ಕತ್ತಲೆಯಲ್ಲಿ ಪ್ರಜಾಸತ್ತೆಯ ಕಗ್ಗೊಲೆ

0
26

ಎ.ಎಂ. ಝೈದ್

ಮಹಾರಾಷ್ಟ್ರ ರಾಜ್ಯ ರಾಜಕಾರಣವು ದಿನಕ್ಕೊಂದರಂತೆ ವಿಚಿತ್ರ ತಿರುವನ್ನು ಪಡೆಯುತ್ತಾ ಸಾಗುತ್ತಿದೆ. 50:50ರಂತೆ ಅಧಿಕಾರ ಹಂಚಿಕೊಳ್ಳುವ ಮಾತುಕತೆ ವಿಫಲವಾಗುತ್ತಿದ್ದಂತೆಯೇ ಬಿಜೆಪಿ-ಶಿವಸೇನೆಯ ದಶಕಗಳ ಮೈತ್ರಿಯು ಮುರಿದುಬಿತ್ತು. ಅಚ್ಚರಿಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನೂ ಹೇರಲಾಯಿತು. ಆ ನಂತರ ರಾಜ್ಯದಲ್ಲಿ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ನ ಪಕ್ಷಗಳ ಮೈತ್ರಿ ಸರಕಾರವು ರಚನೆಯಾಗುವ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಆದರೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಪಹಾಸ್ಯ ಮಾಡುತ್ತಾ ವಾಮಮಾರ್ಗದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ, ಮಹಾರಾಷ್ಟ್ರದಲ್ಲಿಯೂ ತನ್ನ ಅನೈತಿಕ ರಾಜಕಾರಣಕ್ಕೆ ಮುನ್ನುಡಿ ಬರೆಯಿತು. ಎನ್‌ಸಿಪಿ ನಾಯಕ ಶರದ್ ಪವಾರ್ ಸೋದರಳಿಯ ಹಾಗೂ ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕ ಅಜಿತ್ ಪವಾರ್ ಸಂಜೆಯವರೆಗೂ ಮಹಾರಾಷ್ಟ್ರದಲ್ಲಿ ಒಂದು ಪರ್ಯಾಯ ಸರಕಾರ ರಚಿಸಲು ವಿಪಕ್ಷಗಳ ಉನ್ನತ ನಾಯಕರೊಂದಿಗೆ ಮಹತ್ವದ ಸಭೆ ನಡೆಸುತ್ತಿದ್ದರು. ಆದರೆ ಏಕಾಏಕಿ ಅವರು ಅಲ್ಲಿಂದ ತೆರಳಿದರು. ಮರುದಿನ ರಾಜ್ಯದ ಜನತೆ ನಿದ್ದೆಯಿಂದ ಏಳುತ್ತಿರುವಾರುವಾಗ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹಿಂಪಡೆಯಲಾಗಿದೆ ಮತ್ತು ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂಬ ಸುದ್ದಿ ಕೇಳಿ ಬಂತು. ಈ ನಡುವೆ ಸರಕಾರ ರಚನೆಗೆ ಫಡ್ನವೀಸ್‌ಗೆ ರಾಜ್ಯಪಾಲರು ಅವಕಾಶ ನೀಡಿರುವುದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಮೂರೂ ಪಕ್ಷಗಳು ಸುಪ್ರೀಂ ಕೋರ್ಟ್ ಮೊರೆ ಹೋದವು.

