ಒಕ್ಕೂಟದ ಸಹಕಾರ ತತ್ವಕ್ಕೆ ತಿಲಾಂಜಲಿ ಅಪಾಯಕಾರಿ

Prasthutha: June 14, 2021

ಭಾರತವು ಒಕ್ಕೂಟ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ದೇಶವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರ ತತ್ವದಡಿ ಕಾರ್ಯನಿರ್ವಹಿಸುವಂತಹ ವಾತಾವರಣವನ್ನು ಸಂವಿಧಾನವೇ ಸೃಷ್ಟಿ ಮಾಡಿದೆ. ಎರಡೂ ಸರ್ಕಾರಗಳ ಕಾರ್ಯವ್ಯಾಪ್ತಿ ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಗಳೊಂದಿಗೆ ಸಂಘರ್ಷಕ್ಕೆ ಇಳಿಯುವ ಕೆಟ್ಟ ಚಾಳಿ ಆರಂಭಿಸಿದೆ. ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ, ಅನುದಾನ ಬಿಡುಗಡೆಗೆ ತಡೆ, ಐಎಎಸ್ ಅಧಿಕಾರಿಗಳ ವಿಷಯದಲ್ಲಿ ಕಿರಿಕ್ ಹೀಗೆ ಆರಂಭದಿಂದಲೂ ರಾಜ್ಯಗಳ ಜೊತೆ ಕಾಲು ಕೆರೆದು ಜಗಳಕ್ಕೆ ಇಳಿಯುತ್ತಿರುವುದು ನಡೆಯುತ್ತಾ ಬಂದಿದೆ. ಇದು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ಉತ್ತಮ ಬೆಳವಣಿಗೆಯಲ್ಲ.

ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಮತ್ತು ತಾರತಮ್ಯ ನೀತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕೇಂದ್ರದ ಇಂತಹ ಧೋರಣೆಗೆ ಹೆಚ್ಚಾಗಿ ತುತ್ತಾಗುತ್ತಿರುವುದು ಪಶ್ಚಿಮ ಬಂಗಾಳ ಮತ್ತು ಕೇರಳ ಎಂದರೆ ತಪ್ಪಾಗಲಾರದು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಲಾಗಾಯ್ತಿನಿಂದಲೂ ಪ್ರಯತ್ನಿಸುತ್ತಾ ಬಂದಿತ್ತು. ಇತ್ತೀಚೆಗೆ ಈ ರಾಜ್ಯಕ್ಕೆ ಚುನಾವಣೆ ಘೋಷಣೆಯಾದ ನಂತರ ಕೇಂದ್ರ ಸರ್ಕಾರ ಬಂಗಾಳವನ್ನು ನಡೆಸಿಕೊಂಡ ರೀತಿ ಯಾವುದೇ ರಾಜ್ಯವೂ ಒಪ್ಪುವಂತಹದ್ದಲ್ಲ. ಮಮತಾ ಬ್ಯಾನರ್ಜಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಆಲಾಪನ್ ಬಂಡೋಪಾಧ್ಯಾಯ ಅವರ ವಿಷಯದಲ್ಲಿ ಕೇಂದ್ರ ಸರ್ಕಾರ ತೋರಿದ ಹಠಮಾರಿತನ ಧೋರಣೆ, ಒಕ್ಕೂಟ ವ್ಯವಸ್ಥೆಗೆ ಮಾರಕ. ರಾಜ್ಯಕ್ಕೆ ನಿಯೋಜನೆಗೊಂಡ ಒಬ್ಬ ಐಎಎಸ್ ಅಧಿಕಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೊದಲು ಸಂಬಂಧಪಟ್ಟ ರಾಜ್ಯಗಳ ಜೊತೆ ಚರ್ಚಿಸುವುದು ವಾಡಿಕೆ. ಆದರೆ ಕೇಂದ್ರ ಸರ್ಕಾರ, ಈ ವಿಷಯದಲ್ಲಿ ಏಕಾಏಕಿ ನಿರ್ಧಾರ ಕೈಗೊಂಡು ತಕ್ಷಣ ಕೇಂದ್ರಕ್ಕೆ ವರದಿ ಮಾಡಿಕೊಳ್ಳುವಂತೆ ಆಲಾಪನ್ ಅವರಿಗೆ ಸೂಚಿಸಿರುವುದು ಕೂಡ ಆಕ್ಷೇಪಕ್ಕೆ ಕಾರಣವಾಗಿದೆ.

ದೆಹಲಿಯ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಒಂದಿಲ್ಲೊಂದು ವಿಷಯದಲ್ಲಿ ಕೇಂದ್ರ ಸರ್ಕಾರ ತಗಾದೆ ತೆಗೆಯುತ್ತಿರುವುದು, ಆಡಳಿತದಲ್ಲಿ ಹಸ್ತಕ್ಷೇಪ ನಡೆಸುವುದು ರಾಜಧಾನಿಯಲ್ಲಿ ಸಹಜ ಎಂಬಂತಾಗಿದೆ. ಕೇಜ್ರಿವಾಲ್ ಕೂಡ ಕೇಂದ್ರದೊಂದಿಗೆ ಜಿದ್ದಿಗೆ ಬಿದ್ದು. ಇತ್ತೀಚೆಗೆ ಆದಷ್ಟು ಹೊಂದಾಣಿಕೆಗೆ ಇಳಿದಂತೆ ಕಾಣುತ್ತಿದೆ.

