ಅಸ್ಮಿತೆಗಳ ಚೌಕಟ್ಟಿನಲ್ಲಿ ಶ್ರಮ ಶಕ್ತಿಯ ಅಸ್ತಿತ್ವ

Prasthutha|

-ನಾ.ದಿವಾಕರ  

- Advertisement -

ನಾಲ್ಕನೆಯ ಔದ್ಯಮಿಕ ಕ್ರಾಂತಿ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನೂ ಬಳಸುತ್ತಾ ಭಾರತದ ಅರ್ಥವ್ಯವಸ್ಥೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಇದನ್ನು ವರ್ತಮಾನದಲ್ಲಿ ಹೇಳುವುದಕ್ಕಿಂತಲೂ ಆಕ್ರಮಿಸಿಕೊಂಡಿದೆ ಎಂದು ಹೇಳುವುದೇ ಸೂಕ್ತ. ಏಕೆಂದರೆ ಈ ಅಸ್ತ್ರ ಪ್ರಯೋಗ ಪ್ರಕ್ರಿಯೆಯ ಶಸ್ತ್ರಾಭ್ಯಾಸ ಆರಂಭವಾಗಿ 30 ವರ್ಷಗಳು ಕಳೆದಿವೆ, ಬತ್ತಳಿಕೆಯ ಅಸ್ತ್ರಗಳು ಹೊರಬಂದು ಆರು ವರ್ಷಗಳಾಗಿವೆ. ಔದ್ಯಮಿಕ ಪ್ರಗತಿಯೊಡನೆಯೇ ಕಂಡುಬರುವ ಮತ್ತೊಂದು ಪ್ರಕ್ರಿಯೆ ಎಂದರೆ ಬಂಡವಾಳದ ಕ್ರೋಢೀಕರಣ ಮತ್ತು ದುಡಿಮೆಗಾರರ ಐಕ್ಯತೆ. 19ನೆಯ ಶತಮಾನದ ಔದ್ಯಮಿಕ ಕ್ರಾಂತಿಯ ಸಂದರ್ಭದಲ್ಲೇ ವಿಶ್ವದ ಕಾರ್ಮಿಕ ವರ್ಗ ತನ್ನ ಪೊರೆಗಳನ್ನು ಕಳಚಿ ಐಕಮತ್ಯ ಸಾಧಿಸಲು, ಐಕ್ಯತೆಯನ್ನು ಸಾಧಿಸಲು ಹೆಜ್ಜೆ ಹಾಕತೊಡಗಿದ್ದನ್ನು ಸ್ಮರಿಸಬೇಕಿದೆ.

ಬಂಡವಾಳ ವ್ಯವಸ್ಥೆಯ ಪ್ರಗತಿಯನ್ನು ಮಾರುಕಟ್ಟೆಯ ಆರ್ಥಿಕ ಪರಿಭಾಷೆಯಲ್ಲಿ ಅಭಿವೃದ್ಧಿ ಎನ್ನಲಾಗುತ್ತದೆ. ಆದರೆ ಈ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಸಮಾಜದ ಒಂದು ಬೃಹತ್ ಸಮುದಾಯ ಬಹಿಷ್ಕೃತವಾಗಿಯೇ ಕಾಣುತ್ತದೆ. ಅಭಿಬೃದ್ಧಿಯ ಪಥದಲ್ಲಿ ತನ್ನ ಅಸ್ತಿತ್ವವನ್ನೂ ಕಂಡುಕೊಳ್ಳುವ ಶ್ರಮಜೀವಿ ವರ್ಗದ ಪ್ರಯತ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಅಡ್ಡಗೋಡೆಗಳನ್ನು ನಿರ್ಮಿಸುತ್ತಲೇ ಇರುತ್ತದೆ. ಈ ಬಲಿಷ್ಠ ಗೋಡೆಗಳನ್ನು ಕೆಡವಿ ಮುನ್ನಡೆಯಲೆಂದೇ ವಿಶ್ವದ ಕಾರ್ಮಿಕರು ತಮ್ಮದೇ ಆದ ಸೇನೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಶಸ್ತ್ರಾಸ್ತ್ರಗಳಿಲ್ಲದ ಈ ಸೇನೆಯ ಬತ್ತಳಿಕೆಯಲ್ಲಿ ಉಳಿಯುವುದು ಶ್ರಮ , ಶ್ರಮ ಶಕ್ತಿ , ಶ್ರಮಿಕರ ಐಕ್ಯತೆ ಮತ್ತು ಹೋರಾಟದ ಛಲ, ಈ ಅಸ್ತ್ರಗಳು ಮಾತ್ರ ಎನ್ನುವುದನ್ನು ಇತಿಹಾಸ ನಿರೂಪಿಸಿದೆ.

