ಆರೆಸ್ಸೆಸ್: ದೇಶವಿರೋಧಿ ರಾಷ್ಟ್ರೀಯತೆ

0
435

ಯೋಗೇಂದ್ರ ಯಾದವ್, ಅಧ್ಯಕ್ಷರು ಸ್ವರಾಜ್ ಇಂಡಿಯಾ

 

ಇತ್ತೀಚೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಜರುಗಿದ ಪ್ರಭಾವಳಿ ವಿಸ್ತರಣೆ ಕೇಂದ್ರಿತ ಸಮಾವೇಶ ವಿಮರ್ಶಕರಲ್ಲಿ ಮೂರು ಮುಖ್ಯ ಪ್ರಶ್ನೆಗಳಿಗೆ ಆಸ್ಪದ ನೀಡಿತು. ಅವುಗಳೆಂದರೆ: ಪ್ರಸ್ತುತ ಕೇಂದ್ರ ಸರ್ಕಾರವನ್ನು ಆರೆಸ್ಸೆಸ್ ನಿಯಂತ್ರಿಸುತ್ತಿದೆಯೇ? ಆರೆಸ್ಸೆಸ್ ಮುಸ್ಲಿಂ ವಿರೋಧಿ ಸಂಘಟನೆಯೇ? ಆರೆಸ್ಸೆಸ್ ದೇಶ ವಿರೋಧಿ ಸಂಘಟನೆ? ವರ್ತಮಾನ ಕಾಲದಲ್ಲಿ ರಾಷ್ಟ್ರೀಯತೆ, ಭಾರತೀಯತ್ವ ಮತ್ತು ಹಿಂದುತ್ವ ಪದಗಳನ್ನು ಆರೆಸ್ಸೆಸ್ ಹೆಚ್ಚಾಗಿ ಪ್ರಯೋಗಿಸುತ್ತಿದೆ. ಆರೆಸ್ಸೆಸ್‌ನ ಒಳ-ಹೊರಗುಗಳನ್ನು ಚೆನ್ನಾಗಿ ಬಲ್ಲಂತಹ ನನಗೆ ಅವರ ಅಸಲಿ ರಾಷ್ಟ್ರೀಯತೆಯ ಬಗ್ಗೆ ಬಹುದೊಡ್ಡ ಜಿಜ್ಞಾಸೆ ಉಂಟಾಗಿದೆ.ಆರೆಸ್ಸೆಸ್ ಸ್ವಯಂ ಸೇವಕರು ಪ್ರಾಕೃತಿಕ ವಿಕೋಪ ನಿರ್ವಹಣೆ ಸಂದರ್ಭಗಳಲ್ಲಿ ಇತ್ತೀಚೆಗೆ ವಹಿಸಿರುವ ಪಾತ್ರವನ್ನು ಗಮನಿಸಿದಾಗ ಈ ಸಂಘಟನೆ ತೀವ್ರ ರಾಷ್ಟ್ರೀಯತಾವಾದಿ ಎಂಬ ಭಾವನೆಯನ್ನು ಭಾರತೀಯರ ಮನಸ್ಸಿನಿಂದ ದೂರ ಮಾಡುವ ಪ್ರಯತ್ನವೆಂದೇ ಕಂಡುಬರುತ್ತದೆ. ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಮತ್ತು ಮಾವೋವಾದಿ ಧಾಳಿಕೋರರ ಇತ್ತೀಚಿನ ವರ್ತನೆಗಳನ್ನು ಗಮನಿಸಿದಾಗ ರಾಷ್ಟ್ರೀಯತೆಗೆ ಹೆಚ್ಚಿನಅಪಾಯಗಳು ಉಂಟಾಗುತ್ತಿರುವುದು ಖಾತ್ರಿಯಾಗುತ್ತದೆ. ಕಾಶ್ಮೀರದ ಮತ್ತು ನಾಗಾಲ್ಯಾಂಡಿನ ಪ್ರತ್ಯೇಕತಾವಾದಿಗಳು ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳು ದೇಶದ ಒಳಿತಿಗೆ ಪೂರಕವಾಗಿಲ್ಲ. ಆರೆಸ್ಸೆಸ್‌ನ ಮೂಲ ಮತ್ತು ಭಾರತ ದೇಶ

