ಉತ್ತರ ಪ್ರದೇಶದಲ್ಲಿ ಇನ್ನೋರ್ವ ದಲಿತ ಹುಡುಗಿಯ ಶವ ಪತ್ತೆ: ಅತ್ಯಾಚಾರ ಶಂಕೆ

Prasthutha News

ಬಾರಬಂಕಿ: ಉತ್ತರ ಪ್ರದೇಶದ ಸತ್ರಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹದಿಹರೆಯದ ದಲಿತ ಹುಡುಗಿಯೋರ್ವಳ ಮೃತದೇಹ ಗದ್ದೆಯೊಂದರಲ್ಲಿ ಪತ್ತೆಯಾಗಿರುವುದಾಗಿ ‘ಹಿಂದುಸ್ತಾನ್’ ವರದಿ ಮಾಡಿದೆ.

ಕೈ ಮತ್ತು ಕಾಲುಗಳು ಬಿಗಿದ ಸ್ಥಿತಿಯಲ್ಲಿ 17ರ ಹರೆಯದ ಹುಡುಗಿಯ ಮೃತದೇಹ ದೊರೆತಿದ್ದು, ಆಕೆಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ. ತನ್ನ ಪುತ್ರಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಹುಡುಗಿಯ ತಂದೆ ಆರೋಪಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡಂತೆ ಅಪಾರ ಸಂಖ್ಯೆಯಲ್ಲಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಹುಡುಗಿಯ ತಂದೆ ಕಾರ್ಮಿಕನಾಗಿದ್ದು, ಕೆಲಸದಿಂದ ಮನೆಗೆ ಹಿಂದಿರುಗುವಾಗ ಆಕೆ ಮನೆಯಲ್ಲಿರಲಿಲ್ಲ. ರಾತ್ರಿಯಾದರೂ ಬರದಿದ್ದಾಗ ಅವರು ಗದ್ದೆಯಲ್ಲಿ ಹುಡುಕಾಡಿದ್ದರು. ಆಕೆಯನ್ನು ಎಲ್ಲೂ ಕಾಣಲು ಸಾಧ್ಯವಾಗಲಿಲ್ಲ. ಆದರೆ ನಂತರ ಸಮೀಪದ ಗದ್ದೆಯೊಂದರಲ್ಲಿ ಅವಳ ಮೃತದೇಹ ಬಿದ್ದಿರುವುದು ಕಂಡಿತ್ತು. ಆಘಾತಗೊಂಡ ಹುಡುಗಿಯ ತಂದೆ ಅಲ್ಲಿಂದ ತನ್ನ ಗ್ರಾಮಕ್ಕೆ ಮರಳಿ ಜನರಿಗೆ ಮಾಹಿತಿ ನೀಡಿದ್ದ. ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಹುಡುಗಿಯ ಉಡುಪನ್ನು ಬಳಸಿ ಉಸಿರುಗಟ್ಟಿಸಲಾಗಿದೆ. ಆಕೆಯ ಬಟ್ಟೆಯನ್ನು ಹರಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

“ಮೊದಲ ನೋಟದಲ್ಲಿ ಇದೊಂದು ಹತ್ಯೆಯಂತೆ ಕಾಣುತ್ತದೆ. ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ವರದಿ ಬಂದ ಬಳಿಕವಷ್ಟೇ ಪೂರ್ಣ ವಿವರ ದೊರೆಯಲಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ಎಸ್.ಗೌತಮ್ ಹೇಳಿದ್ದಾರೆ.


Prasthutha News