- Advertisement -

ಮೂಲ ಕಮ್ಯುನಿಸ್ಟ್ ಪ್ರಣಾಳಿಕೆಯಲ್ಲಿ ‘ವಿಶ್ವದ ದುಡಿಯುವ ಜನರೇ ಒಂದಾಗಿ’ ಎಂದಷ್ಟೇ ಇದ್ದ ಘೋಷವಾಕ್ಯ ಮುಂದಿನ ದಿನಗಳಲ್ಲಿ ಹೊಸ ಸ್ವರೂಪ ಪಡೆದದ್ದೇ ಅನುಭವ ಮತ್ತು ಅನುಭಾವದ ಹಿನ್ನೆಲೆಯಲ್ಲಿ ಎನ್ನುವುದು ಗಮನಿಸಬೇಕಾದ ಅಂಶ. ‘ವಿಶ್ವದ ಶ್ರಮಜೀವಿಗಳೇ ಒಂದಾಗಿ ನೀವು ನಿಮ್ಮ ದಾಸ್ಯದ ಸಂಕೋಲೆಗಳನ್ನಲ್ಲದೆ ಮತ್ತೇನನ್ನೂ ಕಳೆದುಕೊಳ್ಳುವುದಿಲ್ಲ’ ಎನ್ನುವ ಚಾರಿತ್ರಿಕ ಘೋಷಣೆಯಲ್ಲಿ ದಾಸ್ಯ ಮತ್ತು ಸಂಕೋಲೆ ಎನ್ನುವ ಪದಗಳಲ್ಲಿ ಅಡಗಿರುವ ಚಾರಿತ್ರಿಕ ಸೂಕ್ಷ್ಮತೆ ಮತ್ತು ಸಾರ್ವಕಾಲಿಕ ಸಂವೇದನೆಯನ್ನು ಗ್ರಹಿಸದೆ ಹೋದರೆ ಬಹುಶಃ ಶ್ರಮಜೀವಿ ವರ್ಗಗಳು ಸದಾ ಕಾಲಕ್ಕೂ ಯಾವುದೋ ಒಂದು ಅಸ್ಮಿತೆಯ ಚೌಕಟ್ಟಿಗೆ ಸಿಲುಕಿ ನಿರಂತರ ಶೋಷಣೆಗೊಳಗಾಗುತ್ತಿರುತ್ತವೆ. ಭಾರತದಂತಹ ಶ್ರೇಣೀಕೃತ ಸಮಾಜದಲ್ಲಿ ಈ ಅಪಾಯ ಇನ್ನೂ ಹೆಚ್ಚಾಗಿಯೇ ಕಾಣುತ್ತದೆ. ವಿಭಿನ್ನ ಕಾಲಘಟ್ಟಗಳಲ್ಲಿ ವಿಭಿನ್ನ ರೀತಿಯ ದಾಸ್ಯ ಮತ್ತು ಸಂಕೋಲೆಗಳು ಶ್ರಮಜೀವಿಗಳನ್ನು ಬಂಧಿಸುತ್ತವೆ.

ಔದ್ಯಮಿಕ ಜಗತ್ತು ವಿಸ್ತರಿಸುತ್ತಿರುವಂತೆಲ್ಲಾ ಬಂಡವಾಳದ ವ್ಯಾಪ್ತಿ, ಹರವು ಮತ್ತು ಅಧಿಪತ್ಯವೂ ವಿಸ್ತರಿಸುತ್ತಲೇ ಹೋಗುವುದು ಬಂಡವಾಳ ವ್ಯವಸ್ಥೆಯಲ್ಲಿ ಕಾಣಬಹುದಾದ ಸಂಗತಿ. ಉತ್ಪಾದನಾ ಸಂಬಂಧಗಳು ಬದಲಾಗುತ್ತಿದ್ದಂತೆ ಉತ್ಪಾದನಾ ಸಾಧನಗಳು ಮತ್ತು ವಿಧಾನಗಳು ಬಂಡವಾಳಿಗನ ಹಿಡಿತಕ್ಕೆ ಸಿಲುಕುತ್ತಾ ಹೋಗುತ್ತದೆ. ಈ ಸಂದರ್ಭದಲ್ಲೇ ತನ್ನ ಶ್ರಮ ಮತ್ತು ಶ್ರಮ ಶಕ್ತಿಯನ್ನು ಸರಕು ಉತ್ಪಾದನೆಯಲ್ಲಿ ತೊಡಗಿಸುವ ಕಾರ್ಮಿಕ, ಬಂಡವಾಳ ಮತ್ತು ಬಂಡವಾಳಿಗನ ದಾಸ್ಯಕ್ಕೊಳಗಾಗುತ್ತಾನೆ, ಮಾರುಕಟ್ಟೆ ಮತ್ತು ಬಂಡವಾಳಶಾಹಿ ಅರ್ಥವ್ಯವಸ್ಥೆಯ ಸಂಕೋಲೆಗಳಲ್ಲಿ ಬಂಧಿಸಲ್ಪಡುತ್ತಾನೆ. ಈ ದಾಸ್ಯ ಮತ್ತು ಸಂಕೋಲೆಗಳಿಂದ ವಿಮೋಚನೆ ಪಡೆಯಲು ಶ್ರಮಜೀವಿಗಳು ಐಕ್ಯತೆಯನ್ನು ಸಾಧಿಸಬೇಕಾಗುತ್ತದೆ.

