ಉಮರ್ ಫಾರೂಕ್ ಕೊಲೆ ಆರೋಪಿಗಳ ಬೆನ್ನಟ್ಟಿದ ಪೊಲೀಸ್ | ಗುಂಡ್ಯದಲ್ಲಿ ಗುಂಡಿನ ದಾಳಿ

Prasthutha|

ಬಂಟ್ವಾಳ : ಕೊಲೆ ಆರೋಪಿಗಳ ಗುಂಪೊಂದನ್ನು ಬೆನ್ನಟ್ಟಿ ಹಿಡಿಯುವ ಯತ್ನದಲ್ಲಿ ನಡೆದ ಘರ್ಷಣೆಯಲ್ಲಿ, ಗುಂಡ್ಯದಲ್ಲಿ ಇಂದು ನಸುಕಿನ ವೇಳೆ ಪೊಲೀಸ್ ಫೈಯರಿಂಗ್ ನಡೆದಿದೆ. ಘಟನೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.

ದಾಳಿಯಲ್ಲಿ ಬಂಟ್ವಾಳ ಗ್ರಾಮಾಂತರ ಎಸ್ ಐ ಪ್ರಸನ್ನ ಹಾಗೂ ಬಂಧಿತ ಆರೋಪಿ ಖಲೀಲ್ ಗೆ ಗಾಯಗಾಳಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಶುಕ್ರವಾರ ಸಂಜೆ ಬಂಟ್ವಾಳದ ಮೆಲ್ಕಾರ್ ನಲ್ಲಿ ನಡೆದ ಕಲ್ಲಡ್ಕ ನಿವಾಸಿ ಉಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ (28) ಕೊಲೆ ಪ್ರರಕಣದ ಆರೋಪಿಗಳು ಬೆಂಗಳೂರಿಗೆ ಪರಾರಿಯಾಗುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಪೊಲೀಸ್ ಕಾರ್ಯಾಚರಣೆ ನಡೆದಿತ್ತು. ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಲು ಮುಂದಾದಾಗ, ಖಲೀಲ್ ಪೊಲೀಸರ ಮೇಲೆ ತಲವಾರು ದಾಳಿ ನಡೆಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಬಂಟ್ವಾಳ ನಗರ ಠಾಣಾ ಎಸ್ ಐ ಅವಿನಾಶ್ ಗುಂಡಿನ ದಾಳಿ ನಡೆಸಿದ್ದಾರೆ.

ಮೆಲ್ಕಾರ್ ನಲ್ಲಿ ನಡೆದಿದ್ದ ಫಾರೂಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಎಸ್.ಪಿ. ಲಕ್ಷ್ಮಿಪ್ರಸಾದ್ ವಿಶೇಷ ತಂಡ ರಚಿಸಿದ್ದರು. ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಎಸ್ ಐ ಅವಿನಾಶ್ ಮತ್ತು ಪ್ರಸನ್ನ ಆರೋಪಿಗಳ ವಶಕ್ಕೆ ಮುಂದಾದಾಗ ಈ ಘಟನೆ ನಡೆದಿದೆ.

ಖಲೀಲ್ ವಿರುದ್ಧ ಹಲವು ಪ್ರಕರಣಗಳಿದ್ದು, ಆತನನ್ನು ಬಂಟ್ವಾಳ ನಗರ ಠಾಣೆಯಲ್ಲಿ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಕಲ್ಲಡ್ಕದಲ್ಲಿ ನಡೆದ ರತ್ನಾಕರ ಶೆಟ್ಟಿಯವರ ಮೇಲಿನ ಹಲ್ಲೆ ಪ್ರಕರಣದಲ್ಲಿ ಈತನನ್ನು ಗಡಿಪಾರು ಮಾಡಲಾಗಿತ್ತು.

- Advertisement -