ಈಶಾನ್ಯ ವಲಯ: ಬಿಜೆಪಿಗೆ ತಿರುಗುಬಾಣವಾದ ಎನ್‌ಆರ್‌ಸಿ

0
242

-ಕೆ.ಎನ್.ನವಾಝ್ ಅಲಿ
  ಅನು: ಮುಝಾಹಿದಾ

ಅಸ್ಸಾಮಿನ ಮುಸ್ಲಿಮರನ್ನು ಗುರಿಯಾಗಿಸಿ ಬಿಜೆಪಿ ತಂದ ರಾಷ್ಟ್ರೀಯ ಪೌರತ್ವ ನೋಂದಣಿ ಈ ಬಾರಿಯ ಚುನಾವಣೆಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಮುಖ್ಯ ಚರ್ಚಾ ವಸ್ತುವಾಗಿ ಬದಲಾಗಲಿದೆ. 25 ಲೋಕಸಭಾ ಕ್ಷೇತ್ರಗಳಿರುವ ಈಶಾನ್ಯ ರಾಜ್ಯಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 14 ಕ್ಷೇತ್ರಗಳಲ್ಲಿ ಜಯಗಳಿಸಿತು. ಆದರೆ ಅತ್ಯಂತ ದೊಡ್ಡ ಪ್ರಮಾಣದ ಜನರ ಪೌರತ್ವವನ್ನೇ ನಿರಾಕರಿಸುವ ರಾಷ್ಟ್ರೀಯ ಪೌರತ್ವ ನೋಂದಣಿಯು ಈ ಬಾರಿಯ ಚುನಾವಣೆಯಲ್ಲಿ ಹೇಗೆ ಪ್ರತಿಫಲಿಸಬಹುದು ಎಂಬುದು ತೀವ್ರ ಕುತೂಹಲಕಾರಿಯಾಗಿದೆ. ಇದು ಅಸ್ಸಾಮಿನಲ್ಲಿ ಬಿಜೆಪಿಗೆ ಪ್ರಥಮ ಬಾರಿಗೆ ರಾಜ್ಯದ ಆಡಳಿತ ಚುಕ್ಕಾಣಿ ಲಭಿಸಿದ ನಂತರ ನಡೆಯುತ್ತಿರುವ ಚುನಾವಣೆಯಾಗಿದೆ. ಅಸ್ಸಾಂ ಅಲ್ಲದೆ ಅರುಣಾಚಲ ಪ್ರದೇಶ, ಮಣಿಪುರ, ತ್ರಿಪುರಗಳಲ್ಲಿಯೂ ಬಿಜೆಪಿಯದ್ದೇ ಆಡಳಿತವಿದೆ. ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶದ ಸಮೀಕ್ಷೆಯನ್ನು ಹೇಳುವಾಗ, ರಾಜ್ಯದ ಆಡಳಿತದಲ್ಲಿ ಬಿಜೆಪಿಗಿರುವ ಪ್ರಭಾವ ಮತ್ತು ಪೌರತ್ವ ತಿದ್ದುಪಡಿಗೆ ಮಸೂದೆಗೆ ಎದುರಾಗಿ ಒಂದು ವರ್ಗಕ್ಕಿರುವ ಕಠಿಣವಾದ ವಿರೋಧದ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಸ್ಸಾಮಿನಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಅಸ್ಸಾಂ ಗಣ ಪರಿಷತ್ ಎನ್‌ಡಿಎಯಿಂದ ಹೊರ ನಡೆದಿದ್ದರೂ, ಈಗ ಪುನಃ ತಿರುಗಿ ಬಂದಿದೆ. ಬಿಜೆಪಿ ಅಸ್ಸಾಮಿನಲ್ಲಿ ಹಿಂದುತ್ವ ಧ್ರುವೀಕರಣ ರಾಜಕೀಯದ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಲಾಭ ಗಳಿಸಿತ್ತು. 3 ಸಂಸದರಿರುವ ಬದ್ರುದ್ದೀನ್ ಅಜ್ಮಲ್‌ರ ಎಐಯುಡಿಎಫ್ ಮುಸ್ಲಿಮರ ಮಧ್ಯೆ ಹೆಚ್ಚು ಪ್ರಭಾವ ಹೊಂದಿರುವ ಪಕ್ಷವಾಗಿದೆ. ಪೌರತ್ವ ಮಸೂದೆಯ ಬಗ್ಗೆ ಮುಸ್ಲಿಮರಿಗಿರುವ ಅತಪ್ತಿಯು ಮತವಾಗಿ ಬದಲಾದರೆ ಎಐಯುಡಿಎಫ್‌ಗೆ ಲಾಭವಾಗುವುದರಲ್ಲಿ ಸಂಶಯವಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ 7 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಕೇವಲ ಮೂರು ಸೀಟುಗಳಿಗೆ ತಪ್ತಿಪಟ್ಟುಕೊಳ್ಳಬೇಕಾಯಿತು.

