ಎನ್‌ಆರ್‌ಸಿ: ಜನಾಂಗೀಯ ದ್ವೇಷದ ದಾಳ

0
150

♦  ಇಲ್ಯಾಸ್ ಮುಹಮ್ಮದ್

ರಾಷ್ಟ್ರೀಯ ಪೌರತ್ವ ಕಾಯಿದೆ ತಿದ್ದುಪಡಿ ಮಸೂದೆಯನ್ನು ಮತ್ತೆ ಪಾರ್ಲಿಮೆಂಟ್‌ನಲ್ಲಿ ಮಂಡಿಸಿ ಅನುಮೋದಿಸಲಾಗುವುದು ಎಂದು ಕೇಂದ್ರ ಸರಕಾರದ ಗೃಹ ಸಚಿವ ಅಮಿತ್  ಶಾ  ನೀಡಿದ  ಹೇಳಿಕೆ ದೇಶದಾದ್ಯಂತ ಆತಂಕವನ್ನು ಉಂಟುಮಾಡಿದೆ. ಭಾರತೀಯ ನಾಗರಿಕ ಕಾಯ್ದೆ 1955ರಲ್ಲಿ ಯಾವನೇ ಒಬ್ಬ ವಿದೇಶಿಗ ಭಾರತದಲ್ಲಿ 11 ವರ್ಷ ವಾಸವಾಗಿದ್ದಲ್ಲಿ ಆತನಿಗೆ ಭಾರತೀಯ ನಾಗರಿಕತೆಯನ್ನು ಪಡೆಯುವ ಅವಕಾಶಗಳಿವೆ. ಆತನು ಯಾವುದೇ ಧರ್ಮ, ಜಾತಿ, ಪಂಗಡಗಳಿಗೆ ಸೇರಿದರೂ ಭಾರತೀಯನಾಗುವುದಕ್ಕೆ ಯಾವುದೇ ತೊಡಕು ಇರುವುದಿಲ್ಲ. ಆದರೆ ಈ ಕಾಯ್ದೆಗೆ 2016ರಲ್ಲಿ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ ಅದನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿತ್ತು.ಲೋಕಸಭೆಯಲ್ಲಿ 2019 ಜನವರಿ 8ರಂದು ಅನುಮೋದಿಸಲ್ಪಟ್ಟರೂ ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಲಿಲ್ಲ. ಹಾಗಾಗಿ ಅದು ಕಳೆದ ಲೋಕಸಭಾ ಅವಧಿ ಮುಗಿಯುವುದರೊಂದಿಗೆ ಅನೂರ್ಜಿತಗೊಂಡಿತ್ತು.ಇದೀಗ ಮತ್ತೆ ಈ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿರುವುದು ಬಿಜೆಪಿ ಸರಕಾರ ಸಂಘಪರಿವಾರ ಅಜೆಂಡಾದ ಈಡೇರಿಕೆಗೆ ಹಠ ಸಾಧನೆಗೈಯ್ಯುತ್ತಿದೆ.

ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ಒಂದು ವಿಷಯುಕ್ತ ಮಸೂದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಈ ಮಸೂದೆಯಲ್ಲಿ ಮುಸ್ಲಿಮರಿಗೆ ಪೌರತ್ವ ನೀಡುವಿಕೆಗೆ ನಿಷೇಧವಿದೆ. ಭಾರತದ ಪೌರತ್ವ ಸಿಗಬೇಕಾದರೆ 11 ವರ್ಷಗಳ ವರೆಗಿನ ವಾಸ್ತವ್ಯದ ಶರ್ತವನ್ನು 5 ವರ್ಷಗಳಿಗೆ ಇಳಿಸಿರುವುದು ಮತ್ತು ಮುಸ್ಲಿಮ್ ವ್ಯಕ್ತಿ ಎಷ್ಟೇ ವರ್ಷಗಳಲ್ಲಿ ಭಾರತದಲ್ಲಿ ಜೀವಿಸಿದರೂ ಆತನಿಗೆ ಪೌರತ್ವವಿಲ್ಲ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ನಮ್ಮ ದೇಶದ ಸಂವಿಧಾನವಾಗಲೀ, ಪ್ರಜಾಪ್ರಭುತ್ವ ವ್ಯವಸ್ಥೆಯಾಗಲೀ ಅವಕಾಶ ನೀಡುವುದಿಲ್ಲ. ಈ ದೇಶದಲ್ಲಿ ಕಾನೂನುಗಳು, ಹಕ್ಕುಗಳು ಹಾಗೂ ಸ್ವಾತಂತ್ರ ಅವಕಾಶಗಳನ್ನು ಜಾತಿ-ಧರ್ಮ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ನೀಡುತ್ತದೆ. ಮುಸ್ಲಿಮರನ್ನು ಭಯಪಡಿಸುವುದು, ಹೊರದಬ್ಬುವುದು, ದ್ವೇಷ ಕಾರುವುದು ಈ ಮಸೂದೆಯ ಹಿಂದಿನ ನಿಜವಾದ ಉದ್ದೇಶವಾಗಿದೆ.

ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿರುವ, ಆತಂಕವನ್ನು ಹುಟ್ಟಿಸಿರುವ ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಮಸೂದೆ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಲಿದೆ. ಎನ್‌ಆರ್‌ಸಿ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್) (ರಾಷ್ಟ್ರೀಯ ನಾಗರಿಕ ದಾಖಲೆ) ಅಸ್ಸಾಮಿನಲ್ಲಿ ಮಾತ್ರ ಜಾರಿಯಲ್ಲಿದೆ. 1974 ಮಾರ್ಚ್ 24ರ ನಂತರ ಭಾರತಕ್ಕೆ ಬಂದವರನ್ನು ಪತ್ತೆಹಚ್ಚಿ, ಅಂತಹವರು ಭಾರತೀಯರಾಗಿರದೆ ಅಕ್ರಮ ವಿದೇಶಿಗರು ಎಂದು ಘೋಷಿಸುವುದು ಇದರ ಉದ್ದೇಶ. ಪಕ್ಕದ ಬಾಂಗ್ಲಾದೇಶದಿಂದ ಭಾರತಕ್ಕೆ ಕೋಟ್ಯಂತರ ಬಂಗಾಳಿಗಳು ವಲಸೆ ಬಂದು ಅಸ್ಸಾಂ ರಾಜ್ಯದ ಜನಸಂಖ್ಯೆ ಪರಿಮಾಣವನ್ನು ಅಸ್ತವ್ಯಸ್ತಗೊಳಿಸಿದ್ದಾರೆ ಹಾಗೂ ಸ್ಥಳೀಯರ ಅವಕಾಶಗಳನ್ನು ಕಸಿದುಕೊಂಡಿದ್ದಾರೆ ಎಂಬ ಜನಾಂಗೀಯವಾದಿ ಸಂಘರ್ಷ ಹಾಗೂ ಅಭಿಯಾನಗಳಿಗೆ ಮಣಿದ ಹಿಂದಿನ ಸರಕಾರಗಳು ಎನ್‌ಆರ್‌ಸಿಯನ್ನು ಜಾರಿಗೆ ತಂದಿತ್ತು. ಬಂಗಾಳಿ ಭಾಷಿಗ ಮುಸ್ಲಿಮರನ್ನು ಅಸ್ಸಾಮಿನಲ್ಲಿ ಅಕ್ರಮ ವಿದೇಶಿಗರು ಎಂದು ಬಿಂಬಿಸಿ ವ್ಯಾಪಕ ಹಿಂಸಾಚಾರ, ಹತ್ಯೆ, ಒಕ್ಕಲೆಬ್ಬಿಸುವಿಕೆ ನಡೆದಿರುವ ಘಟನೆಗಳು ಬಹಳಷ್ಟು ನಡೆದಿವೆ. 1951ರಲ್ಲೇ ಎನ್‌ಆರ್‌ಸಿ ದಾಖಲಿಸುವ ಪ್ರಕ್ರಿಯೆ ಪ್ರಾರಂಭಗೊಂಡಿತ್ತಾದರೂ ಆನಂತರ ದಶಕಗಳ ವರೆಗೆ ಅದನ್ನು ಕಾರಣಾಂತರದಿಂದ ಕ್ಲಪ್ತಗೊಳಿಸಲಾಗಿಲ್ಲ. ಅಸ್ಸಾಮಿನಲ್ಲಿ ಎನ್‌ಆರ್‌ಸಿಯನ್ನು ಕ್ಲಪ್ತಗೊಳಿಸಬೇಕೆಂದು ಬೇಡಿಕೆ ಇಟ್ಟು ಸರಣಿ ಆತಂಕಕಾರಿ ಘಟನೆಗಳ ಫಲವಾಗಿ 2013ರಲ್ಲಿ ಎನ್‌ಆರ್‌ಸಿ ಕ್ಲಪ್ತಗೊಳಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಇದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪ್ರಕಾರವಾಗಿದೆ.