1925ರಲ್ಲಿ ಆರಂಭಗೊಂಡ ಆರೆಸ್ಸೆಸ್ ಸಂಘಟನೆ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ವಹಿಸಿರುವ ಪಾತ್ರ ನಗಣ್ಯವೆಂದೇ ಹೇಳಬಹುದು. ಆರೆಸ್ಸೆಸ್‌ನ ಮಿತ್ರ ಸಂಘಟನೆ ಹಿಂದೂ ಮಹಾಸಭಾ ಸ್ವಾತಂತ್ರ್ಯ ಚಳುವಳಿಯನ್ನು ಪ್ರಬಲವಾಗಿ ವಿರೋಧಿಸಿರುವುದಕ್ಕೆ ಹಲವಾರು ನಿದರ್ಶನಗಳಿವೆ. ಆರೆಸ್ಸೆಸ್‌ನ ಪ್ರಮುಖ ಸಿದ್ಧಾಂತಿ ಮತ್ತು ಧುರೀಣರಾದ ವಿ.ಡಿ.ಸಾವರ್ಕರ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಜೈಲಿನಲ್ಲಿದ್ದಾಗ ಅಂದಿನ ಬ್ರಿಟಿಷ್ ವೈಸ್‌ರಾಯ್‌ರವರಿಗೆ ಸುಮಾರು ನಾಲ್ಕು ಕ್ಷಮಾಪಣಾ ಪತ್ರಗಳನ್ನು ಬರೆದು ತಾವು ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಬದುಕಿರುವ ತನಕ ನಿಷ್ಟರಾಗಿರುವುದಾಗಿ ಹೇಳಿ ಸೆರೆಮನೆ ವಾಸದಿಂದ ಬಿಡುಗಡೆಗೊಂಡರು. ಅಷ್ಟೇ ಅಲ್ಲ ಅವರು ಬ್ರಿಟಿಷರಿಂದ ತಮ್ಮ ಸ್ವಾಮಿನಿಷ್ಟೆಗೆ ಪ್ರತಿಯಾಗಿ ಚಮಚಾಗಿರಿ ಭತ್ಯೆ ಪಡೆದು ತಮ್ಮ ಅಸಲಿತನವನ್ನು ಪ್ರದರ್ಶಿಸಿದರು. ಬ್ರಿಟಿಷರ ಕಾಲದ ಪುರಾತತ್ವ ಇಲಾಖೆಯ ದಾಖಲೆಗಳು ಆರೆಸ್ಸೆಸ್ ಸ್ಥಾಪಕರ ದೇಶನಿಷ್ಟೆ ಎಷ್ಟು ಸಾಚಾ ಎಂಬುದಕ್ಕೆ ಸಾಕ್ಷಿ ಒದಗಿಸುತ್ತವೆ. ಮಹಾತ್ಮ ಗಾಂಧಿ ನೇತೃತ್ವದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಇಡೀ ದೇಶದ ಜನರು ಸಕ್ರಿಯವಾಗಿ ಭಾಗವಹಿಸಿದ್ದರೆ, ಹಿಂದೂ ಮಹಾಸಭಾ ಸಂಘಟನೆಯ ಮತ್ತೋರ್ವ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು. ಎರಡು ದೇಶಗಳ ಸಿದ್ಧಾಂತ

ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ದೇಶಗಳ ಸಿದ್ಧಾಂತಕ್ಕೆ ಮೊದಲು ಬೆಂಬಲ ವ್ಯಕ್ತಪಡಿಸಿದವರು ಹಿಂದೂ ರಾಷ್ಟ್ರೀಯವಾದಿಗಳೇ ಹೊರತು ಮುಸ್ಲಿಂ ಲೀಗ್‌ರವರಲ್ಲ. ಮಹಾತ್ಮ ಗಾಂಧಿಯವರನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಅಮಾನುಷವಾಗಿ ಹತ್ಯೆಗೈದ ನಾಥೂರಾಮ್ ಗೋಡ್ಸೆ ಆರೆಸ್ಸೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಈ ಘಟನೆಯಿಂದ ಆರೆಸ್ಸೆಸ್ ದೇಶದಲ್ಲಿ ಅತ್ಯಂತ ಹೆಚ್ಚಿನ ಖಂಡನೆಗೆ ಒಳಗಾಯಿತು. ಈ ಸಂಘಟನೆ ಸ್ವಾತಂತ್ರ್ಯ ಚಳುವಳಿಗೆ ದುರುದ್ದೇಶಪೂರ್ವಕವಾಗಿ ಸಾಕಷ್ಟು ಅಡ್ಡಿ-ಆತಂಕಗಳನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಇವರ ರಾಷ್ಟ್ರೀಯತೆಯನ್ನು ದೇಶಪ್ರೇಮಿಗಳು ಉಗ್ರವಾಗಿ ಪ್ರಶ್ನಿಸಲೇಬೇಕು. ಸ್ವಾತಂತ್ರ್ಯಾನಂತರದಲ್ಲಿ ದೇಶದ ಅಭಿವೃದ್ಧಿಗೆ ಆರೆಸ್ಸೆಸ್ ನೀಡಿದ ಕೊಡುಗೆ ಬಗ್ಗೆಯೂ ಯಾವುದೇ ನಿರ್ಣಾಯಕ ದಾಖಲೆಗಳು ಮತ್ತು ಉದಾಹರಣೆಗಳಿಲ್ಲ. ಅಲ್ಲದೇ ದೇಶದ ರಾಷ್ಟ್ರೀಯತೆಯ ಪ್ರಮುಖ ಚಿಹ್ನೆಗಳಾದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಸಂವಿಧಾನಗಳನ್ನು ಆರೆಸ್ಸೆಸ್ ನೇತೃತ್ವದ ಹಿಂದುತ್ವವಾದಿಗಳು ಅವಮಾನಿಸಿರುವುದಕ್ಕೆ ಬಹಳಷ್ಟು ಉದಾಹರಣೆಗಳುಂಟು. ಸುಮಾರು ಏಳು ದಶಕಗಳ ಅವಧಿಯಲ್ಲಿ ಆರೆಸ್ಸೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಂವಿಧಾನದ ಮೂಲ ಆಶಯಗಳಾದ ಸಮಾಜವಾದ, ಧರ್ಮನಿರಪೇಕ್ಷತೆ, ಒಕ್ಕೂಟ ತತ್ವ ಮತ್ತು ಪ್ರಜಾಸತ್ತೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಮುಂದುವರೆಸಿರುವುದನ್ನು ಭಾರತದ ಇತಿಹಾಸ ಕ್ಷಮಿಸುವುದಿಲ್ಲ. ದೇಶ ಕಟ್ಟುವ ಎಲ್ಲ ಹಂತಗಳಲ್ಲಿಯೂ ಆರೆಸ್ಸೆಸ್ ಸರ್ಕಾರ ಮತ್ತು ನಾಗರೀಕ ಸಮಾಜಗಳ ಪ್ರಯತ್ನಗಳಿಗೆ ಬಹುದೊಡ್ಡ ಅಪಾಯಗಳನ್ನು ತಂದೊಡ್ಡಿದೆ. ಭಾರತ ವಿಭಜನೆಯ ಪರಂಪರೆ, ಬಹುತ್ವ ಸಂಸ್ಕೃತಿಯ ವೈಶಿಷ್ಟತೆ ಮತ್ತು ಸಮಸ್ತ ಭಾರತೀಯರಿಗೂ ಸಮಬಾಳನ್ನು ನೀಡುವ ಪ್ರಸ್ತುತತೆ ಮೊದಲಾದವುಗಳನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಆರೆಸ್ಸೆಸ್ ಅತ್ಯುಗ್ರವಾಗಿ ವಿರೋಧಿಸಿರುವುದಕ್ಕೆ ಹಲವಾರು ದೃಷ್ಟಾಂತಗಳಿವೆ.

