ಉದ್ಯೋಗಗಳನ್ನು ಕದಿಯುತ್ತಿರುವ ಸರಕಾರಗಳು ಮೋಸ ಹೋಗುತ್ತಿರುವ ಯುವಜನತೆ

0
394

-ರವೀಶ್ ಕುಮಾರ್

ಗಮನಿಸಿ: ಈ ರೀತಿಯ ಲೇಖನಗಳು ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಒಮ್ಮೆಮ್ಮೆ ಮೂಲೆಯಲ್ಲಿ, ಮತ್ತೆ ಅಲ್ಲೊಮ್ಮೆ ಇಲ್ಲೊಮ್ಮೆ ಪ್ರಕಟವಾಗುತ್ತವೆ. ಹಿಂದಿ ಪತ್ರಿಕೆಗಳಲ್ಲಿ ಈ ರೀತಿಯ ವಿಶ್ಲೇಷಣೆ ಕಣ್ಮರೆಯಾಗುತ್ತಿವೆ. ಇದನ್ನು ಒಂದಷ್ಟು ಗಮನವಿಟ್ಟು ಓದಿ. ನಿಮ್ಮದೇ ಯುವತ್ವದ ಪ್ರಶ್ನೆ, ಉದ್ಯೋಗಕ್ಕೆ ಸಂಬಂಧಿಸಿದ್ದೇ ಆಗಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಎಲ್ಲರಿಗೂ ತಿಳಿದಿರುವ ಸಂಗತಿಯನ್ನೇ ನುಡಿದರೇ? ಮೀಸಲಾತಿ ಪಡೆದು ಏನು ಮಾಡುವಿರಿ, ಸರಕಾರದ ಬಳಿ ಉದ್ಯೋಗವೇ ಇಲ್ಲ ಎಂಬ ಹೇಳಿಕೆ ಅವರಿಂದ ಹೊರಟಿತು. ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಜಾತಿಯಾಧಾರಿತ ಮೀಸಲಾತಿಯನ್ನು ಬದಲಿಸುವ ಯೋಜನೆಯನ್ನು ಸರಕಾರವು ಹೊಂದಿಲ್ಲ ಎಂಬ ಸ್ಪಷ್ಟೀಕರಣವನ್ನು ಬಳಿಕ ಅವರು ನೀಡಿದರು. ಆದರೆ ಸರಕಾರದ ಬಳಿ ಉದ್ಯೋಗವಿಲ್ಲ ಎಂಬುದು ಇದೇ ಹೇಳಿಕೆಯ ಮತ್ತೊಂದು ಭಾಗವಾಗಿತ್ತು. ಸರಕಾರದ ಬಳಿ ಖಂಡಿತವಾಗಿಯೂ ಉದ್ಯೋಗ ಇಲ್ಲವೇ ಅಥವಾ ನೀಡುವ ಇಚ್ಛಾಶಕ್ತಿಯನ್ನು ಅದನ್ನು ಹೊಂದಿಲ್ಲವೇ? ಬನ್ನಿ, ಇದರ ಕುರಿತಂತೆ ಒಂದಷ್ಟು ಚರ್ಚೆ ನಡೆಸೋಣ.

