ಎಲ್ಗಾರ್ ಪರಿಷದ್ ಪ್ರಕರಣ | ಎನ್ ಐಎ ಅಮಾನವೀಯ ವರ್ತನೆ | ಸುಪ್ರೀಂ ಕೋರ್ಟ್ ಗೆ ವರವರ ರಾವ್ ಪತ್ನಿ ಅರ್ಜಿ

ನವದೆಹಲಿ : ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ತೆಲುಗು ಕವಿ, ಸಾಮಾಜಿಕ ಕಾರ್ಯಕರ್ತ ವರವರ ರಾವ್ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಆಪಾದಿಸಿ, ಅವರ ಪತ್ನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಹಾರಾಷ್ಟ್ರ ಸರಕಾರ ಮತ್ತು ಎನ್ ಐಎ ರಾವ್ ವಿರುದ್ಧ ಕ್ರೌರ್ಯ ಮತ್ತು ಅಮಾನವೀಯವಾಗಿ ವರ್ತಿಸಿದೆ. ಸಂವಿಧಾನದ ಪರಿಚ್ಛೇಧ 21ನ್ನೂ ಉಲ್ಲಂಘಿಸಲಾಗಿದ್ದು, ಗೌರವಯುತ ಬಂಧನದ ಹಕ್ಕನ್ನೂ ಉಲ್ಲಂಘಿಸಲಾಗಿದೆ ಎಂದು ರಾವ್ ಅವರ ಪತ್ನಿ ಪೆಂಟ್ಯಾಲ ಹೇಮಲತಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದು ‘ಬಾರ್ ಆಂಡ್ ಬೆಂಚ್’ ವರದಿ ಉಲ್ಲೇಖಿಸಿ, ‘ಸ್ಕ್ರಾಲ್ ಡಾಟ್ ಇನ್’ ವರದಿ ಮಾಡಿದೆ.

ಅರ್ಜಿ ಇತ್ಯರ್ಥವಾಗುವವರೆಗೂ, ರಾವ್ ಅವರನ್ನು ತಾತ್ಕಾಲಿಕ ವೈದ್ಯಕೀಯ ಜಾಮೀನಿನಲ್ಲಿ ಬಿಡುಗಡೆಗೊಳಿಸುವಂತೆ ಹೇಮಲತಾ ತಮ್ಮ ಅರ್ಜಿಯಲ್ಲಿ ಕೋರಿಕೊಂಡಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ರಾವ್ ಅವರು ವಿಚಾರಣೆ ಎದುರಿಸುವ ಸ್ಥಿತಿಯಲ್ಲಿಲ್ಲ, ಅವರು ಜೀವಂತವಾಗಿ ಉಳಿಯಲು ಗಂಭೀರ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಮಲತಾ ತಿಳಿಸಿದ್ದಾರೆ.

- Advertisement -

2017, ಡಿ.31ರಂದು ಪುಣೆಯ ಶನಿವಾರ್ ವಾಡದಲ್ಲಿ ನಡೆದ ಎಲ್ಗಾರ್ ಪರಿಷದ್ ನಲ್ಲಿ ರಾವ್ ಅವರು ಉದ್ರೇಕಕಾರಿ ಭಾಷಣ ಮಾಡಿದ್ದರು ಎಂಬ ಆರೋಪವಿದೆ. ಈ ಸಮಾವೇಶದ ಮರುದಿನ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿ ರಾವ್ ಸೇರಿದಂತೆ ದೇಶಾದ್ಯಂತ ಹಲವಾರು ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರುಗಳನ್ನು ಬಂಧಿಸಲಾಗಿದೆ.