಲ್ಲ.

ಈಗ ನಾವೇ ಕಟ್ಟಿ ಬೆಳೆಸಿದ ಸಾರ್ವಜನಿಕ ಉದ್ದಿಮೆಗಳು ಬಲಿಪೀಠದತ್ತ ಸಾಗುತ್ತವೆ. ಕೋಲಾರ ಚಿನ್ನದ ಗಣಿ ಮುಚ್ಚಿ ಮೂರು-ನಾಲ್ಕು ದಶಕಗಳಾಗಿವೆ, ಪುನರಾರಂಭಿಸುವ ಯೋಜನೆಗಳೂ ಇವೆ. ಆದರೆ ಉಳಿದರೂ ನಮ್ಮ ಕೈಯ್ಯಲ್ಲಿ ಉಳಿಯುವುದಿಲ್ಲ. ಕಾರ್ಪೋರೇಟ್ ವಶವಾಗುತ್ತದೆ. ಬಿಹೆಚ್‍ಇಎಲ್, ಬಿಇಎಲ್, ಹೆಚ್‍ಎಂಟಿ, ಬಿಇಎಂಎಲ್, ಹೆಚ್‍ಎಎಲ್ ಹೀಗೆ ಸ್ವತಂತ್ರ ಭಾರತದ ದೇವಾಲಯಗಳು ಎಂದು ಗುರುತಿಸಲ್ಪಟ್ಟಿದ್ದ ಉದ್ದಿಮೆಗಳು ಕ್ರಮೇಣ ವಿದೇಶಿ/ಸ್ವದೇಶಿ ಕಾರ್ಪೋರೇಟ್ ಉದ್ಯಮಿಗಳ ಪಾಲಾಗುತ್ತದೆ. ಇಂದಿನ ದುಡಿಯುವ ಕೈಗಳತ್ತ ಒಮ್ಮೆ ನೋಡಿದಾಗ, ಡಿಜಿಟಲೀಕರಣಗೊಂಡ ಔದ್ಯಮಿಕ ಲೋಕದಲ್ಲಿ ಸೇವೆ ಸಲ್ಲಿಸುತ್ತಿರುವ 30-40 ವಯೋಮಾನದ ಶೇ 75ರಷ್ಟು ದುಡಿಮೆಗಾರರು ಈ ಮೇಲೆ ಹೇಳಿದ ಸಾರ್ವಜನಿಕ ಉದ್ದಿಮೆಗಳ, ಬ್ಯಾಂಕುಗಳ ನೆಲೆಯಲ್ಲೇ ಬೆಳೆದುಬಂದಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಕರ್ನಾಟಕದಲ್ಲಿ ಹಿತವಲಯದಲ್ಲಿರುವ ಮಧ್ಯಮ ವರ್ಗಗಳು ಈ ಉದ್ದಿಮೆಗಳಲ್ಲಿ ದುಡಿದ ಜೀವಗಳ ಸಂತತಿ ಎನ್ನುವುದನ್ನು ಗಮನಿಸಬೇಕಿದೆ.

ಆದರೆ ಕನ್ನಡಿಗರೇ ಕಟ್ಟಿ ಬೆಳೆಸಿದ ಈ ಸಾರ್ವಜನಿಕ ಉದ್ದಿಮೆಗಳು ಕ್ರಮೇಣ ಈ ಬ್ಯಾಂಕುಗಳಂತೆಯೇ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ. ಇತ್ತ ರೈಲು ಹಳಿಗಳೂ ನಮ್ಮದಾಗುವುದಿಲ್ಲ, ಕೃಷಿ ಭೂಮಿಯೂ ನಮ್ಮದಾಗುವುದಿಲ್ಲ, ಅರಣ್ಯ ಸಂಪತ್ತಿನ ಮೇಲೆಯೂ ನಮ್ಮ ಅಧಿಕಾರ ಇರುವುದಿಲ್ಲ, ಭೂಗರ್ಭದ ಖನಿಜಗಳೂ ನಮ್ಮದು ಎನ್ನಲಾಗುವುದಿಲ್ಲ. ರೈಲ್ವೆ ಮತ್ತು ವಿಮಾನ ನಿಲ್ದಾಣಗಳ ಹೆಸರುಗಳಲ್ಲಿ ಕನ್ನಡದ ಅಸ್ಮಿತೆಯನ್ನು ಕೆಂಪೇಗೌಡರ ಹೆಸರಿನಲ್ಲೋ, ನಾಲ್ವಡಿಯವರ ಹೆಸರಿನಲ್ಲೋ ಕಂಡು ಸಂಭ್ರಮಿಸುತ್ತೇವೆ. ಆದರೆ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ವಾರಸುದಾರರ ಒಡೆತನಕ್ಕೆ ಒಳಪಡುತ್ತವೆ.