ಇದೀಗ ಅಂದರೆ 2019 ಆಗಸ್ಟ್ 31ರಂದು ಪ್ರಕಟಗೊಂಡ ಅಂತಿಮ ಎನ್‌ಆರ್‌ಸಿ ವರದಿಯಲ್ಲಿ ಅಸ್ಸಾಮಿನ ಒಟ್ಟು ಜನಸಂಖ್ಯೆಯಾದ 3,30,27,661ರ ಪೈಕಿ 3,11,21,004 ಜನರನ್ನು ಎನ್‌ಆರ್‌ಸಿ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಉಳಿದ 19,06,557 ಮಂದಿಯನ್ನು ಎನ್‌ಆರ್‌ಸಿಯಿಂದ  ಹೊರಗಿಡಲಾಗಿದೆ. ಅಂದರೆ, ಅವರು ಅಕ್ರಮ ವಾಸಿಗಳಾದ ವಿದೇಶಿಗರು ಎಂಬುದೇ ಅರ್ಥವಾಗಿದೆ.

ವರದಿಗಳ ಪ್ರಕಾರ ಈ 19 ಲಕ್ಷ ಜನರ ಪೈಕಿ ಸುಮಾರು 6 ಲಕ್ಷದಷ್ಟು ಬಂಗಾಳಿ ಭಾಷಿಗ ಮುಸ್ಲಿಮರಾಗಿದ್ದಾರೆ. ಇದೀಗ ಅಮಿತ್ ಶಾ ಮುಂದಿಟ್ಟಿರುವ ‘ಪೌರತ್ವ ಕಾಯಿದೆ ತಿದ್ದುಪಡಿ ಮಸೂದೆ’ ಪಾರ್ಲಿಮೆಂಟಿನಲ್ಲಿ ಅನುಮೋದನೆಗೊಂಡು ಕಾಯಿದೆ ಯಾಗಿ ಅಂಗೀಕಾರವಾದರೆ, ಎನ್‌ಆರ್‌ಸಿಯಿಂದ ಹೊರಗುಳಿಯಲ್ಪಟ್ಟ 6 ಲಕ್ಷದಷ್ಟು ಮುಸ್ಲಿಮರಿಗೆ ಭಾರತದಲ್ಲಿ ಪೌರತ್ವವನ್ನು ಪಡೆಯುವ ಅವಕಾಶಗಳೇ ಇಲ್ಲದಂತಾಗುವುದು, ಮುಸ್ಲಿಮೇತರಿಗೆ ಪೌರತ್ವ ನೀಡುವುದು. ಇದುವೇ ಎನ್‌ಆರ್‌ಸಿ ಮತ್ತು ಸಿಎಬಿ(ಸಿಟಿಝನ್ಶಿಪ್ ಅಮೆಂಡ್ಮೆಂಟ್ ಬಿಲ್) ನಡುವಿನ ವಿಷಕಾರೀ ಕೊಂಡಿ ಹಾಗೂ ಮುಂದಕ್ಕೆ ಇರುವ ಅಪಾಯವಾಗಿದೆ.

