ಉ.ಪ್ರ. | ಸಿಆರ್ ಪಿಎಫ್ ಯೋಧನಿಗೆ ಬಂದೂಕು ತೋರಿಸಿ ಬೆದರಿಸಿದ ಬಿಜೆಪಿ ನಾಯಕ

Prasthutha|

ಲಖನೌ : ಯೋಧರು, ದೇಶಭಕ್ತಿಯ ವಿಚಾರದಲ್ಲಿ ರಾಜಕೀಯ ಮಾಡುವ ಬಿಜೆಪಿಗರ ಮಾತಿಗೆ ಮರುಳಾಗುವವರು ಸಾಕಷ್ಟು ಜನ ನಮ್ಮಲ್ಲಿದ್ದಾರೆ. ಆದರೆ, ನಿಜವಾದ ಯೋಧರ ವಿಚಾರದಲ್ಲಿ ಇವರ ನಡೆನುಡಿ ಎಷ್ಟು ಭಯಾನಕವಾಗಿದೆ ಎಂಬುದು ಉತ್ತರ ಪ್ರದೇಶದ ಈ ಘಟನೆಯಿಂದ ತಿಳಿಯಬಹುದು. ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಆರ್ ಪಿಎಫ್ ಯೋಧರೊಬ್ಬರಿಗೆ ಉತ್ತರ ಪ್ರದೇಶದ ಸುಲ್ತಾನ್ ಪುರದ ಸ್ಥಳೀಯ ಬಿಜೆಪಿ ಗೂಂಡಾ, ಬಂದೂಕು ತೋರಿಸಿ ಬೆದರಿಸಿದ ಘಟನೆ ನಡೆದಿದೆ. ತನ್ನ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಲು ಮುಂದಾಗಿರುವ ಯೋಧ ಕಲೀಂ ಅವರಿಗೆ ಸ್ಥಳೀಯ ಬಿಜೆಪಿ ಗೂಂಡಾ ಶ್ರವಣ್ ಮಿಶ್ರಾ ಬಂದೂಕು ಹಿಡಿದು ಬೆದರಿಕೆಯೊಡ್ಡಿದ ವೀಡಿಯೊವೊಂದು ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

“ನೂರ್ ಕಲೀಂ ಸಿಆರ್ ಪಿಎಫ್ ಯೋಧರು. ಅವರು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮೂವರು ಸಹೋದರರು, ಸೋದರ ಸಂಬಂಧಿಯೊಬ್ಬರು ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ತಮ್ಮ ಗ್ರಾಮದಲ್ಲಿ ಕಲೀಂ ಮನೆ ಕಟ್ಟಲು ಮುಂದಾದಾಗ, ಸ್ಥಳೀಯ ಬಿಜೆಪಿ ಬ್ಲಾಕ್ ಮುಖ್ಯಸ್ಥ ಶ್ರವಣ್ ಮಿಶ್ರಾ ತನ್ನ ಕ್ರಿಮಿನಲ್ ಗ್ಯಾಂಗ್ ನೊಂದಿಗೆ ಆಗಮಿಸಿ, ಬಂದೂಕು ತೋರಿಸಿ ಬೆದರಿಕೆಯೊಡ್ಡಿದ್ದಾನೆ. ಅಲ್ಲದೆ, ನಿರ್ಮಾಣ ಹಂತದ ಮನೆಯನ್ನು ಧ್ವಂಸಗೊಳಿಸಿದ್ದಾರೆ’’ ಎಂದು ಸ್ಥಳೀಯ ಪತ್ರಕರ್ತರೊಬ್ಬರು ವೀಡಿಯೊದೊಂದಿಗೆ ಟ್ವೀಟ್ ಮಾಡಿದ್ದರು.

- Advertisement -

ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಬಿಜೆಪಿ ಮುಖಂಡನ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಲೀಂ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಿಶ್ರಾ ವಿರುದ್ಧ ದಾಖಲಿಸಲಾಗಿದೆ. “ನನ್ನನ್ನು ಜೀವಂತವಾಗಿ ಸುಟ್ಟು ಹಾಕುವುದಾಗಿ ಆತ ಬೆದರಿಕೆಯೊಡ್ಡಿದ್ದಾನೆ. ಆತ ನನ್ನ ಮನೆಯನ್ನು ಧ್ವಂಸಗೊಳಿಸಿದ್ದಾನೆ. ನಾವು ದೇಶಕ್ಕಾಗಿ ಹೋರಾಡುವ ಯೋಧರು. ನಾವು ಇಂತಹ ಜಗಳಕ್ಕಾಗಿ ಗ್ರಾಮಕ್ಕೆ ಬರುವುದಲ್ಲ. ನನ್ನ ಮೂವರು ಸಹೋದರರು, ಸೋದರ ಸಂಬಂಧಿಯೊಬ್ಬರು ಸೇರಿದಂತೆ ಇಡೀ ಕುಟುಂಬವೇ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದೆ’’ ಎಂದು ಕಲೀಂ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಸಂತ್ರಸ್ತರು ನೀಡಿದ ದೂರಿನ ಆಧಾರದಲ್ಲಿ ಗೊಸಾಯಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಸುಲ್ತಾನ್ ಪುರ ಪೊಲೀಸ್ ಪಿಆರ್ ಒ ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕ್ರಿಮಿನಲ್ ಗಳು ಪೊಲೀಸರ ಮೇಲಿನ ಭಯ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಇತ್ತೀಚೆಗೆ ಕಾನ್ಪುರದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ದರ್ಜೆಯ ಅಧಿಕಾರಿ ಸಹಿತ ಎಂಟು ಮಂದಿ ಪೊಲೀಸ್ ಪೊಲೀಸ್ ಸಿಬ್ಬಂದಿಯನ್ನು ಕುಖ್ಯಾತ ಭಯೋತ್ಪಾದಕ ವಿಕಾಸ್ ದುಬೆ ಹತ್ಯೆ ಮಾಡಿದ ಘಟನೆ ನಡೆದಿತ್ತು. ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವು ದಿನಗಳ ಬಳಿಕ ವಿಕಾಸ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರು. ದುಬೆಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಉನ್ನತ ಮಟ್ಟದ ನಾಯಕರೊಂದಿಗೆ ಉತ್ತಮ ಬಾಂಧವ್ಯವಿತ್ತು ಎಂದು ಹೇಳಲಾಗುತ್ತಿದೆ.   

- Advertisement -