@RavishKaPage ಈ ಹೇಳಿಕೆಯನ್ನು ಆಗಸ್ಟ್ 5ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಮೊದಲ ಸುದ್ದಿಯೊಂದಿಗೆ ಜೋಡಿಸಿ ನೋಡಿರಿ. ಪತ್ರಿಕೆಯು ಫೆಬ್ರವರಿಯಿಂದ ಜುಲೈ ನಡುವೆ ಸಂಸತ್ತಿನಲ್ಲಿ ವಿವಿಧ ಇಲಾಖೆಗಳ ಉಲ್ಲೇಖದಲ್ಲಿ ನೀಡಲಾದ ಅಂಕಿಅಂಶಗಳನ್ನು ಒಂದೆಡೆಯಲ್ಲಿ ಒಟ್ಟುಗೂಡಿಸಿ ಪ್ರಸ್ತುತಪಡಿಸಿದೆ. ಇದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಳಿ 24 ಲಕ್ಷಗಳು ಉದ್ಯೋಗಗಳಿವೆ ಎಂಬ ಚಿತ್ರಣ ದೊರಕುತ್ತದೆ. ಈ ಸುದ್ದಿ ಭಾರತೀಯ ಯುವಜನರ ಗಮನಕ್ಕೆ ಬಂದಾಗ ಅವರ ಎದೆ ಝಲ್ ಅಂದಿರಬಹುದು. ಪ್ರೈಮ್ ಟೈಮ್‌ನ ಉದ್ಯೋಗ ಸರಣಿಯಲ್ಲಿ ನಾವು ಈ ವಿಚಾರವನ್ನು ಕಳೆದ ಹಲವು ತಿಂಗಳುಗಳಿಂದ ತೋರಿಸುತ್ತಿದ್ದೇವೆ. ತನ್ನ ಫೇಸ್‌ಬುಕ್ ಪೇಜ್ ನಲ್ಲೂ 50ರಷ್ಟು ಲೇಖನಗಳನ್ನು ಈಗಾಗಲೇ ಬರೆದಿದ್ದೇನೆ. 24 ಲಕ್ಷ ಉದ್ಯೋಗಗಳು ಇದ್ದು ಕೂಡ ಅವುಗಳನ್ನು ನೀಡಲಾಗಿಲ್ಲ. ನೀಡಲಾಗುತ್ತಿಲ್ಲ ಇಲ್ಲವೇ, ಎರಡರಲ್ಲೂ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಈ ಉದ್ಯೋಗಗಳಿಗಾಗಿ ಸಿದ್ಧರಾಗುತ್ತಿರುವ ಹಾಗೂ ಪ್ರತಿದಿನವೂ ನೇಮಕಾತಿಯ ನಿರೀಕ್ಷೆಯಲ್ಲಿರುವ ಭಾರತೀಯ ಯುವಜನರ ಒಂದು ವರ್ಗದಲ್ಲಿ ಈ ಮಾಹಿತಿಯಿದೆ. ಯಾವ ರಾಜ್ಯದಲ್ಲಿ ಲೋಕಸೇವಾ ಆಯೋಗದ ನೇಮಕಾತಿ ನಡೆಯುವುದಿಲ್ಲ ಎಂಬುದು ಕೂಡ ಅವರಿಗೆ ತಿಳಿದಿದೆ.

ಟೈಮ್ಸ್ ಆಫ್ ಇಂಡಿಯಾ ಸಂಕಲನ ಮಾಡಿರುವ ಪ್ರಕಾರ, 10 ಲಕ್ಷ ಉದ್ಯೋಗಗಳು ಕೇವಲ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯಲ್ಲಿದೆ. ಲಕ್ಷಾಂತರ ಯುವಜನರು ಬಿಟೆಕ್ ಮತ್ತು ಬಿಎಡ್ ಮಾಡಿ ಮನೆಯಲ್ಲಿ ಕುಳಿತಿದ್ದಾರಾದರೂ, ಎಲ್ಲಿಯೂ ಮರುನೇಮಕಾತಿ ಇಲ್ಲ. ಎಲ್ಲಿಯಾದರೂ ಇದ್ದರೆ ಅದು ಒಪ್ಪಂದದ ಆಧಾರದಲ್ಲಿರುತ್ತದೆ. ಎಲ್ಲಾ ಕೆಲಸ ಮಾಡುತ್ತಾರೆ, ಆದರೆ ಪೂರ್ಣ ವೇತನ ದೊರಕುವುದಿಲ್ಲ. ವಾಸ್ತವ ಸಂಗತಿ ಮಾತನಾಡಿದರೆ ಎಲ್ಲರನ್ನೂ ನಿಷ್ಪ್ರಯೋಜಕರೆಂದು ಜರೆಯಲಾಗುತ್ತದೆ. ಮಾತ್ರವಲ್ಲ ವಾಟ್ಸಪ್‌ನಲ್ಲಿ ಕಳುಹಿಸಲಾಗುವ ಅಪಪ್ರಚಾರಗಳಲ್ಲೇ ವಿದ್ಯಾರ್ಥಿಗಳು ತಲ್ಲೀನನಾಗಿ ಇರಲಿದ್ದಾರೆ, ಯಾವತ್ತೂ ತನ್ನ ಉದ್ಯೋಗದ ಬಗ್ಗೆ ಮಾತನಾಡಲಾರ ಅಥವಾ ಅದರ ಕುರಿತು ಕೇಳಲಾರ ಎಂಬ ಭರವಸೆ ರಾಜಕೀಯ ಮಂದಿಯಲ್ಲಿ ಮೂಡಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಪೊಲೀಸ್ ಇಲಾಖೆಯಲ್ಲಿ ಐದು ಲಕ್ಷ ಕೆಲಸ ಖಾಲಿ ಇದೆ, ಅರೆ ಸೈನಿಕ ಪಡೆಯಲ್ಲಿ 61,509, ಅಂಚೆ ಇಲಾಖೆಯಲ್ಲಿ 54,263, ಆರೋಗ್ಯ ಇಲಾಖೆಯಲ್ಲಿ 1.5 ಲಕ್ಷ, ಅಂಗನವಾಡಿ ಕ್ಷೇತ್ರದಲ್ಲಿ 2.2 ಲಕ್ಷ ಹುದ್ದೆಗಳಿವೆ. ಏಮ್ಸ್‌ನಲ್ಲಿ 21, 470, ನ್ಯಾಯಾಲಯಗಳಲ್ಲಿ 5,853, ಇತರ ಉನ್ನತ ಸಂಸ್ಥೆಗಳಲ್ಲಿ 12,020 ಹುದ್ದೆ ಖಾಲಿ ಇದೆ ಎಂದು ಪತ್ರಿಕೆ ವರದಿ ಮಾಡಿತ್ತು.