ಸಂಘಪರಿವಾರದ ರಾಜಕೀಯ ಪಕ್ಷವಾಗಿರುವ ಬಿಜೆಪಿಗೆ ‘ಹಿಂದುತ್ವ’ ರಾಷ್ಟ್ರೀಯತೆಯನ್ನು ಜಾರಿಗೆ ತರುವ ಉನ್ಮಾದ ತುಡಿಯುತ್ತಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮುಂತಾದ ನೆರೆ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯ, ಆಕ್ರಮಣಗಳ ಕಾರಣ ಅಲ್ಲಿನ ಹಿಂದೂಗಳು ಭಾರತಕ್ಕೆ ವಲಸೆ ಬಂದಿದ್ದಾರೆ. ಅಂತಹ ಮುಸ್ಲಿಮೇತರರಾದ ಹಿಂದೂಗಳು ಮತ್ತಿತರರಿಗೆ ಈ ದೇಶದ ಪೌರತ್ವ ನೀಡುವುದು ನಮ್ಮ ಹೊಣೆಗಾರಿಕೆಯಾಗಿದೆ. ಅದೇ ರೀತಿ ನೆರೆ ರಾಷ್ಟ್ರಗಳಿಂದ ಅಕ್ರಮವಾಗಿ ಒಳನುಸುಳಿದ ಮುಸ್ಲಿಮರಿಗೆ ಪೌರತ್ವವನ್ನು ಯಾವ ಕಾರಣಕ್ಕೂ ನೀಡಲಾಗುವುದಿಲ್ಲ. ಅಂತಹ ಅಕ್ರಮವಾಸಿ ಮುಸ್ಲಿಮರನ್ನು ಪತ್ತೆಹಚ್ಚುವುದು ಹಾಗೂ ಅವರನ್ನು ಒಂದೋ ಬಾಂಗ್ಲಾದೇಶ ಅಥವಾ ಪಾಕಿಸ್ತಾನಕ್ಕೆ ಗಡಿಪಾರು ಮಾಡುವುದು ಅಥವಾ ಬಂಧನದಲ್ಲಿರಿಸಲಾಗುವುದು (ಬಂಧನ ಕೇಂದ್ರ) ಎಂದು ಅಮಿತ್ ಶಾ ಹೇಳಿರುವುದು ಎನ್‌ಆರ್‌ಸಿಯ ಹಿಂದೆ ಅದೆಷ್ಟು ಆಳವಾದ ಷಡ್ಯಂತ್ರ ಹಾಗೂ ಜನಾಂಗೀಯ ದ್ವೇಷವಿದೆ ಎಂದು ತಿಳಿಯುತ್ತದೆ.