ಭಾರತವನ್ನು ಹಿಂದೂಕರಣಗೊಳಿಸಬೇಕು, ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬಾರದು, ದಲಿತರಿಗೆ ಮುಖ್ಯವಾಹಿನಿಯಲ್ಲಿ ಅವಕಾಶಗಳನ್ನು ಕಲ್ಪಿಸಬಾರದು, ಮಹಿಳೆಯರು ದ್ವಿತೀಯ ದರ್ಜೆ ಪ್ರಜೆಗಳಾಗೇ ಉಳಿಯಬೇಕೆಂಬ ಪೊಳ್ಳು ವಿಚಾರಧಾರೆಗಳನ್ನು ದೇಶದಲ್ಲಿ ಬಿತ್ತಿರುವ ಆರೆಸ್ಸೆಸ್ ಸಂಘಟನೆಗೆ ಭಾರತದ ರಾಷ್ಟ್ರೀಯತೆಯ ಉಸ್ತುವಾರಿ ವಹಿಸುವ ನೈತಿಕತೆ ಎಳ್ಳಷ್ಟೂ ಇಲ್ಲ. 1992ರಲ್ಲಿ ಭಾರತದ ಅಖಂಡತೆ ಮತ್ತು ಬಹುತ್ವಗಳ ಸಂಕೇತವಾದ ಬಾಬರಿ ಮಸೀದಿಯನ್ನು ಒಡೆದವರು ಆರೆಸ್ಸೆಸ್ ಪ್ರಾಯೋಜಿತ ಹಿಂದುತ್ವವಾದಿಗಳೆಂದು ಇಡೀ ವಿಶ್ವ ಉಗ್ರವಾಗಿ ಖಂಡಿಸಿದೆ. ಈ ಘಟನೆ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಬಹುದೊಡ್ಡ ನಷ್ಟವುಂಟು ಮಾಡಿದೆ. ಆರೆಸ್ಸೆಸ್‌ನ ಯೂರೋಪ್ ಸಾಮ್ರಾಜ್ಯಶಾಹಿ ಮೂಲ