  ಭಾರತದಂತಹ ದೇಶದಲ್ಲಿ ಬಂಡವಾಳ ಮತ್ತು ಮಾರುಕಟ್ಟೆ, ಸಾಮಾಜಿಕ ನೆಲೆಯಲ್ಲೂ ಪ್ರಧಾನ ಪಾತ್ರ ವಹಿಸುತ್ತವೆ. ಈ ದೃಷ್ಟಿಯಿಂದಲೇ ಡಾ.ಬಿ.ಆರ್ ಅಂಬೇಡ್ಕರ್ “ಭಾರತದಲ್ಲಿ ಕೇವಲ ಶ್ರಮ ವಿಭಜನೆ ಇರುವುದಿಲ್ಲ, ಶ್ರಮಿಕರ ವಿಭಜನೆಯೂ ಇಲ್ಲಿನ ವಾಸ್ತವ” ಎಂದು ಹೇಳುತ್ತಾರೆ. ಭಾರತದ ಸಂದರ್ಭದಲ್ಲಿ ಸಂಪತ್ತು, ಸಂಪನ್ಮೂಲ ಮತ್ತು ಉತ್ಪಾದನೆಯ ಮೂಲಗಳ ಮೇಲೆ ಅಧಿಪತ್ಯ ಸಾಧಿಸುವ ಬಂಡವಾಳಿಗರ ಪೈಕಿ ಮೇಲ್ಜಾತಿಯವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಶತಮಾನಗಳ ಅಸಮಾನತೆ ಮತ್ತು ತಾರತಮ್ಯಗಳನ್ನು ಎದುರಿಸಿರುವ ಶೋಷಿತ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರಮಜೀವಿಗಳಾಗಿಯೇ ಇರುವುದನ್ನು ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರವೂ ಕಾಣುತ್ತಿದ್ದೇವೆ.

ಹಾಗಾಗಿ ಭಾರತದ ಬಹುಸಂಖ್ಯೆಯ ಶ್ರಮಿಕ ವರ್ಗಗಳು ಸಾಮಾಜಿಕ ಆರ್ಥಿಕ ನೆಲೆಯಲ್ಲಿ ದಾಸ್ಯ ಮತ್ತು ಸಂಕೋಲೆಗಳಿಂದ ವಿಮೋಚನೆಗಾಗಿ ಹೋರಾಡುವುದು ಅತ್ಯವಶ್ಯ. ಈನಿಟ್ಟಿನಲ್ಲಿ ಔದ್ಯಮಿಕ ವಲಯದಲ್ಲಿ ಸಾಧಿಸಲಾಗಿರುವ ಐಕಮತ್ಯ ಮತ್ತು ಐಕ್ಯತೆಯನ್ನು, ಶೋಷಿತ ಸಮುದಾಯಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ, ಅನೌಪಚಾರಿಕ ಕ್ಷೇತ್ರಗಳಲ್ಲಿ ಸಾಧಿಸಲಾಗದಿರುವುದು ಭಾರತದ ಕಾರ್ಮಿಕ ಚಳುವಳಿಯ ಬಹುದೊಡ್ಡ ವೈಫಲ್ಯ ಎಂದು ಹೇಳಬಹುದು. ಗ್ರಾಮೀಣ ಗುಡಿ ಕೈಗಾರಿಕೆಗಳು, ಕೃಷಿ ಕಾರ್ಮಿಕರು, ನಗರ ಪಟ್ಟಣಗಳಲ್ಲಿನ ಪೌರ ಕಾರ್ಮಿಕರು, ಮನೆಗೆಲಸದವರು, ವಿವಿಧ ಕಾಮಗಾರಿಗಳಲ್ಲಿ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಶ್ರಮಜೀವಿಗಳು ಇತ್ತೀಚೆಗಷ್ಟೇ ಸಂಘಟಿತರಾಗುತ್ತಿದ್ದಾರೆ. ಈಗಲೂ ಸಹ ಇವರ ಪೈಕಿ ಬಹುಸಂಖ್ಯಾತರು ಅಸಂಘಟಿತ ವಲಯದಲ್ಲೇ ಕಂಡುಬರುತ್ತಿದ್ದಾರೆ.

ಶ್ರಮಜೀವಿಗಳಲ್ಲಿ ಜಾತಿ ಪ್ರಜ್ಞೆ ಮೂಡದಂತೆ ವರ್ಗ ಸಂಘರ್ಷದ ನೆಲೆಯಲ್ಲೇ ಸಂಘಟಿಸುವ ಒಂದು ಶತಮಾನದ ಪ್ರಯತ್ನಗಳು ವಿಫಲವಾಗಲು ಕಾರಣ ಎಂದರೆ ಭಾರತದಲ್ಲಿ ಪ್ರತಿಯೊಬ್ಬ ಕಾರ್ಮಿಕನೂ ತನ್ನ ಜಾತಿ, ಉಪಜಾತಿ ಅಥವಾ ಮತಧರ್ಮದ ದಾಸ್ಯ ಮತ್ತು ಸಂಕೋಲೆಗೆ ಒಳಪಟ್ಟಿರುತ್ತಾನೆ. ಶ್ರಮಜೀವಿಗಳಲ್ಲಿ ಜಾತಿ ಪ್ರಜ್ಞೆಯನ್ನು ಹೋಗಲಾಡಿಸುವುದೆಂದರೆ ಅದು ಕೇವಲ ತಾತ್ವಿಕ ಸೈದ್ಧಾಂತಿಕ ನೆಲೆಯಲ್ಲಿ ಸಾಧ್ಯವಾಗುವುದಿಲ್ಲ ಎನ್ನುವುದನ್ನೂ ಕಂಡಿದ್ದೇವೆ. ಬೌದ್ಧಿಕ ನೆಲೆಯಲ್ಲಿ, ವ್ಯಕ್ತಿಗತ ನೆಲೆಯಲ್ಲಿ ಜಾತಿ ವಿನಾಶದ ಸಂಕಲ್ಪದೊಂದಿಗೆ ವರ್ಗ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ಪ್ರತಿಯೊಬ್ಬ ಕಾರ್ಮಿಕನೂ ತನ್ನ ವರ್ಗ ಹಿತಾಸಕ್ತಿಯನ್ನು ಗುರುತಿಸಿಕೊಳ್ಳಬಹುದು. ಈ ಜಾತಿ ವಿನಾಶದ ಸಂಕಲ್ಪ ಕಾರ್ಮಿಕ ವರ್ಗದೊಳಗಿನ ಮತ್ತು ಕಾರ್ಮಿಕ ಚಳವಳಿಯಲ್ಲಿನ ಮೇಲ್ಜಾತಿಯವರಲ್ಲಿ ಮೂಡದಿದ್ದರೆ, ಸಹಜವಾಗಿಯೇ ಶೋಷಿತ ಸಮುದಾಯಗಳು ದೂರ ಸರಿಯುತ್ತವೆ.

