ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ರ ಟ್ರಸ್ಟ್ ವಿರುದ್ಧ ದೇಶದ್ರೋಹ ಪ್ರಕರಣ

Prasthutha|

ಲೋಕಸಭಾ ಸಂಸದ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಮುನ್ನಡೆಸುತ್ತಿರುವ ನೋಂದಾಯಿತ ಸಾರ್ವಜನಿಕ ದತ್ತಿ ಸೇವಾ ಸಂಸ್ಥೆಯ ವಿರುದ್ಧ ಅಸ್ಸಾಮ್ ನ ದಿಸ್ಪುರ ಪೊಲೀಸರು ದೇಶದ್ರೋಹ ಮತ್ತು ಇತರ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.

ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಪರ್ಕವಿರುವ ವಿದೇಶಿ ಏಜೆನ್ಸಿಗಳಿಂದ ಅವರ ಅಜ್ಮಲ್ ಫೌಂಡೇಶನ್ ಟ್ರಸ್ಟ್ ಹಣಕಾಸು ಪಡೆಯುತ್ತಿದೆಯೆಂದು ಭಾರತೀಯ ಜನತಾ ಪಾರ್ಟಿ ನಾಯಕ ಸತ್ಯ ರಂಜನ್ ಬೊರಾಹ್ ನೀಡಿದ ಪ್ರಥಮ ಮಾಹಿತಿಯ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

- Advertisement -

“ಭಯೋತ್ಪಾದನಾ ಸಂಪರ್ಕವಿರುವ ವಿದೇಶಿ ಏಜೆನ್ಸಿಗಳಿಂದ ಸ್ವೀಕರಿಸಿದ ಹಣಕಾಸುಗಳನ್ನು ಅಜ್ಮಲ್ ಫೌಂಡೇಶನ್ ದುರ್ಬಳಕೆ ಮಾಡಿದೆ ಎಂದು ದೂರುದಾರ ಎಫ್.ಐ.ಆರ್ ನಲ್ಲಿ ಆರೋಪಿಸಿದ್ದಾರೆ” ಎಂದು ದಿಸ್ಪುರ ಪೊಲೀಸ್ ನ ಸಹಾಯಕ ಪೊಲೀಸ್ ಆಯುಕ್ತ ಹಿಮಾಂಗ್ಶು ದಾಸ್ ತಿಳಿಸಿದ್ದಾರೆ.

ಲೀಗಲ್ ರೈಟ್ಸ್ ಒಬ್ಸರ್ವೇಟರಿ ಎಂಬ ಸರಕಾರೇತರ ಸಂಘಟನೆ ಅಜ್ಮಲ್ ಫೌಂಡೇಶನ್ ವಿರುದ್ಧ ಮಾಡಿದ ಆರೋಪವನ್ನು ಆಧರಿಸಿ ಬಿಜೆಪಿ ನಾಯಕ ದೂರನ್ನು ನೀಡಿದ್ದಾರೆ. ಎನ್.ಜಿ.ಒ ಗುರುವಾರ ಸರಣಿ ಟ್ವೀಟ್ ಗಳನ್ನು ಮಾಡಿ ಹಲವು ಟರ್ಕಿ ಮತ್ತು ಯುನೈಟೆಡ್ ಕಿಂಗ್ಡಮ್ ಮೂಲದ ಸಂಘಟನೆಗಳು ಅಜ್ಮಲ್ ಫೌಂಡೇಶನ್ ಗೆ 69.55 ಕೋಟಿ ರೂಪಾಯಿಗಳನ್ನು ನೀಡಿದ್ದವು. ಆದರೆ ಸ್ವೀಕರಿಸಲಾದ ಈ ಹಣದಲ್ಲಿ ಕೇವಲ 2.5 ಕೋಟಿ ರೂಪಾಯಿಗಳನ್ನು ಮಾತ್ರವೇ ಶಿಕ್ಷಣಕ್ಕಾಗಿ ವ್ಯಯಿಸಲಾಗಿದೆ ಎಂದು ಎನ್.ಜಿ.ಒ ಆರೋಪಿಸಿತ್ತು.

ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿದೆ.

ಅಜ್ಮಲ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು ಇದು ಬಿಜೆಪಿಯ ಸಂಚು ಎಂದಿದ್ದಾರೆ. “ಇದು ಸುಳ್ಳು ಆರೋಪವಾಗಿದೆ. ಎ.ಐ.ಯು.ಡಿ.ಎಫ್ ಮತ್ತು ಅಜ್ಮಲ್ ಫೌಂಡೇಶನ್ ನ ಗೌರವಕ್ಕೆ ಮಸಿ ಬಳಿಯಲು ಇದು ಅಂತಾರಾಷ್ಟೀಯ ಸಂಚಾಗಿದೆ. ಇದನ್ನು ಬಿಜೆಪಿ ನಾಯಕ ಹಿಮಾಂತ ಬಿಸ್ವ ಶರ್ಮಾ ಹೂಡಿದ್ದಾರೆ. ನಾವು ಕಾಂಗ್ರೆಸ್ ನೊಂದಿಗೆ ಕೈಜೋಡಿಸಿದ ಕೂಡಲೆ ಆತ ತನ್ನ ತಂತ್ರಗಾರಿಕೆಗಳನ್ನು ಆರಂಭಿಸಿದ್ದಾರೆ” ಎಂದು ಅವರು ಹೇಳಿದರು.

- Advertisement -