ಅಸ್ಸಾಮಿನ ಎನ್‌ಆರ್‌ಸಿಯಲ್ಲಿ ಅನೇಕ ಗಣ್ಯರ, ಹಿರಿಯರ, ಸೈನಿಕರ ಹೆಸರುಗಳೇ ಬಿಟ್ಟುಹೋಗಿದೆ. ಎನ್‌ಆರ್‌ಸಿಗೆ ಪೂರಕವಾದ ದಾಖಲೆಗಳನ್ನು ನೀಡಿದ್ದರೂ ಈ ರೀತಿ ನಡೆದಿದೆ. ಕುಟುಂಬದ ಹೆಸರುಗಳೆಲ್ಲಾ ದಾಖಲಾದರೂ ಒಂದೆರಡು  ಸದಸ್ಯರ  ಹೆಸರುಗಳನ್ನು ಬಿಟ್ಟ ಉದಾಹರಣೆ ಹೇರಳವಾಗಿದೆ. ಹೆಸರಿನ ಅಕ್ಷರದಲ್ಲಿ ವ್ಯತ್ಯಾಸ, ಜನ್ಮದಿನಾಂಕ ತಾಳೆಯಾಗುವುದಿಲ್ಲ, ವಾಸಸ್ಥಳ ಸ್ಪಷ್ಟವಾಗಿಲ್ಲ ಇತ್ಯಾದಿ ಕಾರಣಗಳನ್ನು ನೀಡಿ ಅಸಂಖ್ಯಾತ ಜನರ ಹೆಸರನ್ನು ಕೈಬಿಟ್ಟದ್ದೂ ಇದೆ. ಇದ್ದಬದ್ದ ದಾಖಲೆಗಳನ್ನೆಲ್ಲಾ ನೀಡಿದ್ದರೂ ಅವುಗಳು ಒಂದೋ ನಕಲಿಯೆಂದೋ ಅಥವಾ ಸರಿಯಾಗಿಲ್ಲ ಎಂದೋ ತಿರಸ್ಕರಿಸಿದ ಪ್ರಕರಣಗಳು ಕೂಡಾ ಅಸಂಖ್ಯಾತ. 25,000 ಸಿಬ್ಬಂದಿಗಳ ನಿರಂತರ ಕಾರ್ಯವೆಸಗುವಿಕೆಯಿಂದ ನಡೆದ ಈ ಎನ್‌ಆರ್‌ಸಿ ಈಗಾಗಲೇ ಅಸ್ಸಾಮಿನಲ್ಲೂ ದೇಶದೆಲ್ಲೆಡೆಯೂ ಸಾಕಷ್ಟು ಕುತೂಹಲ ಸೃಷ್ಟಿಯಾಗಿದೆ. ಈ ಕೆಲಸಕ್ಕೆ ಈಗಾಗಲೇ 1,220 ಕೋಟಿಗೂ ಹೆಚ್ಚು ಖರ್ಚಾಗಿದ್ದು, ಇನ್ನೂ ದೇಶದಾದ್ಯಂತ ಎನ್‌ಆರ್‌ಸಿಯನ್ನು ಜಾರಿಗೆ ತರುವುದಾದರೆ ಎಷ್ಟು ಕೋಟಿಗಳು ಖರ್ಚಾಗಲಿವೆ ಎಂಬುದು ಕೂಡಾ ಒಂದು ಪ್ರಶ್ನೆಯಾಗಿದೆ.