 ಭಾರತದ ಕಾರ್ಮಿಕ ಚಳುವಳಿಯ ಇತಿಹಾಸದಲ್ಲಿ ಈ ದ್ವಂದ್ವವನ್ನು ಕಾಣುತ್ತಲೇ ಬಂದಿದ್ದೇವೆ. ಇದರ ನೇರ ಪರಿಣಾಮವನ್ನು ಕಾರ್ಮಿಕ ಚಳುವಳಿಯ ವಿಘಟನೆಯಲ್ಲಿ ಕಂಡಿದ್ದೇವೆ. ಜಾತಿ ಸೂಕ್ಷ್ಮತೆಗಳನ್ನು ಸಂವೇದನಾಶೀಲತೆಯಿಂದ ಅರ್ಥಮಾಡಿಕೊಳ್ಳಲು ವಿಫಲವಾದ ಸಂಘಟನೆಗಳು ಒಂದೆಡೆಯಾದರೆ, ವರ್ಗ ಪ್ರಜ್ಞೆ ಮತ್ತು ವರ್ಗ ಹಿತಾಸಕ್ತಿಯ ನೆಲೆಗಳನ್ನೇ ನಿರಾಕರಿಸುವ ದಲಿತ ಸಮುದಾಯದ ಕಾರ್ಮಿಕ ವರ್ಗ ಭಾರತದ ಕಾರ್ಮಿಕ ಚಳುವಳಿಯನ್ನು ಶಿಥಿಲಗೊಳಿಸಿರುವುದನ್ನು ಕಳೆದ ಮೂರು ದಶಕಗಳಲ್ಲಿ ಕಂಡಿದ್ದೇವೆ. ಭಾರತ ಸಮಾಜವಾದವನ್ನು ತಾತ್ವಿಕವಾಗಿ ಒಪ್ಪಿಕೊಂಡು ಏಳು ದಶಕಗಳ ಕಾಲ ಅರ್ಥವ್ಯವಸ್ಥೆಯನ್ನು ರೂಪಿಸಿದ್ದರೂ ಮೂಲತಃ ಬಂಡವಾಳ ವ್ಯವಸ್ಥೆಯ ಊಳಿಗಮಾನ್ಯ ಧೋರಣೆಯಿಂದ ಮುಕ್ತವಾಗಿಲ್ಲ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.

ಹಾಗಾಗಿಯೇ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಔದ್ಯಮಿಕ ವಲಯದಲ್ಲಿ ಕಾರ್ಮಿಕ ವರ್ಗವನ್ನು ಶೋಷಿಸಲು ಅಗತ್ಯವಾದ ಎಲ್ಲ ಸರಕುಗಳನ್ನೂ ಪ್ರಭುತ್ವವೇ ಒದಗಿಸುತ್ತಾ ಬಂದಿದೆ. ಹಾಗೆಯೇ ಇಲ್ಲಿನ ಬಂಡವಾಳಿಗರು, ಪ್ರಭುತ್ವ ಮತ್ತು ಖಾಸಗಿ ಬಂಡವಾಳಿಗರು, ಜಾತಿ ಸೂಕ್ಷ್ಮತೆಗಳನ್ನು ನಿರಾಕರಿಸುತ್ತಾ ಬಂದಿದ್ದಾರೆ. ಸಾರ್ವಜನಿಕ ಉದ್ದಿಮೆಗಳಲ್ಲಿ ಕಣ್ಣಿಗೆ ರಾಚುವಂತಿರುವ ಜಾತಿ ತಾರತಮ್ಯ ಮತ್ತು ಶೋಷಣೆಗಳನ್ನು ಪ್ರಭುತ್ವ ನಿರಾಕರಿಸುತ್ತಲೇ ಬಂದಿದೆ. ಒಂದು ನೆಲೆಯಲ್ಲಿ ನಿಂತು ನೋಡಿದಾಗ ಎಡಪಂಥೀಯ ಕಾರ್ಮಿಕ ಸಂಘಟನೆಗಳೂ ತಮ್ಮ ವರ್ಗ ಸಂಘರ್ಷದ ನೆಲೆಯಲ್ಲಿ ನಿಂತು, ಈ ತಾರತಮ್ಯ ಮತ್ತು ಶೋಷಣೆಯನ್ನು, ನಿರಾಕರಿಸದಿದ್ದರೂ, ನಿರ್ಲಕ್ಷಿಸುತ್ತಾ ಬಂದಿರುವುದನ್ನು ಗಮನಿಸಬಹುದು.