ಇವೆಲ್ಲದಕ್ಕೂ ಮುಕುಟವಿಟ್ಟಂತೆ ಶೈಕ್ಷಣಿಕ ವಲಯದಲ್ಲಿನ ಬೆಳವಣಿಗೆಗಳನ್ನು ನೋಡಿದರೆ ನಮ್ಮ ವಿಶ್ವವಿದ್ಯಾಲಯಗಳೂ ಸಹ ಮತ್ತೊಂದು ವಿಶ್ವದ ಪಾಲಾಗುವ ಕಾಲ ಸನ್ನಿಹಿತವಾಗುತ್ತಿದೆ. ನಮ್ಮ ನಾಡಿನ ಹೆಮ್ಮೆ, ವಿಶ್ವೇಶ್ವರಯ್ಯನವರು, ಮೈಸೂರಿನ ನಾಲ್ವಡಿ ಒಡೆಯರ್ ಸ್ಥಾಪಿಸಿದ ಶೈಕ್ಷಣಿಕ, ಔದ್ಯಮಿಕ ಸಂಸ್ಥೆಗಳ ಪಟ್ಟಿ ವಾಟ್ಸಪ್ ವಿಶ್ವವಿದ್ಯಾಲಯದ ಸಂದೇಶಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಈ ಸಂಸ್ಥೆಗಳಲ್ಲಿ ಹಲವು ಮುಚ್ಚಿಹೋಗಿವೆ ಇನ್ನುಳಿದವು ಕಾರ್ಪೋರೇಟ್ ವಲಯದಲ್ಲಿ ಲೀನವಾಗಲಿದೆ. ಜಲಸಂಪನ್ಮೂಲಗಳನ್ನೂ ಖಾಸಗೀಕರಣಕ್ಕೊಳಪಡಿಸುವ ದಿನಗಳು ದೂರವೇನಿಲ್ಲ. ಕೃಷ್ಣರಾಜಸಾಗರ, ಕಬಿನಿ ಜಲಾಶಯ ಸಹ ಒಬ್ಬ ಉದ್ಯಮಿಯ ಸೊತ್ತಾಗುತ್ತದೆ.

ಈ ಎಲ್ಲ ಬೆಳವಣಿಗೆಗಳನ್ನೂ ನಾವು ದೇಶದ ಅಭಿವೃದ್ಧಿ ಮತ್ತು ಪ್ರಗತಿಯ ಅನಿವಾರ್ಯತೆಗಳು ಎಂದು ಭಾವಿಸಿ, ಹಿತವಲಯಗಳಲ್ಲಿ ವಿಶ್ರಮಿಸುತ್ತಿದ್ದೇವೆ. 50 ವರ್ಷಗಳ ಕಾಲ ಒಂದು ಪೀಳಿಗೆ ಕಟ್ಟಿ ಬೆಳೆಸಿದ ಸಂಸ್ಥೆಗಳು ಅದೇ ಪೀಳಿಗೆಯ ಸಂತತಿಯ ಪಾಲಿಗೆ ಬಿಕರಿಯಾಗಬಹುದಾದ ಮಾರುಕಟ್ಟೆ ಸರಕುಗಳಂತೆ ಕಾಣುತ್ತಿದೆ. ನಮ್ಮ ಮುಂದಿನ ಪೀಳಿಗೆಗೆ ಇದಾವುದೂ ಉಳಿಯುವುದಿಲ್ಲ ಎಂಬ ಸೂಕ್ಷ್ಮ ಪರಿಜ್ಞಾನವೂ ಇಲ್ಲದಂತೆ ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣ ಉನ್ಮಾದ ಸೃಷ್ಟಿಸಿದೆ. ಮೀಸಲಾತಿಯ ಔಚಿತ್ಯವನ್ನು ಪ್ರಶ್ನಿಸುವ ಮನಸುಗಳು ಬಲವಾಗುತ್ತಿರುವಂತೆಯೇ ಮೀಸಲಾತಿಯ ನೆಲೆಗಳೂ ಕ್ರಮೇಣ ಧ್ವಂಸವಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ ಆದರೆ ನಮ್ಮಲ್ಲಿ ಇದು ಆತಂಕ ಸೃಷ್ಟಿಸುತ್ತಿಲ್ಲ.