ಆರ್ಯರು ಹೊರಗಿನಿಂದ ಬಂದವರು ಮತ್ತು ಭಾರತದ ಮೂಲನಿವಾಸಿಗಳ ಅತಂತ್ರ ಬದುಕಿಗೆ ಕಾರಣಕರ್ತರು ಎಂಬುದಕ್ಕೆ ಹಲವಾರು ಐತಿಹಾಸಿಕ ಮತ್ತು ವೈಜ್ಞಾನಿಕ ದಾಖಲೆಗಳಿವೆ. ಐರೋಪ್ಯರ ಸಾಮ್ರಾಜ್ಯಶಾಹಿ ಮತ್ತು ಆರೆಸ್ಸೆಸ್ ಪ್ರಾಯೋಜಿತ ಹಿಂದುತ್ವವಾದಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಿಂದೆ ಯೂರೋಪಿನ ಸಾಮ್ರಾಜ್ಯಶಾಹಿಗಳು ರಾಷ್ಟ್ರ ರಾಜ್ಯ ಮಾದರಿ ಒಂದು ದೇಶದ ಸಾಂಸ್ಕೃತಿಕ ಗಡಿರೇಖೆ ರಾಜಕೀಯ ಗಡಿರೇಖೆಗೆ ಅನುಗುಣವಾಗಿರಬೇಕೆಂದು ಪ್ರತಿಪಾದಿಸಿದ ಬಗೆ ಸಾಂಸ್ಕೃತಿಕ ಸಾಮ್ರಾಜ್ಯಶಾಹಿಯ ಪ್ರತೀಕವಾಗಿದೆ. ಸಾವರ್ಕರ್ ಹಿಂದೆ ಸಮರ್ಥಿಸಿದ ಹಿಂದೂ – ಹಿಂದಿ – ಹಿಂದೂಸ್ಥಾನ ಮಾದರಿ ಯೂರೋಪಿನ ಸಾಮ್ರಾಜ್ಯಶಾಹಿಯ ಮುಂದುವರೆದ ಭಾಗವೆಂದೇ ಹೇಳಬೇಕಾಗಿದೆ. ಭಾರತದ ರಾಷ್ಟ್ರೀಯತೆಗೆ ಈ ಮಾದರಿ ತದ್ವಿರುದ್ಧವಾಗಿದೆಯೆಂದು ಸಮಾಜಶಾಸ್ತ್ರಜ್ಞರು, ಸಂಸ್ಕೃತಿ ಚಿಂತಕರು ಮತ್ತು ವಿಚಾರವಾದಿಗಳು ಮಂಡಿಸಿರುವ ವಾದ ಸರಿಯಾಗಿದೆ. ಭಾರತದ ರಾಷ್ಟ್ರೀಯತೆ ಬಹುತ್ವ ಸಂಸ್ಕೃತಿ, ಬಹುಧರ್ಮಗಳು, ಬಹುಭಾಷೆಗಳು ಮತ್ತು ಬಹುಜನರ ರಕ್ಷಣೆಗೆ ಬದ್ಧವಾಗಿರಲೇಬೇಕು. ಆರೆಸ್ಸೆಸ್‌ನ ರಾಷ್ಟ್ರೀಯತೆ ವಾಸ್ತವವಾಗಿ ಒಂದು ಬಹುದೊಡ್ಡ ದೇಶದ್ರೋಹದ ಸಂಕೇತವೇ ಆಗಿದೆ. ಸಮಕಾಲೀನ ಸಂದರ್ಭದಲ್ಲಿ ಇಡೀ ವಿಶ್ವ ಭಾರತದ ಬಹುತ್ವ ಮಾದರಿ, ಬಹುಜನ ಹಿತಾಯ ಸಿದ್ಧಾಂತ ಮತ್ತು ಬಹುಜನರ ಸಬಲೀಕರಣಕ್ಕೆ ಪೂರಕವಾದ ಸಂವಿಧಾನವನ್ನು ಮನಸಾರೆ ಒಪ್ಪಿಕೊಂಡಿದೆ. ಆದರೆ ಆರೆಸ್ಸೆಸ್‌ನ ರಾಷ್ಟ್ರೀಯತೆ ವರ್ತಮಾನ ಕಾಲದಲ್ಲಿ ಸಮಸ್ತ ಭಾರತೀಯರ ಬದುಕಿನ ಆಶೋತ್ತರಗಳಿಗೆ ಮಾರಕ ಪ್ರಾಯವಾಗಿದೆ. ರಾಷ್ಟ್ರೀಯ ಸಂಸ್ಕೃತಿ, ಪ್ರಜಾಸತ್ತೆ, ಆಡಳಿತ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳಿಂದ ಭಾರತದ ಬಹುಸಂಖ್ಯಾತರನ್ನು ದುರುದ್ದೇಶಪೂರ್ವಕವಾಗಿ ಪ್ರತ್ಯೇಕಿಸುವುದು ರಾಷ್ಟ್ರೀಯತೆಗೆ ಅಪಚಾರ ಬಗೆದಂತಾಗುತ್ತದೆ ಎಂಬುದನ್ನು ಆರೆಸ್ಸೆಸ್ ಅರ್ಥಮಾಡಿಕೊಳ್ಳಲೇಬೇಕು. ಕರ್ನಾಟಕ ತಮಿಳುನಾಡು ಮತ್ತು ಪಂಜಾಬ್ – ಹರಿಯಾಣ ನದಿ ವಿವಾದಗಳು, ತೆಲಂಗಾಣ ವಿದರ್ಭಗಳಲ್ಲಿರುವ ಅಂತರರಾಜ್ಯ ಸಂಘರ್ಷಗಳು, ವಿವಿಧ ಭಾಷೆ ಕೇಂದ್ರಿತ ವ್ಯತ್ಯಾಸಗಳು, ವಲಸಿಗರ ಮೇಲೆ ಈಶಾನ್ಯ ಭಾರತ, ಬೆಂಗಳೂರು ಮುಂಬಯಿ ಮೊದಲಾದೆಡೆ ಜರುಗುತ್ತಿರುವ ಹಲ್ಲೆಗಳಿಗೆ ಕಾರಣರಾದವರು ಆರೆಸ್ಸೆಸ್ ಹಿಂದುತ್ವವಾದಿಗಳೇ ಆಗಿದ್ದಾರೆ.