ಮರಳಿ ಬರುವ ಹವಣಿಕೆಯಲ್ಲಿ ಕಾಂಗ್ರೆಸ್:

ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್ ಮರಳಿ ಬರುವ ಹಾದಿಯಲ್ಲಿದೆ. ಪಕ್ಷ ತ್ಯಜಿಸಿ ಹೋಗಿದ್ದ 21 ಹಿರಿಯ ನಾಯಕರು ಮರಳಿ ಪಕ್ಷಕ್ಕೆ ಬಂದದ್ದು ಕಾಂಗ್ರೆಸ್‌ಗೆ ಹೊಸ ಹುಮ್ಮಸ್ಸನ್ನು ನೀಡಿದೆ. ಮಾಜಿ ಪಿಸಿಸಿ ಅಧ್ಯಕ್ಷರಾದ ಎಸ್.ಐ.ಜಾಮಿರ್, ಮಾಜಿ ಸ್ಪೀಕರ್ ಲೋಹಾ, ಮಾಜಿ ಡೆಪ್ಯೂಟಿ ಸ್ಪೀಕರ್ ಜೋಶ್ವ ಸುಮಿ ಮೊದಲಾದ ನಾಯಕರು ಪಕ್ಷಕ್ಕೆ ಮರಳಿದ್ದಾರೆ. ಇದು ಬಿಜೆಪಿ-ಎನ್‌ಡಿಪಿಪಿ ಮೈತ್ರಿ ವಿರುದ್ಧ ಕಠಿಣವಾದ ಸ್ಪರ್ಧೆ ನೀಡಲು ಕಾಂಗ್ರೆಸ್‌ಗೆ ಸಹಕಾರಿಯಾಗಬಹುದು. ನಾಗಾಲ್ಯಾಂಡ್‌ನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಮೈತ್ರಿ ಪಕ್ಷಗಳನ್ನು ಸೋಲಿಸಲು ತಾನು ಸ್ಪರ್ಧಿಸಿದ ಕ್ಷೇತ್ರಗಳಲ್ಲಿ ಜಾತ್ಯತೀತ ಅಭ್ಯರ್ಥಿಗಳಿಗೆ ಬೆಂಬಲ ನೀಡಿತು. ಬಿಜೆಪಿ ನೇತತ್ವದ ಈಶಾನ್ಯ ಪ್ರಜಾಪ್ರಭುತ್ವ ಒಕ್ಕೂಟ(ಎನ್‌ಇಡಿಎ)ದ ಭಾಗವಾದ ನ್ಯಾಷಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ(ಎನ್‌ಡಿಪಿಪಿ) ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆಯನ್ನು ಕಠಿಣವಾಗಿ ವಿರೋಧಿಸುತ್ತಿದೆ. ಆ ಮಸೂದೆ ನಾಗಾಲ್ಯಾಂಡ್‌ಗೆ ಅನ್ವಯಿಸುವುದಿಲ್ಲ ಎಂದು ಮುಖ್ಯಮಂತ್ರಿಯು ಎನ್‌ಡಿಪಿಪಿಯ ನೇತಾರರೂ ಆದ ನೈಫ್ಯೂಂಗ್ ರಿಯೋ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಂವಿಧಾನದ 371ಎ ಕಲಂ ನಾಗಾಲ್ಯಾಂಡನ್ನು ಈ ಮಸೂದೆಯಿಂದ ಹೊರತುಪಡಿಸುತ್ತದೆ ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ಹೇಳಿದ್ದಾರೆ.