ಇದನ್ನು ನಿಷ್ಕ್ರಿಯತೆ ಎನ್ನೋಣವೋ, ನಿರ್ಲಿಪ್ತತೆ ಎನ್ನೋಣವೋ ? ಇಂದು, 31 ಅಕ್ಟೋಬರ್ ಬಾರತದ ಮೊಟ್ಟಮೊದಲ ಕಾರ್ಮಿಕ ಸಂಘಟನೆ ಎಐಟಿಯುಸಿ ತನ್ನ ನೂರನೆಯ ವರ್ಷವನ್ನು ಆಚರಿಸುತ್ತಿದೆ. ಈ ಸಂಘಟನೆಯ ಮತ್ತು ಇದರಿಂದಲೇ ಚದುರಿಹೋದ ಹತ್ತಾರು ಸಂಘಟನೆಗಳ ಹೋರಾಟಗಳಲ್ಲಿ ಕೆಂಬಾವುಟದ ಆಶ್ರಯದಲ್ಲಿ ತಮ್ಮ ಬದುಕು ರೂಪಿಸಿಕೊಂಡು ಇಂದು ಸುಸ್ಥಿರವಾದ ಹಿತವಲಯಗಳಲ್ಲಿ ವಿರಮಿಸಿರುವ ಒಂದು ವರ್ಗ ತನ್ನ ಅಸ್ತಿತ್ವದ ನೆಲೆ ಈ ಹೋರಾಟಗಳಲ್ಲಿದೆ ಎನ್ನುವುದನ್ನೂ ಮರೆತು “ ಅಭಿವೃದ್ಧಿ ಪಥ ”ದತ್ತ ನೋಡುತ್ತಿದೆ. ಈ ಅಭಿವೃದ್ಧಿ ಪಥದ ಹಾಸುಗಲ್ಲುಗಳ ನಡುವೆ ನಮ್ಮ, ಅಂದರೆ ಕನ್ನಡಿಗರ ಅಸ್ತಿತ್ವ, ಅಸ್ಥಿಯಂತೆ ಹೂತುಹೋಗುತ್ತಿರುವುದನ್ನು, ಕನ್ನಡದ ಮನಸುಗಳು ಗ್ರಹಿಸುತ್ತಲೇ ಇಲ್ಲ ಎಂದು ವಿಷಾದದಿಂದ ಹೇಳಬೇಕಿದೆ.

“ ಕನ್ನಡ ಮತ್ತು ಕನ್ನಡಿಗರು ” , “ ಕನ್ನಡತನ ಮತ್ತು ಕರ್ನಾಟಕ ” ಈ ಪದಪುಂಜಗಳ ಹಿಂದೆ ಒಂದು ಭೌಗೋಳಿಕ, ಸಾಂಸ್ಕೃತಿಕ, ಭಾಷಿಕ, ಪ್ರಾದೇಶಿಕ ಮತ್ತು ಭಾವುಕತೆಯ ಅಸ್ಮಿತೆಗಳಿದ್ದರೆ ಅದು ಈ ನಾಡಿನ ಸಮಸ್ತ ಜನತೆಯ ಅಸ್ತಿತ್ವಕ್ಕೆ ಸಂಬಂಧಿಸುವಂತಿರಬೇಕು. ಈ ನಿಟ್ಟಿನಲ್ಲಿ ಆಲೋಚನೆ ಮಾಡುವ ಕನ್ನಡ ಸಂಘಟನೆಗಳು ಎಷ್ಟಿವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಂದಿಗ್ಧತೆಯಲ್ಲಿ ನಾವಿದ್ದೇವೆ. ಈ ಸಂದಿಗ್ಧತೆಯ ನಡುವೆಯೇ ಮತ್ತೊಂದು ಕನ್ನಡ ಮತ್ತು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ನಿಂತ ಭೂಮಿಯೇ ಕುಸಿಯುತ್ತಿದ್ದರೂ ಭೂಪಟದಲ್ಲಿ ನಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕೆಂಪು ಹಳದಿ ಬಣ್ಣದ ನಡುವೆ ಕಾಣುತ್ತಾ ಸಂಭ್ರಮಿಸುತ್ತಿದ್ದೇವೆ.

ನಮ್ಮ ಆಲೋಚನಾ ಲಹರಿ ಮತ್ತು ಹೋರಾಟದ ಹಾದಿ ಎರಡೂ ಬದಲಾಗಬೇಕಿದೆ. “ಬೆವರು ನಮ್ಮದು, ದುಡಿಮೆ ನಮ್ಮದು, ಶ್ರಮ ನಮ್ಮದು ಒಡೆತನ ಮತ್ತಾರದೋ ” ಎನ್ನುವ ಸಾಲುಗಳು ಇಂದು ಹೆಚ್ಚು ಪ್ರಸ್ತುತ ಎನಿಸಬೇಕಲ್ಲವೇ ? ಈ ಭಾವನೆ ಮತ್ತು ಗ್ರಹಿಕೆ ನಾವು ಕಾಣುತ್ತಿರುವ ಅಭಿವೃದ್ಧಿ ಅಥವಾ ಪ್ರಗತಿಯ ಪಥದಲ್ಲಿ ಅನಿವಾರ್ಯವಾಗಿ ಮೂಡಲೇ ಬೇಕು ಎನ್ನುವ ಸೂಕ್ಷ್ಮವನ್ನು ಇನ್ನಾದರೂ ಗ್ರಹಿಸಬೇಕಿದೆ.

- Advertisement -