ಎಲ್ಗಾರ್ ಪರಿಷದ್ ಪ್ರಕರಣ | ಸಹಾಯಕ ಪ್ರೊಫೆಸರ್ ಡಾ. ಜೆನ್ನಿ ರೊವೆನಾ ನಿವಾಸಕ್ಕೆ ಎನ್ ಐಎ ದಾಳಿ

Prasthutha|

ಮುಂಬೈ : ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರವಷ್ಟೇ ಬಂಧನವಾದ ದೆಹಲಿ ವಿವಿಯ ಸಹಾಯಕ ಪ್ರೊಫೆಸರ್ ಹನಿ ಬಾಬು ಅವರ ಸಂಗಾತಿ, ಸಹಾಯಕ ಪ್ರೊಫೆಸರ್ ಡಾ. ಜೆನ್ನಿ ರೊವೆನಾ ಅವರ ನಿವಾಸಕ್ಕೆ ಎನ್ ಐಎ ತಂಡ ದಾಳಿ ನಡೆಸಿದೆ. ಜೆನ್ನಿ ಅವರ ನೋಯ್ಡಾದ ಮಿರಾಂಡ ನಿವಾಸಕ್ಕೆ ತೆರಳಿದ ಹತ್ತು ಮಂದಿಯಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡವು, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ಕುರಿತಂತೆ ತಪಾಸಣೆ ನಡೆಸಿತು.

- Advertisement -

ಭಾನುವಾರ ಬೆಳಗ್ಗೆ 7:30ಕ್ಕೆ ಅನಿರೀಕ್ಷಿತವಾಗಿ ತಂಡ ತಮ್ಮ ಮನೆಗೆ ಆಗಮಿಸಿತು. ತಾವು ಮತ್ತು ತಮ್ಮ ಮಗಳು ಇಬ್ಬರೇ ಮನೆಯಲ್ಲಿದ್ದೆವು. ಇದು ಸಾಕ್ಷಿ ಸಂಗ್ರಹಿಸುವ ಪ್ರಕ್ರಿಯೆಯ ಭಾಗ ಎಂದು ಅವರು ತಿಳಿಸಿದರು. ಜಿ.ಎನ್. ಸಾಯಿಬಾಬಾ ರಕ್ಷಣಾ ಸಮಿತಿಗೆ ಸೇರಿದ ಕೆಲವು ವಸ್ತುಗಳು ಮತ್ತು ಹಾರ್ಡ್ ಡಿಸ್ಕ್ ಗಳನ್ನು ಅವರು ಕೊಂಡೊಯ್ದಿದ್ದಾರೆ. 11 ಗಂಟೆಗೆ ಮನೆಯಿಂದ ತೆರಳಿದ್ದಾರೆ. ಮುಂಬೈಯ ಎನ್ ಐಎ ಕೋರ್ಟ್ ನಿಂದ ನೀಡಲಾದ ಹುಡುಕಾಟ ವಾರಂಟ್ ಜೊತೆಗೆ ತಂಡ ಆಗಮಿಸಿತ್ತು ಎಂದು ಡಾ. ಜೆನ್ನಿ ಹೇಳಿದ್ದಾರೆ.

ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ಮೊದಲು ಪುಣೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಉರುಳುತ್ತಿದ್ದಂತೆ, ಪ್ರಕರಣದ ವಿಚಾರಣೆಯನ್ನು ಎನ್ ಐಎ ಕೈಗೆತ್ತಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ವಿಚಾರವಾದಿಗಳಾದ ಆನಂದ್ ತೇಲ್ತುಂಬ್ಡೆ, ಗೌತಮ್ ನವ್ಲಾಖ ಸೇರಿದಂತೆ ಹಲವರನ್ನು ಎನ್ ಐಎ ಈಗಾಗಲೆ ಬಂಧಿಸಿತ್ತು. ಹನಿ ಬಾಬು ಕಳೆದ ವಾರ ಬಂಧಿಸಲ್ಪಟ್ಟ 12ನೇ ಆರೋಪಿಯಾಗಿದ್ದಾರೆ. ವಿಚಾರಣೆಗಾಗಿ ದೆಹಲಿಯಿಂದ ಕರೆಸಿಕೊಂಡಿದ್ದ ಎನ್ ಐಎ ಬಾಬು ಅವರನ್ನು ಬಳಿಕ ಬಂಧಿಸಿತ್ತು.