ಇವೆಲ್ಲದರ ಹೊರತಾಗಿ ರೈಲ್ವೇಯಲ್ಲಿ 2.4 ಲಕ್ಷ ಉದ್ಯೋಗಳಿವೆ. ನಾಲ್ಕು ವರ್ಷಗಳಿಂದ ಯುವಜನರು ಸಿದ್ಧತೆ ನಡೆಸುತ್ತಲೇ ಸಾಗಿದರು, ಆದರೆ ರೈಲ್ವೇಯಲ್ಲಿ ಮರುನೇಮಕಾತಿ ಹೆಸರಿಗೆ ಮಾತ್ರವೇ ಬಂತು. ಕೆಲವೊಂದು ಇಲಾಖೆಯಲ್ಲಂತೂ ಮರುನೇಮಕಾತಿ ನಡೆಯಲೇ ಇಲ್ಲ. ರೈಲ್ವೇಯಲ್ಲಿ 2 ಲಕ್ಷಕ್ಕಿಂತಲೂ ಹೆಚ್ಚು ಕೆಲಸ ಖಾಲಿ ಇದೆ. ಆದರೂ ಒಂದೂವರೆ ಲಕ್ಷ ನೇಮಕಾತಿಯೂ ನಡೆಯಲಿಲ್ಲ. ಈ ಬಾರಿ ಅರ್ಜಿ ಕರೆದ ಬಳಿಕ ರೈಲ್ವೇಯು ಸಹಾಯ ಲೋಕಾ ಪೈಲೆಟ್ ಸಂಖ್ಯೆಯನ್ನು 26,500ರಿಂದ ಹೆಚ್ಚಿಸಿ 60,000 ವಾಡುವುದಾಗಿ ನಿರ್ಧರಿಸಿದೆ. ಇದು ಒಳ್ಳೆಯ ಸಂಗತಿ. ಆದರೆ ಇದು ಸಹಾಯಕ ಸ್ಟೇಷನ್ ಮಾಸ್ಟರ್‌ನ ಮರುನೇಮಕಾತಿಯಂತೆ ಆಗದಿರಲಿ. 2016ರಲ್ಲಿ 18000 ಹುದ್ದೆಗಳಿಗಾಗಿ ಅರ್ಜಿ ಕರೆಯಲಾಗಿತ್ತು. ಆದರೆ ಫಲಿತಾಂಶ ಹೊರಬಿದ್ದಾಗಲಂತೂ 4000 ಸೀಟುಗಳು ಕಡಿಮೆಯಾಗಿದ್ದವು. ರೈಲ್ವೇಯಲ್ಲಿಯೂ ಮತ್ತು ರೈಲ್ವೇಯ ಹೊರಗೂ ಈ ರೀತಿಯ ಪರೀಕ್ಷೆಗಳ ಬಹಳಷ್ಟು ಉದಾಹರಣೆಗಳು ಸಿಗುತ್ತವೆ.