 ಕತ್ತಲೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ

ಮೂರು ಪಕ್ಷಗಳ ಮೈತ್ರಿಕೂಟದ ಸರಕಾರದ ರಚನೆಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿತ್ತು. ನವೆಂಬರ್ 22ರ ರಾತ್ರಿ ಫಡ್ನವೀಸ್ ಮತ್ತು ಅಜಿತ್ ಪವಾರ್ ರಹಸ್ಯ ಭೇಟಿ ನಡೆಯುತ್ತದೆ. 12:30ಕ್ಕೆ ರಾಷ್ಟ್ರಪತಿ ಆಡಳಿತ ಹಿಂಪಡೆಯುವ ಅಧಿಸೂಚನೆ ಹೊರಡಿಸಿ ಬೆಳಗಿನ ಜಾವ 5:45ಕ್ಕೆ ಪ್ರಕಟಿಸುವ ತೀರ್ಮಾನಕ್ಕೆ ಬರಲಾಗುತ್ತದೆ. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಪೂರ್ವ ನಿಗದಿತ ದಿಲ್ಲಿ ಪ್ರಯಾಣವನ್ನು ನಡುರಾತ್ರಿ 12:55ಕ್ಕೆ ರದ್ದುಗೊಳಿಸುವ ಸೂಚನೆ ಬರುತ್ತದೆ. ಈ ಎಲ್ಲಾ ಬೆಳವಣಿಗೆಗಳ ಬಳಿಕ ಬೆಳಗಿನ ಜಾವ 6:30ಕ್ಕೆ ಪ್ರಮಾಣ ವಚನವನ್ನು ಸಮಯ ನಿಗದಿಪಡಿಸಲಾಗುತ್ತದೆ. ಬೆಳಗ್ಗೆ 7.50ಕ್ಕೆ ಪ್ರಮಾಣವಚನ ನಡೆಯುತ್ತದೆ. ಕೇಂದ್ರ ಸಚಿವ ಸಂಪುಟದ ಶಿಫಾರಸು ಇಲ್ಲದೆ ರಾಷ್ಟ್ರಪತಿ ಆಡಳಿತ ವಾಪಸು ಪಡೆಯುವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಗಮನಾರ್ಹ. ತುರ್ತು ಸಂದರ್ಭಗಳಲ್ಲಿ ಸಚಿವ ಸಂಪುಟವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರಧಾನಿ ಇಂತಹ ಒಂದು ನಿರ್ಧಾರವನ್ನು ಕೈಗೊಳ್ಳಬಹುದು. ತಮ್ಮದೇ ಪಕ್ಷದ ಸರಕಾರ ರಚಿಸುವ ತುರ್ತು ಸಂದರ್ಭಕ್ಕಾಗಿ ಪ್ರಧಾನಿ ಇಂತಹ ಒಂದು ಕ್ರಮಕೈಗೊಂಡರು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಮೂರು ಪಕ್ಷಗಳ ಸಹಮತಿಯೊಂದಿಗೆ ಒಂದು ಸ್ಥಿರ ಸರ್ಕಾರ ನೀಡುವ ಬಗ್ಗೆ ಹಿಂದಿನ ರಾತ್ರಿ ಚರ್ಚೆಯಾಗುತ್ತದೆ. ಆದರೆ ಮರುದಿನ ಬೆಳಗ್ಗೆ ಸೂರ್ಯ ಉದಯಿಸುವ ಮುನ್ನವೇ ರಾಷ್ಟ್ರಪತಿ ಆಡಳಿತ ತೆಗೆದು ಹಾಕಿ, ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತದೆ. ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರಿರುವ ಮೋದಿ ಪರಮ ಭ್ರಷ್ಟನಾಗಿರುವ ಉಪ ಮುಖ್ಯಮಂತ್ರಿಗೆ ಶುಭಕೋರುತ್ತಾರೆ. ಒಟ್ಟಿನಲ್ಲಿ ‘ಮಹಾ’ ವಿದ್ಯಾಮಾನಗಳನ್ನು ಗಮನಿಸಿದರೆ ಅಧಿಕಾರಕ್ಕಾಗಿ ಪ್ರಜಾಸತ್ತೆಯ ಕಗ್ಗೊಲೆ ನಡೆಸಿರುವುದು ಸುಸ್ಪಷ್ಟವಾಗುತ್ತದೆ.

 ಭ್ರಷ್ಟಾಚಾರ ಆರೋಪಿಗೆ ಬಿಜೆಪಿಯಿಂದ ‘ಶುದ್ಧಹಸ್ತ’ದ ಪ್ರಮಾಣ ಪತ್ರ!

