ಎನ್‌ಆರ್‌ಸಿ ವಿರುದ್ಧ ನಾಗರಿಕ ಹಕ್ಕುಗಳ ಗುಂಪುನಿಂದ ಅಸಹಕಾರ ಚಳವಳಿಯ ಘೋಷಣೆ

0
29

ಹೊಸದಿಲ್ಲಿ: ಅಸ್ಸಾಂಗೆ ಸೀಮಿತವಾಗಿರುವ ಎನ್‌ಆರ್‌ಸಿಯನ್ನು ದೇಶದ ಇತರ ಭಾಗಗಳಿಗೆ ವಿಸ್ತರಿಸುವ ನರೇಂದ್ರ ಮೋದಿ ಸರಕಾರದ ಯೋಜನೆಯ ವಿರುದ್ಧ ಗಾಂಧಿವಾದಿ ಅಸಹಕಾರ ಚಳವಳಿಯನ್ನು ಪ್ರಾರಂಭಿಸುವುದಾಗಿ ನಾಗರಿಕ ಹಕ್ಕುಗಳ ಗುಂಪು ಯುನೈಟೆಡ್ ಅಗೇನ್ಸ್ಟ್ ಹೇಟ್(ಯುಎಎಚ್) ಘೋಷಿಸಿದೆ.

ರಾಷ್ಟ್ರವ್ಯಾಪಿ ಎನ್‌ಆರ್‌ಸಿ(ನ್ಯಾಷನಲ್ ರಿಜಿಸ್ಟರ್ ಅಫ್ ಸಿಟಿಝನ್‌ಶಿಫ್)ಯನ್ನು ಜಾರಿಗೊಳಿಸುವ ಸರಕಾರದ ಯೋಜನೆಯ ಬಗ್ಗೆ ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ತಿಳಿಸಿದ ನಂತರ, ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ.

‘‘ನಾವು ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಮಸೂದೆ(ಸಿಎಬಿ)ಯ ವಿರುದ್ಧ ಅಭಿಯಾನ ನಡೆಸುತ್ತೇವೆ. ಅಭಿಯಾನದ ಭಾಗವಾಗಿ ನಾವು ರ್ಯಾಲಿ, ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳನ್ನು ನಡೆಸುತ್ತೇವೆ. ನಾವು ನಮ್ಮ ದಾಖಲೆಗಳನ್ನು ಸಲ್ಲಿಸುವುದಿಲ್ಲ ಮತ್ತು ಇತರರಿಗೆ ಹಾಗೆ ಮಾಡಲು ನಾವು ಅನುಮತಿಸುವುದಿಲ್ಲ. ದೇಶಾದ್ಯಂತ ಅಸಹಕಾರ ಚಳವಳಿಯ ಭಾಗವಾಗಿ ನಾವು ಎನ್‌ಆರ್‌ಸಿಯನ್ನು ಬಹಿಷ್ಕರಿಸುತ್ತೇವೆ’’ ಎಂದು ಯುಎಎಚ್‌ನ ಸ್ಥಾಪಕ ಸದಸ್ಯ ನದೀಮ್ ಖಾನ್ ಹೇಳಿದ್ದಾರೆ.

ವಿವಾದಾತ್ಮಕ ಪೌರತ್ವ ಮಸೂದೆಯೊಂದಿಗೆ ಎನ್‌ಆರ್‌ಸಿ ಭಾರತೀಯ ಮುಸ್ಲಿಮರಿಗೆ ಕಿರುಕುಳ ನೀಡುವುದರ ಜೊತೆಗೆ ನೈಜ ಸಮಸ್ಯೆಗಳಿಂದ ಜನಸಾಮಾನ್ಯರ ಗಮನವನ್ನು ಬೇರೆಡೆಗೆ ಸೆಳೆಯುವ ಸಾಧನವಾಗಿದೆ ಎಂದು ಖಾನ್‌ರವರು ಆರೋಪಿಸಿದ್ದಾರೆ. ಅವರ ಗುಂಪು ಪ್ರಮುಖ ಸಾಮಾಜಿಕ ಕಾರ್ಯಕರ್ತರ ಜೊತೆಗೂಡಿ ರಾಷ್ಟ್ರವ್ಯಾಪಿ ಅಸಹಕಾರ ಚಳವಳಿಯನ್ನು ಆಯೋಜಿಸಲಿದೆ.