ರೈಲ್ವೇಯ ಪರೀಕ್ಷಾ ಕೇಂದ್ರಗಳನ್ನು ದೂರ ದೂರ ನೀಡಲಾಗಿದೆ. ದೊಡ್ಡ ಸಂಖ್ಯೆಯ ಬಡ ವಿದ್ಯಾರ್ಥಿಗಳಿಗೆ ಅಲ್ಲಿಗೆ ತಲುಪಲು ಸಾಧ್ಯವಾಗಲಾರದು ಅಥವಾ ಅಲ್ಲಿಗೆ ತೆರಳಲು ಸಾಲ ಪಡೆಯಬೇಕಾದಂತಹ ಸಮಸ್ಯೆಗೆ ಸಂಬಂಧಿಸಿದಂತೆ ಸರಕಾರವು ಯಾವುದೇ ಪರಿಹಾರ ಕಲ್ಪಿಸಿಲ್ಲ. ಖಂಡಿತವಾಗಿಯೂ ನಾವು ಒತ್ತಡದಲ್ಲಿದ್ದೇವೆ, ರೈಲು ಸಮಯಕ್ಕೆ ಸರಿಯಾಗಿ ಹೊರಡುವುದಿಲ್ಲ, ಕೆಲವು ದಿನ ಮೊದಲೇ ಹೊರಡಬೇಕಾಗಬಹುದು, ಈ ಮಧ್ಯೆ ಇತರ ಪರೀಕ್ಷೆಗಳು ಕೈತಪ್ಪಿ ಹೋಗಬಹುದು, ಹತ್ತಿರದ ಕೇಂದ್ರದಲ್ಲಿ ಪರೀಕ್ಷೆ ನಡೆಯಲಾರದೇ? ಎಂಬ ವಿಷಯವನ್ನು ಒಂದೆರಡು ಬಾರಿ ಮತ್ತೇ ಪ್ರೈಮ್ ಟೈಮ್‌ನಲ್ಲಿ ತೋರಿಸಿ ಎಂದು ಅವರು ಪತ್ರ ಬರೆಯುತ್ತಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ಈ ದಾಖಲೆ ಪೂರ್ಣವಾಗಿಲ್ಲ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೌಕರರ ನೇಮಕಾತಿ ಆಯೋಗದ ಅಂಕಿಅಂಶಗಳಿಲ್ಲ. ಇದರಲ್ಲಿ ಎಷ್ಟು ನೌಕರಿಗಳು ಬಾಕಿ ಉಳಿದುಕೊಂಡಿವೆ, ಎಷ್ಟು ನೇಮಕಾತಿಗಳು ಮೂರು ವರ್ಷಗಳಿಂದ ಬಾಕಿ ಉಳಿದುಕೊಂಡಿವೆ ಎಂಬ ಮಾಹಿತಿಯೂ ಇಲ್ಲ. ಅರ್ಜಿ ಸಲ್ಲಿಸಲಾಗಿದೆ, ಪರೀಕ್ಷೆ ಇಲ್ಲ. ಪರೀಕ್ಷೆಗಳು ಮುಗಿದಿವೆ, ಫಲತಾಂಶವಿಲ್ಲ. ಫಲಿತಾಂಶ ಹೊರಬಿದಿದ್ದೆ, ನೇಮಕಾತಿ ಇಲ್ಲ. ಭಾರತೀಯ ಸರಕಾರದ ಸಿಬ್ಬಂದಿ ನೇಮಕಾತಿ ಆಯೋಗದ ನೇಮಕಾತಿಗಳು ಕಡಿಮೆಯಾಗಿವೆ. ಯುವಜನರಿಂದ ಅರ್ಜಿಗಾಗಿ 3000ವರೆಗೆ ಹಣ ಪಡೆದುಕೊಳ್ಳಲಾಗುತ್ತಿದೆ. ಹಣ ಪಡೆದ ಬಳಿಕ ಪರೀಕ್ಷೆಗಳು ರದ್ದಾಗುತ್ತವೆ. ಆದರೆ ಅವುಗಳನ್ನು ಹಿಂದಿರುಗಿಸಲಾಗುವುದಿಲ್ಲ. ಈ ಆಯೋಗಗಳು ಯುವಜನರನ್ನು ಅರೆದಿಟ್ಟಿವೆ. ಆಯೋಗ ಬಿಡಿ, ಕೋರ್ಟ್‌ನ ನೇಮಕಾತಿಗಳು ಸಹ ಸಮಯಕ್ಕೆ ಸರಿಯಾಗಿ ಮತ್ತು ವಿವಾದ ರಹಿತವಾಗಿ ನಡೆಯುತ್ತಿಲ್ಲ. ಬಿಹಾರ ಸಿವಿಲ್ ಕೋರ್ಟ್ ಗುಮಾಸ್ತ ಪರೀಕ್ಷೆ – 2016ರ ಫಲಿತಾಂಶವು ಇದುವರೆಗೂ ಹೊರಬಿದ್ದಿಲ್ಲ. ಇತ್ತೀಚಿಗೆ ಯುವಜನರು ಫಲಿತಾಂಶ ಘೋಷಿಸಬೇಕೆಂದು ಆಗ್ರಹಿಸಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದರು.