ಇದಲ್ಲದೆ ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್ ರಾಜ್ಯ ಸರಕಾರಗಳು ಶಿಲ್ಲಾಂಗಿನಲ್ಲಿ ಸೇರಿದ ಮಹಾ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ನಿರ್ಣಯವನ್ನು ಜಾರಿಗೊಳಿಸಿತು. 4 ರಾಜ್ಯಗಳ ಎನ್‌ಪಿಪಿ ನೇತಾರರು ಭಾಗವಹಿಸಿದ ಈ ಅಧಿವೇಶನದಲ್ಲಿ ಈ ಮಸೂದೆಯ ವಿರುದ್ಧ ತೀವ್ರ ವಿರೋಧ ಪ್ರಕಟವಾಯಿತ್ತು. ಎಲ್ಲಾ ಈಶಾನ್ಯ ರಾಜ್ಯಗಳಲ್ಲೂ ಕೇಂದ್ರ ಸರಕಾರದ ವಿವಾದಾಸ್ಪದ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಜನಾಕ್ರೋಶವು ಮುಗಿಲು ಮುಟ್ಟಿದೆ. ಇದು ಬಿಜೆಪಿ ವಿರೋಧಿ ಅಲೆಯಾಗಿ ಮಾರ್ಪಾಡಾಗಬಹುದು ಎಂಬ ಸೂಚನೆಗಳನ್ನು ನೀಡುತ್ತಿದೆ. ಅಸ್ಸಾಂ, ಮಿರೆರಾಂ, ಮೇಘಾಲಯಗಳಲ್ಲಿ ಈ ಅಲೆಯು ತೀವ್ರಗತಿಯಲ್ಲಿದೆ.

ಬಿಜೆಪಿಯ ಗೊಂದಲ:

ಬಿಜೆಪಿಯ ಆಡಳಿತವಿರುವ ಅರುಣಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಜೊತೆಗೆ  ಲೋಕಸಭಾ ಚುನಾವಣೆಯೂ ನಡೆಯಲಿದೆ. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಗೆ 48 ಸೀಟುಗಳಿವೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ಕಾಂಗ್ರೆಸ್‌ಗೆ ತಲಾ 5 ಸೀಟುಗಳಿವೆ. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆಗೆ ವಿರುದ್ಧವಾಗಿ ಎದ್ದಿರುವ ಪ್ರತಿಭಟನೆಯು ಓಟಾಗಿ ಬದಲಾಗಬಹುದೆಂದು ಅರಿತು ಪ್ರಮುಖ ನೇತಾರರು ಬಿಜೆಪಿಯನ್ನು ತ್ಯಜಿಸಿದ್ದು ಪಕ್ಷಕ್ಕೆ ಮಹಾ ಹೊಡೆತವಾಗಿದೆ. ಮೊತ್ತಮೊದಲು ಪಕ್ಷ ತ್ಯಜಿಸಿದ್ದು ಮಾಜಿ ಮುಖ್ಯಮಂತ್ರಿ ಜಿಜೋಂಗ್ ಅಪಾಂಗ್. ಅವರು 2014ರಲ್ಲಿ ಪಕ್ಷಕ್ಕೆ ಸೇರಿದ್ದರು. ಪಕ್ಷದಲ್ಲಿ ಮೋದಿ ಮತ್ತು ಅಮಿತ್ ಷಾರವರ ಅಧಿಕಾರ ಮಾತ್ರವೆಂದೂ, ಅವರು ಹೇಳಿದನ್ನೆಲ್ಲಾ ಈಶಾನ್ಯದಲ್ಲಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲವೆಂದೂ, ಅದಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆಂದೂ ಅಪಾಂಗ್ ಹೇಳಿಕೆ ನೀಡಿದ್ದರು. ಎನ್‌ಡಿಎ ಮಿತ್ರಪಕ್ಷವಾದ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಎರಡು ಎಂಎಲ್‌ಎಗಳು ಅದರ ಬೆನ್ನಿಗೇ ರಾಜೀನಾಮೆ ನೀಡಿದರು.