ಇದಕ್ಕೆ ಪ್ರತಿಯಾಗಿ ರೂಪುಗೊಂಡ, ಶೋಷಿತ ಸಮುದಾಯಗಳನ್ನೇ ಪ್ರತಿನಿಧಿಸುವ ಪ್ರತ್ಯೇಕ ಕಾರ್ಮಿಕ ಚಳುವಳಿಗಳು ಸಾಮಾಜಿಕ ನೆಲೆಯಲ್ಲಿ ತಮ್ಮ ಜಾತಿ ಬಾಂಧವರನ್ನು ರಕ್ಷಿಸುವಲ್ಲಿ ಕೊಂಚ ಮಟ್ಟಿಗೆ ಸಫಲರಾದರೂ, ಆರ್ಥಿಕ ನೆಲೆಯಲ್ಲಿ ಔದ್ಯಮಿಕ ಬಂಡವಾಳದ ವರ್ಗಶೋಷಣೆಯ ಆಯಾಮಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿರುವುದನ್ನೂ ಗಮನಿಸಬೇಕಾಗುತ್ತದೆ. ದಲಿತ ಸಂಘಟನೆಗೂ ದಲಿತ ಕಾರ್ಮಿಕರ ಸಂಘಟನೆಗೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಈ ಕಾರ್ಮಿಕ ಸಂಘಟನೆಗಳು ಗ್ರಹಿಸದೆ ಹೋಗಿರುವುದು ಅನೇಕ ಸಂದರ್ಭಗಳಲ್ಲಿ ಉದ್ಯಮಿಗಳಿಗೆ ವರದಾನವಾಗಿರುವುದನ್ನೂ ಗಮನಿಸಬಹುದು. ಪ್ರಭುತ್ವ, ಬಂಡವಾಳಿಗರು ಮತ್ತು ಉದ್ಯಮಿಗಳ ಪಾಲಿಗೆ ಇದು ಕಾರ್ಮಿಕ ಚಳುವಳಿಯನ್ನು ವಿಘಟಿಸುವ ಭೂಮಿಕೆಯಾಗಿಯೂ ಪರಿಣಮಿಸಿದೆ.

   ಕಳೆದ ಒಂದು ದಶಕದ ಅವಧಿಯಲ್ಲಿ ಎಡಪಂಥೀಯ ಕಾರ್ಮಿಕ ಚಳುವಳಿಗಳು ಪೌರ ಕಾರ್ಮಿಕರನ್ನು, ಕಟ್ಟಡ ಕಾರ್ಮಿಕರನ್ನು ಮತ್ತು ಇತರ ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವುದರಲ್ಲಿ ಯಶಸ್ವಿಯಾಗಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಆದಾಗ್ಯೂ ಭಾರತದಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆಯೇ ಹೆಚ್ಚಾಗಿರುವುದು ದುರಂತ. ಸಂಘಟಿತ ವಲಯದಲ್ಲಿ ಮಾತ್ರವೇ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿರುವ ದಲಿತ ಸಂಘಟನೆಗಳು ಅಸಂಘಟಿತ ವಲಯದಲ್ಲಿ ತೀವ್ರ ಶೋಷಣೆಗೊಳಗಾಗಿರುವ ದಲಿತ ಮತ್ತು ಇತರ ಶೋಷಿತ ವರ್ಗಗಳನ್ನು ಸಂಘಟಿಸುವಲ್ಲಿ ಯಾವುದೇ ಆಸಕ್ತಿ ತೋರದಿರುವುದು ಸೋಜಿಗ ಮೂಡಿಸುತ್ತದೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಶ್ರಮಜೀವಿಗಳು ಶೋಷಿತ ಸಮುದಾಯಗಳಿಗೇ ಸೇರಿದವರಾಗಿದ್ದಾರೆ. ಆದರೆ ಈ ವಲಯದ ದುಡಿಮೆಗಾರರನ್ನು ಸಂಘಟಿಸುವ ಪ್ರಯತ್ನಗಳು ಸಮಾಜೋ ಸಾಂಸ್ಕೃತಿಕ ನೆಲೆಯಲ್ಲಿ ನಡೆದು, ಯಶಸ್ವಿಯಾಗಿದ್ದರೂ ಆರ್ಥಿಕ ನೆಲೆಯಲ್ಲಿ ಇಂತಹ ಪ್ರಯತ್ನಗಳೇ ನಡೆದಿಲ್ಲ. ಇಂದಿಗೂ ಸಹ ಎಡಪಕ್ಷಗಳೇ ಹೆಚ್ಚಿನ ಪ್ರಮಾಣದ ಕೃಷಿ ಕಾರ್ಮಿಕರನ್ನು ಸಂಘಟಿಸಿ ಹೋರಾಟಗಳನ್ನು ರೂಪಿಸುತ್ತಿರುವುದೂ ಸತ್ಯ.