ಒಂದು ವೇಳೆ ರಾಜ್ಯಗಳ ಆಯೋಗಗಳಿಂದ ಅಂಕಿಅಂಶಗಳನ್ನು ಪಡೆದು ಜೋಡಿಸಿದರೆ 24 ಲಕ್ಷದ ಸಂಖ್ಯೆಯು 50 ಲಕ್ಷದ ವರೆಗೆ ತಲುಪಬಹುದು. ಜುಲೈ 28ರಂದು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ವಿಕಾಸ್ ಪಾಟಕ್‌ರವರ ವರದಿಯಂತೆ, ಕಳೆದ ಮೂರು ವರ್ಷಗಳಲ್ಲಿ ಕಾಲೇಜುಗಳಲ್ಲಿ ತಾತ್ಕಾಲಿಕದಿಂದ ಹಿಡಿದು ಪ್ರೊಫೆಸರ್‌ಗಳ ಒಟ್ಟು ಸಂಖ್ಯೆ 2.34 ಲಕ್ಷದವರೆಗೆ ಕುಸಿತ ಕಂಡಿದೆ. 2015-16ರಲ್ಲಿ 10.09 ಲಕ್ಷ ಶಿಕ್ಷಕರಿದ್ದರು. 2017-18ರಲ್ಲಿ ಈ ಸಂಖ್ಯೆಯು ಕ್ಷೀಣಿಸಿ 8.88 ಲಕ್ಷಕ್ಕೆ ತಲುಪಿದೆ. ವರದಿಗಾರ ಈ ವರದಿಯನ್ನು ಆಲ್ ಇಂಡಿಯಾ ಸರ್ವೇ ಆನ್‌ಲೈನ್ ಹೈಯರ್ ಎಜುಕೇಷನ್ ರಿಪೋರ್ಟರ್ 2017-18 ಮೂಲದಿಂದ ಪಡೆದುಕೊಂಡಿದ್ದರು. ಟೈಮ್ಸ್ ಆಫ್ ಇಂಡಿಯಾದ ವರದಿಯಲ್ಲಿ ಈ ಸಂಖ್ಯೆ ಇಲ್ಲ.