ಭಾರತದ ನಾಗರಿಕರ ದಾಖಲೆಯನ್ನು ಸಿದ್ಧಗೊಳಿಸುವ ಸರಕಾರದ ನಿರ್ಧಾರದ ಹಿಂದೆ ಸದುದ್ದೇಶವಿದ್ದರೆ ಅದು ಸ್ವಾಗತಾರ್ಹ. ಆದರೆ ಮುಸ್ಲಿಮರನ್ನು ಅಕ್ರಮ ವಲಸಿಗರು, ನುಸುಳುಕೋರರು ಎಂದು ಬಿಂಬಿಸಿ ಅವರನ್ನು ಹೊರದಬ್ಬುವ ಅಥವಾ ನಿರಾಶ್ರಿತರ ಶಿಬಿರಗಳಲ್ಲಿ ಬಂಧಿಸಿರುವ ಹಾಗೂ ನಾಗರಿಕರ ಹಕ್ಕುಗಳನ್ನು ನೀಡದೆ ಸಮಾಜದಿಂದ ಬೇರ್ಪಡಿಸುವ ಜನಾಂಗೀಯ ದ್ವೇಷ ಖಂಡಿತವಾಗಿಯೂ ಖಂಡನೀಯ. ಅದನ್ನು ಪ್ರತಿರೋಜಸಲೇಬೇಕು. ಅಸ್ಸಾಂ ಮಾದರಿಯ ಎನ್‌ಆರ್‌ಸಿಯನ್ನು ಇತರ ರಾಜ್ಯಗಳಲ್ಲಿಯೂ ಜಾರಿಗೆ ತರಲಾಗುವುದು ಎಂದಾದರೆ ಅಂತಹ ಎನ್‌ಆರ್‌ಸಿಗೆ ನಿಜವಾಗಿಯೂ ಬಹಿಷ್ಕಾರವೇ ಉತ್ತರವಾಗಬೇಕು. ಯಾಕೆಂದರೆ ಇಂದಿಗೂ ಗ್ರಾಮೀಣ ಪರಿಸರಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲೂ ಸಹ ಕೆಲವೊಂದು ವ್ಯತ್ಯಾಸದ ದಾಖಲೆಗಳಿರುವ ಮಂದಿಗಳನ್ನು ಕಾಣಬಹುದು. ಅಸ್ಸಾಂ ಮಾದರಿಯಂತೆ 1974ರ ಹಿಂದಿನ ದಾಖಲೆಗಳನ್ನು ನೀಡಲು ಸಾಧ್ಯವಾಗದೇ ಹೋಗಬಹುದು. ಅಂತಹ ಸಂದರ್ಭಗಳಲ್ಲಿ ಆ ತರಹದ ಪ್ರಜೆಗಳನ್ನು ಅಕ್ರಮ ವಾಸಿಗಳು ಎಂದು ಸರಕಾರ ಘೋಷಿಸಲು ಹೇಗೆ ಸಾಧ್ಯ. ಭಾರತದ ಪ್ರಜೆಗಳು ಎಂದೆಂದಿಗೂ ಭಾರತೀಯರೇ. ನಮ್ಮ ದೇಶದ ಸರಕಾರ ನಮ್ಮದೇ ದೇಶದ ಪ್ರಜೆಗಳನ್ನು ವಿದೇಶಿಗರೆಂದು ಹೊರದಬ್ಬಲು ಯತ್ನಿಸುವುದಾದರೆ ಅಂತಹ ಷಡ್ಯಂತ್ರಗಳು ಜಾರಿಗೆ ತರಲು ಅವಕಾಶ ನೀಡುವುದು ಯಾಕೆ. ಪ್ರಜಾಪ್ರಭುತ್ವ ರಾಜ್ಯದಲ್ಲಿ ಜನವಿರೋಧೀ, ಸಂವಿಧಾನ ವಿರೋಧೀ ಹಾಗೂ ಜನತಂತ್ರ ವಿರೊಧಿ ನೀತಿನಿಯಮಗಳನ್ನು ಸರಕಾರ ಜಾರಿಗೆ ತರುವಾಗ ಅದನ್ನು ಪ್ರತಿರೋಧಿಸದೆ, ಸರಕಾರದ ಜೊತೆಗೆ ಸಾಗುವುದಾದರೆ ಜವಾಬ್ದಾರಿಯುತ ನಾಗರಿಕರಾಗಿ ಈ ದೇಶದ ಅಸ್ತಿತ್ವಕ್ಕೆ ದ್ರೋಹ ಬಗೆದಂತಾಗುವುದಲ್ಲವೇ?

ಜಗತ್ತಿನೆಲ್ಲೆಡೆ ನಿರಾಶ್ರಿತರ ಸಮಸ್ಯೆ ಇದ್ದೇ ಇದೆ. ಆಫ್ರಿಕಾ ಖಂಡ ಮತ್ತು ಮಧ್ಯ ಏಷ್ಯಾದಂತಹ ಖಂಡಗಳಿಂದ ಜನರು ವಲಸೆ ಹೋಗಿ ಯುರೋಪ್, ಅಮೆರಿಕ ಮುಂತಾದ ರಾಷ್ಟ್ರಗಳಲ್ಲಿ ಆಶ್ರಯ ಬಯಸುತ್ತಾ ಹೋಗುವಾಗ ಅಂತಹ ಜನರಿಗೆ ಆಯಾಯ ರಾಷ್ಟ್ರಗಳು ಆಶ್ರಯ ನೀಡುತ್ತಿವೆ. ಆದರೆ ಭಾರತ ತನ್ನದೇ ಜನರನ್ನು ವಿದೇಶಗರೆಂದು ಸಾರಿ ದೇಶದಿಂದ ಹೊರದಬ್ಬಲು ಪ್ರಯತ್ನಿಸುತ್ತಿದೆ. ಇದು ನಾಗರಿಕ ಸಮಾಜಕ್ಕೆ ಒಡ್ಡುವ ಅಪಾಯ ಹಾಗೂ ಅಪಹಾಸ್ಯವಾಗಿದೆ. ಜಗತ್ತಿನ ವಿವಿಧ ದೇಶಗಳಲ್ಲಿ ಭಾರತದಿಂದ ವಲಸೆ ಹೋದವರ ಸಂಖ್ಯೆಗಳಿಗೇನೂ ಕಡಿಮೆ ಇಲ್ಲ. ಅವರಲ್ಲಿ ಅಕ್ರಮವಾಗಿ ನುಸುಳುವವರೂ ಇದ್ದಾರೆ. ಅಂತಹವರನ್ನು ಆ ದೇಶಗಳು ಹೊರದಬ್ಬಲು ಪ್ರಾರಂಭಿಸಿದರೆ ಈ ದೇಶ, ಜಗತ್ತಿನ ಸ್ಥಿತಿ ಏನಾಗಬಹುದು?

