ಇಂಟರ್ನೆಟ್ ರದ್ದು | ಕಾಶ್ಮೀರದಲ್ಲಿ ‘ಡಿಜಿಟಲ್ ವರ್ಣಬೇಧ’ | ಧ್ವನಿ ಎತ್ತಲು ಜೆಕೆಸಿಸಿಎಸ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ

Prasthutha: August 27, 2020

ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಕಳೆದ ಒಂದು ವರ್ಷದಿಂದ ಪದೇಪದೇ ಇಂಟರ್ನೆಟ್ ರದ್ದುಪಡಿಸುವುದು ಮತ್ತು ಸಂವಹನಕ್ಕೆ ಅಡ್ಡಿಪಡಿಸುತ್ತಿರುವುದು ‘ಡಿಜಿಟಲ್ ವರ್ಣಬೇಧ’ ನೀತಿ ಮತ್ತು ಪ್ರತಿರೋಧ ವ್ಯಕ್ತಪಡಿಸುತ್ತಿರುವ ಜನರಿಗೆ ನೀಡುತ್ತಿರುವ ‘ಸಾಮೂಹಿಕ ಶಿಕ್ಷೆ’ ಎಂದು ಜಮ್ಮು-ಕಾಶ್ಮೀರ ಸಮಾಜದ ಮೈತ್ರಿ(ಜೆಕೆಸಿಸಿಎಸ್) ಆಪಾದಿಸಿದೆ. ಈ ಸಂಬಂಧ ಅಂತಾರಾಷ್ಟ್ರೀಯ ಸಮುದಾಯಗಳು ಮಾತನಾಡಬೇಕಿದೆ ಎಂದು ಅದು ಒತ್ತಾಯಿಸಿದೆ.

ಅನಗತ್ಯ ಇಂಟರ್ನೆಟ್ ರದ್ದತಿಗಳನ್ನು ನಡೆಸಲಾಗಿದೆ ಮತ್ತು ಹೈಸ್ಪೀಡ್ 4ಜಿ ಇಂಟರ್ನೆಟ್ ಸೇವೆಗೆ ನಿರಂತರ ನಿಷೇಧ ಹೇರಲಾಗಿದೆ. ಇದು ಜಮ್ಮು-ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ ಪ್ರದೇಶದ ಆರ್ಥಿಕತೆ, ಶಿಕ್ಷಣ, ಜೀವನಾವಶ್ಯಕತೆ, ಉದ್ಯೋಗ, ನ್ಯಾಯ, ಪತ್ರಿಕೋದ್ಯಮ ಮತ್ತು ಆರೋಗ್ಯ ಸೇವೆಯ ವಿಷಯದಲ್ಲಿ ಸಂಪೂರ್ಣ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಜೆಕೆಸಿಸಿಎಸ್ ಬಿಡುಗಡೆಗೊಳಿಸಿರುವ ‘ಕಾಶ್ಮೀರ್ ಇಂಟರ್ನೆಟ್ ಸೀಜ್’ ಎಂಬ ವರದಿಯಲ್ಲಿ ತಿಳಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ನಷ್ಟವಾಗಿವೆ. ಅದರಲ್ಲಿ ಬಹುತೇಕ ಯುವಕರೇ ಉದ್ಯೋಗ ಕಳೆದುಕೊಂಡಿದ್ದಾರೆ. 2019ರ ಆಗಸ್ಟ್ ನಲ್ಲಿ ಲಾಕ್ ಡೌನ್ ಘೋಷಿಸಿದ ಬಳಿಕ, ಮೊದಲ ಐದು ತಿಂಗಳಲ್ಲಿ 178.78 ಶತಕೋಟಿ ರೂ. ನಷ್ಟವಾಗಿದೆ ಎಂದು ವರದಿ ತಿಳಿಸಿದೆ. ಕಳೆದ ಆಗಸ್ಟ್ ನಿಂದ ಕಾಶ್ಮೀರದಲ್ಲಿ 40,000 ಕೋಟಿ ರೂ. ನಷ್ಟವಾಗಿದೆ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ವರದಿಯಲ್ಲಿ ತಿಳಿಸಲಾಗಿದೆ.

ರಾಜ್ಯದ ಆರೋಗ್ಯ ಸೇವೆಯ ಬಗ್ಗೆ ಜೆಕೆಸಿಸಿಎಸ್ ಕಳವಳ ವ್ಯಕ್ತಪಡಿಸಿದೆ. ಕಳೆದ ವರ್ಷದ ಜೂನ್, ಜುಲೈ, ಆಗಸ್ಟ್ ನಲ್ಲಿ ಕಾಶ್ಮೀರದಲ್ಲಿ ಆಸ್ಪತ್ರೆ ಭೇಟಿ ಪ್ರಮಾಣ ಶೇ.40ರಷ್ಟಿಳಿದಿದೆ. ಶಿಕ್ಷಣ ವ್ಯವಸ್ಥೆ ಕೂಡ ತೀರಾ ಹಿನ್ನಡೆ ಅನುಭವಿಸಿದೆ. 2020ರ ಆಗಸ್ಟ್ ವೇಳೆಗೆ ಕಾಶ್ಮೀರದಲ್ಲಿ ಕೇವಲ 30,000 ಶಾಲೆಗಳು ಮಾತ್ರ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡಿವೆ. 400ರಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಒಂದು ವರ್ಷ ಯಾವುದೇ ತರಗತಿಗಳಿಲ್ಲದೆ, ಇಂಟರ್ನೆಟ್ ರದ್ದತಿಯ ಪ್ರಥಮ ವರ್ಷಾಚರಣೆ ನಡೆಸಿವೆ ಎಂದು ವರದಿ ಅಭಿಪ್ರಾಯ ಪಟ್ಟಿದೆ. ಜಮ್ಮು-ಕಾಶ್ಮೀರದಲ್ಲಿ ನ್ಯಾಯದಾನ ವ್ಯವಸ್ಥೆಯಲ್ಲೂ ವ್ಯವಸ್ಥಿತ ವಿಳಂಬ ಮಾಡಲಾಗುತ್ತಿದೆ ಎಂದು ವರದಿ ಅಭಿಪ್ರಾಯ ಪಟ್ಟಿದೆ.

2019ರ ಆ.5ರಿಂದ ಸುಮಾರು 6000ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಮತ್ತು 600ಕ್ಕೂ ಹೆಚ್ಚು ಮಂದಿ ಆಡಳಿತಾತ್ಮಕ ವಶದಲ್ಲಿದ್ದಾರೆ. ಅಕ್ರಮ ವಶದಲ್ಲಿರುವವರ ಬಿಡುಗಡೆಗಾಗಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿಗಳಲ್ಲಿ ಶೇ.99 ಅರ್ಜಿಗಳು ವಿಚಾರಣೆಗೆ ಬಾಕಿಯುಳಿದಿವೆ ಎಂದು ವರದಿ ತಿಳಿಸಿದೆ. ಸುಮಾರು 200 ಮಂದಿ ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರ ವಿರುದ್ಧ ದೂರುಗಳು ದಾಖಲಾಗಿವೆ ಎಂದು ವರದಿ ಮಾಹಿತಿ ನೀಡಿದೆ.

2019ರ ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶ(ಲಡಾಕ್ ಮತ್ತು ಜಮ್ಮು-ಕಾಶ್ಮೀರ)ವನ್ನಾಗಿ ಘೋಷಿಸಿ ಕೇಂದ್ರ ಬಿಜೆಪಿ ಸರಕಾರ ನಿರ್ಧಾರ ಕೈಗೊಂಡಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