ನಾವು ಹಲವು ತಿಂಗಳು ಉದ್ಯೋಗದ ಕುರಿತ ಸರಣಿಯನ್ನು ನಡೆಸಿದೆವು. ಈಗಲೂ ನಡೆಯುತ್ತಿದೆ. ಈಗಲೂ ವಿದ್ಯಾರ್ಥಿಗಳು ತಮ್ಮ ನೌಕರಿಯ ಬಗ್ಗೆ ಬರೆಯುತ್ತಿದ್ದಾರೆ. ಉತ್ತರ ಪ್ರದೇಶ ಲೋಕಸೇವಾ ಆಯೋಗವು ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆಯನ್ನು ಹಮ್ಮಿಕೊಳ್ಳುತ್ತದೆ. 2013ರ ಪರೀಕ್ಷೆಯ ಅರ್ಜಿಯನ್ನು ಡಿಸೆಂಬರ್ 2013ರಲ್ಲಿ ಕರೆಯಲಾಗಿತ್ತು. ಮೂರು ವರ್ಷಗಳ ಬಳಿಕ ಅಂದರೆ 2016ರ ಎಪ್ರಿಲ್‌ನಲ್ಲಿ ಪರೀಕ್ಷೆ ನಡೆಯುತ್ತದೆ. ಇದೀಗ ವಿದ್ಯಾರ್ಥಿಗಳ ಫಲಿತಾಂಶದ ಕುರಿತಂತೆ ಆಯೋಗವನ್ನು ಸಂಪರ್ಕಿಸಿದರೆ ಯಾವುದೇ ಉತ್ತರ ದೊರಕುತ್ತಿಲ್ಲ. 2017ರಿಂದ ಈವರೆಗೂ ಅವರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಈ ರೀತಿಯ ಅನೇಕ ಉದಾಹರಣೆಗಳಿವೆ. ರಾಜಸ್ಥಾನ, ಬಿಹಾರ, ಬಂಗಾಳ, ಪಂಜಾಬ್, ಮಧ್ಯ ಪ್ರದೇಶದಿಂದಲೂ ಇತ್ತೀಚಿಗೆ ವಿದ್ಯಾರ್ಥಿಗಳು ಪತ್ರ ಬರೆಯುತ್ತಲೇ ಇದ್ದಾರೆ.

ಈ ಎಲ್ಲಾ ಉದ್ಯೋಗಗಳ ಸಂಖ್ಯೆಯನ್ನು ಜೋಡಿಸಿದರೆ ಮತ್ತು ಕೆಲವು ವರ್ಷಗಳ ಮೊದಲಿನ ಸಂಖ್ಯೆಯನ್ನು ಒಟ್ಟುಗೂಡಿಸಿ ನೋಡಿದರೆ, ಎಷ್ಟು ನೌಕರಿಗಳನ್ನು ಕಡಿತಗೊಳಿಸಲಾಗಿದೆ ಎಂಬ ವಿಚಾರ ಅರಿವಿಗೆ ಬರುತ್ತದೆ ಎಂಬುದು ಗಮನಾರ್ಹವಾಗಿದೆ. ಕಡಿತಗೊಳಿಸಿದ ಬಳಿಕವೂ ಇರುವ ಸೀಟುಗಳನ್ನು ತುಂಬಲಾಗುತ್ತಿಲ್ಲ. ಈ ಯುವಜನರು ಓಟು ನೀಡುವುದಿಲ್ಲವೇ ಅಥವಾ ಇವರು ಯಾರಿಗೂ ಓಟು ನೀಡಿಲ್ಲವೇ? ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ತಿಳಿಸಲು ಸರಕಾರಕ್ಕೆ ಇನ್ನೆಷ್ಟು ದಿನಗಳು ಬೇಕಾಗಬಹುದು. ಈ ಪ್ರಶ್ನೆಯನ್ನು ಕೇಳುವವರಾರು? ಯುವಜನರಿಗೆ ಈ ಪ್ರಶ್ನೆಯ ಉತ್ತರ ಬೇಕೇ? ಮೊದಲು ಅವರು ಈ ಪ್ರಶ್ನೆಯನ್ನು ಸ್ವತಃ ಕೇಳಿಕೊಳ್ಳಲಿ.

(ಲೇಖಕರು ಎನ್‌ಡಿಟಿವಿಯ ಪ್ರೈಮ್‌ಟೈಮ್ ನಿರೂಪಕರು)

LEAVE A REPLY

Please enter your comment!
Please enter your name here