ಇನ್ನೂ ಯಾವುದೇ ತಕರಾರಿಲ್ಲದ, ಸಾಮಾನ್ಯವಾಗಿ ನಡೆಯುವ ಜನಗಣತಿಯಂತಹ ನಾಗರಿಕ ದಾಖಲೆಗಳನ್ನು ಸಿದ್ಧ್ದಪಡಿಸುವ ಪ್ರಕ್ರಿಯೆ ಸರಕಾರ ಮಾಡುವುದಾದರೆ ಅದಕ್ಕೆ ಯಾವುದೇ ರೀತಿಯ ವಿರೋಧವಿಲ್ಲ. ಎಲ್ಲ ನಾಗರಿಕರಲ್ಲಿ ರೇಶನ್ ಕಾರ್ಡ್, ಆಧಾರ್, ವೋಟರ್ ಐಡಿ, ಶಾಲಾ ಸರ್ಟಿಫಿಕೇಟ್ ಇತ್ಯಾದಿಗಳು ಇರುತ್ತವೆ. ಇವುಗಳಲ್ಲಿ ಯಾವುದಾದರೊಂದು ಪ್ರತಿಯೊಬ್ಬ ಪ್ರಜೆಯಲ್ಲೂ ಇರುತ್ತದೆ. ಇದನ್ನಿಟ್ಟುಕೊಂಡು ಎಂದಿನಂತೆ ನಡೆಯುವ ಜನಗಣತಿಯಾಗಲೀ, ನಾಗರಿಕರ ಪಟ್ಟಿಯ ದಾಖಲೆಯಾಗಲೀ ಸರಕಾರಕ್ಕೆ ಮಾತ್ರ. ಆದರೆ ಅದರಲ್ಲೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುವ ಯಾವುದೇ ಷಡ್ಯಂತ್ರಗಳಿರಬಾರದು. ಕಿರುಕುಳ ಕೊಡುವ ಹುನ್ನಾರಗಳಿರಬಾರದು.

ಕೇಂದ್ರ ಸರಕಾರ ಮತ್ತು ಕರ್ನಾಟಕದ ರಾಜ್ಯ ಸರಕಾರಗಳ ಎನ್‌ಆರ್‌ಸಿ, ಎನ್‌ಆರ್‌ಐಸಿ, ಎನ್‌ಪಿಆರ್ ಯಾವ ಪ್ರಕಾರದದ್ದೆಂದು ಮುಂಬರುವ ದಿನಗಳಲ್ಲಿ ಸೃಷ್ಟಿಯಾಗಲಿದ್ದು, ಅವುಗಳು ಮುಸ್ಲಿಮ್ ವಿರೋಧಿಯಾಗಿದ್ದರೆ, ಐಕ್ಯತೆಯಿಂದ ವಿರೋಧಿಸಬೇಕಾದ ಅಗತ್ಯವಿದೆ.

***

LEAVE A REPLY

Please enter your comment!
Please enter your name here