ಇವರ ಜೊತೆಗೆ ಎರಡು ಮಾಜಿ ಮಂತ್ರಿಗಳು, ಒಬ್ಬ ರಾಜ್ಯ ಸಮಿತಿ ಸದಸ್ಯರು ರಾಜೀನಾಮೆ ನೀಡಿದ್ದರು. ಬಿಜೆಪಿ ತ್ಯಜಿಸಿದ ಇವರೆಲ್ಲಾ ಕಾಂಗ್ರೆಸ್ ಸೇರಿದರು. ಬಿಜೆಪಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿಯಿಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸುವುದೆಂದು ಎನ್‌ಡಿಎಯ ಮಾಜಿ ಅಂಗ ಪಕ್ಷಗವಾದ ಪೀಪಲ್ಸ್ ಪಾರ್ಟಿ ತೀರ್ಮಾನಿಸಿದೆ. ಇದು ಬಿಜೆಪಿಯ ಬುಡವನ್ನೇ ಅಲ್ಲಾಡಿಸಿದೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯ ಶಕ್ತಿ ಕುಂದಿದ ಸಂದರ್ಭದಲ್ಲಾಗಿದೆ ಈ ಚುನಾವಣೆ ನಡೆಯುತ್ತಿರುವುದು. ಬಿಜೆಪಿಗೆ ರಾಜೀನಾಮೆ ನೀಡಿದ ಹಲವು ಪ್ರಮುಖರು ಕಾಂಗ್ರೆಸ್ ಸೇರಿದರು. ಇದು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ದೊಡ್ಡ ಲಾಭವನ್ನು ತಂದುಕೊಡಲಿದೆ.

ಎಸ್‌ಡಿಎಫ್:
ಸಿಕ್ಕಿಂ ರಾಜ್ಯದಲ್ಲಿ ಲೋಕಸಭೆ ಮತ್ತು ರಾಜ್ಯಸಭಾ ಚುನಾವಣೆಗಳು ಜೊತೆಯಾಗಿ ನಡೆಯಲಿವೆ. ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್(ಎಸ್‌ಡಿಎಫ್) ಈ ಬಾರಿಯೂ ಚುನಾವಣೆಯಲ್ಲಿ ಮುನ್ನಡೆ ಸಾಧಿಸಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 32 ಸೀಟುಗಳಲ್ಲಿ 23 ಸೀಟುಗಳನ್ನು ಎಸ್‌ಡಿಎಫ್ ಬಾಚಿಕೊಂಡಿದೆ. ವಿಧಾನಸಭೆಯಲ್ಲಿ 9 ಸೀಟುಗಳಿರುವ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(ಎಸ್‌ಕೆಎಂ)ವಾಗಿದೆ ಎದುರಾಳಿ. ಇದಕ್ಕೆ ಬಿಜೆಪಿ ಬೆಂಬಲ ಘೋಷಿಸಿದೆ. ಕೇವಲ ಒಂದೇ ಲೋಕಸಭಾ ಕ್ಷೇತ್ರವಿರುವ ಸಿಕ್ಕಿಂನಲ್ಲಿ ಕಾಂಗ್ರೆಸ್ ಕೂಡಾ ಅಖಾಡದಲ್ಲಿದೆ.