ಆರೆಸ್ಸೆಸ್ ಸಂಘಟಕರಿಗೆ ಹಿಂದೂ ಧಾರ್ಮಿಕ ವ್ಯವಸ್ಥೆ ಮತ್ತು ಪರಂಪರೆಗಳ ಬಗ್ಗೆ ಹೆಚ್ಚಿನ ಅರಿವು ಅಥವಾ ಕಾಳಜಿಗಳಿಲ್ಲ. ಕಡುಸಂಪ್ರದಾಯ ನಿಷ್ಟೆ ಹೊಂದಿರುವ ಮುಸಲ್ಮಾನರು, ಕೈಸ್ತರು ಮತ್ತು ಹಿಂದುತ್ವವಾದಿಗಳಿಗೆ ಮಾನವೀಯತೆಯ ಪರಿಭಾಷೆ ಗೊತ್ತಿಲ್ಲ. ಭಾರತದ ಅಖಂಡತೆ ಇರುವುದೇ ಹಿಂದೂ ಮುಸಲ್ಮಾನರ ಭ್ರಾತೃತ್ವ ಮತ್ತು ಏಕತೆಗಳಲ್ಲಿ ಎಂಬ ಸತ್ಯ ದರ್ಶನ ಆರೆಸ್ಸೆಸ್‌ನವರಿಗೆ ಆಗಿಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ.ಆರೆಸ್ಸೆಸ್ ಪ್ರಾಯೋಜಿತ ಹಿಂದೂ ಮುಸಲ್ಮಾನ್ ಸಂಘರ್ಷಗಳು ದೇಶದ ಏಕತೆಗೆ ಪೂರಕವಾಗಿಲ್ಲ. ಹಿಂದೂಗಳಿಂದ ಬಹುಸಂಖ್ಯಾತ ಮುಸಲ್ಮಾನರು, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳನ್ನು ದೂರ ಸರಿಸುತ್ತಿರುವ ಆರೆಸ್ಸೆಸ್ ಸಂಘಟನೆಯ ಪ್ರಯತ್ನಗಳು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಅಂದ ಮೇಲೆ ಇವರು ಪ್ರತಿಪಾದಿಸುವ ರಾಷ್ಟ್ರೀಯತೆ ದೇಶದ್ರೋಹವಲ್ಲದೆ ಮತ್ತೇನೂ ಅಲ್ಲ ಎಂಬ ಸತ್ಯವನ್ನು ಪ್ರಜ್ಞಾವಂತ ಭಾರತೀಯರು ಅರಿಯಬೇಕು. ಆರೆಸ್ಸೆಸ್‌ಗೆ ಬೇಕಾಗಿರುವುದು ಭಾರತೀಯರನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ದ್ವಂಸಗೊಳಿಸುವ ಕೆಟ್ಟ ಪ್ರಕ್ರಿಯೆಗಳು. ಈ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಭಾರತದ ಬಹುಜನರು ಪ್ರಜ್ಞಾಪೂರ್ವಕವಾಗಿ ಮಗ್ನರಾಗಿದ್ದರೆ ಆರೆಸ್ಸೆಸ್ ನೇತೃತ್ವದ ಹಿಂದುತ್ವವಾದಿಗಳು ದೇಶವನ್ನು ದ್ವಂಸಗೊಳಿಸುವ ಕೆಟ್ಟ ಕನಸನ್ನು ಕಾಣುತ್ತಿದ್ದಾರೆ. ಸ್ವಧರ್ಮ, ಸ್ವದೇಶಿ ಮತ್ತು ಸ್ವಹಿತ ಎಂಬ ಮೂರು ಕೆಟ್ಟ ಮಂತ್ರಗಳು ಭಾರತೀಯರ ಪಾಲಿಗೆ ಹಾನಿಕಾರಕವಾಗಿವೆ.ನಾವು ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಬಯಸುತ್ತಿಲ್ಲ. ಇಂದು ಭಾರತದಿಂದ ಕಿತ್ತೆಸೆಯಬೇಕಾಗಿರುವುದು ಆರೆಸ್ಸೆಸ್ ಮನೋಧರ್ಮವನ್ನು. ಗಾಂಧಿ, ಟ್ಯಾಗೂರ್ ಮೊದಲಾದ ಮಹಾತ್ಮರು ಪ್ರತಿಪಾದಿಸಿದ ರಾಷ್ಟ್ರೀಯತೆ ನಮಗೆ ಇಂದು ಪ್ರಸ್ತುತವಾಗಿದೆ. ಅಂದು ಗಾಂಧಿ ಸ್ವಾತಂತ್ರ್ಯಾನಂತರ ಕಾಂಗ್ರೆಸ್ ವಿಸರ್ಜನೆಗೆ ನೀಡಿದ ಕರೆಯಂತೆಯೇ ಇಂದು ಆರೆಸ್ಸೆಸ್ ಸರಸಂಘಚಾಲಕರು ದೇಶದ ಹಿತದೃಷ್ಟಿಯಿಂದ ಸ್ವಯಂ ಪ್ರೇರಣೆಯಿಂದ ಆರೆಸ್ಸೆಸ್ ವಿಸರ್ಜಿಸಿ ಎಂದು ಹೇಳುವುದು ಔಚಿತ್ಯಪೂರ್ಣವಾಗಿದೆ.

‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು ಅವರು ಅನುವಾದಿಸಿದ್ದಾರೆ.

LEAVE A REPLY

Please enter your comment!
Please enter your name here