ಆತ್ಮನಿರ್ಭರ ಭಾರತದಲ್ಲಿ ನಾವು, ಅಂದರೆ ಭಾರತದ ದುಡಿಯುವ ವರ್ಗಗಳು, ಶ್ರಮಜೀವಿಗಳು ಮತ್ತು ಶ್ರಮಿಕರಿಗೆ ಮಿಡಿಯುವ ಮನಸುಗಳು, ಬದಲಾಗಬೇಕಿದೆ. ಏಳು ದಶಕಗಳ ಕಾಲ ಶ್ರಮಿಕ ವರ್ಗಗಳನ್ನು ಸಂರಕ್ಷಿಸಿದ ಕಾರ್ಮಿಕ ಕಾನೂನುಗಳು ಇನ್ನು ಇಲ್ಲವಾಗುತ್ತವೆ. ವರ್ಗ ಶೋಷಣೆಯ ಸ್ವರೂಪ ವಿಭಿನ್ನ ಆಯಾಮಗಳಿಂದ ಬದಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಭೂಮಾಲೀಕ ವರ್ಗಗಳ ಶೋಷಣೆ ಕಡಿಮೆಯಾಗಿದ್ದರೂ, ಕೃಷಿ ಕಾರ್ಮಿಕರು, ಸಣ್ಣ ಮತ್ತು ಅತಿಸಣ್ಣ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಡಬೇಕಿದೆ. ಇಲ್ಲಿ ದಲಿತ ಸಮುದಾಯಗಳು ಸಾಮಾಜಿಕ ಮತ್ತು ಆರ್ಥಿಕ ಶೋಷಣೆ ದಬ್ಬಾಳಿಕೆಯನ್ನು ಎದುರಿಸಬೇಕಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಮತ್ತು ದಲಿತ ಕೊಲೆ ಪ್ರಕರಣಗಳು ಇದನ್ನೇ ಸೂಚಿಸುತ್ತದೆ. ಶ್ರಮಜೀವಿ ವರ್ಗಗಳೇ ಈ ರೀತಿಯ ದೌರ್ಜನ್ಯಕ್ಕೊಳಗಾಗುತ್ತಿರುವುದೂ ಗಮನಿಸಬೇಕಾದ ಸಂಗತಿ.

 ನವ ಉದಾರವಾದ ಮತ್ತು ನಾಲ್ಕನೆಯ ಔದ್ಯಮಿಕ ಕ್ರಾಂತಿಯ ಸಂದರ್ಭದಲ್ಲಿ ಗ್ರಾಮೀಣ ಚಿತ್ರಣವೂ ಬದಲಾಗುತ್ತಿದೆ. ಹಾಗೆಯೇ ಶೋಷಣೆಯ ಆಯಾಮಗಳೂ ಬದಲಾಗುತ್ತಿವೆ. ಕೃಷಿ ಕ್ಷೇತ್ರವನ್ನು ಸರಕು ಉತ್ಪಾದನೆಯ ಉದ್ಯಮವನ್ನಾಗಿ ಪರಿಗಣಿಸುವ ಮೂಲಕ ವ್ಯವಸಾಯಗಾರರನ್ನು ಕೃಷಿ ಭೂಮಿಯಿಂದ ಪ್ರತ್ಯೇಕಿಸಲಾಗುತ್ತಿದೆ. ಶತಮಾನಗಳಿಂದ ಭೂಮಿಯೊಡನೆ ತಮ್ಮ ಸಂಬಂಧಗಳನ್ನು ಕಂಡುಕೊಳ್ಳುತ್ತಲೇ ಬದುಕು ಸವೆಸುತ್ತಿರುವ ಒಂದು ಜನಸಂಸ್ಕೃತಿಯ ನೆಲೆಯನ್ನು ಕಾರ್ಪೊರೇಟೀಕರಣದ ಮೂಲಕ ನಾಶಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಮಸೂದೆಗಳ ಮೂಲ ಉದ್ದೇಶವೂ ಇದೇ ಆಗಿದೆ.

 ಗ್ರಾಮೀಣ ಜನತೆಯನ್ನು ಭೂಮಿಯಿಂದ ಪ್ರತ್ಯೇಕವಾಗಿಸಿ, ಬೇಸಾಯಗಾರರನ್ನು ತಾವು ಬೆಳೆಯುವ ಕೃಷಿ ಉತ್ಪನ್ನಗಳಿಂದ ಪ್ರತ್ಯೇಕವಾಗಿಸಿ, ನಗರೀಕರಣ ಪ್ರಕ್ರಿಯೆಗೆ ನೆರವಾಗುವಂತೆ ಹೆಚ್ಚಿನ ದೈಹಿಕ ಶ್ರಮಶಕ್ತಿಯನ್ನು ಒದಗಿಸುವ ನಿಟ್ಟಿನಲ್ಲಿ ನವ ಉದಾರವಾದಿ ಆರ್ಥಿಕ ನೀತಿಗಳು ರೂಪುಗೊಳ್ಳುತ್ತಿವೆ. ಬೆಳೆಯುತ್ತಿರುವ ನಗರಗಳು ಮತ್ತು ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ನಗರೀಕರಣ ಪ್ರಕ್ರಿಯೆಗೆ ಹಾಗೂ ಈ ಪ್ರಕ್ರಿಯೆಗೆ ಪೂರಕವಾದ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಾದ ಶ್ರಮ ಶಕ್ತಿಯನ್ನು ಗ್ರಾಮೀಣ ಪ್ರದೇಶಗಳಿಂದ ಒದಗಿಸುವ ನಿಟ್ಟಿನಲ್ಲಿ ಅರ್ಥವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ದುರಂತ ಎಂದರೆ ಅತಿ ಹೆಚ್ಚಿನ ಪ್ರಮಾಣದ ಶ್ರಮಶಕ್ತಿಯನ್ನು ವ್ಯಯಿಸುತ್ತಿರುವ ಮತ್ತು ಅತಿ ಹೆಚ್ಚು ಶೋಷಣೆಗೀಡಾಗುತ್ತಿರುವ ಸಮುದಾಯಗಳೂ ಈ ಅರ್ಥವ್ಯವಸ್ಥೆಯನ್ನು ಸಮರ್ಥಿಸುತ್ತಿವೆ, ಬೆಂಬಲಿಸುತ್ತಿವೆ ಮತ್ತು ಅನುಮೋದಿಸುತ್ತಿವೆ.

