ಎಲ್ಲಾ ವಲಯಗಳಲ್ಲಿ ಸಮಾನ ಅವಕಾಶ ದೊರೆತರೆ ಮಹಿಳಾ ಸಬಲೀಕರಣ ಸಾಧ್ಯ: ಶಾಹಿದಾ ತಸ್ನೀಂ

Prasthutha: March 8, 2021

ಮಂಗಳೂರು : “ಮಹಿಳೆಯನ್ನು ಗೌರವ ಮತ್ತು ಘನತೆಯಿಂದ ಕಾಣುವ ಸಮಾಜ ಹಾಗೂ ದೇಶ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಮಹಿಳೆಗೆ ಪೂಜನೀಯ ಸ್ಥಾನಮಾನ ನೀಡದೆ ಅವಳಿಗೆ ಎಲ್ಲಾ ವಲಯಗಳಲ್ಲೂ ಸಮಾನ ಅವಕಾಶ ನೀಡಿದರೆ ಆಕೆ ಅಬಲೆಯಲ್ಲ ಎಂಬುದನ್ನು ತೋರಿಸಿಕೊಡುತ್ತಾಳೆ’ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ನ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಂಗಳೂರಿನ ಶಾಂತಿನಿಲಯದಲ್ಲಿ ಸೋಮವಾರದಂದು  “ಮಹಿಳೆಯ ಘನತೆ ದೇಶದ ಘನತೆ’  ಘೋಷವಾಕ್ಯದಡಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಮಹಿಳೆ ಇಂದು ಎಲ್ಲಾ ವಲಯಗಳಲ್ಲೂ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದರೂ ಗ್ರಾಮಾಂತರ ಭಾಗಗಳಲ್ಲಿ ಇಂದಿಗೂ ಮಹಿಳೆ ಯಾತನಾಮಯ ಬದುಕು ನಡೆಸುತ್ತಿದ್ದಾಳೆ. ಒಂದು ಹೊತ್ತಿನ ತುತ್ತಿಗೂ ಪರದಾಡುವ ಎಷ್ಟೋ ಮಂದಿ ಇಂದು ನಮ್ಮ ಸಮಾಜದಲ್ಲಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿ ಇದ್ದರೂ ಶಾಸನ ಸಭೆಗಳಲ್ಲಿ ಈ ಮಸೂದೆ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಸಮಾಜದ ಅರ್ಧದಷ್ಟಿರುವ ಮಹಿಳೆಯರು ಧ್ವನಿ ಎತ್ತಬೇಕಾಗಿದೆ” ಎಂದರು.

ಮಹಿಳೆಯ ಬಾಹ್ಯ ಸೌಂದರ್ಯವನ್ನು, ಚರ್ಮದ ಬಣ್ಣವನ್ನು, ಆಕೆಯ ವಯ್ಯಾರವನ್ನು ಜಾಹೀರಾತುಗಳಲ್ಲಿ ಅಸಹ್ಯವಾಗಿ ಪ್ರದರ್ಶಿಸುವುದು ಮಹಿಳೆಗೆ ನೀಡುವ ಗೌರವವಲ್ಲ, ಬದಲಾಗಿ ಅದು ನೀಚ ಪದ್ಧತಿಯಾಗಿದೆ ಎಂದು ಹೇಳಿದ ಅವರು, ಮಾಧ್ಯಮ ಕೂಡ ಮಹಿಳೆಯ ಮೇಲಿನ ದೌರ್ಜನ್ಯ, ಅತ್ಯಾಚಾರ ಮುಂತಾದ ಸಂಗತಿಗಳಲ್ಲಿ ಸಂವೇದನಾರಹಿತವಾಗಿ ನಡೆದುಕೊಳ್ಳುತ್ತಿರುವುದು ದುರದೃಷ್ಟಕರ. ಅತ್ಯಾಚಾರ ಸಂತ್ರಸ್ತೆ ಮತ್ತು ಆರೋಪಿಯ ಧರ್ಮವನ್ನು ನೋಡಿಕೊಂಡು ಸುದ್ದಿಯನ್ನು ಪ್ರಕಟಿಸುತ್ತಿರುವುದು ಕೂಡ ಖಂಡನೀಯ. ಎಲ್ಲಾ ದೌರ್ಜನ್ಯಗಳ ಅಂತಿಮ ಬಲಿಪಶು ಮಹಿಳೆಯೇ ಆಗಿರುವುದು ಸತ್ಯ. ಇವೆಲ್ಲವುಗಳ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಪ್ರತಿ 10 ನಿಮಿಷಕ್ಕೆ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಪ್ರಕರಣ ವರದಿಯಾಗುತ್ತಿದೆ. ಪತಂಜಲಿಯಂತಹ ಸಂಸ್ಥೆ ಬಹಿರಂಗವಾಗಿ ಗಂಡು ಮಕ್ಕಳು ಹುಟ್ಟುವ ಮಾತ್ರೆಗಳನ್ನು ಮಾರಾಟ ಮಾಡುತ್ತಿದೆ. ಇಂತಹ ಮನಸ್ಥಿತಿ ಬದಲಾಗದ ಹೊರತು ಸಮಾಜದಲ್ಲಿ ಮಹಿಳಾ ಗೌರವದ ಬಗ್ಗೆ ಮಾತನಾಡುವುದು ವ್ಯರ್ಥ. ‘ಬೇಟಿ ಬಚಾವೋ’ ಅಭಿಯಾನದ ಶೇಕಡಾ 95ರಷ್ಟು ಅನುದಾನ ಅದರ ಜಾಹೀರಾತಿಗೆ ವ್ಯಯಿಸಲಾಗಿದೆ. ಶೇಕಡಾ 50ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಈ ಸಂದರ್ಭದಲ್ಲಿ ಇಂತಹ ಗಂಭೀರ ವಿಷಯಗಳ ಬಗ್ಗೆ ಬೆಳಕು ಚೆಲ್ಲುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಹೀದಾ ಹೇಳಿದರು.

ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಹಾಗೂ ಬಂಟ್ವಾಳ ಪುರಸಭಾ ಸದಸ್ಯೆ ಝೀನತ್ ಬಂಟ್ವಾಳ ಮಾತನಾಡಿ, “ತನ್ನ ಹಕ್ಕುಗಳಿಗಾಗಿ, ತನ್ನ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಹಿಳೆ ಇಂದು ಧ್ವನಿ ಎತ್ತುತ್ತಿರುವುದು, ಬೀದಿಗಿಳಿದು ಹೋರಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಇಂತಹ ಹೋರಾಟಗಳನ್ನು ಫ್ಯಾಶಿಸ್ಟ್ ಮನಸ್ಥಿತಿಯ ಸರ್ಕಾರ ಮತ್ತು ಪ್ರಭುತ್ವ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ ಇಂತಹ ಹೋರಾಟಗಳನ್ನು ಹತ್ತಿಕ್ಕಿದಷ್ಟು ಅದರ ಕಿಡಿ ಮತ್ತಷ್ಟು ಜ್ವಲಿಸುತ್ತದೆ ಎಂಬುದಕ್ಕೆ ಶಾಹೀನ್ ಬಾಗ್ ಹೋರಾಟವೇ ಉತ್ತಮ ನಿದರ್ಶನ” ಎಂದರು.

ಹೋರಾಟ ನಡೆಸುವ ಸ್ವಾತಂತ್ರ್ಯ ಮತ್ತು ಹಕ್ಕು ಮಹಿಳೆಗೆ ಸಂವಿಧಾನವೇ ನೀಡಿದೆ. ಇದನ್ನು ಯಾರಿಂದಲೂ ದಮನಿಸಲು ಸಾಧ್ಯವಿಲ್ಲ. ಆದರೆ ನ್ಯಾಯಾಂಗ ಕೂಡ ಮಹಿಳೆಯನ್ನು ಹೋರಾಟ ರಂಗದಿಂದ ಹಿಂದಕ್ಕೆ ಸರಿಸಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಸದಸ್ಯೆ, ಅಧ್ಯಾಪಕಿ ಡಾ.ಪದ್ಮಲತಾ ಮಾತನಾಡಿ, “ದಲಿತರು  ಮತ್ತು ಅಲ್ಪಸಂಖ್ಯಾತರನ್ನು ನಿರಂತರವಾಗಿ ಬೇಟೆಯಾಡಲಾಗುತ್ತಿದೆ. ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ತಿರುಚಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆ. ನಾವೆಲ್ಲಾ ಒಗ್ಗಟ್ಟಾಗಿ ಇಂತಹ ಷಡ್ಯಂತ್ರಗಳ ವಿರುದ್ಧ ಧ್ವನಿ ಎತ್ತಬೇಕಾಗಿದೆ” ಎಂದು ಹೇಳಿದರು.