ಮಣಿಪುರ, ಮಿರೆರಾಂ, ಸಿಕ್ಕಿಂ:
ಎರಡು ಲೋಕಸಭಾ ಕ್ಷೇತ್ರಗಳಿರುವ ಮಣಿಪುರದಲ್ಲಿ ರಾಷ್ಟ್ರಿಯ ಪೌರತ್ವ ತಿದ್ದುಪಡಿ ಮಸೂದೆಯು ಮುಖ್ಯ ಚುನಾವಣಾ ವಿಷಯವಾಗಿದೆ. ಇಲ್ಲಿ ಆಡಳಿತದಲ್ಲಿರುವ ಎನ್‌ಪಿಪಿಗೆ ಬಿಜೆಪಿಯ ಬೆಂಬಲವಿರುವುದಾದರೂ, ಪೌರತ್ವ ತಿದ್ದುಪಡಿ ಮಸೂದೆಯ ವಿಚಾರದಲ್ಲಿ ಎರಡೂ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯವಿದೆ. ಆದರೆ ನಾಗಾ ಪೀಪಲ್ಸ್ ಫ್ರಂಟ್(ಎನ್‌ಪಿಎಫ್) ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ)ದ ಬೆಂಬಲ ಎನ್‌ಪಿಪಿಗೆ ಇದೆ. ಒಟ್ಟಿನಲ್ಲಿ ಎರಡು ಲೋಕಸಭಾ ಕ್ಷೇತ್ರಗಳು ಕಾಂಗ್ರೆಸ್ ಕೈಯಲ್ಲಿದೆ. ಮೇಘಾಲಯದ ಎರಡು ಲೋಕಸಭಾ ಕ್ಷೇತ್ರಗಳಲ್ಲಿಯೂ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ರಾಜ್ಯದ ಆಡಳಿತದಲ್ಲಿ ಎನ್‌ಪಿಪಿಗೆ ಬೆಂಬಲ ನೀಡಿದ್ದರೂ ಪೌರತ್ವ ತಿದ್ದುಪಡಿ ವಿಷಯದಲ್ಲಿ ಇರುವ ಭಿನ್ನಾಭಿಪ್ರಾಯದಿಂದ ಬಿಜೆಪಿ ಈ ತೀರ್ಮಾನ ತೆಗೆದುಕೊಂಡಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಹೊಡೆತವನ್ನು ತಿಂದ ಕಾಂಗ್ರೆಸ್‌ಗೆ ಈ ಲೋಕಸಭಾ ಚುನಾವಣೆಯಲ್ಲಿ ಯಾವುದೇ ನಿರೀಕ್ಷೆಗಳಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಮಿಝೊರಾಂಅನ್ನು ಆಳಿದ ಕಾಂಗ್ರೆಸ್ ಗೆ ಈ ಬಾರಿ 40 ಸೀಟುಗಳಲ್ಲಿ ಕೇವಲ 6 ಸೀಟುಗಳನ್ನು ಮಾತ್ರವೇ ಪಡೆಯಲು ಸಾಧ್ಯವಾಯಿತು. ಹತ್ತು ವರ್ಷಗಳ ಹಿಂದೆ ಅಧಿಕಾರ ಕಳೆದುಕೊಂಡಿದ್ದ ಮಿಝೊ ನ್ಯಾಷನಲ್ ಫ್ರಂಟ್

(ಎಂಎನ್‌ಎಫ್) ಅತಿದೊಡ್ಡ ಏಕೈಕ ಪಕ್ಷವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಕಾಲೂರಲು ಬಿಜೆಪಿ ರೂಪಿಸಿದ ನಾರ್ಥ್ ಈಸ್ಟ್ ಡೆಮಾಕ್ರಟಿಕ್ ಅಲಯನ್ಸ್‌ನ ಭಾಗವಾಗಿದೆ ಎಂಎನ್‌ಎಫ್. ಆದರೆ ಎಂಎನ್‌ಎಫ್ ಈ ಬಾರಿಯ ಚುನಾವಣೆಯಲ್ಲಿ ಬಿಜೆಯೊಂದಿಗೆ ಯಾವುದೇ ಮೈತ್ರಿಯನ್ನು ಮಾಡಿಕೊಂಡಿಲ್ಲ. ಮಿರೆರಾಂನ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಎಂಎನ್‌ಎಫ್ ಜಯಗಳಿಸುತ್ತದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. 8 ಈಶಾನ್ಯ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯು ಮೂರು ಹಂತಗಳಲ್ಲಿ ನಡೆಯಲಿದೆ. ಮುಂದಿನ ತಿಂಗಳಲ್ಲಿ ಈ ಭಾಗದ ಎಲ್ಲಾ ರಾಜ್ಯಗಳಲ್ಲೂ ಚುನಾವಣೆಗಳು ಮುಗಿಯಲಿವೆ. ಎಪ್ರಿಲ್ 11, 18, 23 ದಿನಾಂಕಗಳಲ್ಲಿ ಈ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.

***

LEAVE A REPLY

Please enter your comment!
Please enter your name here