 ಕಾರ್ಮಿಕ ಚಳುವಳಿಗಳು ಶ್ರಮಜೀವಿಗಳಲ್ಲಿ ಈ ಅಪಾಯಗಳ ಬಗ್ಗೆ ಅರಿವನ್ನು ಮೂಡಿಸುವತ್ತ ಚಿಂತಿಸಬೇಕಿದೆ. ಪ್ರಭುತ್ವ ಇಂದು ಬಲಿಷ್ಠವಾಗುತ್ತಿರುವಂತೆಯೇ ಹೆಚ್ಚು ಕ್ರೌರ್ಯವನ್ನೂ ಪ್ರದರ್ಶಿಸುತ್ತಿರುವುದನ್ನು ದೆಹಲಿಯ ರೈತ ಮುಷ್ಕರದಲ್ಲಿ, ಕರ್ನಾಟಕದ ಸಾರಿಗೆ ಮುಷ್ಕರದ ಸಂದರ್ಭದಲ್ಲಿ ಕಾಣುತ್ತಿದ್ದೇವೆ. ಖಾಸಗಿ ಉದ್ದಿಮೆಗಳೂ ಸಹ ಕಾರ್ಮಿಕರ ಬೇಡಿಕೆಗೆ ಸ್ಪಂದಿಸಲು ನಿರಾಕರಿಸುತ್ತಿವೆ. ಉದ್ಯಮಿಗಳು ಹೂಡುವ ಬಂಡವಾಳದ ಲಾಲಸೆಗೆ ಸರ್ಕಾರಗಳು ಕಾರ್ಮಿಕರ ಹಿತಾಸಕ್ತಿಗಳನ್ನು ಬಲಿಕೊಡುತ್ತಿವೆ. ನವ ಉದಾರವಾದಿ ಅರ್ಥವ್ಯವಸ್ಥೆಯಲ್ಲಿ ಸ್ಥಳೀಯ ಬಂಡವಾಳ ಹೂಡಿಕೆ ಮತ್ತು ವಿದೇಶಿ ಬಂಡವಾಳದ ಹರಿವು ಆರ್ಥಿಕ ಸ್ಥಿರತೆಗೆ ಮುಖ್ಯವಾಗುತ್ತದೆ. ಔದ್ಯಮಿಕ ಮತ್ತು ಹಣಕಾಸು ಬಂಡವಾಳದ ಹರಿವಿಗೆ ಪೂರಕವಾಗಿ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವುದು ಮತ್ತು ಕಾರ್ಮಿಕರ ಹೋರಾಟಗಳನ್ನು ನಿಷ್ಫಲಗೊಳಿಸುವುದು ಆಳುವ ವರ್ಗಗಳ ಆದ್ಯತೆಯೂ ಆಗುತ್ತದೆ.

 ಶ್ರಮಜೀವಿಗಳ ಹೋರಾಟಗಳನ್ನು ನಿಷ್ಕ್ರಿಯಗೊಳಿಸುವ ನಿಟ್ಟಿನಲ್ಲಿ ಪ್ರಭುತ್ವ ಜಾತಿ ರಾಜಕಾರಣ, ಮತಧರ್ಮ ರಾಜಕಾರಣ, ಮತಾಂಧತೆ ಮತ್ತು ಅಸ್ಮಿತೆಯ ರಾಜಕಾರಣವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತದೆ. ಕಾರ್ಮಿಕ ಸಂಘಟನೆಗಳ ಐಕ್ಯತೆಯನ್ನು ಭಂಗಗೊಳಿಸಲು ಅಸ್ಮಿತೆಯ ರಾಜಕಾರಣವೂ ಒಂದು ಅಸ್ತ್ರವಾಗುತ್ತದೆ. ಭಾರತದ ಬಹುಪಾಲು ಶ್ರಮಜೀವಿಗಳು ಇಂದು ಈ ಅಸ್ಮಿತೆಯ ರಾಜಕಾರಣದಲ್ಲಿ ಬಲಿಪಶುಗಳಾಗಿದ್ದಾರೆ. ಜಾತಿ ಪ್ರಜ್ಞೆಯನ್ನು ಗಟ್ಟಿಗೊಳಿಸುತ್ತಲೇ ವರ್ಗ ಪ್ರಜ್ಞೆಯನ್ನು ನಾಶಪಡಿಸುವ ಮೂಲಕ ಶ್ರಮಶಕ್ತಿಯ ಮುಕ್ತ ಬಳಕೆಗೆ ಸುಲಭ ಮಾರ್ಗಗಳನ್ನು ಪ್ರಭುತ್ವ ಮತ್ತು ಜನಪ್ರತಿನಿಧಿಗಳೇ ರೂಪಿಸುತ್ತಿದ್ದಾರೆ. ಶೋಷಿತ ಸಮುದಾಯಗಳನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿಗೆ ತಮ್ಮ ಈ ಅಪಾಯಕಾರಿ ಹೆಜ್ಜೆಯ ಅರಿವು ಇರಬೇಕಾಗುತ್ತದೆ. ಬಂಡವಾಳ ವ್ಯವಸ್ಥೆ ಈ ಪ್ರತಿನಿಧಿಗಳ ಬೌದ್ಧಿಕ ಚಿಂತನೆಯನ್ನು ಆವರಿಸಿಕೊಂಡಿರುವುದರಿಂದ ತಮ್ಮ ಮೂಲ ನೆಲೆಯನ್ನೇ ಮರೆತು ಶೋಷಕ ವ್ಯವಸ್ಥೆಯ ಆರಾಧಕರಾಗಿದ್ದಾರೆ.