95,000 ಕೋಟಿಯ ಭ್ರಷ್ಟಾಚಾರದಲ್ಲಿ ಅಜಿತ್ ಪವಾರ್ ಆರೋಪಿ.  ನೀರಾವರಿ ವಿಭಾಗದಲ್ಲಿ ನಡೆದ 70,000 ಕೋಟಿ ಹಗರಣವನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವೀಸ್ ತನ್ನ ಚುನಾವಣಾ ಪ್ರಚಾರವನ್ನು ನಡೆಸಿದ್ದರು. ಅಚ್ಚರಿಯ ಸಂಗತಿಯೆಂದರೆ, ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಮತ್ತು ಅದೇ ಸರಕಾರದಲ್ಲಿ ಭ್ರಷ್ಟಾಚಾರ ಆರೋಪಿ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು! ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ಹೈಕೋರ್ಟ್‌ಗೆ ಅಫಿದಾವಿತ್ ಸಲ್ಲಿಸಿದ್ದ ಫಡ್ನವೀಸ್ ಸರಕಾರವು ಅಜಿತ್ ಪವಾರ್‌ನನ್ನು ಮುಖ್ಯ ಆರೋಪಿ ಎಂದು ಹೇಳಿತ್ತು. ಐದು ವರ್ಷಗಳ ಆಡಳಿತಾವಧಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೊಳ್ಳುವ ಕ್ರಮಗಳು ಕಂಡುಬರಲಿಲ್ಲ. ಇದೇ ವರ್ಷದ ಆಗಸ್ಟ್‌ನಲ್ಲಿ ಬಾಂಬೆ ಹೈಕೋರ್ಟ್‌ನ ಆದೇಶದ ಪ್ರಕಾರ ಮುಂಬೈ ಪೊಲೀಸ್ ಅಪರಾಧ ವಿಭಾಗವು 25,000 ಕೋಟಿ ದುರುಪಯೋಗದ ಪ್ರಕರಣವನ್ನು ದಾಖಲಿಸಿತ್ತು. ಇದರಲ್ಲಿ 70 ಮಂದಿ ಆರೋಪಿಗಳ ಪೈಕಿ ಅಜಿತ್ ಪವಾರ್ ಕೂಡ ಒಬ್ಬರಾಗಿದ್ದರು. ನಂತರ ಕೇಂದ್ರ ಏಜೆನ್ಸಿಯಾದ ಇಡಿ ಕೂಡ ದಾಳಿ ನಡೆಸಿತ್ತು. ಭ್ರಷ್ಟಾಚಾರ ನಿರ್ಮೂಲನೆಯ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಬಿಜೆಪಿ ಇದೀಗ ಬ್ರಹ್ಮಾಂಡ ಭ್ರಷ್ಟಾಚಾರಿಯೊಬ್ಬನನ್ನು ಉಪ ಮುಖ್ಯಮಂತ್ರಿಯಾಗಿ ಮಾಡಿ ಆತನಿಗೆ ‘ಶುದ್ಧಹಸ್ತ’ದ ಪ್ರಮಾಣ ಪತ್ರ ನೀಡಿದಂತಿದೆ. ಜೊತೆಗೆ ಉಪ ಮುಖ್ಯಮಂತ್ರಿಯಾದ ಎರಡು ದಿನಗಳ ಅಜಿತ್ ಪವಾರ್‌ಗೆ ಭ್ರಷ್ಚಾಚಾರ ನಿಗ್ರಹ ದಳವೂ ಬಹುಕೋಟಿ ನೀರಾವರಿ ಹಗರಣದಲ್ಲಿ ಕ್ಲೀನ್‌ಚಿಟ್ ನೀಡಿದೆ.

