ಆರೋಗ್ಯ ಸೇತು ಆ್ಯಪ್ ಅನ್ನು ರಚಿಸಿದವರು ಯಾರು? ಆರ್.ಟಿ.ಐ ಪ್ರಶ್ನೆಗೆ ಕೇಂದ್ರ ಸರಕಾರ ಮೌನ

Prasthutha|


ಹೊಸದಿಲ್ಲಿ : ಕೋವಿಡ್ ಸಮಯದಲ್ಲಿ ಲಕ್ಷಾಂತರ ಭಾರತೀಯರು ತಮ್ಮ ಮೊಬೈಲ್ ನಲ್ಲಿ
ಉಪಯೋಗಿಸುತ್ತಿದ್ದ ಆರೋಗ್ಯ ಸೇತು ಆ್ಯಪನ್ನು ಯಾರು ರಚಿಸಿದ್ದಾರೆ ಎಂಬ ಪ್ರಶ್ನೆಗೆ
ಕೇಂದ್ರ ಸರಕಾರದ ಬಳಿ ಯಾವುದೇ ಉತ್ತರವಿಲ್ಲ. ಆರೋಗ್ಯ ಸೇತು ವೆಬ್ ಸೈಟ್ ನಲ್ಲಿ ನ್ಯಾಶನಲ್ ಇನ್ಫಾರ್ಮೇಟಿಕ್ ಸೆಂಟರ್ (ಐಇಸಿ) ನ ವೆಬ್ ಸೈಟನ್ನು ಅಭಿವೃದ್ಧಿ ಪಡಿಸಿದೆಯೆಂದು ಉಲ್ಲೇಖಿಸಲಾಗಿದೆ.
ಆದರೆ ಆರ್.ಟಿ.ಐ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಐಟಿ ಸಚಿವಾಲಯ ಮತ್ತು ಐಇಸಿ ಆ್ಯಪನ್ನು ರಚಿಸಿದವರು ಯಾರೆಂದು ತಮಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದೆ.
ಇದನ್ನು ವಾಸ್ತವವಾಗಿ ರಚಿಸಿದವರು ಯಾರು ಎಂಬ ಪ್ರಶ್ನೆಗೆ ಉತ್ತರಿಸುವಂತೆ ಕೇಂದ್ರ ಮಾಹಿತಿ ಆಯೋಗ ಸರಕಾರಕ್ಕೆ ಪತ್ರ ಬರೆದಿದೆ.
ಮುಖ್ಯ ಮಾಹಿತಿ ಅಧಿಕಾರಿ ಸೇರಿದಂತೆ ಈ ಪ್ರಶ್ನೆಗೆ ಯಾರೂ ಉತ್ತರಿಸುತ್ತಿಲ್ಲ.ಈ ಆ್ಯಪ್ ರಚಿಸಿದವರು ಯಾರು? ಅದರ ಸಂಬಂಧಿತ ಫೈಲ್ ಗಳು ಎಲ್ಲಿವೆ?
ಯಾಕೆ ಇಷ್ಟೊಂದು ರಹಸ್ಯ? ಎಂದು ಆಯೋಗ ಕೇಳಿದೆ. ಸಂಬಂಧಪಟ್ಟ
ವಿಭಾಗಗಳು ನವೆಂಬರ್ 24ರೊಳಗೆ ಆಯೋಗದ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.

ಆರ್.ಟಿ.ಐ ಕಾರ್ಯಕರ್ತ ಸೌರವ್ ದಾಸ್ ಈ ಕುರಿತು ಆಯೋಗಕ್ಕೆ ದೂರು ನೀಡಿದ್ದರು. ತಾನು ಕೋರಿದ ಆ್ಯಪ್ ಗೆ ಸಂಬಂಧಿಸಿದ ಪ್ರಶ್ನೆಗೆ
ಸಚಿವಾಲಯವು ತೃಪ್ತಿದಾಯಕ ಉತ್ತರ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆ್ಯಪ್ ಅನ್ನು ಸ್ಥಾಪಿಸಿದವರು ಯಾರು? ಅನುಮತಿ ನೀಡಿದವರು ಯಾರು?
ಇದರ ದಾಖಲೆಗಳು ಮತ್ತು ಯಾವ ಕಂಪನಿಗಳು ಆ್ಯಪ್ ನೊಂದಿಗೆ ಸಂಬಂಧ ಹೊಂದಿವೆ? ಆ್ಯಪ್ ಅಭಿವೃದ್ಧಿ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ
ಯಾವ ವ್ಯಕ್ತಿಗಳು ಮತ್ತು ಇಲಾಖೆಗಳು ಪಾತ್ರ ವಹಿಸಿದ್ದವು? ಖಾಸಗಿ ವ್ಯಕ್ತಿಗಳೊಂದಿಗೆ ನಡೆಸಿದ ಪತ್ರವ್ಯವಹಾರದ ವಿವರಗಳನ್ನು ಕೇಳಲಾಗಿತ್ತು.
ಅರ್ಜಿ ಸಲ್ಲಿಸಿದ ಎರಡು ತಿಂಗಳು ಕಳೆದರೂ ಯಾವುದೇ ಉತ್ತರ ಲಭಿಸಿರಲಿಲ್ಲ.

- Advertisement -