ಕಾರ್ಮಿಕ ಇಲಾಖೆಯ ಅಧಿಕಾರಿ ನಸೀಬಾ ಕೆ ಮಾತನಾಡಿ, “ಮಹಿಳೆ ಎಲ್ಲಾ ವರ್ಗಗಳನ್ನೂ ಪ್ರತಿನಿಧಿಸಬೇಕು. ಆದರೆ ಕೆಲವು ಸಂಕುಚಿತ ಮನಸ್ಥಿತಿಯುಳ್ಳವರು ಮಹಿಳೆಯ ಸ್ವಾತಂತ್ರ್ಯಕ್ಕೆ ತಡೆ ಒಡ್ಡುತ್ತಿದ್ದಾರೆ. ಮದುವೆಯ ನಂತರ ಉದ್ಯೋಗ ಮಾಡಬಾರದು ಎಂಬ ಮನಸ್ಥಿತಿ ಬದಲಾಗಬೇಕು” ಎಂದು ಹೇಳಿದರು.

ಮಹಿಳೆ ಪುರುಷನಿಗೆ ಸಮಾನಳು ಮಾತ್ರವಲ್ಲ ಅನನ್ಯಳು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಲಿಂಗ ಸೂಕ್ಷತೆಯನ್ನು ಮನೆಯಲ್ಲೇ ಮಕ್ಕಳಿಗೆ ಕಲಿಸಿಕೊಡಬೇಕು. ಮಾತ್ರವಲ್ಲ ಪಠ್ಯಕ್ರಮದಲ್ಲಿ ಇದನ್ನು ಅಳವಡಿಸಬೇಕು. ಆಗ ಮಾತ್ರ ತಾರತಮ್ಯರಹಿತ ಸಮಾಜ ನಿರ್ಮಾಣವಾಗಲಿದೆ ಎಂದರು.

ಮಿಜಾರಿನ ಆದರ್ಶ ಗ್ರೂಪ್ ಆಫ್ ಎಜುಕೇಶನ್ ಪ್ರಾಂಶುಪಾಲರಾದ ಡಾ.ಶಾಂತಿ ವಿಜಯ ಮಾತನಾಡಿ “ಧಾರ್ಮಿಕ ಚೌಕಟ್ಟಿನಲ್ಲಿದ್ದುಕೊಂಡೇ ಆರ್ಥಿಕವಾಗಿ ಸಬಲರಾಗಲು ಮಹಿಳೆಗೆ ಅವಕಾಶವಿದೆ. ಉತ್ತಮ ಸಮಾಜವನ್ನು ನಿರ್ಮಿಸುವ ಹೊಣೆ ಆಕೆಯ ಮೇಲಿದೆ” ಎಂದರು.

ಇದೇ ವೇಳೆ ವಿವಿಧ ವಲಯಗಳಲ್ಲಿ ಸಾಧನೆ ಮಾಡಿದ ಕಾರ್ಕಳದ ಆಯಿಶಾ, ಮಂಗಳೂರಿನ ಆಶ್ಲೀನ್, ಶಂಶಾದ್, ರೇಷ್ಮಾ ಹಾಗೂ ವಿಶಿಷ್ಟ ಚೇತನರಾಗಿದ್ದು ಅಸಾಧಾರಣ ಸಾಧನೆ ಮಾಡಿದ ಬೆಳ್ತಂಗಡಿಯ ಸಬಿತಾ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಶಂಶಾದ್ ಹಾಗೂ ರೇಷ್ಮಾ ಅನಿಸಿಕೆ ಹಂಚಿಕೊಂಡರು.

ಈ ಸಂದರ್ಭ ವಿಮೆನ್ ಇಂಡಿಯಾ ಮೂವ್ಮೆಂಟ್ ಹೊರತಂದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ವೇದಿಕೆಯಲ್ಲಿ ವಿಮ್ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನಾ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು. ವಿಮ್ ಪ್ರಧಾನ ಕಾರ್ಯದರ್ಶಿ ಆಯಿಶಾ ಬಜಪೆ ಪ್ರಸ್ತಾವಿಕವಾಗಿ ಮಾತನಾಡಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!