 ನೈತಿಕ ಅಧಃಪತನದತ್ತ ಎನ್‌ಸಿಪಿ-ಕಾಂಗ್ರೆಸ್

ಮಹಾರಾಷ್ಟ್ರದಲ್ಲಿ ಈಗ ನಡೆಯುತ್ತಿರುವುದು ಅನೈತಿಕ ರಾಜಕೀಯವಾಗಿದೆ. ಜಾತ್ಯತೀತ ಎಂದು ಕರೆಸಿಕೊಳ್ಳುವ ಪಕ್ಷಗಳು ತಮ್ಮ ವೈಚಾರಿಕ ಬದ್ಧತೆಯ ಕೊರತೆಯನ್ನು ಅನುಭವಿಸುತ್ತಿವೆ ಮತ್ತು ಅಧಿಕಾರ ಗಳಿಸಲು ಅವು ತಮ್ಮ ಸಿದ್ಧಾಂತಕ್ಕೆ ಕೊಳ್ಳಿ ಇಟ್ಟು ಯಾವುದೇ ಮಟ್ಟಕ್ಕೂ ಇಳಿಯಬಹುದು ಎಂಬ ವಿಚಾರ ಢಾಳಾಗಿ ಕಾಣುತ್ತಿದೆ. ಕಾಂಗ್ರೆಸ್-ಎನ್‌ಸಿಪಿ ಇದೀಗ, ಮುಸ್ಲಿಮರನ್ನು ನಖಶಿಖಾಂತ ದ್ವೇಷಿಸುವ ಶಿವಸೇನೆಯೊಂದಿಗೆ ಮೈತ್ರಿಗೆ ಮುಂದಾಗಿರುವ ವಿಲಕ್ಷಣ ಸನ್ನಿವೇಶ ಇದಕ್ಕೆ ಉದಾಹರಣೆಯಾಗಿದೆ. ನೈತಿಕ ಅಧಃಪತನದೊಂದಿಗೆ ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಿರುವ ಈ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ತರ್ಕವನ್ನು ಮುಂದಿಡುತ್ತಿದೆ. ಆದರೆ ಎನ್‌ಸಿಪಿ-ಕಾಂಗ್ರೆಸ್‌ನ ಬುನಾದಿ ಇರುವುದು ಜಾತ್ಯತೀತ ಮೌಲ್ಯಗಳ ಮೇಲೆ. ಆದರೆ ಅದೇ ಶಿವಸೇನೆ ನಿಂತಿರುವುದು ಕೋಮು ದ್ವೇಷದ ಆಧಾರದ ಮೇಲೆ. ದೇಶದ  ಜಾತ್ಯತೀತತೆಯ ಸಂಕೇತವಾಗಿದ್ದ ಬಾಬ್ರಿ ಮಸ್ಜಿದ್ ಧ್ವಂಸ ಪ್ರಕರಣದಲ್ಲಿ ಬಿಜೆಪಿ-ಶಿವಸೇನೆ ಸಮಾನ ಭಾಗಿಗಳು. ಮುಸ್ಲಿಮರನ್ನು ವಿಷದ ಹಾವು, ದೇಶದ್ರೋಹಿಗಳು, ಪಾಕಿಸ್ತಾನಕ್ಕೆ ಹೋಗುವಂತೆ ಉಪದೇಶಿಸುತ್ತಿದ್ದ ಶಿವಸೇನೆ ಹಿಂದುತ್ವದ ವಿಚಾರಧಾರೆಯನ್ನು ಪ್ರಬಲವಾಗಿ ಪ್ರಚಾರಪಡಿಸುತ್ತಿರುವ ಪಕ್ಷವಾಗಿದೆ. ಪ್ರಖರ ಹಿಂದುತ್ವವಾದಿಯಾಗಿರುವ ಶಿವಸೇನೆ ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಲೇ ಬೆಳೆದ ಪಕ್ಷವಾಗಿದೆ. ಬಾಬ್ರಿ ಮಸ್ಜಿದ್ ಧ್ವಂಸದ ಬಳಿಕ ನಡೆದ ಮುಂಬೈ ಗಲಭೆಯಲ್ಲಿ ರಕ್ತದ ಹೊಳೆಯೇ ಹರಿದಿತ್ತು. ಶ್ರೀಕೃಷ್ಣ ಆಯೋಗದ ವರದಿಯನ್ನು ಒಮ್ಮೆ ಗಮನಿಸಿದರೆ ಈ ಬರ್ಬರ ಹತ್ಯಾಕಾಂಡದಲ್ಲಿ ಶಿವಸೇನೆಯು ಯಾವ ರೀತಿಯ ಪಾತ್ರ ವಹಿಸಿದೆ ಎಂಬುದು ಸ್ಪಷ್ಟವಾಗುತ್ತದೆ. ಶಿವಸೇನೆಯ ದರ್ಬಾರ್, ಮುಸ್ಲಿಮರ ಹೆಣಗಳ ಅವಶೇಷಗಳ ಮೇಲೆಯೇ ನಿಂತಿರುವುದು. ಶಿವಸೇನೆಯೊಂದಿಗೆ ಕೈಜೋಡಿಸುವ ಮೂಲಕ ಎನ್‌ಸಿಪಿ-ಕಾಂಗ್ರೆಸ್ ಪಕ್ಷಗಳು ಶಿವಸೇನೆಯ ದುಷ್ಕೃತ್ಯಗಳಿಗೆ ಬೆನ್ನುತಟ್ಟುವ ಹಾದಿಯಲ್ಲಿ ಸಾಗುತ್ತಿರುವಂತೆ ಭಾಸವಾಗುತ್ತಿದೆ. ಬಹುಶಃ ಇವೆರಡು ಪಕ್ಷಗಳು ದೇಶದ ಜಾತ್ಯತೀತ ಮೌಲ್ಯಗಳ ಸಮಾಧಿಯ ಮೇಲೆ ತಮ್ಮ ಅಸ್ತಿತ್ವ ಮತ್ತು ಅಧಿಕಾರವನ್ನು ಕಾಣುವ ಪ್ರಯತ್ನ ಅನ್ನಬಹುದು.