ಇತ್ತ ಒಂದು ಕಾಲದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಮಹಾರಾಷ್ಟ್ರದ ಶಿವಸೇನೆ ಸರ್ಕಾರದೊಂದಿಗೂ ಕೇಂದ್ರದ ಬಿಜೆಪಿ ಜಟಾಪಟಿಗೆ ಇಳಿದಿತ್ತು. ಇದೀಗ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಬಿಜೆಪಿ ತನ್ನ ಹಿಂದುತ್ವ ಅಜೆಂಡಾ ಜಾರಿಗೊಳಿಸಲು ಮುಂದಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ಮುನ್ನಡೆಸಬೇಕಾದ ಪ್ರಧಾನಿಯವರು ರಾಜನಂತೆ ವರ್ತಿಸುತ್ತಿರುವುದು, ರಾಜ್ಯಗಳ ಮುಖ್ಯಮಂತ್ರಿಯನ್ನು ಸಾಮಂತರಂತೆ ಕಾಣುತ್ತಿರುವುದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣ. ರಾಜ್ಯ ಸರ್ಕಾರವೂ ಸಂವಿಧಾನದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಗಳು ಎಂಬ ಕನಿಷ್ಠ ಗೌರವವನ್ನು ನೀಡಬೇಕಾದುದು ಪ್ರಧಾನಿಯವರ ಕರ್ತವ್ಯ. ಕೋವಿಡ್ ಲಸಿಕೆ ನೀತಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳನ್ನು ನಿರ್ಲಕ್ಷಿಸಿ ತನ್ನ ತೀರ್ಮಾನವೇ ಅಂತಿಮವೆಂಬಂತೆ ನಡೆದುಕೊಂಡಿರುವುದನ್ನು ನ್ಯಾಯಾಲಯ ವಿಮರ್ಶೆಗೆ ಗುರಿಪಡಿಸಿದ್ದನ್ನು ಮರೆಯುವಂತಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಕೇಂದ್ರ ಸರ್ಕಾರದ ಲಸಿಕೆ ನೀತಿಯಲ್ಲಿ ರಾಜ್ಯಗಳ ವಿರುದ್ಧದ ತಾರತಮ್ಯ ನೀತಿಯನ್ನು ಪ್ರಶ್ನಿಸಿದೆ. ಮಾತ್ರವಲ್ಲ ಕೇಂದ್ರ ಸರ್ಕಾರವೇ ಲಸಿಕೆಯನ್ನು ಖರೀದಿಸಿ ರಾಜ್ಯಗಳಿಗೆ ಹಂಚಿಕೆ ಮಾಡುವಂತೆ ನಿರ್ದೇಶನ ನೀಡಿದೆ. ಜೊತೆಗೆ ಲಸಿಕೆಗೆ ಮೀಸಲಿಟ್ಟ ಅನುದಾನದ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಏಕಾಏಕಿ ಎಲ್ಲರಿಗೂ ಉಚಿತ ಲಸಿಕೆ ನೀಡುವ ಘೋಷಣೆ ಮಾಡಿದೆ. ಇದು ಎಷ್ಟರ ಮಟ್ಟಿಗೆ ಎಂದು ಕಾದುನೋಡಬೇಕಾಗಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳು ಅಧಿಕಾರದಲ್ಲಿದ್ದರೆ ಅಭಿವೃದ್ಧಿ ಕಾರ್ಯ ವೇಗವಾಗಿ ನಡೆಯುತ್ತದೆ ಎಂಬ ಹೇಳಿಕೆ ಕೂಡ ಸುಳ್ಳು ಎಂಬುದು ಸಾಬೀತಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ನರೇಂದ್ರ ಮೋದಿ ಸರ್ಕಾರ ಕರ್ನಾಟಕವನ್ನು ನಡೆಸಿಕೊಂಡ ರೀತಿ, ಅನುದಾನ ಬಿಡುಗಡೆಯಲ್ಲಿ ಮಾಡಿದ ತಾರತಮ್ಯ, ಆಕ್ಸಿಜನ್ ನೀಡದೆ ಸತಾಯಿಸಿ ನ್ಯಾಯಾಲಯ ಎಚ್ಚರಿಕೆ ನೀಡಬೇಕಾಗಿ ಬಂದಿದ್ದು, ನೆರೆ ಸಂದರ್ಭದಲ್ಲಿ ತೋರಿದ ನಿರ್ಲಕ್ಷ್ಯತನ ಮರೆಯಲು ಸಾಧ್ಯವಿಲ್ಲ. ಡಬಲ್ ಇಂಜಿನ್ ಸರ್ಕಾರ ಎಂಬುದು ಪೊಳ್ಳು ಹೇಳಿಕೆಯಷ್ಟೆ. ರಾಜ್ಯಕ್ಕೆ ನೀಡಬೇಕಾದ ಜಿಎಸ್‌ ಟಿ ಹಂಚಿಕೆ ಅನುದಾನವನ್ನು ಬಿಡುಗಡೆ ಮಾಡದೆ ಸತಾಯಿಸುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ರಾಜ್ಯಗಳಲ್ಲಿ ಪ್ರತ್ಯೇಕತೆಯ ಕೂಗು ಕೇಳಿ ಬಂದರೂ ಅಚ್ಚರಿಯಿಲ್ಲ. ಅದಕ್ಕೂ ಮೊದಲು ಕೇಂದ್ರ ಸರ್ಕಾರ ತನ್ನ ಯಜಮಾನಿಕೆಯ ಧೋರಣೆಯನ್ನು ತೊರೆದು ಸಹಕಾರ ತತ್ವದಡಿ ರಾಜ್ಯಗಳೊಂದಿಗೆ ವರ್ತಿಸುವುದನ್ನು ಕಲಿತರೆ ಒಕ್ಕೂಟ ವ್ಯವಸ್ಥೆಗೂ, ಪ್ರಜಾಪ್ರಭುತ್ವ ವ್ಯವಸ್ಥೆಗೂ ಸಹಕಾರಿ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