ಅಸ್ಸಾಂ-ಮಿಜೋರಾಂ ಗಡಿ ವಿವಾದ | ಗುಂಪು ಘರ್ಷಣೆ ; ಗುಡಿಸಲುಗಳಿಗೆ ಬೆಂಕಿ | ಮುಖ್ಯಮಂತ್ರಿಗಳ ಮಾತುಕತೆ

ನವದೆಹಲಿ : ಮಿಜೋರಾಂನ ಕೊಲಾಸಿಬ್ ಮತ್ತು ಅಸ್ಸಾಂನ ಕ್ಯಾಚರ್ ಜಿಲ್ಲಾ ಗಡಿ ಪ್ರದೇಶಗಳಲ್ಲಿ ಉಂಟಾದ ಘರ್ಷಣೆಯೊಂದರಲ್ಲಿ, ಹಲವು ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿದ್ದು, ನಾಲ್ವರಿಗೆ ಗಾಯಗಳಾಗಿವೆ. ಈ ಸಂಬಂಧ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆಗೆ ಮುಂದಾಗಿದ್ದು, ಕೇಂದ್ರದ ಮೊರೆ ಹೋಗಿದ್ದಾರೆ. ಈ ಸಂಬಂಧ ಇಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರ ಅಧ್ಯಕ್ಷತೆಯಲ್ಲಿ ಎರಡೂ ರಾಜ್ಯಗಳ ಪ್ರಮುಖರ ಸಭೆ ನಡೆಯಲಿದೆ.

ಮಿಜೋರಾಂ 1972ರ ವರೆಗೂ ಅಸ್ಸಾಂನ ಭಾಗವಾಗಿತ್ತು. 1972ರಲ್ಲಿ ಅದು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿತ್ತು. 1987ರಲ್ಲಿ ಪ್ರತ್ಯೇಕ ರಾಜ್ಯವಾಗಿ ಪರಿಗಣಿಸಲ್ಪಟ್ಟಿತ್ತು. ದಕ್ಷಿಣ ಅಸ್ಸಾಂನ ಕ್ಯಾಚರ್, ಹೈಲಕಂಡಿ ಮತ್ತು ಕರೀಂಗಂಜ್ ಮೂರು ಜಿಲ್ಲೆಗಳು ಮಿಜೋರಾಂನ ಕೊಲಾಸಿಬ್, ಮಮಿತ್ ಮತ್ತು ಐಜಾವಲ್ ಜಿಲ್ಲೆಗಳೊಂದಿಗೆ 164 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದೆ.

- Advertisement -

ಈ ಗಡಿಗೆ ಸಂಬಂಧಿಸಿ ಹಲವಾರು ಬಾರಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. 1994ರಿಂದಲೂ ಈ ವಿಷಯಕ್ಕೆ ಸಂಬಂಧಿಸಿ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ವಿವಾದ ಇತ್ಯರ್ಥ ಆಗಲೇ ಇಲ್ಲ. ಕಳೆದ ಶುಕ್ರವಾರ ಮತ್ತೆ ವಿವಾದ ಬುಗಿಲೆದ್ದಿದೆ. ಸೈಹಾಪುಯಿ ಎಂಬ ಗ್ರಾಮದಲ್ಲಿ ಮಿಜೋರಾಂ ಪೊಲೀಸ್ ಪೋಸ್ಟ್ ಅನ್ನು ಅಸ್ಸಾಂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕೆಲವು ದುಷ್ಕರ್ಮಿಗಳು ಧ್ವಂಸ ಮಾಡಿದ ಬಳಿಕ ಈ ವಿವಾದ ಆರಂಭವಾಗಿದೆ. ಕೋವಿಡ್ ಚೆಕ್ ಪಾಯಿಂಟ್ ಅನ್ನು ಅಸ್ಸಾಂ ಪ್ರದೇಶದ ಜನರು ಅಲ್ಲಿನ ಪೊಲೀಸರ ಸಮ್ಮುಖದಲ್ಲೇ ಧ್ವಂಸ ಮಾಡಿದ್ದರು. ಲೈಲಾಪುರದ ಜನರು ಯಥಾಸ್ಥಿತಿ ನೀತಿಯನ್ನು ಉಲ್ಲಂಘಿಸಿ ಕೆಲವೊಂದು ತಾತ್ಕಾಲಿಕ ಗುಡಿಸಲುಗಳನ್ನೂ ಕಟ್ಟಿದ್ದರು. ಇದರಿಂದ ಆಕ್ರೋಶಿತರಾದ ಮಿಜೋರಾಂ ಕಡೆ ಜನರು ಆ ಗುಡಿಸಲುಗಳಿಗೆ ಬೆಂಕಿ ಹಚ್ಚಿದರು ಎಂದು ವರದಿಗಳು ತಿಳಿಸಿವೆ.

ಗುಂಪು ಘರ್ಷಣೆ ನಡೆದಿದ್ದು, ಕಲ್ಲೆಸೆತ ನಡೆಸಲಾಗಿದೆ. ನಾಲ್ವರು ಗಾಯಗೊಂಡಿದ್ದು, ಓರ್ವ ಗಂಭೀರವಾಗಿದ್ದಾನೆ. ಎರಡೂ ರಾಜ್ಯಗಳ ಪೊಲೀಸರು ಬಿಗಿ ಬಂದೋಬಸ್ತ್ ಕಾಪಾಡಿದ್ದಾರೆ. ಘಟನೆಯ ಬಳಿಕ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ತುರ್ತು ಕ್ಯಾಬಿನೆಟ್ ಸಭೆ ನಡೆಸಿದ್ದು, ಬಳಿಕ ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ. ಶಾಂತಿಗಾಗಿ ಜನರಿಗೆ ಮನವಿ ಮಾಡಿದ್ದಾರೆ.