ಐಕ್ಯವೇಶಕ್ತಿ

0
53

ಮೊಹಮ್ಮದ್ ಅರ್ಶಾದ್ ನದ್ವಿ

‘‘ಹಾಗೆಯೇ, ನೀವು ಅಲ್ಲಾಹನ ಹಾಗೂ ಅವನ ದೂತರ ಆಜ್ಞಾಪಾಲನೆ ಮಾಡಿರಿ ಮತ್ತು ಪರಸ್ಪರ ಜಗಳಗಳಲ್ಲಿ ನಿರತರಾಗಬೇಡಿ. ಅನ್ಯಥಾ, ನಿಮ್ಮ ಧೈರ್ಯ ಕುಂದುವುದು ಮತ್ತು ನಿಮ್ಮ ಶಕ್ತಿಯು ನಷ್ಟವಾಗುವುದು. ನೀವು ಸಹನಶೀಲರಾಗಿರಿ. ಖಂಡಿತವಾಗಿಯೂ ಅಲ್ಲಾಹನು ಸಹನಶೀಲರ ಜೊತೆಗಿರುತ್ತಾನೆ’’ (ಕುರ್‌ಆನ್ 8:46)

ಅಕ್ರಮಿ ಗುಂಪು ದಾಳಿಗೆ ಮುಂದಾದರೆ ಹೆದರಿ ಹಿಂಜರಿಯದೆ ಧೃಡವಾಗಿ ನಿಂತು ಅವರನ್ನು ಎದುರಿಸಿ ಹಿಮ್ಮೆಟ್ಟಿಸಬೇಕು. ಇದು ವಿಶ್ವಾಸಿಗಳು ಕೈಗೊಳ್ಳಬೇಕಾದ ನಿಲುವು. ಈ ವಿಚಾರಗಳನ್ನು ಇದರ ಮೊದಲಿನ ಸೂಕ್ತಗಳು ಸೂಚಿಸಿವೆ. ಬಾಹ್ಯ ಶಕ್ತಿಗಳ ಆಕ್ರಮಣದ ವೇಳೆ ಹಿಂಜರಿಯದೆ ದೃಢವಾಗಿ ನಿಂತರೆ ದಾಳಿಗೊಳಗಾಗುವ ಜನರನ್ನು ಒಗ್ಗಟ್ಟಾಗಿಸುವ ಮಾನದಂಡಗಳನ್ನು ಸ್ವೀಕರಿಸಬೇಕು. ಅನೈಕ್ಯದಿಂದ ಆಗುವ ಅಪಾಯಗಳ ಕುರಿತು ಸರಿಯಾದ ತಿಳುವಳಿಕೆ ಇರಬೇಕು. ಈ ವಚನದಲ್ಲಿ ಸೂಚಿಸಿರುವುದು ಈ ವಿಚಾರವನ್ನಾಗಿದೆ.

ಒಗ್ಗಟ್ಟು ಮೂಲೆಗುಂಪಾದ ಸಮುದಾಯ ಮತ್ತು ದೇಶಕ್ಕೆ ಒಳ್ಳೆಯ ಭವಿಷ್ಯವನ್ನು ದೊರಕಿಸಿಕೊಡುವ ಹಾಗೂ ದೇಶ ವಿರೋಧಿ ದುಷ್ಟಶಕ್ತಿಗಳನ್ನು ಪ್ರಜಾತಂತ್ರಗಳ ಹೋರಾಟದ ಮೂಲಕ ಎದುರಿಸುವ ಗುರಿಯನ್ನು ಹೊಂದಿರಬೇಕು.  ಈ ದೇಶದ ಸ್ವಾತಂತ್ರಕ್ಕಾಗಿ ವಸಾಹತುಶಾಹಿ ಶಕ್ತಿಗಳ ವಿರುದ್ಧ  ಮುಸ್ಲಿಮರು ಇತರ ಜನಸಮುದಾಯಗಳೊಂದಿಗೆ ಸೇರಿಕೊಂಡು ಹೋರಾಡಿದ್ದಾರೆ ಎಂಬುದನ್ನು ನಾವು ಮರೆಯಬಾರದು.

ಧಾರ್ಮಿಕ ವಿಚಾರಗಳ ವ್ಯಾಖ್ಯಾನಗಳಲ್ಲಿರುವ ಶಾಖಾ ಪರವಾದ ಭಿನ್ನಾಭಿಪ್ರಾಯಗಳು  ಭಿನ್ನಮತಕ್ಕೆ ಕಾರಣವಾಗಬಾರದು. ಅದೇ ವೇಳೆ ಏಕತೆಗೆ ಆಧಾರವಾಗಿಸುವ ಮಾಲಭೂತ ವಿಚಾರಗಳು ಬಹಳಷ್ಟಿವೆ. ಕುರ್‌ಆನ್ ಮತ್ತು ಪ್ರವಾದಿ ಚರ್ಯೆಯು ಮೂಲಭೂತ ದಾಖಲೆಗಳು ಎಂಬ ವಿಚಾರದಲ್ಲಿ ಯಾರಿಗೂ ಲವಲೇಶ ಭಿನ್ನಮತವಿಲ್ಲ.

