ಉ.ಪ್ರ. | ಮತ್ತೊಬ್ಬ ದಲಿತ ಯುವತಿಯ ಗ್ಯಾಂಗ್ ರೇಪ್ | ಮಾಜಿ ಗ್ರಾ.ಪಂ. ಮುಖ್ಯಸ್ಥನಿಂದಲೇ ಬಂದೂಕು ಹಿಡಿದು ದುಷ್ಕೃತ್ಯ

ಕಾನ್ಪುರ : ಉತ್ತರ ಪ್ರದೇಶದ ಅತ್ಯಾಚಾರ ಸರಣಿ ಪ್ರಕರಣಗಳ ಪಟ್ಟಿ ಬೆಳೆಯುತ್ತಲೇ ಇದೆ. ಇದೀಗ ಅಲ್ಲಿನ ಕಾನ್ಪುರ ದೇಹತ್ ಜಿಲ್ಲೆಯ ಗ್ರಾಮವೊಂದರಲ್ಲಿ, ಗ್ರಾಮದ ಮಾಜಿ ಮುಖ್ಯಸ್ಥ ಹಾಗೂ ಆತನ ಸಹಚರನಿಂದ ದಲಿತ ಯುವತಿಯ ಅತ್ಯಾಚಾರ ನಡೆದಿದೆ. ಬಂದೂಕು ಹಿಡಿದು ಅತ್ಯಾಚಾರ ನಡೆಸಲಾಗಿದೆ ಎಂದು ತಿಳಿದು ಬಂದಿದೆ

22ರ ಹರೆಯದ ಸಂತ್ರಸ್ತೆಯು ಮನೆಯಲ್ಲಿ ಒಬ್ಬಳೇ ಇದ್ದಾಗ ಇಬ್ಬರು ದುಷ್ಕರ್ಮಿಗಳು ಅಕ್ರಮ ಪ್ರವೇಶ ಮಾಡಿ, ಬಂದೂಕು ಹಿಡಿದು, ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರ ನಡೆಸಿದ್ದಾರೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ, ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದುಷ್ಕರ್ಮಿಗಳು ಬೆದರಿಕೆಯೊಡ್ಡಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

- Advertisement -

ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹತ್ರಾಸ್ ನಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಬರ್ಬರ ಹತ್ಯೆಯ ಬಳಿಕ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಮತ್ತೊಂದು ಅತ್ಯಾಚಾರ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಆಡಳಿತದ ಉತ್ತರ ಪ್ರದೇಶ ಜಂಗಲ್ ರಾಜ್ ಆಗಿ ಬದಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಮತ್ತೊಂದು ಸಾಕ್ಷಿ ಸೇರ್ಪಡೆಯಾದಂತಾಗಿದೆ.

- Advertisement -