ಅಂತಿಮ ಪಟ್ಟಿಯಿಂದ ಸುಮಾರು 2 ಮಿಲಿಯನ್ ಜನರನ್ನು ಕೈಬಿಟ್ಟ ಅಸ್ಸಾಂ ಎನ್‌ಆರ್‌ಸಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ‘‘ಎನ್‌ಆರ್‌ಸಿ ಅಸ್ಸಾಂನ ಬಂಗಾಳಿ ಮುಸ್ಲಿಮ್ ಸಮುದಾಯದ ಹಕ್ಕನ್ನು ನಿರಾಕರಿಸುವ ಉದ್ದೇಶಿತ ಕಾರ್ಯವಿಧಾನವಾಗಿದ್ದು, ಹೆಚ್ಚಿನ ಸಂಖ್ಯೆಯ ಮುಸ್ಲಿಮರನ್ನು ಅಸ್ತಿತ್ವವಿಲ್ಲದಂತೆ ಮಾಡುತ್ತದೆ’’ ಎಂದು ಇತ್ತೀಚೆಗೆ ಯುಎಸ್ ಕಮಿಷನ್ ಆನ್ ಇಂಟರ್‌ನ್ಯಾಷನಲ್ ರಿಲಿಜಿಯಸ್ ಫ್ರೀಡಂ(ಯುಎಸ್‌ಸಿಐಆರ್‌ಎಫ್) ತಿಳಿಸಿತ್ತು.

ಉತ್ತರಪ್ರದೇಶ  ಸರಕಾರವು ಈ ಪ್ರಕ್ರಿಯೆಯಲ್ಲಿ 258 ಮಂದಿಯನ್ನು ಅಕ್ರಮ ವಲಸಿಗರು ಎಂದು ಘೋಷಿಸಿ ಬಂಧಿಸಿದೆ ಎಂದು ಅವರು ಹೇಳಿದ್ದಾರೆ. ‘‘ಕೆಲವು ಜನರ ಉಪಸ್ಥಿತಿಯಿಂದಾಗಿ ಇಡೀ ಜನಸಂಖ್ಯೆಯು ಎನ್‌ಆರ್‌ಸಿ ಪ್ರಕ್ರಿಯೆಗೆ ಒಳಗಾಗಬೇಕೆಂದು ಸರಕಾರ ಏಕೆ ಬಯಸುತ್ತಿದೆ? ಎನ್‌ಆರ್‌ಸಿ ಎಂದರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ದಾಖಲೆಗಳನ್ನು ತಯಾರಿಸಲು ಜನರನ್ನು ಒತ್ತಾಯಿಸುವುದಾಗಿದೆ. ಈ ಮೂಲಕ ಇಡೀ ಸಮಾಜವನ್ನು ಆತಂಕದ ಶಾಶ್ವತ ಸ್ಥಿತಿಯಲ್ಲಿ ಜೀವಿಸಲು ಒತ್ತಾಯಿಸುತ್ತದೆ’’ ಎಂದು ಖಾನ್ ಹೇಳಿದ್ದಾರೆ.

ಭೂಮಿಯನ್ನು ಹೊಂದಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲದವರ ಬಗ್ಗೆ ಖಾನ್‌ರವರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ‘‘ಅವರು ತಮ್ಮ ದಾಖಲೆಗಳನ್ನು ಎಲ್ಲಿಂದ ಪಡೆಯುತ್ತಾರೆ? ನಮ್ಮ ಸಮಾಜವು ಕೃಷಿ ಮತ್ತು ಗ್ರಾಮ ಆಧಾರಿತವಾಗಿದೆ. ಭೂಹೀನ ರೈತರು ತಮ್ಮ ಪೌರತ್ವ ಹಕ್ಕುಗಳನ್ನು ಸಾಬೀತುಪಡಿಸಲು ಭೂ ದಾಖಲೆಯನ್ನು ಹೇಗೆ ಸಲ್ಲಿಸುತ್ತಾರೆ?’’ ಎಂದು ಖಾನ್‌ರವರು ಪ್ರಶ್ನಿಸಿದ್ದಾರೆ.

‘‘ಮೂರು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಸಣ್ಣ ರಾಜ್ಯವಾದ ಅಸ್ಸಾಂನಲ್ಲಿ, ಅಧಿಕಾರಿಗಳು ಎನ್‌ಆರ್‌ಸಿ ಪ್ರಕ್ರಿಯೆಗಾಗಿ 10 ವರ್ಷ ಮತ್ತು 1,300 ಕೋಟಿ ರೂ. ವ್ಯಯಿಸಿದ್ದಾರೆ. ಒಂದು ವೇಳೆ ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೊಳಿಸಿದರೆ ಎಷ್ಟು ಸಮಯ ಮತ್ತು ಹಣವನ್ನು ವ್ಯಯಿಸಬೇಕಾಗ ಬಹುದು ಎಂದು ಊಹಿಸಿ ನೋಡಿ’’ ಎಂದು ಅವರು ಹೇಳಿದ್ದಾರೆ.

 

 

LEAVE A REPLY

Please enter your comment!
Please enter your name here