ಕಅಬಾ ಮಂದಿರ ದಿಶಾ ಕೇಂದ್ರ, ಅಲ್ಲಾಹನು ರಕ್ಷಕ, ಪ್ರವಾದಿ(ಸ) ಅಂತ್ಯ ಪ್ರವಾದಿ ಮತ್ತು ಮರಣಾನಂತರ ವಿಚಾರಣೆ, ಸ್ವರ್ಗ, ನರಕ ಎಂಬ ವಿಚಾರದಲ್ಲೂ, ನಮಾಝ್, ಉಪವಾಸ ವ್ರತ, ಝಕಾತ್, ಹಜ್ ಎಂಬೀ ಆರಾಧಾನ ಅನುಷ್ಠಾನಗಳು ಕಡ್ಡಾಯ ಎಂಬ ವಿಚಾರದಲ್ಲೂ, ಮದ್ಯ, ವ್ಯಭಿಚಾರ, ಬಡ್ಡಿ, ಕಳವು, ಅಪಹರಣ, ನಿಷಿದ್ಧ ಎಂಬ ವಿಚಾರದಲ್ಲೂ, ಉತ್ತಮ ಗುಣ ಸ್ವಭಾವಗಳನ್ನು ವಿಶ್ವಾಸಿಗಳು ಹೊಂದಬೇಕು ಎಂಬ ವಿಚಾರದಲ್ಲೂ ಎಲ್ಲರೂ ಒಂದೇ ಅಭಿಪ್ರಾಯವನ್ನು ಹೊಂದಿರುತ್ತಾರೆ. ಅದರಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ.

ಪ್ರವಾದಿ(ಸ) ಬುಡಕಟ್ಟು, ಪ್ರಾದೇಶಿಕತೆ ಮತ್ತು ವ್ಯಾಪಾರ ಸಂಬಂಧವಾದ ಹಲವು ಭಿನ್ನತೆಯಿರುವ ಮಕ್ಕಾ ಮದೀನದಲ್ಲೂ, ಇತರ ಭೂ ಪ್ರದೇಶದಲ್ಲೂ ವಿಶ್ವಾಸಿಗಳನ್ನು ಏಕೈಕ ಉಮ್ಮತ್ ಎಂದು ಪರಿಗಣಿಸಿದ್ದರು. ಇದೀಗ ನಾವು ಅದನ್ನು ಪ್ರಾಯೋಗಿಕಗೊಳಿಸಬೇಕಾಗಿದೆ.

ಪ್ರವಾದಿ(ಸ) ಮಕ್ಕಾ ವಿಜಯದ ವೇಳೆ ವಿಶ್ವಾಸಿಗಳನ್ನು ಕರೆದು ಹೀಗೆ ಘೋಷಿಸಿದರು: ‘‘ಓ ಜನರೇ, ಅಲ್ಲಾಹನು ನಿಮ್ಮಿಂದ ಅನಿಸ್ಲಾಮಿಕವಾದ ದುರಭಿಮಾನಗಳನ್ನು, ಪರಂಪರಾಗತ ಯಜಮಾನಿಕೆಯನ್ನು ಕಿತ್ತೆಸಿದಿರುವನು. ಇನ್ನು ಜನರದು ಎರಡೇ ಗುಂಪು. ಸತ್ಕರ್ಮಿ ಮತ್ತು ಭಕ್ತನು ಅಲ್ಲಾಹನ ಮುಂದೆ ಗೌರವಾರ್ಹನು. ಅಪರಾಧಿ ಮತ್ತು ಪರಾಜಿತನು ಅಲ್ಲಾಹನ ಮುಂದೆ ಅವಮಾನಿತನಾಗಿರುವನು. ಮನುಷ್ಯರೆಲ್ಲರೂ ಆದಂ ಸಂತತಿಗಳಾಗಿರುವರು. ಆದಂ(ಅ)ರನ್ನು ಅಲ್ಲಾಹನು ಮಣ್ಣಿನಿಂದ ಸೃಷ್ಟಿಸಿದನು. (ತಿರ್ಮಿದಿ)

 

LEAVE A REPLY

Please enter your comment!
Please enter your name here