 ಮಹಾರಾಷ್ಟ್ರದಲ್ಲಿ ಮರುಕಳಿಸಿದ ಕರ್ನಾಟಕದ ಪರಿಸ್ಥಿತಿ

ಬಹುಮತವಿಲ್ಲದಿದ್ದರೂ ಕರ್ನಾಟಕದಲ್ಲಿ ಯಡಿಯೂರಪ್ಪನವರು 2018ರಲ್ಲಿ ಜನಾದೇಶಕ್ಕೆ ವಿರುದ್ಧವಾಗಿ ಪ್ರಮಾನವಚನ ಸ್ವೀಕರಿಸಿದ್ದರು. ಆ ಬಳಿಕ ಬಹುಮತ ಸಾಬೀತುಪಡಿಸಲು ವಿಫಲವಾದ ಯಡಿಯೂರಪ್ಪನವರು ಎರಡನೇ ದಿನದಲ್ಲಿ ಕುರ್ಚಿಯಿಂದ ಕೆಳಗಿಳಿಯಬೇಕಾಗಿ ಬಂದಿತ್ತು. ಇದೀಗ ಮಹಾರಾಷ್ಟ್ರದಲ್ಲಿಯೂ ಬಿಜೆಪಿ, ತನ್ನ ಬಳಿ ಅಧಿಕಾರ ಹಿಡಿಯುವಷ್ಟು ಸಂಖ್ಯಾಬಲ ಇಲ್ಲದಿದ್ದರೂ ತರಾತುರಿಯಲ್ಲಿ ಅಜಿತ್ ಪವಾರ್‌ರೊಂದಿಗೆ ಸೇರಿ ಸರಕಾರ ರಚಿಸಿತು. ಪ್ರಮಾನವಚನ ಸ್ವೀಕರಿಸಿರುವ ದೇವೇಂದ್ರ ಫಡ್ನವೀಸ್ ಬಹುಮತ ಸಾಬೀತುಪಡಿಸಲು ಶಕ್ತರಾದರಷ್ಟೇ ಬಿಜೆಪಿ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿ ಉಳಿಯುತ್ತಿತ್ತು. ಆದರೆ ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್‌ರನ್ನು ಆಹ್ವಾನಿಸಿರುವ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಕ್ರಮವನ್ನು ಪ್ರಶ್ನಿಸಿ ಶಿವಸೇನಾ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಮೈತ್ರಿಕೂಟ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ಸುಪ್ರೀಂ ಕೋರ್ಟ್, ಬುಧವಾರವೇ ಬಹುಮತ ಸಾಬೀತುಪಡಿಸಬೇಕೆಂದು ಮಹತ್ವದ ತೀರ್ಪು ನೀಡಿತು. ಜೊತೆಗೆ ಗೌಪ್ಯ ಮತದಾನ ಮಾಡಬಾರದು, ಬಹುಮತದ ಯಾಚನೆ ಪ್ರಕ್ರಿಯೆ ಸಂಪೂರ್ಣವಾಗಿ ವಿಡಿಯೋ ಚಿತ್ರಣವಾಗಬೇಕು, ನೇರ ಪ್ರಸಾರವಾಗಬೇಕು ಎಂದು ಆದೇಶಿಸಿತ್ತು. ಕರ್ನಾಟಕದಲ್ಲಿ ಈ ಹಿಂದೆ ಆದ ಮುಖಭಂಗವನ್ನೇ ಬಿಜೆಪಿಯು ಮಹಾರಾಷ್ಟ್ರದಲ್ಲೂ ಅನುಭವಿಸಿತು. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಫಡ್ನವೀಸ್ ಬಹುಮತ ಸಾಬೀತುಪಡಿಸುವ ಮೊದಲೇ ಅಂದರೆ ಪ್ರಮಾಣ ವಚನ ಸ್ವೀಕರಿಸಿದ 3 ದಿನಗಳಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 

LEAVE A REPLY

Please enter your comment!
Please enter your name here