ಭಾರತದ ಕಾರ್ಮಿಕ ಚಳುವಳಿ ಈ ಎರಡೂ ಆಯಾಮಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಶತಮಾನದ ಇತಿಹಾಸವಿರುವ ಕಾರ್ಮಿಕ ಚಳುವಳಿ ಇಂದು ಕವಲು ಹಾದಿಯಲ್ಲಿ ನಿಂತಿದೆ. ನವ ಉದಾರವಾದ ದೇಶದ ದುಡಿಯುವ ವರ್ಗಗಳಲ್ಲಿ ಸೃಷ್ಟಿಸಿರುವ ಹತಾಶೆ ಮತ್ತು ಆತಂಕಗಳು ದೆಹಲಿಯ ರೈತ ಮುಷ್ಕರದಲ್ಲಿ, ಕರ್ನಾಟಕದ ಸಾರಿಗೆ ಮುಷ್ಕರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಸಾರಿಗೆ ಮುಷ್ಕರದ ಸಂದರ್ಭದಲ್ಲಿ ಈ ಹತಾಶೆ ಮತ್ತು ಆತಂಕಗಳೇ ಕಾರ್ಮಿಕರನ್ನು ವಿಘಟನೆಯತ್ತ ಕೊಂಡೊಯ್ಯುತ್ತಿರುವುದನ್ನು ಗಮನಿಸಬೇಕು. ಅತ್ತ ದೆಹಲಿಯಲ್ಲಿ ಒಂದು ಹೊಸ ನಾಯಕತ್ವದಲ್ಲಿ ಹೋರಾಟ ರೂಪುಗೊಳ್ಳುತ್ತಿರುವುದನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ. ಈ ಎರಡೂ ಬೆಳವಣಿಗೆಗಳು ಭಾರತದ ಕಾರ್ಮಿಕ ಚಳುವಳಿಯನ್ನು ಮತ್ತು ಶೋಷಿತ ಸಮುದಾಯದ ವಿಭಿನ್ನ ಚಳುವಳಿಗಳನ್ನು ಆತ್ಮಾವಲೋಕನದತ್ತ ಕೊಂಡೊಯ್ಯಬೇಕಿದೆ.

ಆತ್ಮನಿರ್ಭರ ಭಾರತ ಭಾರತದ ಬಹುಸಂಖ್ಯೆಯ ಜನತೆಯ ಪಾಲಿಗೆ ಕರಾಳ ಭವಿಷ್ಯವನ್ನು ರೂಪಿಸಲು ಸಜ್ಜಾಗುತ್ತಿದೆ. ಈ ಬಹುಸಂಖ್ಯೆಯ ಜನರಲ್ಲಿ ಶ್ರಮಜೀವಿಗಳೇ ಇರುತ್ತಾರೆ. ನವ ಉದಾರವಾದ ಸೃಷ್ಟಿಸುತ್ತಿರುವ ಮಾರುಕಟ್ಟೆ ಅರ್ಥವ್ಯವಸ್ಥೆ ಮತ್ತು ಈ ಅರ್ಥವ್ಯವಸ್ಥೆಯನ್ನು ಆರಾಧಿಸುತ್ತಿರುವ ಜನಪ್ರತಿನಿಧಿಗಳು ಸಾಂವಿಧಾನಿಕ ಮೌಲ್ಯಗಳನ್ನೂ ಮೂಲೆಗುಂಪು ಮಾಡಿ ಬಂಡವಾಳ ವ್ಯವಸ್ಥೆಯನ್ನು, ಕಾರ್ಪೊರೇಟ್ ಹಿತಾಸಕ್ತಿಗಳನ್ನು ಪೋಷಿಸುತ್ತಿದ್ದಾರೆ. ಈ ಅಪಾಯವನ್ನು ಎದುರಿಸಲು ಶ್ರಮಜೀವಿಗಳ ಬಳಿ ಇರುವ ಅಸ್ತ್ರ ಎಂದರೆ ಅದು ಐಕ್ಯತೆ, ಐಕಮತ್ಯ ಮತ್ತು ಹೋರಾಟ. ಈ ಮೂರೂ ಅಸ್ತ್ರಗಳು ಅಸ್ಮಿತೆಗಳ ಚೌಕಟ್ಟಿನಲ್ಲಿ, ಜಾತಿ ಮತ್ತು ವರ್ಗಗಳ ದ್ವಂದ್ವಗಳಲ್ಲಿ ಸಿಲುಕಿದರೆ ಭಾರತದ ಶ್ರಮಿಕ ವರ್ಗ ಶಾಶ್ವತವಾಗಿ ಬಂಡವಾಳಶಾಹಿಯ ದಾಸ್ಯ ಮತ್ತು ಜಾತಿ ವ್ಯವಸ್ಥೆಯ ಸಂಕೋಲೆಗಳಲ್ಲಿ ಬಂಧಿತವಾಗಬೇಕಾಗುತ್ತದೆ. ಇದು ನಾವು ಎದುರಿಸುತ್ತಿರುವ ಸವಾಲು.

Join Whatsapp